Showing posts with label ಚಿಂತನೆಗಳು. Show all posts
Showing posts with label ಚಿಂತನೆಗಳು. Show all posts

Wednesday, June 10, 2015

ಫ್ರೊ. ಜಾನ್ ಫೋಬೆಸ್ ನ್ಯಾಶ್ ಗೇಮ್ ಥಿಯರಿ-

ನ್ಯಾಶ್ ದಾಂಪತ್ಯ ಮತ್ತು ಪ್ಯಾರಿಟೋ ಕುಟುಂಬ

ಇತ್ತೀಚೆಗೆ (ಮೇ ೨೩,೨೦೧೫ ರಂದು) ಅಮೆರಿಕದ ನ್ಯೂಜರ್ಸಿಯಲ್ಲಿ ಟ್ಯಾಕ್ಸಿ ಅಪಘಾತದಲ್ಲಿ (೮೭ನೇ ವಯಸ್ಸಿನಲ್ಲಿ )ನಿಧನರಾದ ಪ್ರೊಫೆಸರ್ ಜಾನ್ ಫೋಬೆಸ್ ನ್ಯಾಶ್  ಕಳೆದ ಶತಮಾನ ಕಂಡ ಅತ್ಯಂತ ಶ್ರೇಷ್ಠ ಗಣಿತಜ್ಞರ  ಸಾಲಿಗೆ ಸೇರಿದ್ದಾರೆ. ಪತ್ರಿಕಾ ಲೇಖನ (ಪ್ರ.ವಾ ೭,ಜೂನ್,೨೧೫) ಹೀಗೆ ಆರಂಭವಾಗುತ್ತದೆ: 
ನಮ್ಮ ಜೀವನ, ವೈಜ್ಞಾನಿಕ ಸಂಶೋಧನೆ, ಕೈಗಾರಿಕೆ, ವಾಣಿಜ್ಯ, ವ್ಯವಹಾರ ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಗಣಿತ ಹಾಸುಹೊಕ್ಕಾಗಿದೆ ಎಂಬುದು ಅತಿಶಯವಲ್ಲ ಎನ್ನುತ್ತದೆ ಅವರ ಸಂಶೋಧನೆ.

ಯಾವುದೇ ಉದ್ದಿಮೆ ಲಾಭದಾಯಕವಾಗಿ ಮುಂದುವರೆಯಬೇಕಾದರೆ ಕಾರ್ಮಿಕರು ಪರಸ್ಪರ ಸಹಕರಿಸಿ ದುಡಿಯಬೇಕೇ ಅಥವಾ ಪೈಪೋಟಿಯಲ್ಲಿ ದುಡಿಯಬೇಕೇಸಹಕರಿಸಿದರೆ ಉತ್ತಮ ಎನಿಸಬಹುದು. ಆದರೆ, ಕಾರ್ಮಿಕರು ಪರಸ್ಪರ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರಗತಿಗಾಗಿ ದುಡಿದಾಗಲೂ ಉದ್ದಿಮೆ ಲಾಭಗಳಿಸುವುದರಲ್ಲಿ ಸಂದೇಹವಿಲ್ಲ. ಅಂದರೆ, ಅದರಿಂದ ಕಾರ್ಮಿಕರಿಗೂ ಹೆಸರು ಬರುತ್ತದೆ ಕಂಪೆನಿಗೂ ಲಾಭವಿದೆ. ಇದನ್ನು ಮೊಟ್ಟಮೊದಲಿಗೆ ಸಂಶೋಧನೆ ಮಾಡಿ ತೋರಿಸಿಕೊಟ್ಟವರು ಅರ್ಥಶಾಸ್ತ್ರದ ನೋಬ್ ಪ್ರಶಸ್ತಿ ವಿಜೀತರಾದ ಪ್ರೋಫೆಸರ್ ಜಾನ್ ನ್ಯಾಶ್.
ಮೇಲೆ ಹೇಳಿದಂತೆ, ಅವರ ಗೇಮ್ ಥೀಯರಿಯಲ್ಲಿ,
ಇದನ್ನು ನಮ್ಮ ಜೀವನಕ್ಕೆ ಅನ್ವಯಿಸಿ ಹೇಳುವುದಾದರೆ, ಗಂಡ ಹೆಂಡತಿ ಒಬ್ಬರಿಗೊಬ್ಬರು ಸ್ಪರ್ಧಾತ್ಮಕವಾಗಿ ಪ್ರೀತಿಸಿದರೆ ಅದು "ನ್ಯಾಶ ದಾಂಪತ್ಯ". 
ಅವಿಭಕ್ತ ಕುಟುಂಬದಲ್ಲಿ ಪರಸ್ಪರ ಸಹಕರಿಸಿದರೆ ಅದು "ಪ್ಯಾರಿಟೋ ಕುಟುಂಬ". 
( ನ್ಯಾಶ್ ಗೇಮ್ ಧಿಯರಿ ಚಿತ್ರ ನೋಡಿ. ಪತ್ರಿಕಾ ಲೇಖನದಲ್ಲಿದ್ದ ಬಾಕ್ಸ್ ಬರಹ ನೋಡಿ).

ಜಾನ್ ನ್ಯಾಶ್ ಅವರ ವೈಯಕ್ತಿ ಜೀವನದಲ್ಲಿ ಬಹಳಷ್ಟು ಕಾಲ ರೋಗಿಯಾಗಿಯೇ ಬಳಲಿ ನೊಂದವರು. ಅವರ ಬಗ್ಗೆ ಬ್ಯೂಟಿಫುಲ್ ಮೈಂಡ್ಎಂಬ ಚಲನ ಚಿತ್ರ (೨೦೦೧ರಲ್ಲಿ ಬಂದಿದೆ; ಆಸ್ಕರ್ ಪ್ರಶಸ್ತಿ ಪಡೆದಿದೆ) ನಿರ್ಮಿಸಲೂ ಅದೇ ಕಾರಣ.  ಮಾನಸಿಕ ಖಿನ್ನತೆ (ಡಿಪ್ರೆಶನ್) ಎಂಬುದನ್ನು "ಮನೋ ರೋಗ "(ಸ್ಕೀಜಿಫ್ರೀನಿಯಾ") ಎಂದೇ ವೈದ್ಯಕೀಯ ವಿಜ್ಞಾನ ಪರಿಗಣಿಸುವುದಿದೆ. ರೋಗಿ ಎಂದು ಷಾಕ್ ಟ್ರೀಟ್ ಮೆಂಟ್ ಕೊಡುವುದು, ವರ್ಷಗಟ್ಟಲೆ ಮಾತ್ರೆಗಳನ್ನು ಸೇವಿಸುವುದು ಇತ್ಯಾದಿಯಾಗಿ ಚಿಕಿತ್ಸೆ. ಆದರೆ, ಚಿಕಿತ್ಸೆ ಎಲ್ಲಿಯವರೆಗೆ ಯಾವಾಗ ನಿಲ್ಲಿಸಬೇಕು ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ.  ಹಾಗೆನೋಡಿದರೆ, ಅದನ್ನು ಚಿಕಿತ್ಸೆಗೊಳಪಟ್ಟಾತನೇ/ಆಕೆಯೆ “ಈಗ ತಾನು ನಾರ್ಮಲ್ ಆಗಿದ್ದೇನೆ” ಎಂದು ನೀರ್ಧರಿಸಬೇಕಾಗುತ್ತದೆಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಹೇಳಬೇಕೆಂದರೆ, ನಿಜಕ್ಕೂ ಮನಸ್ಸು ಮನೋಹರ- ಅತಿಸುಂದರಅದನ್ನು ಕೆಡಿಸಿಕೊಳ್ಳಬಾರದು.  ಮಾನಸಿಕ ಖಿನ್ನತೆ ಎಂಬುದು ರೋಗವೇ ಅಲ್ಲ. (Depression is not a desease, it is nothing but Delusion). ಕನಸು ಕಾಣಬೇಕು; ಭ್ರಮಾಧೀನರಾಗಿ ಬದುಕಬಾರದು. “ಮನೋರೊಗಕ್ಕೆ ಮದ್ದಿಲ್ಲಎನ್ನುವುದೂ ಆದೇ ಕಾರಣಕ್ಕಾಗಿ. ದಶಕಗಳೇ ನರಳಿದ ನ್ಯಾಶ್ ಹಲವು ಬಾರಿ ಆಸ್ಪತ್ರೆಗೆ ಸೇರಿದರೂ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಕಡೆಗೂ ವಿಚ್ಛೇದನ ಬಯಸಿ ದೂರ ಹೋಗಿದ್ದ ಅವರ ಹೆಂಡತಿ ಅಲಿಯಾ ಮರಳಿ ಅವರನ್ನು ಸೇರಿಕೊಂಡದ್ದು ನ್ಯಾಶ್ ಅವರ ೫೦ ನೇ ವಯಸ್ಸಿನಲ್ಲಿ. ಆನಂತರ, ಆಕೆಯ ಪ್ರೀತಿ ವಿಶ್ವಾಸ, ಆರೈಕೆಯಿಂದ ನ್ಯಾಶ ಪೂರ್ಣ ಗುಣಮುಖರಾಗುತ್ತರೆ; ಯಾವುದೇ ಔಷಧಿ ಚಿಕಿತ್ಸೆಗಳಿಲ್ಲದೇ ಎಂಬುದು ಅತ್ಯಂತ ಗಮನಾರ್ಹವಾದದ್ದು.  

Thursday, December 04, 2014

ಕನ್ನಡ ಕಡ್ಡಾಯವಾಗಲೆಂದು, ನೆನೆಗುದಿಗೆ ಬಿದ್ದಿರುವ
೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನ


Devnur Mahadeva
[My pencil Sketch]
ಕಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ, ಕುಡಿಯುವ ನೀರು, ಗಡಿವಿವಾದ, ಕಸವಿಲೇವಾರಿ ಮತ್ತು ಕನ್ನಡಿಗರಿಗೆ ಕನ್ನಡ ನೆಲದಲ್ಲಿ ಉದ್ಯೋಗಕ್ಕೆ ಆದ್ಯತೆ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗೊಂಡ ನಿರ್ಣಯಗಳು ಕೇವಲ ವೇದಿಕೆಯ ಮೇಲೆ ಮೊಳಗುವ ಕೊಂಬು ಕಹಳೆಗಳಾಗಿದ್ದು, ಅವ್ಯಾವುವೂ ಸರ್ಕಾರದ ಮಟ್ಟದಲ್ಲಿ ಜಾರಿಯಾಗದೇನೇ ಎಂದಿಗೂ ಬಗೆಹರಿಯದ ಜ್ವಲಂತ ಸಮಸ್ಯೆಗಳಾಗಿಯೇ ಉಳಿದಿವೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳೆಂದರೇನೆ ಅವು ಗಾಳಿಗೋಪುರಗಳಾಗಿ ಸಮ್ಮೇಳನಗಳು ಜಾತ್ರೆಗಳಾಗಿಬಿಡುವುದರಿಂದ, ಸಮ್ಮೇಳ ನಡೆಸುವುದೇ ನಿಷ್ಪ್ರಯೋಜಕವೆನಿಸಿದೆ.
ಇದೀಗ ವರ್ಷಂಪ್ರತಿಯಂತೆ ನಡೆಯಲಿರುವ ೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆನೆಗುದಿಗೆ ಬಿದ್ದಿದೆ. ಈ ಸಮ್ಮೇಳನಕ್ಕೆ ದಲಿತ ಸಾಹಿತಿಯೊಬ್ಬರು ಅಧ್ಯಕ್ಷರಾಗಬೇಕೆಂದು ಸಾಹಿತಿ ದೇವನೂರು ಮಹಾದೇವ ಅವರನ್ನು ಆಹ್ವಾನಿಸಿದ್ದಾರೆ. ದೇವನೂರರು ತಾವೊಬ್ಬ ದಲಿತ ಸಾಹಿತಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ಮೊದಲು ಒಬ್ಬ ಸಾಮಾನ್ಯ ದಲಿತ ವ್ಯಕ್ತಿಯಾಗಿ ಪ್ರತಿಕ್ರಿಯಿಸಿದ್ದಾರೆ. ದಲಿತರ ಮುಗ್ಧತೆ, ಅನಕ್ಷರತೆಯನ್ನು ಹತ್ತಿರದಿಂದ ಕಂಡವರಾಗಿದ್ದು,  ಅವರ ಮುಖ್ಯ ಬೇಡಿಕೆಯೇ ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಬೇಕೆಂಬುದು. ಅವರ ಈ ಹೇಳಿಕೆ ನಿಜಕ್ಕೂ ಕನ್ನಡಿಗರನ್ನು ಜಾಗೃತಗೊಳಿಸುವಂತಿದೆ.

ದಲಿತರಿಗೆ ಮಾತ್ರವಲ್ಲ ಕರ್ನಾಟಕದ ೬ ಕೋಟಿ ಕನ್ನಡಿಗರೂ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕನ್ನಡವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಲೇ ಬೆಕೆಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈಗಾಗಲೇ, ನರ್ಸರಿಯಿಂದ ಇಂಗ್ಲೀಷ್ ಕಲಿತರೇನೆ ಮಕ್ಕಳು ಬುದ್ಧಿವಂತರಾಗಿ ಉತ್ತಮ ಸಂಬಳದ ಉದ್ಯೋಗ ಪಡೆಯುತ್ತಾರೆಂಬ ತಪ್ಪು ಕಲ್ಪನೆಯೇ ನಿಜಕ್ಕೂ ಹೆತ್ತವರಿಗೆ ಅವರ ಮುಪ್ಪಿನ ಕಾಲದಲ್ಲಿ  ತಲೆನೋವಾಗಿ ಪರಿಣಮಿಸಿತ್ತಿರುವುದನ್ನು ಕಾಣುತ್ತಿದ್ದೇವೆ. ಯಾಕೆಂದರೆ, ಕನ್ನಡದಲ್ಲಿ ಓದಲು ಬಾರದ ಸಾವಿರಗಳಿಂದ ಲಕ್ಷಗಟ್ಟಲೆ ಸಂಪಾದಿಸುವ ಸಾಫ್ಟ್ ವೇರ್ ಮತ್ತು ಇತರೆ ಉನ್ನತ ಉದ್ಯೋಗಿಗಳ ಯುವಪೀಳಿಗೆ ಬಹಳಷ್ಟು ಬೆಳೆಯುತ್ತಿದೆ. ಅವರು ಮಾತೃಭಾಷೆ ಕನ್ನಡದಿಂದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯಿಂದ ದೂರವಾಗುದಲ್ಲದೇ ತಮ್ಮ ಹೆತ್ತವರ ಮನೆ ಮನಸ್ಸುಗಳಿಂದಲೇ ದೂರವಾಗುತ್ತಿದ್ದಾರೆ. ವಿದೇಶಕ್ಕೆ ಹೋಗಿ ನೆಲೆಸುತ್ತಿದ್ದಾರೆ. ಅಂತಹ ಹೆತ್ತವರು ತಮ್ಮ ಮಕ್ಕಳ ಚಿತ್ರ ವಿಚಿತ್ರ ಲೈಫ್ ಸ್ಟೈಲ್ ಗಳನ್ನು ಬದಲಿಸಲಾಗದೇನೆ ದೂರದಿಂದಲೇ ನೋಡುತ್ತ ನೋವೂ ನುಂಗಿಕೊಂಡು ಬದುಕಲಾರದೇನೆ ಬದುಕುತ್ತ ಒಂಟಿತನ ಅನುಭವಿಸುತ್ತಾರೆ. ತಾವು ಮಕ್ಕಳನ್ನು ಚಿಕ್ಕದಿಂನಿಂದ ನಮ್ಮ ಕಣ್ಣೆದುರಿನಲ್ಲೆ ಇಟ್ಟುಕೊಂಡು ಕನ್ನಡ ಕಲಿಸದೇನೆ ದೊಡ್ಡ ತಪ್ಪು ಮಾಡಿದೆವು ಎಂದೇ ಪರಿತಪಿಸುವವರನ್ನು ನೋಡಿದ್ದೇನೆ. ನೆಲೆಸುತ್ತಿದ್ದಾರೆ [ ಇದಕ್ಕೆ ಹೊರತಾಗಿ ಕೆಲ ಯುವ ಮಕ್ಕಳ ಉದಾಹರಣೆಗಳಿರಬಹುದು].

ಕರ್ನಾಟಕ ಸರ್ಕಾರ ನಮ್ಮ ನೆರೆಯ ರಾಜ್ಯಗಳಾದ ತಮಿಳು ನಾಡು ಮತ್ತು ಮಹಾರಾಷ್ಟ್ರ ಇವುಗಳನ್ನು ನೋಡಿಯೂ ಅವರ ಮಾತೃಭಾಷೆಯ ಅಭಿಮಾನ ಕಂಡೂ ನಮ್ಮ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಕನ್ನಡಿಗರು ಅಭಿಮಾನಶೂನ್ಯರಲ್ಲವೆಂಬುದನ್ನು ತೋರಿಸಬೇಕಾಗಿದೆ. ಅಂತಹ ಕನ್ನಡಪರ ಕಾಳಜಿ ನಮ್ಮ ಗಣ್ಯಸಾಹಿತಿಗಳಲ್ಲೂ ಇದ್ದಂತಿಲ್ಲ. ಕನ್ನಡಪರ ಸಂಘಟನೆಗಳಲ್ಲೂ ಬಲವಾದ ಹೋರಾಟವಿಲ್ಲ. ಸಾಹಿತಿಗಳಲ್ಲೇ ಗುಂಪುಗಾರಿಕೆ ತಮ್ಮ ಸ್ವಾರ್ಥಕ್ಕಾಗಿ ಲಾಬಿಗಳು, ಅದು ಸಾಹಿತ್ಯಸಮ್ಮೇಳನ ಗೋಷ್ಟಿಗಳಿಗೆ ಹಾಗೂ ಸನ್ಮಾನಗಳಿಗೆ ನಡೆಯುತ್ತವೆ. ಕನ್ನಡಪರ ನಿರ್ಣಯಗಳು ನಾಟಕೀಯವಾಗಿ ಕೊನೆಗೊಳ್ಳುತ್ತವೆಯಷ್ಟೇ. ಕೆಲ ಪ್ರಾಮಾಣಿಕ ಸಾಹಿತಿಗಳೂ ಈ ಸಮ್ಮೇಳನದ ಸಂತೆ -ಜಾತ್ರೆಯಿಂದ ದೂರವೇ ಉಳಿಯುತ್ತಾರೆ. ಇದೀಗ ಕನ್ನಡಿಗರೂ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ದೇವನೂರು ಮಹಾದೇವ ಅವರ ಮುಖ್ಯ ಬೇಡಿಕೆಯಾದ ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಬೇಕೆಂಬುದು ಸ್ವಾಗತಾರ್ಹವೇ. ತಮ್ಮ ಬೇಡಿಕೆ ಈಡೇರುವಂತಿದ್ದರೆ ತಾವು ಸಮ್ಮೇಳನಾಧ್ಯಕ್ಷ ಪೀಠ ಅಲಂಕರಿಸುವೆನೆಂಬ ಅವರ ಅಭಿಪ್ರಾಯ ನಿಜಕ್ಕೂ ಶ್ಲಾಘನೀಯವೇ ಆಗಿದೆ.
ದೇವನೂರು ಸಮ್ಮೇಳನಾಧ್ಯಕ್ಷರ ರಾಜಬೀದಿ ಮೆರವಣಿಗೆಯ ಉತ್ಸವ ಹಾಗೂ ಅವರಿಗೆ ದೊರಕುವ ರಾಜೋಪಚಾರದ ಆತಿಥ್ಯ ಜೊತೆಗೆ ಗೌರವ ಸಂಭಾವನೆಯಾಗಿ ಸಿಗುವ ೧೨ ಲಕ್ಷಕ್ಕೂ ಹೆಚ್ಚಿನ ಸಂಭಾವನೆಯನ್ನು ನಿರಾಕರಿಸುವಂತಹ ಹೇಳಿಕೆಯನ್ನು ನೀಡಿ ತಾವು ನಿಜಕ್ಕೂ ಮಹಾದೇವರೇ  ಆಗಿದ್ದಾರೆ. ಅವರು ತಮ್ಮ ಗೌರವಕ್ಕೆ ಚ್ಯುತಿ ಬರುವಂತೆ ತಮ್ಮ ನಿಲುವನ್ನು ಖಂಡಿತ ಬದಲಿಸಬಾರದು.
ಕೊನೆಯ ಮಾತು: ಹೀಗೆ ಹೇಳುವ ನಾನು ಇಳಿವಯಸ್ಸಿನಲ್ಲದ್ದೇನೆ. ನಮ್ಮ ಮಕ್ಕಳಿಗೆ ಕನ್ನಡ ಬರುವುದಿಲ್ಲವೆಂದು ಕೊರಗುವ ಸ್ನೇಹಿತರನ್ನೂ ನೋಡಿ ಮರುಗಿದ್ದೇನೆ 
ನನ್ನ ಗಂಡು ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡವನ್ನು ಸ್ವ ಇಚ್ಛೆಯಿಂದಲೆ ಕಡ್ಡಾಯವಾಗಿ ಕಲಿಸಿದ್ದೇನೆ. ಇದೀಗ ಸಾಫ್ಟ್ ವೇರಿಗಳೇ ಆಗಿದ್ದಾರೆ. ಪರದೇಶದ ಇಂಗ್ಲೀಷನ್ನು ಅಸ್ಖಲಿತವಾಗಿ ಮಾತನಾಡಲು ಬರೆಯಲು ಕಲಿತವಾರಾಗಿ ಅದನ್ನು ಅವರ ಕಂಪೆನಿ ಕಂಪೆನಿ ಉದ್ಯೋಗಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡ ವನ್ನು ಚೆನ್ನಾಗಿಯೇ ಓದಲು ಬರೆಯಲೂ ಬಲ್ಲವರಾಗಿದ್ದಾರೆ ]

Friday, October 24, 2014

ಜ್ಯೋತಿಷ್ಯವೇ ಜೀವನವೇ...??

ಜ್ಯೋತಿಷ್ಯದಲ್ಲಿ ನಂಬಿಕೆ ಹಿಂದಿನ ಕಾಲದಿಂದಲೂ ಇದೆ. ಆದರೆ, ಜ್ಯೋತಿಷ್ಯವನ್ನೇ ನಂಬಿಕೊಂಡರೆ ಜೀವನ ಸಾಗುವುದೇ...? ಮುಗ್ಧ ಜನರಲ್ಲಿ ಜ್ಯೋತಿಷ್ಯವಿಲ್ಲದೇ ಜೀವನ ಚಕ್ರ ಮುಂದೆ ಚಲಿಸಲಾರದಲ್ಲ.. ಎಷ್ಟೋ ಸಂದರ್ಭಗಳಲ್ಲಿ ಅವರನ್ನು ಜ್ಯೋತಿಷ್ಯವೇ ಮಂಕುಕವಿಸುವುದೋ ಅಥವಾ ಜ್ಯೋತಿಷಿಗಳೇ ಅವರಿಗೆ ಮಂಕು ಕವಿಸುತ್ತಾರೋ ಹೇಳುವುದು ಕಷ್ಟಸಾಧ್ಯವೇ. 

ಕೆಲವರಂತೂ ದುಡ್ಡುಕೊಟ್ಟು ಜ್ಯೋತಿಷ್ಯ ಕೇಳಿ ತಲೆಕೆಡಿಸಿಕೊಳ್ಳುವುದಕ್ಕಿಂತ ದೇವರಿಗೆ ಮೊರೆ ಹೋಗುವುದೇ ಲೇಸೆಂದು, ಗುಡಿಗಳಲ್ಲಿ ಕಲ್ಲುದೇವರ ಎದುರಿಗೇ ಕುಳಿತು ತಮ್ಮ ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಆ ನಂಬಿಕೆ ಪ್ರಶ್ನಾತೀತವೇ ಆಗಿಬಿಡುತ್ತದೆ.  ಕೆಲ ಸಂದರ್ಭಗಳಲ್ಲಿ ದೇವರನ್ನೇ ಅವಲಂಬಿಸಿದ ಮೌಢ್ಯವೇ ಆಗಿರುತ್ತದೆ.

ಇದು ವ್ಯವಹಾರೀಕ ಪ್ರಪಂಚ. ಹಿಂದೆಂದಿಗಿಂತಲೂ ಈಗ ದುಡ್ಡಿನಲ್ಲೇ ಎಲ್ಲವನ್ನೂ ತೂಗುವ ಜನರೇ ಇದ್ದಾರೆ. ಬಹುತೇಕ ಜ್ಯೋತಿಷಿಗಳು ಜ್ಯೋತಿಷ್ಯವನ್ನು ದುಡ್ಡುಮಾಡುವ ದಂಧೆಯನ್ನಾಗಿಸಿಕೊಂಡಿದ್ದಾರೆ. ಅರ್ಧಗಂಟೆಗೆ ಸಾವಿರಗಟ್ಟಲೆ ಫೀಸು ಕೇಳಿ, ಕೇವಲ ಮೂರು ಪ್ರಶ್ನೆಗಳಿಗೆ ಮಾತ್ರ ಅವಕಾಶಕೊಡುವ ಖ್ಯಾತ ಜ್ಯೋಷ್ಯ ಶಾಸ್ತ್ರಯ್ಞರಿದ್ದಾರೆ!

ಇತ್ತೀಚಿನ ದಿನಗಳಲ್ಲಿ ನಿವೃತ್ತ ನೌಕರರೂ ನಾಲ್ಕು ಪುಸ್ತಕಗಳನ್ನು ಓದಿಕೊಂಡು,  ಲ್ಯಾಪ್ ಟಾಪಗ ಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಸ್ಟ್ರಾಲಜಿ ಸಾಫ್ಟ್ ವೇರ್‍ ಹಾಕಿಸಿಕೊಂಡು, ಹೊರಗೆ  ತೂಗು ಚೀಲ ಹಾಕಿಕೊಂಡು  ಓಡಾಡುತ್ತ ಜ್ಯೋತಿಷ್ಯ ಹೇಳುವ ಉದ್ಯೋಗ ಮಾಡುತ್ತಾರೆ. ಯಾಕೆಂದರೆ, ಇದಕ್ಕೆ ಯಾವ ಲೈಸೆನ್ಸ್ ಬೇಕಿಲ್ಲ. ಅವರು ನುಡಿದದ್ದೇ  ಹಾಗೂ ಹೀಗು ಸರಿಯಾಗಿಬಿಟ್ಟರೆ ಸಾಕು, ಮುಗ್ಧಜನರ ದಂಡೇ ಅವರ ಮನೆ ಬಾಗಿಲಿಗೆ ಬರುತ್ತದೆ.


ಜ್ಯೋತಿಷ್ಯ ಪೂರ್ಣ ಸುಳ್ಳಲ್ಲ; ಪೂರ್ಣ ನಿಜವೂ ಅಲ್ಲ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. ಯಾಕೆಂದರೆ, ಭಗವಂತನೇ ಬಂದು ಹೇಳಿದಂತೆ ನಿಜಕ್ಕೂ 100% ಜ್ಯೋತಿಷ್ಯ ಹೇಳುವ  ಜ್ಯೋತಿಷಿ ಇನ್ನೂ ಹುಟ್ಟಿರಲಿಕ್ಕಿಲ್ಲ. ಇಲ್ಲವಾದರೆ, ಜ್ಯೋತಿಷಿಗಳಿಗೆ ದೇವಸ್ಥಾನ ಕಟ್ಟಿಸಿಬಿಡುತ್ತಿದ್ದರು; ನಂಬಿಕೊಂಡ ನಮ್ಜ ಜನರು.
  • ಜ್ಯೋಷ್ಯ ಕೇಳಿದರೆ, ನಂಬಿಯೂ ನಂಬದಂತಿರಬೇಕು. ಯಾಕೆ ಗೊತ್ತೇ...? ಯಾವ ಒಬ್ಬ ಜ್ಯೋತಿಷಿಯೂ ಕೇಳಿದ ಪ್ರಶ್ನೆಗೆ ತನಗೆ ತೋಚಿದುದನ್ನೆಲ್ಲ ಹೇಳಿ, ಕಡೆಗೆ ದೇವರ ಮೊರೆ ಹೋಗಿ ಎಂದು ಹೇಳದೇ ಇರಲಾರನಲ್ಲ....
  1. ತಂದೆ ತಾಯಿಗಳು ಜಾತಕಗಳನ್ನು ಹೊಂದಾಣಿಕೆ ಮಾಡಿಕೊಂಡು ಗಂಡು/ಹೆಣ್ಣನ್ನು ನೋಡಲು ಹೋದರೆನ್ನಿ, ಆಗ ಅವರು ಪರಸ್ಪರ ಒಪ್ಪಿಕೊಳ್ಳದಿದ್ದರೇನು ಮಾಡುತ್ತಾರೆ ಹೇಳಿ..? ಜಾತಕಗಳು ಕೂಡಿ ಬಂದಿವೆಯೆಂದರೆ ನಾನು ಮದುವೆಗೆ ಒಪ್ಪಿಕೊಳ್ಳಬೇಕೇನೂ...? ಎಂದೇ ಅಪ್ಪ-ಅಮ್ಮಂಗೆ ಸವಾಲೆಸೆಯುತ್ತಾರೆ. ಅಲ್ಲದೇ, ನೋಡದೆಯೇ ಒಪ್ಪಿಕೊಂಡುಬಿಡುವ ಸಂದರ್ಭಗಳೆಷ್ಟೋ ಇವೆಯಲ್ಲ!
  2. ಜ್ಯೋತಿಷ್ಯ-ಜಾತಕಗಳನ್ನು ಪರಿಶೀಲಿಸದೇನೆ ಮದುವೆಯಾದ ದಂಪತಿಗಳು ೩೦-೪೦ ವರ್ಷಗಳೇ ದಾಂಪತ್ಯ ಜೀವನ ನಡೆಸಿದವರಿದ್ದಾರೆ.
  3. ಜ್ಯೋತಿಷ್ಯ ಕೇಳಿಯೂ ವಿಫಲವಾದ ಮದುವೆಗಳೂ ಎಷ್ಟೋ ಇವೆಯಲ್ಲವೇ..?
  4. ಇಂದಿನ ದಿನಗಳಲ್ಲಿ ಲೌವ್ ಮ್ಯಾರೇಜ್ ಆಗುವ ಜೋಡಿಗಳು ಜ್ಯೋತಿಷ್ಯ ನಂಬುವುದೇ ಇಲ್ಲವಲ್ಲ. ಅವರೂ ಯಶಸ್ವಿಯಾಗಿ ಸಂಸಾರ ಸಾಗಿಸಿ ಸುಖ ಕಂಡವರಿದ್ದಾರೆ. 
  5. ಜ್ಯೋತಿಷ್ಯದ ಮಾತಂತಿರಲಿ,ತಮ್ಮ ವಯಸ್ಸಿಗೆ ಬಂದ ಮಕ್ಕಳಲ್ಲಿ ಮಗನೋ ಮಗಳೋ,  ಸಧ್ಯ ಮದುವೆಯಾದರೆ ಸಾಕೆಂಬ ಕಾಲವಿದಾಗಿದೆಯಲ್ಲವೇ...?
  • ನೋಡಿ, ವೈದ್ಯರೂ ಕೂಡ ಆಪರೇಷನ್ ಸಕ್ಸಸ್ ಆಗಿದ್ದರೂ, ಪೇಷಂಟ್ ಗೆ ಪ್ರಜ್ಞೆ ಮರಳಿ ಬರುವತನಕ..
  • ಅವರ ಕೈಯಲ್ಲಿಲ್ಲವಲ್ಲ! ಆದ್ದರಿಂದ ಅವರೂ ದೇವರ ಕಡೆಗೇ ಬೆರಳು ತೋರಿಸುತ್ತಾರೆ.
  • ಕ.ಪ್ರ. ಪತ್ರಿಕೆಯ ಆಣಿ ಮುತ್ತು ಓದಿ ನೋಡಿ.  ವಿಶ್ವದ ಮೊದಲ ಹದಯ ಕಸಿ ಮಾಡಿ ಖ್ಯಾತ ವೈದ್ಯರಾದ ಡಾ|| ಕ್ರಿಚ್ಚಿಯನ್ ಬರ್ನಾಡ್  ಏನು ಹಳುತ್ತಾರೆ ಎಂಬುದರಿಂದಲೇ ಸ್ಪಷ್ಟವಾಗುತ್ತದೆ.
ನಮ್ಮ ಹಿರಿಯರು ಹೇಳಿದರು:-
"ತೇನವಿನಾ ತೃಣಮಪಿ ನ ಚಲತಿ ತೇನವಿನಾ
ಮಮತೆಯ ಬಿಡು ಹೇ ಮೂಢ ಮನಾ"

Wednesday, July 06, 2011

ಓಟು ನಮ್ಮ ಜೋಳಿಗೆಗೆ ಹಾಕ್ರಿ ಚಲೋದ ಮಾಡ್ತೀವಿ ಅನ್ನೋರೆಲ್ಲಾ... ಭಲೇ ಆಶಾಢಭೂತಿಗಳು!

No great work can be done without Sacrifice
-Swami Vivekananda

ನಮ್ಮ ಭಾರತ ಬಡಬಗ್ಗರ ದೇಶ. ಇಲ್ಲಿ ಗರೀಬಿ ಹಟಾವೋ... ಎಂಬುದು ಕೇವಲ ಘೋಷಣೆಯಷ್ಟೇ.. ಇಲ್ಲ ಬಡವರ ಕಷ್ಟ ಭಗವಂತನಿಗೇ ಗೊತ್ತು. ಭಗವಂತನಿಲ್ಲದ ಕೋಟ್ಯಂತರ ಬಡವರನ್ನು ಊಹಿಸಿಕೊಳ್ಳುವುದೇ ಕಷ್ಟ... ಅದರಲ್ಲೂ ಮಧ್ಯಮ ವರ್ಗದವರಿಗೆ ದೇವರೇ ಪ್ರತಿನಿತ್ಯ ರಕ್ಷಿಸುವ ಸರ್ವೋತ್ತಮನು. ಅವನೇ ವಿವಿಧ ರೂಪಗಳಲ್ಲಿ ಕಾಣುವ ಆರಾಧ್ಯ ಶಕ್ತಿಸ್ವರೂಪಿ; ಜೀವಿತದ ಪರಾತ್ಪರ ತತ್ವ.

ಬಡವರ ಕಷ್ಟ ಅರ್ಥವಾದ ಹಾಗೇ ಬರೀ ನಾಟಕ ಆಡೋ ರಾಜಕೀಯ ಫುಡಾರಿಗಳಿಗೇನೂ ಕಡಿಮೆ ಇಲ್ಲ; ಈ ದೇಶದಲ್ಲಿ. ಅಂಥ ಪುಢಾರಿಗಳಿಂದ ಅಲ್ಪಸ್ವಲ್ಪ ಉಪಕೃತರಾದ ಕಡುಬಡವರು ಮತ್ತು ಅಜ್ಞಾನ ಅನಕ್ಷರತೆಯಿಂದ ಕಂಗಾಲಾಗಿ ಸ್ವಂತ ತಿಳುವಳಿಕೆ ಇಲ್ಲದವರ ಜನಸಂಖ್ಯೆಯೇ ಬಹಳವಿದೆ ಈ ದೇಶದಲ್ಲಿ. ಆ ಕಟ್ಟ ಕಡೆವರ್ಗದ ಗುಂಪಿನ ಜನರೇ ಈ ದೇಶದ ಭವಿಷ್ಯವನ್ನ ಪ್ರತಿಯೊಂದೂ ಚುನಾವಣೆಯಲ್ಲೂ ನಿರ್ಧಾರ ಮಾಡುತ್ತಾರೆ. ಅವರ ಬೌದ್ಧಿಕಮಟ್ಟ ಹಾಗೆಯೇ ಇರಬೇಕು; ಹಾಗೇ ಇರುವವರೆಗೆ ನಮ್ಮ ಮಹಾನ್ ಜನಸೇವಕ ಪ್ರತಿನಿಧಿಗಳಾಗಬಯಸುವ ರಾಜಕಾರಣಿಗಳಿಗೆ ಭಯವೇನಿಲ್ಲ. ಕೋಟಿಗಟ್ಟಲೆ ಹಣದ ಬಲವೇ ಅವರಿಗೆ ಜನಬಲವನ್ನು ತಂದುಕೊಡುತ್ತದೆಂಬ ದೃಢ ವಿಶ್ವಾಸ.

ಇಂಥ ಹಣವೇ ಮಾತನಾಡುವ ನಮ್ಮಮಹಾನ್ ಭಾರತವಿದು. ಆದರೇನು! ಇಲ್ಲಿ ಭಗವಂತನೊಡನೆ ಅವರವರ ಅಂತರಂಗದಲ್ಲೇ ಮಾತನಾಡುವವರ ಕೋಟ್ಯಾಂತರ ಜನಸಾಮಾನ್ಯರಿಗೇನೂ ಕೊರತೆಯಿಲ್ಲ ಬಿಡಿ! ಈ ಭವದ ಕಷ್ಟ ನಮ್ಮಜನಸಾಮಾನ್ಯರಿಗೆ ಒಗ್ಗಿ ಹೋಗಿರುವಂತೆ ಜಗತ್ತಿನ ಬೇರಾವ ಜನರಿಗೆ ಒಗ್ಗಿದೆ ಹೇಳಿ..? ಯಾಕೆಂದರೆ, ಜನಸಂಖ್ಯೆ ಗರಿಷ್ಠ ಮಟ್ಟದ ಅಭಿವೃದ್ದಿಯಲ್ಲಿ ನಾವೇ ಯಾವಾಗಲೂ ಬಹಳ ಮುಂದು ಅಲ್ಲವೇ..?

ಏನೇ ಆಗಲಿ, ಅಂದಿಗೂ ಇಂದಿಗೂ ವಿದೇಶೀಯರೂ ನಮ್ಮ ಜನಸಾಮಾನ್ಯ ಕಷ್ಟಸಹಿಷ್ಣುತೆ, ಧಾರ್ಮಿಕ ನಂಬಿಕೆ ಮತ್ತು ಅವರು ಭಗವಂತನಲ್ಲಿ ಇಟ್ಟಿರುವ ವಿಶ್ವಾಸ ಕಂಡು ಮೂಕವಿಸ್ಮಿತರಾಗುತ್ತಾರಲ್ಲ...! ಮನುಷ್ಯ ಕಷ್ಟಪಟ್ಟೇ ಜೀವನದಲ್ಲಿ ಮುಂದೆ ಬರಬೇಕೆಂಬುದು ನಮ್ಮ ಅನುಭವೀಕರ ಹಾಗೂ ಅನುಭಾವಿಗಳ ನುಡಿ. ಬಡವರ ಕಷ್ಟ ಕಣ್ಣೀರೊರೆಸುವ ನಾಟಕ ಆಡೋ ಮಂದಿಗೇನು ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಷ್ಟೇ. ದೇವರು  ಇದ್ದಾನೆಯೇ ? ಎನ್ನುವುದಕ್ಕಿಂತ ದೇವರಲ್ಲಿ ನಾವಿದ್ದರೆ, ನಮ್ಮ ಕಷ್ಟ ಕಳೆಯೋಕೆ ಯಾರಾದರೂ ಪುಣ್ಯತ್ಮರು ಬರುತ್ತಾರೆ; ಸಹಾಯ ಮಾಡುತ್ತಾರೆ; ದಾರಿಯನ್ನಾದರೂ ತೋರುತ್ತಾರೆ.

ನಂಬಿಕೆಯಿಂದಲೇ ಈ ಭವದ ಬದುಕು. ನಂಬಿಕೆ ಇದ್ದರೆ ಇಲ್ಲಿ ಎಲ್ಲವೂ ಇದೆ. ಇಲ್ಲವಾದರೆ ಏನೂ ಇಲ್ಲ. ದೇವರೇನು? ನನಗೆ ನಾನೂ ಇಲ್ಲ!ಚಲೋದು ಕೆಟ್ಟದ್ದು ಎರಡೂ ಇರೋದ...  
ಚಲೋದು ಕೆಟ್ಟದ್ದು ಎರಡೂ ಇರೋದ... ಚಲೋದ ಇಟಗೊಂಡ ಕೆಟ್ಟದ್ದನ್ನ ಮಹಾತ್ಮರ ಜೋಳಿಗೆಗೆ ಹಾಕ್ರಿ ಅವರು ಹೊರತಾರ ಅಂತಾರೆ ಶ್ರೀ ಶ್ರೀ ಚನ್ನವೀರ ಶರಣರು.
ಶರಣರ ನುಡಿ ಸತ್ಯ ಕೆಟ್ಟದ್ದನ್ನು ಹೊರೊ ನಿಜಕ್ಕೂ ಮಹಾತ್ಮರು ಕಾವಿಧಾರಿಗಳು ಈ ದೇಶದಲ್ಲಿ ಕಡಿಮೆಯಾದರೂ ಇದ್ದೇ ಇರುತ್ತಾರೆ. ಅಂಥ ಸಂತರ ಸತ್ಸಂಗ ನಿಮಗೆ ದೊರಕಲಿಲ್ಲವೇ...ನೀವು ಕುಳಿತಲ್ಲೇ ನಿಮಗೆ ಪರಮಾತ್ಮನಾದ ಪರಮಾತ್ಮನನ್ನು ಧ್ಯಾನಿಸಿ, ಅವನ ಕಾಣದ ಜೋಳಿಗೆಗೆ ನಿಮ್ಮ ಕಷ್ಟವನ್ನೆಲ್ಲ ಹಾಕಿಬಿಡಿ.  ನಿಮ್ಮ ಓಟು ನಮ್ಮ ಜೋಳಿಗೆಗೆ ಹಾಕಿ ನಿಮಗೆ ಒಳ್ಳೇದು ಮಾಡ್ತೀವಿ ಅನ್ನೋ ಪುಢಾರಿಗಳ ಎಂಜಲು ಕಾಸಿಗೆ ಅಷ್ಟಿಷ್ಟು ನೆರವಿಗೆ ಖಂಡಿತ ಬಲಿಪಶುಗಳಾಗದಿರಿ.  ನೆನಪಿಡಿ. ಬಹಳ ಎತ್ತರಕ್ಕೇರಿರುವ ಪ್ರತಿಭಾವಂತರೂ ವಿಜ್ಞಾನಿಗಳು, ತಂತ್ರಜ್ಞರು ತಮ್ಮ ಪ್ರಾಮಾಣಿಕ ಹಾದಿಯಲ್ಲೇ ಮಹೋದ್ಯಮಿಗಳಾದವರು ನಮ್ಮ ದೇಶದಲ್ಲೇ ಈಗ ಹೆಚ್ಚುತ್ತಿದ್ದಾರೆ; ನೋಡಿ ಅವರು ನಿಮಗೆ ಮಾದರಿಯಾಗಬೇಕು. ಕೊನೆಯದಾಗಿ ಹೇಳಬೇಕೆಂದರೆ ಒಳ್ಳೆಯ ರೀತಿಯಲ್ಲಿ ಎತ್ತರಕ್ಕೇರಿದ ಪ್ರತಿಯೊಬ್ಬರೂ ಸಾಧಿಸಿದ ಜಯದ ಹಿಂದೆಯೂ ಬೆವರು ಸುರಿಸಿದ ಕಷ್ಟದ ಹಾದಿಯೇ ಇರುತ್ತದೆ.  ಸಾಫ್ಟ್ ವೇರ್  ದಿಗ್ಗಜರಾದ ನಾರಾಯಣ ಮೂರ್ತಿ, ಸಾಮಾನ್ಯ ಕೃಷಿಕನಾಗಿ ಕೃಷಿ ಆರಂಭಿಸಿ,ಆನಂತರ ವಿಮಾನಯಾನದ ಕಂಪೆನಿಯನ್ನೇ ಕಟ್ಟಿ ಯಶಸ್ವಿಯಾದ ಕ್ಯಾಪ್ಟನ್ ಗೋಪಿನಾಥ್ ಇಂಥವರ ಮಾದರಿ ನಮ್ಮ ಯುವ ಜನಾಂಗಕ್ಕೆ ಇರಬೇಕೇ ಹೊರತು, ಭ್ರಷ್ಟತನದಿಂದ ಮೇಲೇರಿ ಮೆರೆಯುವವರು ಉಲ್ಕೆಗಳಂತೆ ಉರಿದು ಧರೆಗುದುರಿ ಮರೆಯಾಗುವವರಲ್ಲ. ಯಾವ ಮಹತ್ವಾಕಾಂಕ್ಷೆಯೂ, ಮಹತ್ಕಾರ್ಯವೂ ಹೃದಯವನ್ನೇ ಕಿತ್ತಿಡುವಂತಹ ತ್ಯಾಗವಿಲ್ಲದೇ ಆಗಲಾರದು

Monday, November 01, 2010

೫೪ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಕನ್ನಡ...

ಇಂದು ನಮ್ಮ ಕನ್ನಡ ನಾಡು ೫೪ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ನಮ್ಮ ನಾಡ ಉತ್ಸವ ಈ ಒಂದು ದಿನಕ್ಕಷ್ಟೇ ಸೀಮಿತವಾಗಿಬಿಡುತ್ತದೆ ಎಂಬ ಅಪಸ್ವರವನ್ನು ತೊಡೆದುಹಾಕಲೆಂದೇನೊ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಸಮಿತಿಯು ನ.೧ ರಿಂದ ಮುಂದಿನ ವರ್ಷ ನ.೧ರವರೆಗೆ "ಕನ್ನಡ ಉಳಿಸಿ ವರ್ಷಾಚರಣೆ" ಹಮ್ಮಿಕೊಂಡಿದೆ. ಬೆಂಗಳೂರಿನ ಮೈಸೂರು ವೃತ್ತದಲ್ಲಿ ನೃಪತುಂಗ ಮಂಟಪ ನಿರ್ಮಿಸಿ ಆಚರಣೆಗೆ ಚಾಲನೆ ನೀಡಿ, ನವೆಂಬರ‍್ ಪೂರ್ತಿ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಹಾಗೂ ರಾಜ್ಯದಾದ್ಯಂತ ವರ್ಷವಿಡೀ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ನಿಜಕ್ಕೂ ಇದೊಂದು ವಿಶೇಷ, ನಮ್ಮ ನಾಡಿನ ಕನ್ನಡ ಜನತೆಯನ್ನೆಚ್ಚರಿಸುವ ಅವರೆಲ್ಲ ಕನ್ನಡದ ಬಗ್ಗೆ ಮತ್ತೆ ಹೆಮ್ಮೆ ಪಡವಂತೆ ಪುನರ‍್ ಪ್ರಯತ್ನಿಸುವುದು ಕನ್ನಡಾಭಿಮಾನಿಗಳ ಮಹತ್ವದ ಕೆಲಸವೇ ಸರಿ. ಹಿರಿಯರು ಕನ್ನಡದತ್ತ ಹಿನ್ನೋಟ ಹರಿಸಬೇಕು, ತಮ್ಮ ಮಕ್ಕಳಿಗಾಗಿ ಅವರ ಭವಿಷ್ಯದ ದೃಷ್ಟಿಯಿಂದ ಮುಂದಾಲೋಚನೆ ಮಾಡಬೇಕು. ಆ ಪುಟ್ಟಮಕ್ಕಳು ತಮ್ಮ ಬಟ್ಟಲು ಕಂಗಳನ್ನು ತೆರೆದು ಕನ್ನಡದಲ್ಲಿ ಬಾಲ್ಯದಿಂದಲೇ ಆಸಕ್ತಿಯಿಂದ ಓದುವಂತಾಗಬೇಕು.

ಹೌದು, ಯಾವುದೇ ವಿದ್ಯೆಯ ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೆ ಆಗಬೇಕು.
ಕಾಲ ಬದಲಾಗಿದೆ ಕನ್ನಡದೊಂದಿಗೆ ಇಂಗ್ಲೀಷ್ ಇರಲಿ. ಆದರೆ, ಇಂಗ್ಲೀಷ್ಷೇ ಮುಖ್ಯವೆನಿಸಿ ಅದು ಕನ್ನಡವನ್ನುನುಂಗಿ ನಮ್ಮಕನ್ನಡದ ಕಂದಮ್ಮಗಳಿಗೆ  ಮಾತೃಭಾಷೆಯಿಂದ ನೇರವಾಗಿ ಉಂಟಾಗುವ ಅಮೂಲ್ಯ ಜ್ಞಾನರ್ಜಾನೆಯಿಂದ ವಂಚಿತರನ್ನಾಗಿಸದಿರಲಿ. ನಮ್ಮ ಮಾತೃಭಾಷೆಯಿಂದಲೇ ಆರಂಭವಾಗುವ ಜ್ಞಾನಾರ್ಜನೆಗಿಂತ ಮಿಗಿಲಾದುದು ಬೇರೆ ಇನ್ನೊಂದರಿಂದ ಸಾಧ್ಯವಿಲ್ಲವೆಂಬುದು ಅವರಿಗೆ ತೀರ ತಡವಾಗಿ ತಿಳಿದರೆ ಪಶ್ಚಾತ್ತಾಪಪಡಬೇಕಾದೀತು!!

"ಕನ್ನಡ ಕಣ್ಮರೆಯಾಗುತ್ತಿದೆ" ಎಂಬ ಕೂಗು ಅಲ್ಲಲ್ಲಿ ಕೇಳಿ ಬರುತ್ತಿದೆ.
ಇಲ್ಲ, ಹಾಗೆಂದಿಗೂ ಆಗಲಾರದು. ಹಾಗೆ ಒಂದೆಡೆ ಕಂಡು ಬರುತ್ತಿದ್ದರೂ ಅದು ಇನ್ನೊಂದೆಡಯಿಂದ ಪುನರ‍್ ಉತ್ಥಾನವಾಗುತ್ತಲೇ ಇರುತ್ತದೆ.
"ಓ ಕನ್ನಡಿಗ" ನಿನ್ನ ಉದ್ಧಾರ ನಿನ್ನ ಮಾತೃಭಾಷೆಯಿಂದಲೇ... ನಿನ್ನ ಉದ್ಯೋಗಕ್ಕೆ ಅಷ್ಟಿಷ್ಟು ಇಂಗ್ಲೀಷ್ ಇದ್ದರಾದೀತು. ಆದರೆ, ನಿನ್ನ ಜೀವನ ಚೇತನಕ್ಕೆ, ಕನ್ನಡವನ್ನೇ ಮೊದಲ ಉಸಿರಾಗಿ ಕಂಡ ನಿನ್ನ ಜನ್ಮಪಾವನವಾಗಲಿಕ್ಕೆ ಕನ್ನಡವೇ ಬೇಕು,
ಅಂತೆಯೆ, ಕನ್ನಡವ ಮರೆಯದಿರು ಎಂಬ ಧ್ವನಿಯೂ ಮತ್ತೆ ಮತ್ತೆ ಮೊಳಗುತ್ತಲೇ ಇರುತ್ತದೆ.


ನಮ್ಮಲ್ಲಿ ಕನ್ನಡ ಕಲಿತರೆ ಹೊಟ್ಟೆ ತುಂಬುತ್ತದೆಯೇ? ಎಂಬ ಪ್ರಶ್ನೆಯೆ ಕೆಲವರಿಗೆ.
ಅಯ್ಯೋ! ಎನಿಸುತ್ತದೆ ಅವರ ಅರ್ಥಹೀನ ಪ್ರಶ್ನೆಗೆ. ನಮ್ಮ ಪುಟ್ಟ ಮಕ್ಕಳು ಬೆಳೆಯುವುದು ಸುತ್ತ ಮುತ್ತ ಕನ್ನಡ ನುಡಿ ಆಡುವರೊಂದಿಗೇ, ಅದೇ ಉಸಿರಾಗಿ ಬೆಳೆದ ಅವು ನೋಡುವುದು ಆಲೋಚಿಸುವುದು ಎಲ್ಲವೂ ಸ್ವಭಾವಿಕವಾಗಿ ಕನ್ನಡದಿಂದಲೇ.... ಅವರನ್ನು ಇಂಗ್ಲೀಷ್ ನಲ್ಲಿ ಪಳಗಿಸಬೇಕು ಮುಂದೆ ಇಂಗ್ಲೀಷ್ ನಲ್ಲೇ ಪಂಡಿತರನ್ನಾಗಿಸಬೇಕೆಂಬ ಹುನ್ನಾರವುಳ್ಳ ತಂದೆ ತಾಯಿಯರೆಷ್ಟೇ ತಿಪ್ಪರಲಾಗ ಹಾಕಿದರೂ ಅವರು ಮುಂದೆ ಇತ್ತ ಇಂಗ್ಲೀಷ್ ಇಲ್ಲ ಅತ್ತ ಕನ್ನಡವೂ ಬರೋದೆ ಇಲ್ಲದ ಎಡಬಿಡಂಗಿಗಳಾಗಿಬಿಡುವ ಅಪಾಯವೇ ಹೆಚ್ಚು....
ಇದನ್ನೇಕೆ ಆ ಹಿರಿಯರು ಯೋಚಿಸಲಾರರು..?

ನಾನು ಎಷ್ಟೋ ಸಂದರ್ಭಗಳಲ್ಲಿ ಕೆಲ ವಯಸ್ಸಿಗೆ ಬಂದ ಮಕ್ಕಳನ್ನು ಕನ್ನಡ ಪತ್ರಿಕೆಗಳನ್ನು ಓದಲು ಬರುತ್ತದೆಯೇ ? ಎಂದು ಕೇಳಿದ್ದೇನೆ.
"ಇಲ್ಲ, ಅಂಕಲ್ ಕನ್ನಡ ನನಗೆ ಬರೋದೆ ಇಲ್ಲ, ನಾನು ಓದಿದ್ದೆಲ್ಲ ಕಾನ್ವೆಂಟ್.."
"ಮತ್ತೆ, ನಿಮ್ಮ ಮನೆಯಲ್ಲಿ ಮಾತನಾಡೋದು ಕನ್ನಡ ತಾನೇ..."
"ಹೌದು."
"ನಿಮ್ಮ ತಂದೆ ತಾಯಿಗಳಿಗೆ ಕನ್ನಡ ಓದಲು ಬರೆಯಲು ಬರುತ್ತದೆ ತಾನೇ.."
"ಓಹ್! ಅವರಿಗೆ ಚೆನ್ನಾಗಿ ಬರುತ್ತದೆ. ನಮ್ಮ ಅಮ್ಮಂತೂ ಕನ್ನಡದ ಕಥೆ ಕಾದಂಬರಿಗಳನ್ನೆಲ್ಲ ಓದ್ತಾರೆ!"
"ಛೇ, ಎಂಥ ಕೆಲಸ ಮಾಡಿದ್ದಾರೆ, ನಿಮಗೆ ಕನ್ನಡ ಕಲಿಸದೇನೇ...."
"ಎಲ್ಲಿ ಅಂಕಲ್ ಅವರಿಗೆ ಟೈಮ್ ಎಲ್ಲಿತ್ತು ..."
ನಾನು ಮುಂದೆ ಮಾತು ಬೆಳಸಲಿಲ್ಲ. ಮಾತಾಡಿ ಪ್ರಯೋಜನವೇನಿಲ್ಲ, ಆ ಯುವ ಮನಸ್ಸನ್ನು ಘಾಸಿಗೊಳಿಸಬೇಕಲ್ಲ...! ಅಲ್ಲ, ಎಂಥ  ಮೌಢ್ಯ!    ತಮ್ಮ ಮಕ್ಕಳಿಗೆ ತಮ್ಮ ಮಾತೃಭಾಷೆಯಿಂದಲೇ ದೂರವಿಟ್ಟು ಅದನ್ನು ಕಲಿಸದೇ ಎಂಥ ವಂಚನೆ ಮಾಡುತ್ತಿದ್ದಾರಲ್ಲ ಇವರೆಂಥ ತಂದೆ ತಾಯಿಗಳು! ಮುಂದೊಂದು ದಿನ ಅವರೂ ಪಶ್ಚಾತ್ತಾಪಡ ಪಡದಿರಲಾರರಲ್ಲ...

ಇನ್ನೊಂದು ದಿನ ರಾಜಾಜಿನಗರದ ನಮ್ಮ ಸ್ನೇಹಿತರ ಪುಸ್ತಕದ ಅಂಗಡಿಯಲ್ಲಿ ಕುಳಿತಾಗ ಇದೇ ಕನ್ನಡ ಕಣ್ಮರೆಯಾಗುತ್ತಿರುವ ವಿಷಯ ಪ್ರಸ್ತಾಪವಾಯಿತು.
ಅದೂ ಮುಖ್ಯವಾಗಿ ಐಟಬಿಟಿ ಹುಡುಗ ಹುಡುಗಿಯರು ಕನ್ನಡ ಓದೋದೇ ಇಲ್ಲ ಅಭಿಪ್ರಾಯವೂ ನುಸುಳಿತು. ಆಗ ನಮ್ಮ ಸ್ನೇಹಿತರು ತಮ್ಮ ಕೆಲವು ವರ್ಷಗಳ ಪುಸ್ತಕ ಮಾರಾಟದ ಅನುಭವನ್ನೇ ತೆರೆದಿಟ್ಟು ಹೇಳಿದರು-
"ಸರ‍್, ನೀವು ನಮ್ಮ ಅಂಗಡಿಗೆ ತಪ್ಪದೇ ದಿನವೂ ಬನ್ನಿ ಒಂದು ಹದಿನೈದು ದಿವಸ. ಆಗ ನಿಮಗೇ ಗೊತ್ತಾಗುತ್ತದೆ; ಸಾಫ್ಟ್ ವೇರಿಗಳಲ್ಲೂ ಬಹು ಮಂದಿ ಕನ್ನಡ ಕಥೆ ಕಾದಂಬರಿ ಓದ್ತಾರೆ ಅಂತ...."
ನಾನು ನಂಬುವಸ್ಥಿತಿಯಲ್ಲಿರಲಿಲ್ಲ. ಆದರೆ, ಆಗಾಗ್ಗೆ ಮನೆ ಹತ್ತಿರವೇ ಇರುವ ಅವರ ಅಂಗಡಿ ಹೋಗುವುದನ್ನೂ ಬಿಡಲಿಲ್ಲ. ಕ್ರಮೇಣ ನನಗೇ ಗೊತ್ತಾಯಿತು. ಅವರ ಮಾತು ನಿಜಾಂತ. ಯಾಕೆಂದರೆ, ಅಂಗಡಿ ಬರುತ್ತಿದ್ದವರಲ್ಲಿ ಅಂಥ ಸಾಫ್ಟ್ ವೇರಿಗಳಿದ್ದರೆ ಆತ ಕಣ್ಣು ಮಿಟುಕಿಸಿ ನನ್ನತ್ತ ನೋಡಿ ಖಷಿಯಿಂದ ಬೀಗುತ್ತಿದ್ದರು. ನಾನೂ ಕೂಡ ಆ ಹುಡುಗ/ ಹುಡುಗಿಯರನ್ನು ಮಾತನಾಡಿಸಿ ಅದನ್ನು ಖಚಿತವೆಂದು ಮನಗಾಣುತ್ತಿದ್ದೆ.
ಒಂದ್ಸಲವಂತೂ ಹೀಗಾಯ್ತು....!!
ಸಂಜೆ ಸುಮಾರು ೮ ಗಂ. ಹೊತ್ತಿಗೆ ಒಬ್ಬ ೨೫-೩೦ ರ ಆಸುಪಾಸಿನ ಹುಡುಗ ಬೆನ್ನಮೇಲೆ ಲ್ಯಾಪ್ ಟಾಪ್ ಬ್ಯಾಗ್ ಹೊತ್ತು ಅಂಗಡಿ ಪ್ರವೇಶಿಸಿದ. ಆತ ಭೈರಪ್ಪನವರ ಇತ್ತೀಚಿನ "ಕವಲು'' ಕೈಗೆ ತೆಗೆದುಕೊಂಡ. ಅದು ಬಹಳ ಕುತೂಹಲ ಕೆರಳಿಸಿದ ಸಮಕಾಲೀನ ಸಮಸ್ಯೆಯುಳ್ಳ ಕಾದಂಬರಿ ಅಲ್ವೇ ಅಂದುಕೊಂಡೆ. ಆದರೇನು! ಆತ ಮುಂದುವರೆದು, ಒಂದಾದ ಮೇಲೊಂದರಂತೆ ಭೈರಪ್ಪನವರ ಇನ್ನೂ ಕೆಲ ಕೃತಿಗಳನ್ನು ಇತರೆ ಕೆಲ ಲೇಖಕರ ಒಂದೆರಡು ಕೃತಿಗಳನ್ನೂ ಆಯ್ದುಕೊಂಡ, ಒಟ್ಟು ಬಿಲ್ಲು ೨೦೦೦ ಹತ್ತಿರವಾಯಿತು. ಆತನಿಗೆ ಅದೇನೂ ದೊಡ್ಡದಾಗಿರಲಿಲ್ಲವೆನಿಸಿತು.
ನಾನು ಅದುವರೆಗೂ ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದವನು ಸುಮ್ಮನಿರಲಾರದೇನೆ ಕೇಳಿಯೇ ಬಿಟ್ಟೆ-
"ನೀವೇನು ಕೆಲಸ ಮಾಡ್ತಾ ಇದೀರಿ..?" ಎಂದೆ.
"ಸಾಫ್ಟ್ ವೇರ‍್...."
"ಯಾವ ಕಂಪೆನಿ?"
"ಮೈಂಡ್ ಟ್ರೀ...."
"ಇಂಗ್ಲೀಷೂ ಓದುತ್ತೀರಾ..."
"ಅವ್ವನೌವನಾ...ಅದನ್ನೇನು ಓದೂದು ಸರ‍್ ಒಂದೊಂದು ಪುಟಕ್ಕೂ ಪದಗಳಿಗೆ ಅರ್ಥಹುಡುಕ್ಕೋತ ಕೂರಬೇಕ್ ಸರ‍್... ಕನ್ನಡ ಸರ‍್ ನಮ್ಮ ಮಾತೃಭಾಷೆ ಕನ್ನಡ, ಅದರ ಕಿಮ್ಮತ್ತು ಅದಕ್ಕ ಬರಾಂಗಿಲ್ಲ....ಬಿಡ್ರಿ...."ಅಂದ!
ನನಗೆ ನಗು ಬಂತಾದರೂ ನಾನು ಬೆಪ್ಪಾದೆ! ಆತನಿಂದ ಇಂಥಾ ಉತ್ತರ ನಿರೀಕ್ಷೆ ಮಾಡಿರಲಿಲ್ಲವಲ್ಲ...!
"ನಿಮ್ಮದು ಯಾವ ಊರು ?" ಎಂದೆ.
ಈ ಸಲ ನನ್ನ  ನಿರೀಕ್ಷೆ ಅಷ್ಟು ಹುಸಿಯಾಗಲಿಲ್ಲ.
"ಬೆಳಗಾಂ" ಎಂದ.
ಮುಂದುವರೆದು ಹೇಳಿದ,
"ನಮ್ಮ ಕಂಪೆನಿಯಲ್ಲಿ ಇರೋದು ನಾಲ್ಕೇ ಜನ ಕನ್ನಡಿಗರು ಸರ‍್... ನಾವು ಕೆಲಸದಲ್ಲಿರೋವಾಗ ಇಂಗ್ಲೀಷಲ್ಲೇ ಮಾತಾಡ್ತೀವಿ. ನಾನು ಮೊದಲು ಕನ್ನಡ ಶಾಲೆಯಲ್ಲೇ ಓದಿ ಮುಂದೆ ಬಂದವನು. ಅಷ್ಟು ಮಾತಾಡ್ತೀನಲ್ಲ ಉದ್ಯೋಗಕ್ಕೆ ಸಾಕು. ಸ್ಟೇಟ್ಸ್ ಗೂ ಹೋಗಿ ಬಂದಿದೀನಿ... ಇನ್ನೇನು? ಬಿಡಿ. ಆದರೆ, ನಾವು ಒಟ್ಟಿಗೆ ಕಾಫಿಗೆ, ಲಂಚ್ ಗೆ ಹೊರಗೆ ಬಂದರೆ ನಮ್ಮ ಜೊತೆಗಿರೋ ಆ ಮೂವರೂ ಲೋಕಲೈಟ್ಸ್ ಬೆಂಗಳೂರಿನವರು. ಆದ್ರೂ ಅವರು ನಮ್ಮ ಜೊತೆ ಕನ್ನಡ ಮಾತಾಡಲ್ಲ ಹೊರಗೂ ಕೂಡ,. ಜೊತೆಗೆ ಇರೋ ಬಿಹಾರಿಗಳ ಜೊತೆ ಅವರಿಗೆಂದೇ ಹಿಂದಿಯಲ್ಲಿ ಮಾತಾಡ್ತಾರೆ. ನಮ್ಮ ಹತ್ತಿರ ಮಾತ್ರ ನಮ್ಮದೇ ಕನ್ನಡಕ್ಕೆ ಕನ್ನಡದಲ್ಲಿ ತುಟಿ ಬಿಚ್ಚಲ್ಲ..!!.  ಇದಕ್ಕೆ ಏನನ್ನಬೇಕು ಹೇಳಿ.... ಏನೂ ಮಾಡೊಕಾಗೊಲ್ಲ ಅವರು ಹಂಗೇ ನಾವೂ ಹಿಂಗೇನೇ ನಾವಿರೋದೇ ಹೀಗೇ ಸ್ವಾಮೀ... ಅಂತ ಅಂದುಕೋಬೇಕಷ್ಟೇ..." ಎಂದ.
ನಾನು ಸುಮ್ಮನೆ ಮತ್ತೆ ನಸು ನಕ್ಕೆನಷ್ಟೇ; ಮತ್ತೆ ಮಾತನಾಡಲಿಲ್ಲ.