Wednesday, June 10, 2015

ಫ್ರೊ. ಜಾನ್ ಫೋಬೆಸ್ ನ್ಯಾಶ್ ಗೇಮ್ ಥಿಯರಿ-

ನ್ಯಾಶ್ ದಾಂಪತ್ಯ ಮತ್ತು ಪ್ಯಾರಿಟೋ ಕುಟುಂಬ

ಇತ್ತೀಚೆಗೆ (ಮೇ ೨೩,೨೦೧೫ ರಂದು) ಅಮೆರಿಕದ ನ್ಯೂಜರ್ಸಿಯಲ್ಲಿ ಟ್ಯಾಕ್ಸಿ ಅಪಘಾತದಲ್ಲಿ (೮೭ನೇ ವಯಸ್ಸಿನಲ್ಲಿ )ನಿಧನರಾದ ಪ್ರೊಫೆಸರ್ ಜಾನ್ ಫೋಬೆಸ್ ನ್ಯಾಶ್  ಕಳೆದ ಶತಮಾನ ಕಂಡ ಅತ್ಯಂತ ಶ್ರೇಷ್ಠ ಗಣಿತಜ್ಞರ  ಸಾಲಿಗೆ ಸೇರಿದ್ದಾರೆ. ಪತ್ರಿಕಾ ಲೇಖನ (ಪ್ರ.ವಾ ೭,ಜೂನ್,೨೧೫) ಹೀಗೆ ಆರಂಭವಾಗುತ್ತದೆ: 
ನಮ್ಮ ಜೀವನ, ವೈಜ್ಞಾನಿಕ ಸಂಶೋಧನೆ, ಕೈಗಾರಿಕೆ, ವಾಣಿಜ್ಯ, ವ್ಯವಹಾರ ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಗಣಿತ ಹಾಸುಹೊಕ್ಕಾಗಿದೆ ಎಂಬುದು ಅತಿಶಯವಲ್ಲ ಎನ್ನುತ್ತದೆ ಅವರ ಸಂಶೋಧನೆ.

ಯಾವುದೇ ಉದ್ದಿಮೆ ಲಾಭದಾಯಕವಾಗಿ ಮುಂದುವರೆಯಬೇಕಾದರೆ ಕಾರ್ಮಿಕರು ಪರಸ್ಪರ ಸಹಕರಿಸಿ ದುಡಿಯಬೇಕೇ ಅಥವಾ ಪೈಪೋಟಿಯಲ್ಲಿ ದುಡಿಯಬೇಕೇಸಹಕರಿಸಿದರೆ ಉತ್ತಮ ಎನಿಸಬಹುದು. ಆದರೆ, ಕಾರ್ಮಿಕರು ಪರಸ್ಪರ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರಗತಿಗಾಗಿ ದುಡಿದಾಗಲೂ ಉದ್ದಿಮೆ ಲಾಭಗಳಿಸುವುದರಲ್ಲಿ ಸಂದೇಹವಿಲ್ಲ. ಅಂದರೆ, ಅದರಿಂದ ಕಾರ್ಮಿಕರಿಗೂ ಹೆಸರು ಬರುತ್ತದೆ ಕಂಪೆನಿಗೂ ಲಾಭವಿದೆ. ಇದನ್ನು ಮೊಟ್ಟಮೊದಲಿಗೆ ಸಂಶೋಧನೆ ಮಾಡಿ ತೋರಿಸಿಕೊಟ್ಟವರು ಅರ್ಥಶಾಸ್ತ್ರದ ನೋಬ್ ಪ್ರಶಸ್ತಿ ವಿಜೀತರಾದ ಪ್ರೋಫೆಸರ್ ಜಾನ್ ನ್ಯಾಶ್.
ಮೇಲೆ ಹೇಳಿದಂತೆ, ಅವರ ಗೇಮ್ ಥೀಯರಿಯಲ್ಲಿ,
ಇದನ್ನು ನಮ್ಮ ಜೀವನಕ್ಕೆ ಅನ್ವಯಿಸಿ ಹೇಳುವುದಾದರೆ, ಗಂಡ ಹೆಂಡತಿ ಒಬ್ಬರಿಗೊಬ್ಬರು ಸ್ಪರ್ಧಾತ್ಮಕವಾಗಿ ಪ್ರೀತಿಸಿದರೆ ಅದು "ನ್ಯಾಶ ದಾಂಪತ್ಯ". 
ಅವಿಭಕ್ತ ಕುಟುಂಬದಲ್ಲಿ ಪರಸ್ಪರ ಸಹಕರಿಸಿದರೆ ಅದು "ಪ್ಯಾರಿಟೋ ಕುಟುಂಬ". 
( ನ್ಯಾಶ್ ಗೇಮ್ ಧಿಯರಿ ಚಿತ್ರ ನೋಡಿ. ಪತ್ರಿಕಾ ಲೇಖನದಲ್ಲಿದ್ದ ಬಾಕ್ಸ್ ಬರಹ ನೋಡಿ).

ಜಾನ್ ನ್ಯಾಶ್ ಅವರ ವೈಯಕ್ತಿ ಜೀವನದಲ್ಲಿ ಬಹಳಷ್ಟು ಕಾಲ ರೋಗಿಯಾಗಿಯೇ ಬಳಲಿ ನೊಂದವರು. ಅವರ ಬಗ್ಗೆ ಬ್ಯೂಟಿಫುಲ್ ಮೈಂಡ್ಎಂಬ ಚಲನ ಚಿತ್ರ (೨೦೦೧ರಲ್ಲಿ ಬಂದಿದೆ; ಆಸ್ಕರ್ ಪ್ರಶಸ್ತಿ ಪಡೆದಿದೆ) ನಿರ್ಮಿಸಲೂ ಅದೇ ಕಾರಣ.  ಮಾನಸಿಕ ಖಿನ್ನತೆ (ಡಿಪ್ರೆಶನ್) ಎಂಬುದನ್ನು "ಮನೋ ರೋಗ "(ಸ್ಕೀಜಿಫ್ರೀನಿಯಾ") ಎಂದೇ ವೈದ್ಯಕೀಯ ವಿಜ್ಞಾನ ಪರಿಗಣಿಸುವುದಿದೆ. ರೋಗಿ ಎಂದು ಷಾಕ್ ಟ್ರೀಟ್ ಮೆಂಟ್ ಕೊಡುವುದು, ವರ್ಷಗಟ್ಟಲೆ ಮಾತ್ರೆಗಳನ್ನು ಸೇವಿಸುವುದು ಇತ್ಯಾದಿಯಾಗಿ ಚಿಕಿತ್ಸೆ. ಆದರೆ, ಚಿಕಿತ್ಸೆ ಎಲ್ಲಿಯವರೆಗೆ ಯಾವಾಗ ನಿಲ್ಲಿಸಬೇಕು ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ.  ಹಾಗೆನೋಡಿದರೆ, ಅದನ್ನು ಚಿಕಿತ್ಸೆಗೊಳಪಟ್ಟಾತನೇ/ಆಕೆಯೆ “ಈಗ ತಾನು ನಾರ್ಮಲ್ ಆಗಿದ್ದೇನೆ” ಎಂದು ನೀರ್ಧರಿಸಬೇಕಾಗುತ್ತದೆಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಹೇಳಬೇಕೆಂದರೆ, ನಿಜಕ್ಕೂ ಮನಸ್ಸು ಮನೋಹರ- ಅತಿಸುಂದರಅದನ್ನು ಕೆಡಿಸಿಕೊಳ್ಳಬಾರದು.  ಮಾನಸಿಕ ಖಿನ್ನತೆ ಎಂಬುದು ರೋಗವೇ ಅಲ್ಲ. (Depression is not a desease, it is nothing but Delusion). ಕನಸು ಕಾಣಬೇಕು; ಭ್ರಮಾಧೀನರಾಗಿ ಬದುಕಬಾರದು. “ಮನೋರೊಗಕ್ಕೆ ಮದ್ದಿಲ್ಲಎನ್ನುವುದೂ ಆದೇ ಕಾರಣಕ್ಕಾಗಿ. ದಶಕಗಳೇ ನರಳಿದ ನ್ಯಾಶ್ ಹಲವು ಬಾರಿ ಆಸ್ಪತ್ರೆಗೆ ಸೇರಿದರೂ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಕಡೆಗೂ ವಿಚ್ಛೇದನ ಬಯಸಿ ದೂರ ಹೋಗಿದ್ದ ಅವರ ಹೆಂಡತಿ ಅಲಿಯಾ ಮರಳಿ ಅವರನ್ನು ಸೇರಿಕೊಂಡದ್ದು ನ್ಯಾಶ್ ಅವರ ೫೦ ನೇ ವಯಸ್ಸಿನಲ್ಲಿ. ಆನಂತರ, ಆಕೆಯ ಪ್ರೀತಿ ವಿಶ್ವಾಸ, ಆರೈಕೆಯಿಂದ ನ್ಯಾಶ ಪೂರ್ಣ ಗುಣಮುಖರಾಗುತ್ತರೆ; ಯಾವುದೇ ಔಷಧಿ ಚಿಕಿತ್ಸೆಗಳಿಲ್ಲದೇ ಎಂಬುದು ಅತ್ಯಂತ ಗಮನಾರ್ಹವಾದದ್ದು.  

Thursday, December 04, 2014

ಕನ್ನಡ ಕಡ್ಡಾಯವಾಗಲೆಂದು, ನೆನೆಗುದಿಗೆ ಬಿದ್ದಿರುವ
೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನ


Devnur Mahadeva
[My pencil Sketch]
ಕಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ, ಕುಡಿಯುವ ನೀರು, ಗಡಿವಿವಾದ, ಕಸವಿಲೇವಾರಿ ಮತ್ತು ಕನ್ನಡಿಗರಿಗೆ ಕನ್ನಡ ನೆಲದಲ್ಲಿ ಉದ್ಯೋಗಕ್ಕೆ ಆದ್ಯತೆ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗೊಂಡ ನಿರ್ಣಯಗಳು ಕೇವಲ ವೇದಿಕೆಯ ಮೇಲೆ ಮೊಳಗುವ ಕೊಂಬು ಕಹಳೆಗಳಾಗಿದ್ದು, ಅವ್ಯಾವುವೂ ಸರ್ಕಾರದ ಮಟ್ಟದಲ್ಲಿ ಜಾರಿಯಾಗದೇನೇ ಎಂದಿಗೂ ಬಗೆಹರಿಯದ ಜ್ವಲಂತ ಸಮಸ್ಯೆಗಳಾಗಿಯೇ ಉಳಿದಿವೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳೆಂದರೇನೆ ಅವು ಗಾಳಿಗೋಪುರಗಳಾಗಿ ಸಮ್ಮೇಳನಗಳು ಜಾತ್ರೆಗಳಾಗಿಬಿಡುವುದರಿಂದ, ಸಮ್ಮೇಳ ನಡೆಸುವುದೇ ನಿಷ್ಪ್ರಯೋಜಕವೆನಿಸಿದೆ.
ಇದೀಗ ವರ್ಷಂಪ್ರತಿಯಂತೆ ನಡೆಯಲಿರುವ ೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆನೆಗುದಿಗೆ ಬಿದ್ದಿದೆ. ಈ ಸಮ್ಮೇಳನಕ್ಕೆ ದಲಿತ ಸಾಹಿತಿಯೊಬ್ಬರು ಅಧ್ಯಕ್ಷರಾಗಬೇಕೆಂದು ಸಾಹಿತಿ ದೇವನೂರು ಮಹಾದೇವ ಅವರನ್ನು ಆಹ್ವಾನಿಸಿದ್ದಾರೆ. ದೇವನೂರರು ತಾವೊಬ್ಬ ದಲಿತ ಸಾಹಿತಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ಮೊದಲು ಒಬ್ಬ ಸಾಮಾನ್ಯ ದಲಿತ ವ್ಯಕ್ತಿಯಾಗಿ ಪ್ರತಿಕ್ರಿಯಿಸಿದ್ದಾರೆ. ದಲಿತರ ಮುಗ್ಧತೆ, ಅನಕ್ಷರತೆಯನ್ನು ಹತ್ತಿರದಿಂದ ಕಂಡವರಾಗಿದ್ದು,  ಅವರ ಮುಖ್ಯ ಬೇಡಿಕೆಯೇ ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಬೇಕೆಂಬುದು. ಅವರ ಈ ಹೇಳಿಕೆ ನಿಜಕ್ಕೂ ಕನ್ನಡಿಗರನ್ನು ಜಾಗೃತಗೊಳಿಸುವಂತಿದೆ.

ದಲಿತರಿಗೆ ಮಾತ್ರವಲ್ಲ ಕರ್ನಾಟಕದ ೬ ಕೋಟಿ ಕನ್ನಡಿಗರೂ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕನ್ನಡವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಲೇ ಬೆಕೆಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈಗಾಗಲೇ, ನರ್ಸರಿಯಿಂದ ಇಂಗ್ಲೀಷ್ ಕಲಿತರೇನೆ ಮಕ್ಕಳು ಬುದ್ಧಿವಂತರಾಗಿ ಉತ್ತಮ ಸಂಬಳದ ಉದ್ಯೋಗ ಪಡೆಯುತ್ತಾರೆಂಬ ತಪ್ಪು ಕಲ್ಪನೆಯೇ ನಿಜಕ್ಕೂ ಹೆತ್ತವರಿಗೆ ಅವರ ಮುಪ್ಪಿನ ಕಾಲದಲ್ಲಿ  ತಲೆನೋವಾಗಿ ಪರಿಣಮಿಸಿತ್ತಿರುವುದನ್ನು ಕಾಣುತ್ತಿದ್ದೇವೆ. ಯಾಕೆಂದರೆ, ಕನ್ನಡದಲ್ಲಿ ಓದಲು ಬಾರದ ಸಾವಿರಗಳಿಂದ ಲಕ್ಷಗಟ್ಟಲೆ ಸಂಪಾದಿಸುವ ಸಾಫ್ಟ್ ವೇರ್ ಮತ್ತು ಇತರೆ ಉನ್ನತ ಉದ್ಯೋಗಿಗಳ ಯುವಪೀಳಿಗೆ ಬಹಳಷ್ಟು ಬೆಳೆಯುತ್ತಿದೆ. ಅವರು ಮಾತೃಭಾಷೆ ಕನ್ನಡದಿಂದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯಿಂದ ದೂರವಾಗುದಲ್ಲದೇ ತಮ್ಮ ಹೆತ್ತವರ ಮನೆ ಮನಸ್ಸುಗಳಿಂದಲೇ ದೂರವಾಗುತ್ತಿದ್ದಾರೆ. ವಿದೇಶಕ್ಕೆ ಹೋಗಿ ನೆಲೆಸುತ್ತಿದ್ದಾರೆ. ಅಂತಹ ಹೆತ್ತವರು ತಮ್ಮ ಮಕ್ಕಳ ಚಿತ್ರ ವಿಚಿತ್ರ ಲೈಫ್ ಸ್ಟೈಲ್ ಗಳನ್ನು ಬದಲಿಸಲಾಗದೇನೆ ದೂರದಿಂದಲೇ ನೋಡುತ್ತ ನೋವೂ ನುಂಗಿಕೊಂಡು ಬದುಕಲಾರದೇನೆ ಬದುಕುತ್ತ ಒಂಟಿತನ ಅನುಭವಿಸುತ್ತಾರೆ. ತಾವು ಮಕ್ಕಳನ್ನು ಚಿಕ್ಕದಿಂನಿಂದ ನಮ್ಮ ಕಣ್ಣೆದುರಿನಲ್ಲೆ ಇಟ್ಟುಕೊಂಡು ಕನ್ನಡ ಕಲಿಸದೇನೆ ದೊಡ್ಡ ತಪ್ಪು ಮಾಡಿದೆವು ಎಂದೇ ಪರಿತಪಿಸುವವರನ್ನು ನೋಡಿದ್ದೇನೆ. ನೆಲೆಸುತ್ತಿದ್ದಾರೆ [ ಇದಕ್ಕೆ ಹೊರತಾಗಿ ಕೆಲ ಯುವ ಮಕ್ಕಳ ಉದಾಹರಣೆಗಳಿರಬಹುದು].

ಕರ್ನಾಟಕ ಸರ್ಕಾರ ನಮ್ಮ ನೆರೆಯ ರಾಜ್ಯಗಳಾದ ತಮಿಳು ನಾಡು ಮತ್ತು ಮಹಾರಾಷ್ಟ್ರ ಇವುಗಳನ್ನು ನೋಡಿಯೂ ಅವರ ಮಾತೃಭಾಷೆಯ ಅಭಿಮಾನ ಕಂಡೂ ನಮ್ಮ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಕನ್ನಡಿಗರು ಅಭಿಮಾನಶೂನ್ಯರಲ್ಲವೆಂಬುದನ್ನು ತೋರಿಸಬೇಕಾಗಿದೆ. ಅಂತಹ ಕನ್ನಡಪರ ಕಾಳಜಿ ನಮ್ಮ ಗಣ್ಯಸಾಹಿತಿಗಳಲ್ಲೂ ಇದ್ದಂತಿಲ್ಲ. ಕನ್ನಡಪರ ಸಂಘಟನೆಗಳಲ್ಲೂ ಬಲವಾದ ಹೋರಾಟವಿಲ್ಲ. ಸಾಹಿತಿಗಳಲ್ಲೇ ಗುಂಪುಗಾರಿಕೆ ತಮ್ಮ ಸ್ವಾರ್ಥಕ್ಕಾಗಿ ಲಾಬಿಗಳು, ಅದು ಸಾಹಿತ್ಯಸಮ್ಮೇಳನ ಗೋಷ್ಟಿಗಳಿಗೆ ಹಾಗೂ ಸನ್ಮಾನಗಳಿಗೆ ನಡೆಯುತ್ತವೆ. ಕನ್ನಡಪರ ನಿರ್ಣಯಗಳು ನಾಟಕೀಯವಾಗಿ ಕೊನೆಗೊಳ್ಳುತ್ತವೆಯಷ್ಟೇ. ಕೆಲ ಪ್ರಾಮಾಣಿಕ ಸಾಹಿತಿಗಳೂ ಈ ಸಮ್ಮೇಳನದ ಸಂತೆ -ಜಾತ್ರೆಯಿಂದ ದೂರವೇ ಉಳಿಯುತ್ತಾರೆ. ಇದೀಗ ಕನ್ನಡಿಗರೂ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ದೇವನೂರು ಮಹಾದೇವ ಅವರ ಮುಖ್ಯ ಬೇಡಿಕೆಯಾದ ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಬೇಕೆಂಬುದು ಸ್ವಾಗತಾರ್ಹವೇ. ತಮ್ಮ ಬೇಡಿಕೆ ಈಡೇರುವಂತಿದ್ದರೆ ತಾವು ಸಮ್ಮೇಳನಾಧ್ಯಕ್ಷ ಪೀಠ ಅಲಂಕರಿಸುವೆನೆಂಬ ಅವರ ಅಭಿಪ್ರಾಯ ನಿಜಕ್ಕೂ ಶ್ಲಾಘನೀಯವೇ ಆಗಿದೆ.
ದೇವನೂರು ಸಮ್ಮೇಳನಾಧ್ಯಕ್ಷರ ರಾಜಬೀದಿ ಮೆರವಣಿಗೆಯ ಉತ್ಸವ ಹಾಗೂ ಅವರಿಗೆ ದೊರಕುವ ರಾಜೋಪಚಾರದ ಆತಿಥ್ಯ ಜೊತೆಗೆ ಗೌರವ ಸಂಭಾವನೆಯಾಗಿ ಸಿಗುವ ೧೨ ಲಕ್ಷಕ್ಕೂ ಹೆಚ್ಚಿನ ಸಂಭಾವನೆಯನ್ನು ನಿರಾಕರಿಸುವಂತಹ ಹೇಳಿಕೆಯನ್ನು ನೀಡಿ ತಾವು ನಿಜಕ್ಕೂ ಮಹಾದೇವರೇ  ಆಗಿದ್ದಾರೆ. ಅವರು ತಮ್ಮ ಗೌರವಕ್ಕೆ ಚ್ಯುತಿ ಬರುವಂತೆ ತಮ್ಮ ನಿಲುವನ್ನು ಖಂಡಿತ ಬದಲಿಸಬಾರದು.
ಕೊನೆಯ ಮಾತು: ಹೀಗೆ ಹೇಳುವ ನಾನು ಇಳಿವಯಸ್ಸಿನಲ್ಲದ್ದೇನೆ. ನಮ್ಮ ಮಕ್ಕಳಿಗೆ ಕನ್ನಡ ಬರುವುದಿಲ್ಲವೆಂದು ಕೊರಗುವ ಸ್ನೇಹಿತರನ್ನೂ ನೋಡಿ ಮರುಗಿದ್ದೇನೆ 
ನನ್ನ ಗಂಡು ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡವನ್ನು ಸ್ವ ಇಚ್ಛೆಯಿಂದಲೆ ಕಡ್ಡಾಯವಾಗಿ ಕಲಿಸಿದ್ದೇನೆ. ಇದೀಗ ಸಾಫ್ಟ್ ವೇರಿಗಳೇ ಆಗಿದ್ದಾರೆ. ಪರದೇಶದ ಇಂಗ್ಲೀಷನ್ನು ಅಸ್ಖಲಿತವಾಗಿ ಮಾತನಾಡಲು ಬರೆಯಲು ಕಲಿತವಾರಾಗಿ ಅದನ್ನು ಅವರ ಕಂಪೆನಿ ಕಂಪೆನಿ ಉದ್ಯೋಗಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡ ವನ್ನು ಚೆನ್ನಾಗಿಯೇ ಓದಲು ಬರೆಯಲೂ ಬಲ್ಲವರಾಗಿದ್ದಾರೆ ]

Sunday, November 09, 2014

ವಿಶ್ವದ ಮೊಟ್ಟಮೊದಲ ಸೆಲ್ಫಿ..

ವಿಜಯಕರ್ನಾಟಕ: ೦೯, ನವೆಂಬರ‍್ ೨೦೧೪
ನನ್ನ ಫೋಟೋ ನಾನೇ ಕ್ಲಿಕ್ಕಿಸಿಕೊಳ್ಳುತ್ತಿದ್ದೆನಾದರೂ, ಅದನ್ನು ಆಂಗ್ಲಭಾಷೆಯಲ್ಲಿ "ಸೆಲ್ಫಿ" ಎನ್ನುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ.
ಸೆಲ್ಪ್ ಕ್ಲಿಕ್ಕಿಸಿಕೊಳ್ಳುವುದೆಂದು ತಿಳಿದುಕೊಂಡಿದ್ದೆ.

ಅಮೆರಿಕಾದ ಫಿಲಿಡೆಲ್ಫಿಯಾದಲ್ಲಿ ೧೮೩೯ ರಲ್ಲಿ ಕಾರ್ನೆಲಿಯಸ್ ಎಂಬ ೩೦ ರ ಹರೆಯದವ ಕ್ಲಿಕ್ಕಿಸಿಕೊಂಡ ಫೋಟೋ ವಿಶ್ವದ ಮೊಟ್ಟ ಮೊದಲ ಸೆಲ್ಫಿ ಎಂದು ದಾಖಲಾಗಿದೆ. ಈಗ ಬಿಡಿ ಡಿಜಿಟಲ್ ಕ್ಯಾಮೆರಾದಲ್ಲಿ ಎಡಗೈನಿಂದಲೇ ನಮ್ಮ ಫೋಟೋ ನಾವೇ ಕ್ಲಿಕ್ಕಿಸಿಕೊಳ್ಳುವುದರಲ್ಲಿ ಅಷ್ಟೇನೂ ಪ್ರಯಾಸ ಪಡಬೇಕಾಗಿಲ್ಲ. ಆದರೆ, ಟೆಕ್ನಾಲಜಿಯ ದೃಷ್ಟಿಯಲ್ಲಿ, ಅಂದಿನ ಕಾಲಕ್ಕೆ ಅದೊಂದು ಅದ್ಭುತ ಕೈಚಳಕವೇ ಸರಿ ಅಲ್ಲವೇ...?

ಪೊಲೀಸರಿಗೆ ದೂರುಕೊಟ್ಟರೆ ಪ್ರಯೋಜನವಿಲ್ಲ ಎನ್ನದಿರಿ...

ವಿಜಯಕರ್ನಾಟಕ: ೦೯, ನವೆಂಬರ‍್ ೨೦೧೪
ಸಾಮಾನ್ಯವಾಗಿ ನಾವೆಲ್ಲರೂ ಆಟೋ ಚಾಲಕರ ಕಿರಿಕಿರಿಯನ್ನ ಅನುಭವಿಸಿರುತ್ತೇವೆ. ಮೀಟರ‍್ ಹಾಕದೇನೆ ಚಾರ್ಜ್‌ ಜಾಸ್ತಿಕೇಳೊದು. ನಮಗೆ ರಸ್ತೆಗೊತ್ತಿಲ್ಲಾಂತನ್ನೊ ಸುಳಿವು ಸಿಕ್ಕರೆ ಸಾಕು, ಸುಮ್ಮನೆ ಗಲ್ಲಿಗಲ್ಲಿ ಸುತ್ತಿಸಿ ಮೀಟರ‍್ ಓಡೋಸಿ ಚಾರ್ಜ್ ಮಾಡೋ ಚಾಲಕರುಗಳನ್ನು ನಾವು ಕಂಡಿದ್ದೇವೆ. ನಾವು ಊರಿಗೆ ಅಪರಿಚಿತರೆಂದರೆ ಇವರ ಸುಲಿಗೆಗೆ ಮಿತಿ ಅನ್ನೋದಿಲ್ಲ....ನೋಡಿ ಇಲ್ಲೊಬ್ಬ ಮಹಿಳೆ ದಿಟ್ಟತನ ತೋರಿದ್ದಾಳೆ. ಪೊಲೀಸರೂ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರಿಗೆ ಹ್ಯಾಟ್ಸ್ ಆಫ್ ....

Friday, October 24, 2014

ಜ್ಯೋತಿಷ್ಯವೇ ಜೀವನವೇ...??

ಜ್ಯೋತಿಷ್ಯದಲ್ಲಿ ನಂಬಿಕೆ ಹಿಂದಿನ ಕಾಲದಿಂದಲೂ ಇದೆ. ಆದರೆ, ಜ್ಯೋತಿಷ್ಯವನ್ನೇ ನಂಬಿಕೊಂಡರೆ ಜೀವನ ಸಾಗುವುದೇ...? ಮುಗ್ಧ ಜನರಲ್ಲಿ ಜ್ಯೋತಿಷ್ಯವಿಲ್ಲದೇ ಜೀವನ ಚಕ್ರ ಮುಂದೆ ಚಲಿಸಲಾರದಲ್ಲ.. ಎಷ್ಟೋ ಸಂದರ್ಭಗಳಲ್ಲಿ ಅವರನ್ನು ಜ್ಯೋತಿಷ್ಯವೇ ಮಂಕುಕವಿಸುವುದೋ ಅಥವಾ ಜ್ಯೋತಿಷಿಗಳೇ ಅವರಿಗೆ ಮಂಕು ಕವಿಸುತ್ತಾರೋ ಹೇಳುವುದು ಕಷ್ಟಸಾಧ್ಯವೇ. 

ಕೆಲವರಂತೂ ದುಡ್ಡುಕೊಟ್ಟು ಜ್ಯೋತಿಷ್ಯ ಕೇಳಿ ತಲೆಕೆಡಿಸಿಕೊಳ್ಳುವುದಕ್ಕಿಂತ ದೇವರಿಗೆ ಮೊರೆ ಹೋಗುವುದೇ ಲೇಸೆಂದು, ಗುಡಿಗಳಲ್ಲಿ ಕಲ್ಲುದೇವರ ಎದುರಿಗೇ ಕುಳಿತು ತಮ್ಮ ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಆ ನಂಬಿಕೆ ಪ್ರಶ್ನಾತೀತವೇ ಆಗಿಬಿಡುತ್ತದೆ.  ಕೆಲ ಸಂದರ್ಭಗಳಲ್ಲಿ ದೇವರನ್ನೇ ಅವಲಂಬಿಸಿದ ಮೌಢ್ಯವೇ ಆಗಿರುತ್ತದೆ.

ಇದು ವ್ಯವಹಾರೀಕ ಪ್ರಪಂಚ. ಹಿಂದೆಂದಿಗಿಂತಲೂ ಈಗ ದುಡ್ಡಿನಲ್ಲೇ ಎಲ್ಲವನ್ನೂ ತೂಗುವ ಜನರೇ ಇದ್ದಾರೆ. ಬಹುತೇಕ ಜ್ಯೋತಿಷಿಗಳು ಜ್ಯೋತಿಷ್ಯವನ್ನು ದುಡ್ಡುಮಾಡುವ ದಂಧೆಯನ್ನಾಗಿಸಿಕೊಂಡಿದ್ದಾರೆ. ಅರ್ಧಗಂಟೆಗೆ ಸಾವಿರಗಟ್ಟಲೆ ಫೀಸು ಕೇಳಿ, ಕೇವಲ ಮೂರು ಪ್ರಶ್ನೆಗಳಿಗೆ ಮಾತ್ರ ಅವಕಾಶಕೊಡುವ ಖ್ಯಾತ ಜ್ಯೋಷ್ಯ ಶಾಸ್ತ್ರಯ್ಞರಿದ್ದಾರೆ!

ಇತ್ತೀಚಿನ ದಿನಗಳಲ್ಲಿ ನಿವೃತ್ತ ನೌಕರರೂ ನಾಲ್ಕು ಪುಸ್ತಕಗಳನ್ನು ಓದಿಕೊಂಡು,  ಲ್ಯಾಪ್ ಟಾಪಗ ಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಸ್ಟ್ರಾಲಜಿ ಸಾಫ್ಟ್ ವೇರ್‍ ಹಾಕಿಸಿಕೊಂಡು, ಹೊರಗೆ  ತೂಗು ಚೀಲ ಹಾಕಿಕೊಂಡು  ಓಡಾಡುತ್ತ ಜ್ಯೋತಿಷ್ಯ ಹೇಳುವ ಉದ್ಯೋಗ ಮಾಡುತ್ತಾರೆ. ಯಾಕೆಂದರೆ, ಇದಕ್ಕೆ ಯಾವ ಲೈಸೆನ್ಸ್ ಬೇಕಿಲ್ಲ. ಅವರು ನುಡಿದದ್ದೇ  ಹಾಗೂ ಹೀಗು ಸರಿಯಾಗಿಬಿಟ್ಟರೆ ಸಾಕು, ಮುಗ್ಧಜನರ ದಂಡೇ ಅವರ ಮನೆ ಬಾಗಿಲಿಗೆ ಬರುತ್ತದೆ.


ಜ್ಯೋತಿಷ್ಯ ಪೂರ್ಣ ಸುಳ್ಳಲ್ಲ; ಪೂರ್ಣ ನಿಜವೂ ಅಲ್ಲ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. ಯಾಕೆಂದರೆ, ಭಗವಂತನೇ ಬಂದು ಹೇಳಿದಂತೆ ನಿಜಕ್ಕೂ 100% ಜ್ಯೋತಿಷ್ಯ ಹೇಳುವ  ಜ್ಯೋತಿಷಿ ಇನ್ನೂ ಹುಟ್ಟಿರಲಿಕ್ಕಿಲ್ಲ. ಇಲ್ಲವಾದರೆ, ಜ್ಯೋತಿಷಿಗಳಿಗೆ ದೇವಸ್ಥಾನ ಕಟ್ಟಿಸಿಬಿಡುತ್ತಿದ್ದರು; ನಂಬಿಕೊಂಡ ನಮ್ಜ ಜನರು.
  • ಜ್ಯೋಷ್ಯ ಕೇಳಿದರೆ, ನಂಬಿಯೂ ನಂಬದಂತಿರಬೇಕು. ಯಾಕೆ ಗೊತ್ತೇ...? ಯಾವ ಒಬ್ಬ ಜ್ಯೋತಿಷಿಯೂ ಕೇಳಿದ ಪ್ರಶ್ನೆಗೆ ತನಗೆ ತೋಚಿದುದನ್ನೆಲ್ಲ ಹೇಳಿ, ಕಡೆಗೆ ದೇವರ ಮೊರೆ ಹೋಗಿ ಎಂದು ಹೇಳದೇ ಇರಲಾರನಲ್ಲ....
  1. ತಂದೆ ತಾಯಿಗಳು ಜಾತಕಗಳನ್ನು ಹೊಂದಾಣಿಕೆ ಮಾಡಿಕೊಂಡು ಗಂಡು/ಹೆಣ್ಣನ್ನು ನೋಡಲು ಹೋದರೆನ್ನಿ, ಆಗ ಅವರು ಪರಸ್ಪರ ಒಪ್ಪಿಕೊಳ್ಳದಿದ್ದರೇನು ಮಾಡುತ್ತಾರೆ ಹೇಳಿ..? ಜಾತಕಗಳು ಕೂಡಿ ಬಂದಿವೆಯೆಂದರೆ ನಾನು ಮದುವೆಗೆ ಒಪ್ಪಿಕೊಳ್ಳಬೇಕೇನೂ...? ಎಂದೇ ಅಪ್ಪ-ಅಮ್ಮಂಗೆ ಸವಾಲೆಸೆಯುತ್ತಾರೆ. ಅಲ್ಲದೇ, ನೋಡದೆಯೇ ಒಪ್ಪಿಕೊಂಡುಬಿಡುವ ಸಂದರ್ಭಗಳೆಷ್ಟೋ ಇವೆಯಲ್ಲ!
  2. ಜ್ಯೋತಿಷ್ಯ-ಜಾತಕಗಳನ್ನು ಪರಿಶೀಲಿಸದೇನೆ ಮದುವೆಯಾದ ದಂಪತಿಗಳು ೩೦-೪೦ ವರ್ಷಗಳೇ ದಾಂಪತ್ಯ ಜೀವನ ನಡೆಸಿದವರಿದ್ದಾರೆ.
  3. ಜ್ಯೋತಿಷ್ಯ ಕೇಳಿಯೂ ವಿಫಲವಾದ ಮದುವೆಗಳೂ ಎಷ್ಟೋ ಇವೆಯಲ್ಲವೇ..?
  4. ಇಂದಿನ ದಿನಗಳಲ್ಲಿ ಲೌವ್ ಮ್ಯಾರೇಜ್ ಆಗುವ ಜೋಡಿಗಳು ಜ್ಯೋತಿಷ್ಯ ನಂಬುವುದೇ ಇಲ್ಲವಲ್ಲ. ಅವರೂ ಯಶಸ್ವಿಯಾಗಿ ಸಂಸಾರ ಸಾಗಿಸಿ ಸುಖ ಕಂಡವರಿದ್ದಾರೆ. 
  5. ಜ್ಯೋತಿಷ್ಯದ ಮಾತಂತಿರಲಿ,ತಮ್ಮ ವಯಸ್ಸಿಗೆ ಬಂದ ಮಕ್ಕಳಲ್ಲಿ ಮಗನೋ ಮಗಳೋ,  ಸಧ್ಯ ಮದುವೆಯಾದರೆ ಸಾಕೆಂಬ ಕಾಲವಿದಾಗಿದೆಯಲ್ಲವೇ...?
  • ನೋಡಿ, ವೈದ್ಯರೂ ಕೂಡ ಆಪರೇಷನ್ ಸಕ್ಸಸ್ ಆಗಿದ್ದರೂ, ಪೇಷಂಟ್ ಗೆ ಪ್ರಜ್ಞೆ ಮರಳಿ ಬರುವತನಕ..
  • ಅವರ ಕೈಯಲ್ಲಿಲ್ಲವಲ್ಲ! ಆದ್ದರಿಂದ ಅವರೂ ದೇವರ ಕಡೆಗೇ ಬೆರಳು ತೋರಿಸುತ್ತಾರೆ.
  • ಕ.ಪ್ರ. ಪತ್ರಿಕೆಯ ಆಣಿ ಮುತ್ತು ಓದಿ ನೋಡಿ.  ವಿಶ್ವದ ಮೊದಲ ಹದಯ ಕಸಿ ಮಾಡಿ ಖ್ಯಾತ ವೈದ್ಯರಾದ ಡಾ|| ಕ್ರಿಚ್ಚಿಯನ್ ಬರ್ನಾಡ್  ಏನು ಹಳುತ್ತಾರೆ ಎಂಬುದರಿಂದಲೇ ಸ್ಪಷ್ಟವಾಗುತ್ತದೆ.
ನಮ್ಮ ಹಿರಿಯರು ಹೇಳಿದರು:-
"ತೇನವಿನಾ ತೃಣಮಪಿ ನ ಚಲತಿ ತೇನವಿನಾ
ಮಮತೆಯ ಬಿಡು ಹೇ ಮೂಢ ಮನಾ"

Friday, August 22, 2014

ಬೇಡ ಕೃಷ್ಣ ಬೇಡ ಕೃಷ್ಣ....ಬೇಬಿ ಸಿಟ್ಟಿಂಗ್ ಕಷ್ಟ ಕಷ್ಟ ...

ಬೇಡ ಕೃಷ್ಣ ಬೇಡ ಕೃಷ್ಣ
ಬೇಬಿ ಸಿಟ್ಟಿಂಗ್ ಕಷ್ಟ ಕಷ್ಟ
ಕಣ್ಣು ನೆನೆವುದು;
ದಿನವು ಬೆಳಗಿನಿಂದ ಸಂಜೆವರೆಗೆ
ಅಮ್ಮನಿಲ್ಲದೇ ದುಃಖ
ಉಮ್ಮಳಿಸಿ ಬರುವುದು.

ಸರಳುಗಳ ಹಿಂದೆ ಹುಟ್ಟಿ
ನೀ ಹೊರಗೆ ಬಂದೆ
ಅಮ್ಮನ ಸೆರಗಲೇ ಆಡಿ ನಲಿದೆ
ಬೆಣ್ಣೆ ಕಳ್ಳ ತುಂಟನೆನಿಸಿ
ಎಲ್ಲರ ತಣಿಸಿದೆ.

ಬೇಡ ಕೃಷ್ಣ ಬೇಡ ಕೃಷ್ಣ
ಅಮ್ಮ ಜೊತೆಗೆ ಇಲ್ಲದೀ ಆಟ ಪಾಠ
ಅಯ್ಯೋ ಅನುದಿನವೂ ಸೆರೆಯೇ ಕಷ್ಟ ಕಷ್ಟ
ಕಾದು ಕಾದು ಕಣ್ಣು ಒಣಗಿರೇ
ಅಮ್ಮ ಅಪ್ಪ ಎಂದು ಬರುವರೋ..

Tuesday, July 29, 2014

ಸಮಗ್ರ ಲೈಂಗಿಕ ಶಿಕ್ಷಣ ಅಥವಾ ಸಾರ್ವತ್ರಿಕ ಲೈಂಗಿಕ ಶಿಕ್ಷಣ ಮತ್ತು ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣ

ಲೈಂಗಿಕ ಶಿಕ್ಷಣದಲ್ಲಿ ಸಮಗ್ರ ಲೈಂಗಿಕ ಶಿಕ್ಷಣ ಅಥವಾ ಸಾರ್ವತ್ರಿಕ ಲೈಂಗಿಕ ಶಿಕ್ಷಣ ಮತ್ತು ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣವೆಂಬ ಎರಡು ಕ್ರಮಗಳಿವೆ.  ಮೊದಲನೆಯದರಲ್ಲಿ ಲೈಂಗಿಕ ಶಿಕ್ಷಣವೆಂದರೆ, ಲೈಂಗಿಕ ಕ್ರಿಯೆಯಲ್ಲಿ ತೊಡಗುವಂತೆ ಮಾಡುವುದಲ್ಲದೇ ಅದರಿಂದಾಗುವ ಅಪಾಯವನ್ನು ತಡೆಗಟ್ಟುವ ಉಪಾಯವನ್ನು ಹೇಳಿಕೊಡುವುದೆಷ್ಟು ಸರಿ...? ಎಂಬುದೇ  ಪಾಶ್ಚಾತ್ಯ ದೇಶಗಳೂ ಸೇರಿದಂತೆ ಬಹಳಷ್ಟು ಪೋಷಕರ ಪ್ರಶ್ನೆಯಾಗಿದೆ.


ಅಮೆರಿಕಾದಲ್ಲಿ ಇಂದ್ರಿಯ ನಿಗ್ರಹ ಲೈಂಗಿಕ ಶಿಕ್ಷಣವೇ ಉತ್ತಮ ಎನ್ನುವ ಪೋಷಕರ ಪರ ಇರುವ ರಾಜಕೀಯ ಪಕ್ಷಗಳೂ ಇವೆ. ಅಲ್ಲದೇ, ಅಮೆರಿಕಾದಲ್ಲಿ ಮೇಲಿನ ಎರಡೂ ಶಿಕ್ಷಣ ಕ್ರಮದ ಬಗ್ಗೆ ಪರ ಹಾಗೂ ವಿರೋಧ ಇರುವ ಕ್ರಿಶ್ಚಿಯನ್ ಸಂಪ್ರದಾಯವಾದಿಗಳೂ ಸಂಘ ಸಂಸ್ಥೆಗಳೂ ಇವೆ. ಪ್ರಸ್ತುತ ಒಂದು ಸಾವಿರದಲ್ಲಿ ಶೇ.೯೩ ಟೀನೇಜ್ ಪ್ರಗ್ನೆಸಿ ಇದೆಯಂಬುದು ಅಮೆರಿಕೆಯಲ್ಲಿ ಸಮಾಧಾರನಕರ ವಿಚಾರವಂತೆ! (ಇಂದಿನ ಕನ್ನಡ ಪ್ರಭದ ೨೯,ಜುಲೈ ೨೦೧೪- ಲೈಂಗಿಕ ಶಿಕ್ಷಣ ಚಿಂತನ ಮಂಥನ ನೋಡಿ). ಅಂದರೆ, ಅವರ ಜೀವನ ಶೈಲಿಯನ್ನು ನಮ್ಮ ದೇಶಕ್ಕೆ ಹೋಲಿಸಲಾದೀತೇ...? ಅದನ್ನೇ ಅನುಕರಿಸುವುದೆಂದರೆ ಅದೆಷ್ಟು ಸಮಂಜಸ...?
 ದೃಶ್ಯಮಾಧ್ಯಮ ಮೀಡಿಯಾಗಳಲ್ಲಿ ಹೆಣ್ಣನ್ನು ಮಾರುಕಟ್ಟೆಯ ಪ್ರಚಾರದ ಮೀಡಿಯಾ ಎಂದೇ ಪ್ರದರ್ಶಿಸುವುದು ಮತ್ತು ಲೈಂಗಿಕ ಕ್ರಿಯೆಯ ತುಣಕುಗಳಿರುವ ವೆಬ್ ಪುಟಗಳ ವೈಪರಿತ್ಯಗಳು ಇಡೀ ಮಾನವ ಸಮಾಜ ತಲೆತಗ್ಗಿಸುವಂತಿರುವುದಲ್ಲದೇ ಅವುಗಳೇ ಟೀನೇಜ್ ಮಕ್ಕಳ ಮೇಲೆ ದುಷ್ಟರಿಣಾಮ ಬೀರುವುದನ್ನು ಅಲ್ಲಗೆಳೆಯುವಂತಿಲ್ಲವಲ್ಲ!
ಇಂದ್ರಿಯ ನಿಗ್ರಹವೇ ಅತ್ಯಂತ ಪ್ರಧಾನವಾಗಿರುವ ನಮ್ಮ ದೇಶದಲ್ಲಿ, ಇದೀಗ ಅತ್ಯಾಚಾರಗಳು ಏಕೆ ಹೆಚ್ಚುತ್ತಿವೆ ಎಂಬುದನ್ನು ಗಂಭೀರವಾಗಿ ಚಿಂತಿಸುವಂತಾಗಿದೆ.


ಪಾಶ್ಚಾತ್ಯ ಜೀವನ ಶೈಲಿಯ ಸ್ವಚ್ಛಂಧ ಪ್ರವೃತ್ತಿ ಹಾಗೂ ಉಡುಗೆ ತೊಡುಗೆಗಳು ಎಂದಿಗೂ ನಮ್ಮ ದೇಶಕ್ಕೆ ಒಗ್ಗಲಾರವೆಂಬುದೇ ನಿಚ್ಛಳವಾಗತೊಡಗಿದೆಯಲ್ಲ...!

ಹೆಣ್ಣಿಗೆ ಲಜ್ಜೆಯೇ ಭೂಷಣವೆನ್ನುವ  ಉಚ್ಚ ಸಂಸ್ಕೃತಿ ನಮ್ಮದು. ಅದು  ಇದೀಗ ಪಾಶ್ಚಾತ್ಯರ ಲೈಂಗಿಕ ಪ್ರಚೋದಕ ಶೈಲಿಯ ಬಿಗಿಯುಡುಗೆಗಳಲ್ಲಿ ಕಾಣೆಯಾಗಿದೆ.
ಹೆಣ್ಣಿಗೆ ಗಂಡಿನ ಜೊತೆ ಸ್ವಾತಂತ್ರ್ಯ ಮತ್ತು ಸಮಾನತೆ ಇರಬೇಕೆಂಬುದು ನಿಜ. ಆಕೆಯ ಸೌಂದರ್ಯ ಮತ್ತು ದೈಹಿಕ ಆಕರ್ಷಣೆಗಳ ಎದುರಿಗೆ ಗಂಡಿನ ಸಹಜ ಪ್ರವೃತ್ತಿಯು ಸೋಲುವುದೇ ಹೆಚ್ಚು.


ಆದುದರಿಂದ, ನಾಚಿಕೆ ಬಿಟ್ಟು ನಡೆಯುವಂಥ ಜಿವನ ಶೈಲಿಯು ಆಕೆಗೆಂದಿಗೂ ಶೋಭಾಯಮಾನವಲ್ಲ ಹಾಗೂ ಕ್ಷೇಮಕರವಲ್ಲ ಎಂಬುದು ಅಷ್ಟೇ ಕಠೋರ ಸತ್ಯವೆಂಬುದನ್ನೂ ನಾವು ಮನಗಾಣುವಂತಾಗಿದೆ.

Monday, July 21, 2014

ಇಂದ್ರಿಯ ಕಲ್ಯಾಣದಲ್ಲಿ...


ಭೂತಾನ್ ರಾಜಧಾನಿ ಥಿಂಪು ನಗರದಲ್ಲೆಲ್ಲೂ ಪುರುಷಲಿಂಗ ದರ್ಶನ ಅನಿವಾರ್ಯ . ಅವರು ಅದನ್ನು ಸುಖಜೀವನಕ್ಕೆ ಶಭಸಂಕೇತವೆಂದು ಭಾವಿಸುತ್ತಾರೆ. ಅಂದರೆ ಇಂದ್ರಿಯ ಕಲ್ಯಾಣದಲಿ ತಮ್ಮ ಜೀವಿತ ಕಲ್ಯಾಣವನ್ನು ಕಾಣುತ್ತಾರೆ. 
ಅವರು ಪರುಷೇಂದ್ರಿಯಕ್ಕಷ್ಟೇ ಪ್ರಾಮುಖ್ಯತೆ ಇತ್ತಿದ್ದಾರೆ. 
ನಾವು ಪ್ರಕೃತಿ ಪರುಷ ಎರಡಕ್ಕೂ ಪ್ರಾಧಾನ್ಯತೆ ಇತ್ತಿದ್ದೇವೆ. ನಮ್ಮಲ್ಲಿ ಶಿವಲಿಂಗವು ಮದನಾಂತಕ ಶಿವನಸ್ವರೂಪವಾಗಿ ನಿರಾಕಾರವಾಗಿದೆಯಲ್ಲದೇ 'ಭಗ'ಭೂಮಿ ದ ಪ್ರತೀಕವಾಗಿ 'ಪಾಣಿಪೀಠ' ಮತ್ತು ಲಿಂಗದ  ಪ್ರತೀಕವಾಗಿ ಲಿಂಗ ಇವೆರಡೂ ಸೇರಿ ಶಿವಲಿಂಗವು ರೂಪುಗೂಂಡಿತು ಎನ್ನುತ್ತಾರೆ.

* ಭೂಮಿ ಎಂದರೆ ಸೃಜನ ಮತ್ತು ಶಿವನೆಂದರೆ ಪಾವಿತ್ರ್ಯ, ಪಾಣಿಪೀಠದಲ್ಲಿ ಸೃಜನ ಮತ್ತು ಪಾವಿತ್ರ್ಯವು ಒಟ್ಟಿಗಿದ್ದೂ ವಿಶ್ವದ ಉತ್ಪತ್ತಿಯು ರೇತಸ್ಸಿನಿಂದ (ವೀಯರ್ಯದಿಂದ) ಆಗದೇ ಶಿವಸಂಕಲ್ಪದಿಂದಾಯಿತು ಎಂದೂ ಹೇಳುತ್ತಾರೆ . 
ಭೂಮಿಯೇ ಒಡಲು,ಲಯಕ್ಕೆ ಕಾರಣನಾದ ಶಿವನು ಸೃಷ್ಟಿ ಕರ್ತ ವಿಷ್ಣುವಿನೊಡನಿದ್ದಾನೆ. ಯಾಕೆ ಂದರೆ ಲಯದ ಬೆನ್ನಿಗೇ  ಸೃಷ್ಟಿಯಿದೆ. ಶಿವ ಶಕ್ತಿಯ ಸಂಕೇತವೂ ಮತ್ತು ಲಯಕ್ಕೆ ವಿವಶನೂ ಹೌದು. ಅಂತೆಯೇ ಮನುಷ್ಯರಲ್ಲಿ ಶಕ್ತಿ ಯೂ ಇದೆ ಅದು ಲೋಪವೂ ಆಗುವುದಿದೆ. ಅಂದರೆ ಇಂದ್ರಿಯ ಕಲ್ಯಾಣವೂ ಅವನಿಂದಲೇ ವಿನಾಶವೂ ಅವನಿಂದಲೇ.

* ನನ್ನ ನೆನಪಿಗೆಬರುತ್ತಿದೆ, ನನ್ನ ಪೌರಾಣಿಕ ಕೃತಿ -    
ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ'(ಶ್ರೀನಿವಾಸ ಕಲ್ಯಾಣ)ದ ಒಂದು ನುಡಿ:
   ಸತ್ವಗುಣದ ಹಿರಿಮೆಗೆ ರಜೋಗುಣದ ಹಿಡಿತಕೆ 
   ತಮೋಗಣದ  ಅಳಿವಿಗೆ ವೈವಾಹಿಕ ಜೀವನಕೆ 
   ಆದರ್ಶದ ಉಳಿವಿಗೆ ಸಾರುತಿಹನು ಸಂದೇಶ 
   ಇಂದ್ರಿಯ ಕಲ್ಯಾಣದಲಿ ಲೋಕಕಲ್ಯಾಣಕೆ 
   
ಅಂದರೆ ವಿಶ್ವಜೀವನದಲ್ಲಿ ವಿವಾಹ ಜೀವನದ ಪಾವಿತ್ರ್ಯತೆಯೇ ಹೆಚ್ಚುಹೆಚ್ಚು ಮಾನ್ಯತೆ ಪಡೆದಿದೆ. 
ಪಡೆಯತ್ತಿರುವುದನ್ನು ಕಾಣುತ್ತಿದ್ದೇವೆ. ಅಂದಹಾಗೆ ಇಂದ್ರಿಯಕಲ್ಯಾಣದೊಂದಿಗೆ ಸಭ್ಯ ಜೀವನ ಸುಖೀಸಂಸಾರ ವಿರುವುದೇ ವಿವಾಹಜೀವನಾದರ್ಶದಲ್ಲಿ.
   
  

   

Wednesday, June 25, 2014

ಪ್ರೀತಿ-ಪ್ರೇಮಗಳ ನಡುವೆ ಹೆಣ್ಣು

ಬ್ರಹ್ಮ ಹೆಣ್ಣನ್ನು ಸೃಷ್ಟಿಸುವಾಗ ಏನೆಲ್ಲ ಸೇರಿಸಿದ್ದಾನೋ ಅವನೇ ಬಲ್ಲ... ಪ್ರೀತಿ-ಪ್ರೇಮಗಳ ನಡುವೆ ಗಂಡನ್ನು ಆಟವಾಡಿಸುತ್ತಾಳೆ. ಹಿಂದೆಂದೋ ಪ್ರೇಯಸಿಯಾದವಳು ತಂಗಿಯಾಗಿಬಿಡುತ್ತಾಳೆ. ತಂಗಿ ಎಂದುಕೊಂಡರೆ ಪ್ರೇಯಸಿಯಾಗಿರುತ್ತಾಳೆ. ನಿಜವಾಗಿಯೂ ಈ ತ್ರಿಗುಣಾತ್ಮಕ(ಸತ್, ರಜೋ ಮತ್ತು ತಮೋಗುಣಗಳ) ಪ್ರಪಂಚದಲ್ಲಿ ಗೆಲ್ಲುವುದು ಪ್ರೀತಿಯೇ. ಪ್ರೇಮ ಇದ್ದೂ ಬೂದಿ ಮುಚ್ಚಿದ ಕೆಂಡದಂತಿರುತ್ತದೆ.
ತಾಯಿ ಪ್ರೇಮಕ್ಕಿಂತ‌ ಹೆಂಡತಿ ಪ್ರೀತಿಯೇ ಮಿಗಿಲೆನಿಸುವುದು ಹೀಗೆಯೇ. ಹೆಣ್ಣಿಗೆ ತಂದೆಯ ಪ್ರೇಮಕ್ಕಿಂತ ಗಂಡನ ಪ್ರೀತಿಯೇ ಮಹತ್ವವಾಗುವುದೂ ಅವನೇ ಪತಿದೇವನಾಗುವುದೂ ಹೀಗೆಯೇ. ಆದರೆ, ಗಂಡಿಗೆ ಹೆಂಡತಿ ದೇವತೆಯಾಗಿ ಕಾಣುವುದು ಅಪರೂಪವೇ...

Saturday, June 21, 2014

ಅಳಿದ ಮೇಲೆ..

ವಿಶಾಲ ವಿಶ್ವದಲ್ಲಿ ಮನುಷ್ಯ ಒಂದು ಸಣ್ಣ ಪ್ರಾಣಿ. ಅವನು ತನ್ನ ಸಣ್ಣತನಗಳಿಂದ ಸಣ್ಣವನಾಗುತ್ತಾನೆ; ಸಣ್ಣವನಾಗೇ ಉಳಿಯುತ್ತಾನೆ, ಹೇಳ ಹೆಸರಿಲ್ಲದೇ ಅಳಿಯುತ್ತಾನೆ. ವಿಶ್ವದ ಎಲ್ಲೆ ಮೀರಿ ಚಿಂತಿಸುವ ಮತ್ತು ವಿವೇಚಿಸುವ ಶಕ್ತಿಯನ್ನು ಪಡೆದುಕೊಂಡು, ಕಷ್ಟಸಹಿಷ್ಟುತೆಯಲ್ಲಿ ದುಡಿದು ತನ್ನ ದೊಡ್ಡತನದಿಂದ ಬೆಳೆಯುತ್ತಾನೆ. ಇತರರನ್ನೂ ಬೆಳೆಯುವಂತೆ ಮಾಡುತ್ತಾನೆ. ಅಳಿದಮೇಲೂ ಸ್ಮರಣೆಯಲ್ಲಿ ಇರುತ್ತಾನೆ.

Wednesday, June 18, 2014

ಬದುಕೆಂದರೆ ಒಂದು ನಿರಂತರ ಹೋರಾಟ

ಬದುಕು ಒಂದು ರಣಾಂಗಣ. ಇಲ್ಲಿ ಮನುಷ್ಯನಿಗೆ ಹೋರಾಟ ಹುಟ್ಟುಗುಣವಾಗಿರುತ್ತದೆ. ಬರೀ ಸುಖಾಪೇಕ್ಷೆ ಸ್ವಭಾವ ಜನ್ಯವಾದರೆ, ಕಷ್ಟ ಸಹಿಷ್ಣುತೆ ಅಭ್ಯಾಸವಾಗದಿದ್ದರೆ, ಸಾಹಸ ಪ್ರವೃತ್ತಿಯೇ ಇಲ್ಲವಾದರೆ, ಅವನ ಹುಟ್ಟುಗುಣಕ್ಕೇ ತಕ್ಕು ಹಿಡಿದಂತೆಯೆ. ಯಾಕೆಂದರೆ, ಮಗು ಹುಟ್ಟಿದ ಕೂಡಲೇ ಮೊದಲ ಉಸಿರೆಳೆದುಕೊಳ್ಳುತ್ತಾ ಬದುಕುವುದಕ್ಕೆ ಹೋರಾಟ ಆರಂಭಿಸುತ್ತದೆ, ಅದೇ ಹೋರಾಟದ ಮೂಲ ಸಹಜ ಗುಣ ಮನುಷ್ಯನಿಗೆ ಜೀವಮಾನದುದ್ದಕ್ಕೂ ಇರುತ್ತದೆ; ಇರಬೇಕಾಗುತ್ತದೆ.

Monday, June 16, 2014

ಲೋಕವೆಂಬುದು ಜನರ ದೃಷ್ಟಿಯಲ್ಲಿ...

ಲೋಕ  ಅನೇಕರ ದೃಷ್ಟಿಯಲ್ಲಿ ಒಂದು ವ್ಯವಹಾರಿಕವ್ಯವಸ್ಥೆ. ಕೆಲವರಪಾಲಿಗೆ ಬರಿ ಅದೃಷ್ಟದ ಅವಸ್ಥೆ. ಹಲವರಿಗೆ ಒಂದು ಪ್ರಾಯೋಗಿಕ ಭೂಮಿಕೆ. ಮತ್ತೆ ಕೆಲವರಿಗೆ ಹಿರಿಯರ ಅನುಭವದಲ್ಲಿ  ಮತ್ತು ದೈವಿಕತೆಯಲ್ಲಿ ಅಮೃತತ್ವವಿದೆ ಎಂಬ ನಂಬಿಕೆ.

ವ್ಯವಹಾರಿಕವೆಂದುಕೊಂಡರೆ ನಿರ್ಭಾವುಕರು, ಹಣವೇ ಎಲ್ಲ ಎಂದು ತಿಳಿದವರು.
ಬರೀ ಅದೃಷ್ಟವೆಂದು ಕುಳಿತವರು ದುರ್ಬಲರು.
ಪ್ರಾಯೋಗಿಕ ಭೂಮಿಕೆ  ಎಂದು ತಿಳಿದವರಿಗೆ ನಿರಂತರ ಹೋರಾಟದ ಛಲ. ಸಿದ್ಧಿಗಿಂತಲೂ ಸಾಧಕರಾಗಿರುವುದರಲ್ಲೇ ತೃಪ್ತಿ. ಯಾಕೆಂದರೆ, ಪ್ರಯತ್ನ ನಮ್ಮದು ಸಂಕಲ್ಪ ಸಿದ್ಧಿ ಪರಮಾತ್ಮನ ಇಚ್ಛೆಯಷ್ಟೇ.. ಇಂಥವರು ದೇವರ ಬಗ್ಗೆ ಹೀಗಿರುತ್ತಾರೆ-
ದೇವರನ್ನು ನಂಬಿದವ ಸುಖಿ. ದೇವರನ್ನೇ ಅವಲಂಬಿಸಿದವ ಅಸುಖಿ. ದೇವರಿಲ್ಲ ಎನ್ನುವವನು ಸುಖದ ಹುಡುಕಾಟದಲ್ಲೇ ಇರುತ್ತಾನೆ.
ಅಂತೆಯೇ, ದೈವಿಕತೆ ಬಲ್ಲ ಇವರಿಗೆ ಸುಖವೆಂಬುದು ಕಾಲಬುಡದಲ್ಲೇ ಇದೆ ಎಂಬ ಅರಿವು ಇರುತ್ತದೆ. ಅಂದಹಾಗೆ, ಮಾತು ಬಾಯಿಂದ ಜಾರಿಹೋಗುವ ಮುನ್ನ ಹತ್ತು ಸಲ ಯೋಚಿಸಬೇಕು. ಬರಹ ಕೈಯಿಂದ ಇತರರಿಗೆ ತಲುಪುವ ಮನ್ನ ಹತ್ತು ಹಲವು ದೃಷ್ಟಿ ಕೋನದಲ್ಲಿ ನೋಡಿರಬೇಕು. ನಿಮ್ಮ ಹಣ, ವಸ್ತು(ದೇಹ ಕೂಡ), ವನ್ನು ಬಳಸಿಕೊಳ್ಳುವ ಮುನ್ನ ಮುಂದಾಲೋಚನೆ ಇರಬೇಕು, ಸಾಲ ಪಡೆಯುವ ಮುನ್ನ ಕೊಡುವ ಮುನ್ನ ಎಚ್ಚರದಿಂದಿರಬೇಕು.
-ಶಿವ ಚೇತನ
”ಶಿವ ಚೇತನ ’’ಎಂದರೆ ಯಾರು? ಎಂದು ಕೇಳದಿರಿ. ಅದು ನನ್ನ ಜೀವಾತ್ಮನ ಧ್ವನಿ!  ಶಿರೋನಾಮೆ.

Tuesday, June 18, 2013

ಆಕಾಶವಾಣಿಯಿಂದ ನಾನು ಪ್ರಸ್ತುತ ಪಡಿಸಿದ ಕನ್ನಡ ಚಿತ್ರ ಗೀತೆಗಳ ವಿಶೇಷ ಕಾರ್ಯಕ್ರಮಗಳು:-,

ಭದ್ರಾವತಿ ಆಕಾಶವಾಣಿಯಿಂದ ನಾನು ಪ್ರಸ್ತುತ ಪಡಿಸಿದ,

ಫ್ರೈಡೇ ಸ್ಪೆಷಲ್ ಮತ್ತು ಸಾಟರ‍್ ಡೇ ಸ್ಪೆಷಲ್ 
ಕನ್ನಡ ಚಿತ್ರ ಗೀತೆಗಳ ವಿಶೇಷ ಕಾರ್ಯಕ್ರಮಗಳು:-

ಕನ್ನಡ ಚಲನ ಚಿತ್ರಗಳ ಗಿತೆಗಳು ಹಾಗೂ ಅವುಗಳೊಂದಿಗೆ ನಾನು ಬೆಳೆದು ಬಂದ ನನ್ನ ಬಾಲ್ಯ ಹಾಗೂ ಯುವವಯೋಮಾನ ಆನಂತರದ ಸವಿನೆನಪುಗಳು ಹಾಗೂ ಆ ಚಿತ್ರಗೀತೆಗಳೊಂದಿಗೆ ಬೆಸೆದುಕೊಂಡ ಜೀವನದ ಕೆಲ ಸಂದರ್ಭಗಳ ನಿವೇದನೆ...
ನೀವೂ ಕೇಳಿ ನಿಮ್ಮ ಸ್ನೇಹಿತರೊಡನೆ ಹಂಚಿಕೊಳ್ಳಿ

Friday, June 14, 2013

ಕನ್ನಡ ಹಬ್ಭಗಳ ಕ್ಯಾಲೆಂಡರ್‍

ಕನ್ನಡ ಹಬ್ಬಗಳ ಕ್ಯಾಲೆಂಡರ್‍ ನೋಡಿ.....>>>
ಕನ್ನಡ ಪಂಚಾಂಗ,
ಕನ್ನಡ ಲಗ್ನ,
ಹೋರಾ,
ವ್ರತಗಳು,
 ಪ್ರಶ್ತೋತ್ತರಗಳು,
ಇನ್ನೂ ಹೆಚ್ಚಿನ ಮಾಹಿತಿ ಗಾಗಿ ಸಂಪರ್ಕಿಸಬಹುದು.
ಆದರೆ, ಜ್ಯೋತಿಷ್ಯವೇ ಜೀವನವಲ್ಲ ಎಂಬುದನ್ನೂ ನೆನಪಿಡಿ

Wednesday, August 17, 2011

ಕಪಟ ನಾಟಕವಾಡುವ ರಾಜಕಾರಣಿಗಳ ಪುಂಗಿ ಬಂದ್ ಮಾಡುವುದು ಹೀಗೆ ಸಾಧ್ಯವಿಲ್ಲವೇ..?

ಹಿಂದೊಮ್ಮೆ ಪತ್ರಿಕೆಯಲ್ಲೆಲ್ಲೋ ಒಂದು ಕಡೆ ಓದಿದ ನೆನಪು- "ಅಮೆರಿಕದಂತಹ ಶ್ರೀಮಂತ ದೇಶಗಳಲ್ಲಿ ಪ್ರಜೆಗಳೇ ಶ್ರೀಮಂತರು ಸ್ಥಿತಿವಂತರಾಗಿರುತ್ತಾರೆ. ಅವರ ರಾಜಕಾರಣಿಗಳು ಆಡಳಿತಾರೂಢರಾಗಿರುವವರು ಅಲ್ಲಿನ ಪ್ರಜೆಗಳಿಗಿಂತಲೂ ಬಡವರಾಗಿರುತ್ತಾರೆ" ಅದೇ ನಮ್ಮ ದೇಶದಲ್ಲಿ ನೋಡಿದ್ದೀರಿ.  ಇಲ್ಲಿ ಬಹುತೇಕ ರಾಜಕಾರಣಿಗಳೆಲ್ಲ ಕೋಟ್ಯಾಧಿಪತಿಗಳು! ಪ್ರಜೆಗಳಲ್ಲಿ ಬಡವರು ದಟ್ಟದರಿದ್ರರೂ ಕೋಟಿಗಟ್ಟಲೇ ಇದ್ದಾರೆ!
ಬೆರಳಿಣಿಕೆಯ ವರ್ಷಗಳಷ್ಟು ರಾಜಕಾರಣ-ರಾಜಕೀಯ ಮಾಡಿದರೂ ಸಾಕು, ಕೆಲವು ಲಕ್ಷ ಗಳಿಸಿ ತಮ್ಮ ಸ್ವಂತಕ್ಕೆ ತಾವು ಉದ್ಧಾರ ಮಾಡಿಕೊಳ್ಳುತ್ತಾರೆ ಎಂಬ ಮಾತು ನಮ್ಮ ಜನಗಳಲ್ಲಿ ಜನಜನಿತವಾಗಿಬಿಟ್ಟಿದೆಯಲ್ಲ! ಯಾಕೆ ಹೀಗೆ...?

ಇಂದಿನ ಚಲನ ಚಿತ್ರೋದ್ಯಮ ದಲ್ಲಿ (ಹಿಂದೊಂದು ಕಾಲದಲ್ಲಿ ಚಲನ ಚಿತ್ರ ರಂಗ ಸಮಾಜಿಕ ಸುಧಾರಣೆಯೆ ಪ್ರಭಾವಿ ಮಾಧ್ಯಮವಾಗಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ; ಬಹಳಷ್ಟು ಹಳೆಯ ಚಿತ್ರಗಳೇ ಸಾಲು ಸಾಲಾಗಿ ಸಾಕ್ಷಿ ನುಡಿಯುತ್ತವೆ. ಈ ಕಾಲದಲ್ಲಿ ಅಂತಹದೊಂದು ಸಿನಿಮಾ ಬಂದು ಹಿಟ್ ಆಗುವುದೆಂದರೆ, ಸಾಮಾಜಿಕ ಕಳಕಳಿಯಿಂದ ಅದನ್ನು ತಯಾರಿಸಿದ ನಿರ್ಮಾಪಕನ ಪುಣ್ಯವೇ ಸರಿ). ನಾವು ಕಾಣುತ್ತಿರುವುದು ಕೋಟಿಗಟ್ಟಲೆ ದುಡಿದ ಸೂಪರ್ ಸ್ಟಾರ್ ಗಳು, ಪ್ರೊಡ್ಯೂಸರ್ ಗಳಿದ್ದಾರೆ. ಅವರಲ್ಲಿ ನಿಜವಾದ ಕಲಾವಿದರು ಎಲ್ಲಿದ್ದಾರೆ ? ಎನ್ನುವುದು ಬೇರೆ ವಿಷಯ...

ಪ್ರಸ್ತುತ ವಿಷಯಕ್ಕೆ ಬಂದ್ರೆ  ಎಲ್ಲಕಾಲಕ್ಕೂ (ಜನ ಸಂಖ್ಯೆ ಹೆಚ್ಚಿದಂತೆ) ಬಡವರೇ ತುಂಬಿತುಳುಕುವ ಈ ಭವ್ಯ ಭಾರತ ದೇಶದಲ್ಲಿ ನಮ್ಮ ಬಹಳಷ್ಟು ಮಹಾನ್ ರಾಜಕಾರಣಿಗಳು ಅಜ್ಞಾನ, ಅಂಧಕಾರದಲ್ಲಿ ಮೂಢರಾಗಿರುವ, ದಟ್ಟದಾರಿದ್ರದಲ್ಲಿ ತೊಳಲಾಡುತ್ತಿರುವ ಕೊಳಚೆ ಪ್ರದೇಶಗಳಲ್ಲಿ, ಮತ್ತು ಗುಡಿಸಲುಗಳಲ್ಲಿ ವಾಸಿಸುವವರ ಬಳಿ ಪಾದ ಯಾತ್ರೆ ನಡೆಸಿ ಅವರೊಂದಿಗೇ ಕುಳಿತು ಮುದ್ದೇ ಊಟವನ್ನೂ ಮಾಡಿ ಕಣ್ಣೀರೊರೆಸುವ ನಾಟಕವಾಡಿ, ಈಗಾಗಲೇ ತಾವು ಗಳಿಸಿಟ್ಟು ಕೊಂಡಿರುವ ಕೋಟಿಗಟ್ಟಲೆ ಹಣದಲ್ಲಿ ಅವರಿಗೊಂದು ಸೂರು ಉಣ್ಣಲು ಎರಡುಹೊತ್ತಿನ ಗಂಜಿ ವ್ಯವಸ್ಥೆಯನ್ನು ಮಾಡುವುದೇನು ಕಷ್ಟವೇ...?  ಹಾಗೆ ಕೃಪೆ ತೋರಿ ಅವರ ಪಾಲಿಗೆ ದೇವರಾಗಿ ಬಿಡುತ್ತಾರೆ! 

ಹೀಗಾಗಿ ಬಡತನದ ರೇಖೆಗಿಂತಲೂ ಕೆಳಗಿರುವ ಆ ಕೆಳವರ್ಗದ ಜನರ ಮೌಢ್ಯವನ್ನು, ಬಡತನವನ್ನು ತಮ್ಮ  ಓಟುಗಳಾಗಿ ಎನ್ ಕ್ಯಾಷ್ ಮಾಡಿಕೊಂಡು ಚುನಾವಣೆಯಲ್ಲೂ ಗೆದ್ದು  ಬಂದು "ವಿಕ್ಟರಿ"  ಚಿನ್ಹೆಯ ಎರಡು ಬೆರಳು ತೋರಿಸುತ್ತ ವಿಜೃಂಭಿಸುತ್ತಲೇ ಇರುತ್ತಾರೆ! ಆ ಬಿಸಿಲು, ಮಳೆಗೆ ಸೂರಾಯಿತಲ್ಲ: ಎರಡು ಹೊತ್ತು ಗಂಜಿಯೂಟವಾಯಿತಲ್ಲ ಎಂದು  ಕುಡಿದು ಉಂಡು ಆ ಪುಣ್ಯಾತ್ಮ ರಾಜಕಾರಣಿಯನ್ನು ಅವನೇ  ನಮ್ಮಣ್ಣಾ.... ದೇವ್ರೂಂತ ನೆನೆನೆನೆದು ನಿದ್ರೆ ಹೋಗುತ್ತಾರೆ; ಮತ್ತೆ ಮುಂದಿನ ಚುನಾವಣೆಯೆಂಬ ಹಬ್ಬವನ್ನೂ ಕಾಯುತ್ತಾರೆ. ಅಲ್ಲಿ ಹುಚ್ಚು ಮುಂಡೆ ಮದ್ವೆಲಿ  ಉಂಡವನೇ ಜಾಣ ಎಂಬ ಕಾರ್ಯಕರ್ತನೂ ಇರುತ್ತಾನೆ! 
ವಿದ್ಯಾವಂತರೆಸಿಕೊಂಡವರಾದ ಮಧ್ಯಮ ವರ್ಗದವರು ಮೇಲ್ಮಧ್ಯಮ ವರ್ಗದವರ ಬಳಿಗೆ ಅವರ ಮನೆಗಳಿಗೆ ಈ ರಾಜಕೀಯ ಪುಢಾರಿಗಳು ಚುನಾವಣೆ ಬಂದಾಗ ಓಟು ಕೇಳಲೂ ಬರದಿರುವುದೇ ಹೆಚ್ಚಾಗಿ ಕಂಡುಬರುತ್ತದೆ. ಯಾಕೆಂದ್ರೆ, ಈ ವಿದ್ಯಾವಂತರ ಬುದ್ದಿವಂತರ ಓಟು  ತಮಗೆ ಗ್ಯಾರೆಂಟಿ ಏನಿಲ್ಲವೆಂದು ಗೊತ್ತು. ಅವರಿಗೆ ಧನದಾತರೂ ಅಧಿಕಾರದಾತರೂ ಅನ್ನ-ಚಿನ್ನದ ಐಷಾರಾಮಿದಾತರೂ, ತೀರಾ ಕೆಳವರ್ಗದ ಜನರೇ ಆಗಿರುತ್ತಾರೆಂಬುದು ಈ  ಸ್ವಂತಂತ್ರ ಭಾರತದ ದೇಶವು ಕಂಡ 64 ವರ್ಷಗಳಲ್ಲಿ ಚೆನ್ನಾಗಿ ಮನದಟ್ಟಾಗಿ ಹೋಗಿದೆಯಲ್ಲ...!
ನೋಡಿದೆ ಹೇಗಿದೆ ನಮ್ಮ ದೇಶ...

ಈಗ ನನ್ನ ತಲೆ ಕೊರೆಯುತ್ತಿರುವ ಎರಡು ಪ್ರಶ್ನೆಗಳೆಂದರೆ-
ರಾಜಕಾರಣಿಗಳು ನಮ್ಮ ದೇಶದ ಬಹುಸಂಖ್ಯಾತರಾದ ಅಂತಹ  ಕೆಳವರ್ಗದ ಮುಗ್ಧರನ್ನೂ ಕಡು ಬಡವರನ್ನೂ (ಈ ಜಾತ್ಯಾತೀತ ರಾಷ್ಟ್ರದಲ್ಲಿ ಜಾತೀಯತೆಯ ಬೀಜವನ್ನೂ ಬಿತ್ತಿ)  ಒಂದಿಷ್ಟು ಕಾಸು ರೊಟ್ಟಿ ಚೂರು ಬಿಸಾಡಿದಂತೆ ತೋರಿ ಶೋಷಣೆ ಮಾಡುತ್ತಿರುವುದು ಘೋರ ಅನ್ಯಾಯವೆಂಬುದನ್ನು ನೋಡುತ್ತಲೇ ಇರುವ ಅಸಹಾಯಕ ಬುದ್ಧಿಜೀವಿಗಳೂ ಪ್ರಜ್ಞಾವಂತರೂ ಇಲ್ಲೇ ಇದ್ದೇವೆ...!
ಈ ನಡುವೆ ಅಲ್ಲಲ್ಲಿ ಕೆಲ ಹೃದಯ ಶ್ರೀಮಂತಿಕೆಯಳ್ಳವರೂ ಸಾಮಾಜಿಕ ಸಂಘಟನೆಗಳೂ ಅಂತಹ ಮುಗ್ಧ ಬಡಜನತೆಗೆ ಸಹಾಯ ನೀಡಿ, ಅವರನ್ನು ಅಷ್ಟಿಷ್ಟು ಎಚ್ಚರಿಸುವ ಕೆಲಸವನ್ನೂ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ.
ಆದರೆ, ಉಳ್ಳವರು ಶಿವಾಲಯವ ಮಾಡುವರೆಂಬಂತೆ, ಬಹುತೇಕ ಇಂಥ ಬಡವರ ಮೌಢ್ಯವನ್ನೇ ಭಾವನೆ ಕನಸುಗಳನ್ನೇ ಎನ್ ಕ್ಯಾಷ್ ಮಾಡಿಕೊಂಡು ಯಾವ ರಾಜಕಾರಣಿಗೂ ಕಡಿಮೆ ಇಲ್ಲದಂತೆ ಕೋಟ್ಯಾಧಿಪತಿಗಳಾಗಿರುವ ಸಿನಿಮಾ ಸೂಪರ್ ಸ್ಟಾರ್ ಗಳು ನಮ್ಮ ದೇಶದ ಬಡವರ ಉದ್ಧಾರಕ್ಕೆ ಏನು ಮಾಡಿದ್ದಾರೆ; ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಎಲ್ಲೋ ಒಬ್ಬಿಬ್ಬರು ಅಂಥ ಮಹಾನ್ ನಟರಿದ್ದಾರಷ್ಟೇ..
ಈ ದೇಶ ಕಂಡ ಬಿಗ್ ಬಿ ನಟ ಅಮಿತಾಭ್ ತಾವು ಅದೇ ಜನರಿಂದ ಕರೋಡ್ ಪತಿಯಾಗಿದ್ದಾರೆ ಎಂದ್ರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ..? ಈ ಮಹಾನ್ ನಟನ ನಟನೆಯ ಬಗ್ಗೆ ನಮ್ಮದೇನೂ ಎರಡು ಮಾತಿಲ್ಲ ಬಿಡಿ. ಅದೇ ಅವ್ರೇನು ಅದೇನು ಅಂಥ ದೀನ ದಲಿತ ಬಡಬಗ್ಗರಿಗೆ ಕೋಟಿಗಟ್ಟಲೆ ಮಾಡಿದ್ದಾರೆಯೋ ನಾನರಿಯೆ... ಏನೇ ಆಗಲಿ ಅವರಂತು ತಮ್ಮ "ಕೌನ್ ಬನೇಗಾ ಕರೋಡ್ ಪತಿ" ಷೋಮ್ಯಾನ್ ಆಗಿ ಬಡಜನತೆಯನ್ನ ಕರೋಡ್‌ ಪತಿ ಮಾಡಿಲು  ಹುಚ್ಚಿಗೆಬ್ಬಿಸಿರುವುದಂತೂ  ವಾಸ್ತವ ಸಂಗತಿಯೇ....
ನನಗನಿಸುವುದಿಷ್ಟೇ.... ಚುನಾವಣೆಯ ಸಂದರ್ಭಗಳಲ್ಲಿ  ಯಾವ ಪಕ್ಷಗಳಿಗೂ ಸೇರದೇನೆ ಈ ಮಹಾನ್ ಸೂಪರ್ ಸ್ಟಾರ್ ಗಳು ಈ ಬಡ ಜನತೆಯ ಬಳಿಗೆ ಹೋಗಿ ಅವ್ರ ಕಷ್ಟ ಸುಖ ವಿಚಾರಿಸಿ ಅವರಿಗೆ ತಮ್ಮ ಉದಾರ ನೆರವು ನೀಡಿ (ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ) ಅವರನ್ನು ಎಚ್ಚರಿಸುತ್ತ ಉತ್ತಮ ಪ್ರಜೆಗಳನ್ನಾಗಿಸಿ ಅವರೂ ಪ್ರಾಮಾಣಿಕ ಅಭ್ಯರ್ಥಿಯನ್ನೇ ಆರಿಸುವಂತೆ ಜನಜಾಗೃತಿ ಮಾಡಬಹುದಲ್ಲವೇ, ಅಥವಾ ಅವರ ನಡುವೆ ಅಂತಹ ಅಭ್ಯರ್ಥಿಯೆ ಕಣದಲ್ಲಿ ಇಲ್ಲದಿದ್ದರೆ ಚುನಾವಣೆಯನ್ನೇ ಬಹಿಷ್ಕರಿಸುವಂತೆ ಹುರಿದುಂಬಿಸುವ ಮಹತ್ಕಾರ್ಯಕ್ಕೆ ಸಂಘಟಿತರಾಗಿ ಕೆಲಸ ಮಾಡಬಾರದೇಕೆ..? 
ಆಗ ನೋಡಿ ಕಪಟ ನಾಟಕವಾಡುವ ರಾಜಕಾರಣಿಗಳ ಪುಂಗಿ ಬಂದ್ ಆಗಿಬಿಡುತ್ತದೆ;
ಈ ಕಲಾವಿದರಲ್ಲೂ ರಾಜಕಾರಣಿಗಳ ಮರ್ಜಿಹಿಡಿಯುವವರಿದ್ದಾರೆ; ಇಲ್ಲವೆನ್ನುವಂತಿಲ್ಲ; ನೀವೇನಂತೀರಿ...?

Wednesday, July 06, 2011

ಓಟು ನಮ್ಮ ಜೋಳಿಗೆಗೆ ಹಾಕ್ರಿ ಚಲೋದ ಮಾಡ್ತೀವಿ ಅನ್ನೋರೆಲ್ಲಾ... ಭಲೇ ಆಶಾಢಭೂತಿಗಳು!

No great work can be done without Sacrifice
-Swami Vivekananda

ನಮ್ಮ ಭಾರತ ಬಡಬಗ್ಗರ ದೇಶ. ಇಲ್ಲಿ ಗರೀಬಿ ಹಟಾವೋ... ಎಂಬುದು ಕೇವಲ ಘೋಷಣೆಯಷ್ಟೇ.. ಇಲ್ಲ ಬಡವರ ಕಷ್ಟ ಭಗವಂತನಿಗೇ ಗೊತ್ತು. ಭಗವಂತನಿಲ್ಲದ ಕೋಟ್ಯಂತರ ಬಡವರನ್ನು ಊಹಿಸಿಕೊಳ್ಳುವುದೇ ಕಷ್ಟ... ಅದರಲ್ಲೂ ಮಧ್ಯಮ ವರ್ಗದವರಿಗೆ ದೇವರೇ ಪ್ರತಿನಿತ್ಯ ರಕ್ಷಿಸುವ ಸರ್ವೋತ್ತಮನು. ಅವನೇ ವಿವಿಧ ರೂಪಗಳಲ್ಲಿ ಕಾಣುವ ಆರಾಧ್ಯ ಶಕ್ತಿಸ್ವರೂಪಿ; ಜೀವಿತದ ಪರಾತ್ಪರ ತತ್ವ.

ಬಡವರ ಕಷ್ಟ ಅರ್ಥವಾದ ಹಾಗೇ ಬರೀ ನಾಟಕ ಆಡೋ ರಾಜಕೀಯ ಫುಡಾರಿಗಳಿಗೇನೂ ಕಡಿಮೆ ಇಲ್ಲ; ಈ ದೇಶದಲ್ಲಿ. ಅಂಥ ಪುಢಾರಿಗಳಿಂದ ಅಲ್ಪಸ್ವಲ್ಪ ಉಪಕೃತರಾದ ಕಡುಬಡವರು ಮತ್ತು ಅಜ್ಞಾನ ಅನಕ್ಷರತೆಯಿಂದ ಕಂಗಾಲಾಗಿ ಸ್ವಂತ ತಿಳುವಳಿಕೆ ಇಲ್ಲದವರ ಜನಸಂಖ್ಯೆಯೇ ಬಹಳವಿದೆ ಈ ದೇಶದಲ್ಲಿ. ಆ ಕಟ್ಟ ಕಡೆವರ್ಗದ ಗುಂಪಿನ ಜನರೇ ಈ ದೇಶದ ಭವಿಷ್ಯವನ್ನ ಪ್ರತಿಯೊಂದೂ ಚುನಾವಣೆಯಲ್ಲೂ ನಿರ್ಧಾರ ಮಾಡುತ್ತಾರೆ. ಅವರ ಬೌದ್ಧಿಕಮಟ್ಟ ಹಾಗೆಯೇ ಇರಬೇಕು; ಹಾಗೇ ಇರುವವರೆಗೆ ನಮ್ಮ ಮಹಾನ್ ಜನಸೇವಕ ಪ್ರತಿನಿಧಿಗಳಾಗಬಯಸುವ ರಾಜಕಾರಣಿಗಳಿಗೆ ಭಯವೇನಿಲ್ಲ. ಕೋಟಿಗಟ್ಟಲೆ ಹಣದ ಬಲವೇ ಅವರಿಗೆ ಜನಬಲವನ್ನು ತಂದುಕೊಡುತ್ತದೆಂಬ ದೃಢ ವಿಶ್ವಾಸ.

ಇಂಥ ಹಣವೇ ಮಾತನಾಡುವ ನಮ್ಮಮಹಾನ್ ಭಾರತವಿದು. ಆದರೇನು! ಇಲ್ಲಿ ಭಗವಂತನೊಡನೆ ಅವರವರ ಅಂತರಂಗದಲ್ಲೇ ಮಾತನಾಡುವವರ ಕೋಟ್ಯಾಂತರ ಜನಸಾಮಾನ್ಯರಿಗೇನೂ ಕೊರತೆಯಿಲ್ಲ ಬಿಡಿ! ಈ ಭವದ ಕಷ್ಟ ನಮ್ಮಜನಸಾಮಾನ್ಯರಿಗೆ ಒಗ್ಗಿ ಹೋಗಿರುವಂತೆ ಜಗತ್ತಿನ ಬೇರಾವ ಜನರಿಗೆ ಒಗ್ಗಿದೆ ಹೇಳಿ..? ಯಾಕೆಂದರೆ, ಜನಸಂಖ್ಯೆ ಗರಿಷ್ಠ ಮಟ್ಟದ ಅಭಿವೃದ್ದಿಯಲ್ಲಿ ನಾವೇ ಯಾವಾಗಲೂ ಬಹಳ ಮುಂದು ಅಲ್ಲವೇ..?

ಏನೇ ಆಗಲಿ, ಅಂದಿಗೂ ಇಂದಿಗೂ ವಿದೇಶೀಯರೂ ನಮ್ಮ ಜನಸಾಮಾನ್ಯ ಕಷ್ಟಸಹಿಷ್ಣುತೆ, ಧಾರ್ಮಿಕ ನಂಬಿಕೆ ಮತ್ತು ಅವರು ಭಗವಂತನಲ್ಲಿ ಇಟ್ಟಿರುವ ವಿಶ್ವಾಸ ಕಂಡು ಮೂಕವಿಸ್ಮಿತರಾಗುತ್ತಾರಲ್ಲ...! ಮನುಷ್ಯ ಕಷ್ಟಪಟ್ಟೇ ಜೀವನದಲ್ಲಿ ಮುಂದೆ ಬರಬೇಕೆಂಬುದು ನಮ್ಮ ಅನುಭವೀಕರ ಹಾಗೂ ಅನುಭಾವಿಗಳ ನುಡಿ. ಬಡವರ ಕಷ್ಟ ಕಣ್ಣೀರೊರೆಸುವ ನಾಟಕ ಆಡೋ ಮಂದಿಗೇನು ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಷ್ಟೇ. ದೇವರು  ಇದ್ದಾನೆಯೇ ? ಎನ್ನುವುದಕ್ಕಿಂತ ದೇವರಲ್ಲಿ ನಾವಿದ್ದರೆ, ನಮ್ಮ ಕಷ್ಟ ಕಳೆಯೋಕೆ ಯಾರಾದರೂ ಪುಣ್ಯತ್ಮರು ಬರುತ್ತಾರೆ; ಸಹಾಯ ಮಾಡುತ್ತಾರೆ; ದಾರಿಯನ್ನಾದರೂ ತೋರುತ್ತಾರೆ.

ನಂಬಿಕೆಯಿಂದಲೇ ಈ ಭವದ ಬದುಕು. ನಂಬಿಕೆ ಇದ್ದರೆ ಇಲ್ಲಿ ಎಲ್ಲವೂ ಇದೆ. ಇಲ್ಲವಾದರೆ ಏನೂ ಇಲ್ಲ. ದೇವರೇನು? ನನಗೆ ನಾನೂ ಇಲ್ಲ!ಚಲೋದು ಕೆಟ್ಟದ್ದು ಎರಡೂ ಇರೋದ...  
ಚಲೋದು ಕೆಟ್ಟದ್ದು ಎರಡೂ ಇರೋದ... ಚಲೋದ ಇಟಗೊಂಡ ಕೆಟ್ಟದ್ದನ್ನ ಮಹಾತ್ಮರ ಜೋಳಿಗೆಗೆ ಹಾಕ್ರಿ ಅವರು ಹೊರತಾರ ಅಂತಾರೆ ಶ್ರೀ ಶ್ರೀ ಚನ್ನವೀರ ಶರಣರು.
ಶರಣರ ನುಡಿ ಸತ್ಯ ಕೆಟ್ಟದ್ದನ್ನು ಹೊರೊ ನಿಜಕ್ಕೂ ಮಹಾತ್ಮರು ಕಾವಿಧಾರಿಗಳು ಈ ದೇಶದಲ್ಲಿ ಕಡಿಮೆಯಾದರೂ ಇದ್ದೇ ಇರುತ್ತಾರೆ. ಅಂಥ ಸಂತರ ಸತ್ಸಂಗ ನಿಮಗೆ ದೊರಕಲಿಲ್ಲವೇ...ನೀವು ಕುಳಿತಲ್ಲೇ ನಿಮಗೆ ಪರಮಾತ್ಮನಾದ ಪರಮಾತ್ಮನನ್ನು ಧ್ಯಾನಿಸಿ, ಅವನ ಕಾಣದ ಜೋಳಿಗೆಗೆ ನಿಮ್ಮ ಕಷ್ಟವನ್ನೆಲ್ಲ ಹಾಕಿಬಿಡಿ.  ನಿಮ್ಮ ಓಟು ನಮ್ಮ ಜೋಳಿಗೆಗೆ ಹಾಕಿ ನಿಮಗೆ ಒಳ್ಳೇದು ಮಾಡ್ತೀವಿ ಅನ್ನೋ ಪುಢಾರಿಗಳ ಎಂಜಲು ಕಾಸಿಗೆ ಅಷ್ಟಿಷ್ಟು ನೆರವಿಗೆ ಖಂಡಿತ ಬಲಿಪಶುಗಳಾಗದಿರಿ.  ನೆನಪಿಡಿ. ಬಹಳ ಎತ್ತರಕ್ಕೇರಿರುವ ಪ್ರತಿಭಾವಂತರೂ ವಿಜ್ಞಾನಿಗಳು, ತಂತ್ರಜ್ಞರು ತಮ್ಮ ಪ್ರಾಮಾಣಿಕ ಹಾದಿಯಲ್ಲೇ ಮಹೋದ್ಯಮಿಗಳಾದವರು ನಮ್ಮ ದೇಶದಲ್ಲೇ ಈಗ ಹೆಚ್ಚುತ್ತಿದ್ದಾರೆ; ನೋಡಿ ಅವರು ನಿಮಗೆ ಮಾದರಿಯಾಗಬೇಕು. ಕೊನೆಯದಾಗಿ ಹೇಳಬೇಕೆಂದರೆ ಒಳ್ಳೆಯ ರೀತಿಯಲ್ಲಿ ಎತ್ತರಕ್ಕೇರಿದ ಪ್ರತಿಯೊಬ್ಬರೂ ಸಾಧಿಸಿದ ಜಯದ ಹಿಂದೆಯೂ ಬೆವರು ಸುರಿಸಿದ ಕಷ್ಟದ ಹಾದಿಯೇ ಇರುತ್ತದೆ.  ಸಾಫ್ಟ್ ವೇರ್  ದಿಗ್ಗಜರಾದ ನಾರಾಯಣ ಮೂರ್ತಿ, ಸಾಮಾನ್ಯ ಕೃಷಿಕನಾಗಿ ಕೃಷಿ ಆರಂಭಿಸಿ,ಆನಂತರ ವಿಮಾನಯಾನದ ಕಂಪೆನಿಯನ್ನೇ ಕಟ್ಟಿ ಯಶಸ್ವಿಯಾದ ಕ್ಯಾಪ್ಟನ್ ಗೋಪಿನಾಥ್ ಇಂಥವರ ಮಾದರಿ ನಮ್ಮ ಯುವ ಜನಾಂಗಕ್ಕೆ ಇರಬೇಕೇ ಹೊರತು, ಭ್ರಷ್ಟತನದಿಂದ ಮೇಲೇರಿ ಮೆರೆಯುವವರು ಉಲ್ಕೆಗಳಂತೆ ಉರಿದು ಧರೆಗುದುರಿ ಮರೆಯಾಗುವವರಲ್ಲ. ಯಾವ ಮಹತ್ವಾಕಾಂಕ್ಷೆಯೂ, ಮಹತ್ಕಾರ್ಯವೂ ಹೃದಯವನ್ನೇ ಕಿತ್ತಿಡುವಂತಹ ತ್ಯಾಗವಿಲ್ಲದೇ ಆಗಲಾರದು

Thursday, June 09, 2011

ಹಿಂದೂಗಳ ಪರ ಮಾತನಾಡುವವರೆಲ್ಲ ಕೋಮುವಾದಿಗಳೇ....

ಭಾರತದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಇಲ್ಲಾ ಮುಸ್ಲಿಮರೋ ಅಥವಾ ಕ್ರಿಶ್ಚಿಯನ್ ರೋ ಎಂಬ ಪ್ರಶ್ನೆಗೆ ಪ್ರೈಮರಿ ಶಾಲೆಯಲ್ಲಿ ಓದುವ ಒಂದು ಮಗುವೂ ಕೂಡ, ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಉತ್ತರ ನೀಡುತ್ತದೆ.  ಆದರೇನು! ಇಲ್ಲಿ ನಾನೇ  ಆಗಲಿ ಯಾರೇ ಆಗಲಿ ಹಿಂದೂಗಳ ಪರ ಮಾತನಾಡಿದರೆ ಅವನು ಕೋಮುವಾದಿ ಎಂದು ಗ್ರಹಿಸಲಾಗುತ್ತದೆ.  ಅದೇ ಮುಸ್ಲಿಮರೋ ಕ್ರಿಶ್ಚಿಯನ್ ರೋ ಅವರ ಕೋಮಿನ ಬಗ್ಗೆ ಮಾತನಾಡಿದರೆ ಯಾರೂ ಅವರನ್ನು ಕೋಮುವಾದಿ ಎಂದು ಹೇಳುವುದಿಲ್ಲ. ನಮ್ಮ ದೇಶದಲ್ಲಿ  ಅಲ್ಪ ಸಂಖ್ಯಾತರಿಗೆ ಇರುವಷ್ಟು ಪ್ರಾತಿನಿಧ್ಯ ಅವರವರ ಮೂಲ ದೇಶಗಳಲ್ಲಿಯೂ ಇರಲಿಕ್ಕಿಲ್ಲ... ಅಲ್ಪಸಂಖ್ಯಾತರಿಗೆ ಪ್ರತ್ಯೇಕ ರಕ್ಷಣೆ ಸ್ಥಾನ ಮಾನಗಳು ಎಲ್ಲ ಸ್ತರಗಳಲ್ಲೂ ಕಂಡು ಬರುತ್ತವೆ. ಹಾಗೆ ಪೋಷಿಸಿಕೊಂಡು ಬರುವುದೇ ಕಾಂಗ್ರೇಸ್ ಆದಿಯಾಗಿ ಕೆಲ ಪ್ರಮುಖ ಪಕ್ಷಗಳ ಧೋರಣೆಯಾಗಿದೆ. ಹಾಗೆಂದು ಬಿಜೆಪಿ ಏನೂ ಮುಸ್ಲಿಂ ಯಾ ಕ್ರಶ್ಚಿಯನ್ ನ ವಿರೋಧಿಯೇನಲ್ಲವೆಂಬುದೂ ವಾಜಪೇಯಿ ಪ್ರಾಧಾನಿಯಾದಾಗ ಋಜುವಾತಾಗಿದೆಯಲ್ಲವೇ....

ಬಿಜೆಪಿಯಲ್ಲೂ ಮುಸ್ಲಿ ಕ್ರಿಶ್ಚಿಯನ್ ರಾಜಕೀಯ ಧುರೀಣರಿದ್ದಾರೆ; ಅಲ್ಲವೇ? ಇನ್ನು ಸಾಹಿತ್ಯ ಕಲೆ ವಿಚಾರಗಳಿಗೆ ಬಂದರೆ ಅಲ್ಪ ಸಂಖ್ಯಾತರಲ್ಲಿ ಯಾರೇ ಆಗಲಿ ನಮ್ಮ ದೇಶದ  ಹಿಂದಿ, ಮರಾಠಿ, ಕನ್ನಡ, ತೆಲುಗು ಹೀಗೊಂದು ಪ್ರಾಂತೀಯ ಭಾಷೆಯೊಂದರಲ್ಲಿ ಸಾಹಿತ್ಯ ರಚನೆ ಮಾಡಿ ಅಲ್ಪ ಸ್ವಲ್ಲ ಸಾಧನೆ ಮಾಡಿದರೆ ಸಾಕು, ನಮ್ಮ ಪತ್ರಿಕೆಗಳು ಮೀಡಿಯಾಗಳು ಅವರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿಬಿಡುತ್ತವೆ; ಅವರಿಗೆ ಪ್ರಶಸ್ತಿ ಪುರಸ್ತಾರಗಳನ್ನೂ ಅತಿ ಶೀಘ್ರದಲ್ಲೇ ಬರುವಂತೆ ಪ್ರಚಾರ ಮಾಡಿಬಿಡುತ್ತವೆ. ಜೊತೆಗೆ ಅಲ್ಪಸಂಖ್ಯಾತರಿಗೆಂದೇ ಮೀಸಲಾದ ಅಂತಹ ಸ್ಥಾನ ಮಾನಗಳೂ ಅವರಿಗೆ ಸಲ್ಲುವಂತಾಗವುದು ಎಲ್ಲರಿಗೂ ತಿಳಿದ ವಿಚಾರವೇ.  ಆನಂತರ ಆ ಅಲ್ಪಸಂಖ್ಯಾತ  ಆ ಪ್ರೋತ್ಸಾಹದಿಂದ ಇನ್ನಷ್ಟು ಉಮೇದಿನಿಂದ ನಮ್ಮ ಪ್ರಾಂತೀಯಭಾಷೆಯಲ್ಲಿ ನಿಜಕ್ಕೂ ಮಹತ್ತರ ಸಾಧನೆಗೈದರೆ ಆಶ್ಚರ್ಯವೇನಿಲ್ಲ.  ಕನ್ನಡವನ್ನೇ ತೆಗೆದುಕೊಳ್ಳಿ. ಒಬ್ಬ ಮುಸ್ಲಿಂ ಯುವಕ ಕನ್ನಡ ಪತ್ರಕರ್ತನೋ ಲೇಖಕನೋ ಆಗಿ  ಒಂದಿಷ್ಟು ಸಾಧನೆ ಮಾಡುತ್ತಿದ್ದಂತೇಯೇ ಅವನನ್ನು ನಮ್ಮ ಸಾಹಿತ್ಯ ಲೋಕ ಥಟ್ಟನೆ ಗುರುತಿಸಿ ಪ್ರೋತ್ಸಾಹಿಸುತ್ತದೆ.  ಹಾಗೆ ಅಲ್ಪ ಸಂಖ್ಯಾತ ಬಣದಿಂದ ಬಂದ ಲೇಖಕನೊಬ್ಬನನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ  ಆ ಪತ್ರಿಕೆಗೋ ಆ ಸಂಸ್ಥೆಗೂ  ಹೆಮ್ಮೆಯ ವಿಷಯವೇ ಆಗಿಬಿಡುತ್ತದೆ. ಅದೇ ಒಬ್ಬ ಹಿಂದೂ ಯುವ ಲೇಖಕನನ್ನು ಅಷ್ಟೇ ಬೇಗನೆ ಗುರುತಿಸುವುದು ಅಪರೂಪವೇ...

ಹೀಗೆ ಹೇಳುತ್ತಿರುವ ನಾನೂ ಕೋಮುವಾದಿ ಎಂದು ನೀವು ಖಂಡಿತ ಭಾವಿಸಬಾರದು. ನನಗೂ ಮುಸ್ಲಿಂ ಭಾಂಧವರಲ್ಲಿ ಹಾಗೆ ನಿಜಕ್ಕೂ ಸಾಧನೆ ಮಾಡಿದವರ ಬಗ್ಗೆ ಗೌರವವಿದೆ. ನಮ್ಮ ಮೆಚ್ಚಿನ ಕವಿ ನಿಸಾರ್ ಅಹಮದ್ ಅವರನ್ನು ಯಾರೇ ಆಗಲಿ ಗೌರವಿಸದಿರಲಾದೀತೇ...  ಇಲ್ಲಿ ನನ್ನ ಪ್ರಶ್ನೆ ಏನೆಂದರೆ, ಒಬ್ಬ ಯುವ ಮುಸ್ಲಿಂ ಲೇಖಕನನ್ನೋ ಕಲಾವಿದನನ್ನೋ ಶೀಘ್ರವೇ ಗುರುತಿಸಿ ಪ್ರೋತ್ಸಾಹಿಸುವಷ್ಟು ಒಬ್ಬ ಹಿಂದೂ ಲೇಖಕನನ್ನ ಕಲಾವಿದನನ್ನ ಯಾಕೆ ಗುರುತಿಸುವುದಿಲ್ಲ ಎಂಬುದಷ್ಟೇ.... ಇದೊಂದು ರೀತಿ ವಿಕಲಚೇತನ ಮಾಡಿದ ಸಾಧನೆ ದೊಡ್ಡದು ಎಂಬಂತೆಯೋ ಅಥವಾ ನಮ್ಮ ಭಾಷೆ ಆತನ ಮಾತೃಭಾಷೆಯಲ್ಲವೆಂಬ ಮಾನದಂಡವೋ....ಇರಲಿ ಆತ ಮಾಡಿದ ಸಾಧನೆ ದೊಡ್ಡದೇ ಆಗಿರಬಹುದು  ಆತನನ್ನು ಶೀಘ್ರವೇ ಗುರುತಿಸಿ ಪ್ರೋತ್ಸಾಹ ನೀಡಿದಂತೆಯೇ  ಅದೇ ಒಬ್ಬ ಹಿಂದೂ ಮಾಡಿರಬಹುದಾದ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಮಹತ್ತದ ಸಾಧನೆಯನ್ನೇಕೆ ನಮ್ಮ ಸಾಹಿತ್ಯ ಕಲಾ ಲೋಕದ ದಿಗ್ಗಜರಿಗೆ ಅಷ್ಟೇ ಶೀಘ್ರಗತಿಯಲ್ಲಿ  ಗುರುತಿಸಿ ಪ್ರೋತ್ಸಾಹಿಸಲು ಕಾಣಸಿಗುವುದಿಲ್ಲ...

Sunday, January 16, 2011

ತೀರ್ಥ ರಾಮೇಶ್ವರ ದೇವಸ್ಥಾನ

ತೀರ್ಥ ರಾಮೇಶ್ವರ ದೇವಸ್ಥಾನ,  ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ತಾಲ್ಲೂಕು ಬೆಳಗುತ್ತಿಯಲ್ಲಿರುವ ತೀರ್ಥರಾಮೇಶ್ವರ ದೇವಸ್ಥಾನ. ಇಲ್ಲಿರುವ ಪುಣ್ಯ ತೀರ್ಥ ಸದಾ ತುಂಬಿರುತ್ತದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಈ ದೇವಸ್ಥಾನವು ಬೆಳಗುತ್ತಿಗೆ ಎರಡು ಕಿ.ಮೀ.ದೂರದ ಬೆಟ್ಟದ ಮೇಲಿದೆ. ಬಯಲು ಸೀಮೆಯ ಸುಂದರ ಪ್ರೇಕ್ಷಣೀಯ ಸ್ಥಳ.  
ತೀರ್ಥರಾಮೇಶ್ವರ ದೇವಾಲಯ ಮುನ್ನೋಟ
ನಮ್ಮ ತಂದೆ ಮತ್ತು ನಮ್ಮ ಪೂರ್ವಜರು ವಾಸಿಸುತ್ತಿದ್ದ ಸ್ಥಳವಿದು. ನನ್ನ ತಂದೆ-ತಾಯಿಯವರು ಅವರಿಗೆ ಒಂದು ಹೆಣ್ಣು ಮಗುವಿನ ನಂತರ, ಮಕ್ಕಳು ಹುಟ್ಟಿ ಸಾಯುತ್ತಿದ್ದ ಸಂದರ್ಭದಲ್ಲಿ ಈ ತೀರ್ಥರಾಮೇಶ್ವರನಿಗೆ ಹರಕೆ ಹೊತ್ತುದರ ಪುಣ್ಯಫಲದಿಂದಲೇ ನಾನು ಹುಟ್ಟಿದ್ದು. ಹರಕೆ ಹನ್ನೆರಡು ವರ್ಷವೆನ್ನುತ್ತಾರೆ. ಅಂತೇ ನಾನು ಹುಟ್ಟಿದ ಹನ್ನೆರಡು ವರ್ಷಗಳನಂತರ ನನ್ನನ್ನು ಕರೆದೊಕೊಂಡು ಹೋಗಿ ಈ ದೇಗುಲಕ್ಕೆ ಗಂಟೆ ಕಟ್ಟಿದ ಹರಕೆ ತೀರಿಸಿದ್ದು ನನಗೆ ಇನ್ನೂ ನೆನಪಿನಲ್ಲಿದೆ.  ನಾವು ವಿಷ್ಣು ಭಕ್ತರು, ಶಿವನನ್ನೂ ರಾಮನನ್ನೂ ಒಂದಾಗಿಸಿ ನನ್ನ ಹೆಸರು "ಶಿವರಾಮ" ಎಂದಿಟ್ಟರಂತೆ. ನಾನು ಇತ್ತೀಚೆಗೆ ನನ್ನ ಕುಟುಂಬದೊಂದಿಗೆ ಭೇಟಿಕೊಟ್ಟಾಗ ನಾನು ತೆಗೆದ ಫೋಟೋಗಳಿವು-
ದಕ್ಷಿಣ ಕಾಶಿ ಎಂದೇ ಹೆಸರಾದ ಈ ತೀರ್ಥರಾಮೇಶ್ವರನ ದೇವಾಲಯದ ಮಂಭಾಗದಲ್ಲಿ ಇರುವ ಈ ಪುಣ್ಯತೀರ್ಥದ ವೈಶಿಷ್ಟ್ಯವೆಂದರೆ, ಈ ತೀರ್ಪುದ ಕೊಳ ತುಂಬುತ್ತಿದ್ದಂತೆಯೇ  ಬೆಟ್ಟದಿಂದ ಜಳುಜುಳು ಹರಿದು ಬರುತ್ತಿರುವ ನೀರು ನಿಲ್ಲತ್ತದೆ.
ಇಲ್ಲಿ ಯಾತ್ರಾರ್ಥಿಗಳು ತಲೆಯಮಲೇ ನೀರು ಹಾಕಿಸಿಕೊಂಡು ದೇಗುಲದ ಪಕ್ಕದಲ್ಲಿ ಹೋಗಿ ಸ್ನಾನ ಮಾಡುತ್ತಾರೆ. ನೀವೂ ಒಮ್ಮೆ ಹೋಗಿ ಬನ್ನಿ, ಇಲ್ಲಿ ಸ್ನಾನ ಮಾಡಿದರೆ ಗಂಗಾನದಿಯಲ್ಲಿ ಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿಯಿದೆ.
ತೀರ್ಥರಾಮೇಶ್ವರ ಪುಣ್ಯತೀರ್ಥ
ತೀರ್ಥರಾಮೇಶ್ವರ ಸ್ವಾಮಿ.
ಈ  ಸ್ಥಳ ಮಹಾತ್ಮೆಯೂ ಅಷ್ಟೇ ಸುಪ್ರಸಿದ್ಧವಾಗಿದೆ. ಶಿವಮೊಗ್ಗಾದಿಂದ 35 ಕಿ.ಮೀ.ದೂರದಲ್ಲಿದೆ. ಬಸ್ ಸೌಕರ್ಯವಿದೆ. ಅಥವಾ ನಿಮ್ಮ ವಾಹನದಲ್ಲಿ ಹೋಗಿ ಬನ್ನಿ

ತೀರ್ಥರಾಮೇಶ್ವರ ಪುಣ್ಯ ತೀರ್ಥ

ಈಶ್ವರ ಮಂಟಪ

Tuesday, November 30, 2010

ಕಡಲೆಕಾಯಿ ಪರಿಷೆ.ಬೆಂಗಳೂರು

ಬೆಂಗಳೂರು ಬಸವನಗುಡಿ ದೊಡ್ದ ಬಸವಣ್ಣ ದೇವಸ್ಥಾನದ ಹೆಸರು ಕೇಳದವರೇ ಇಲ್ಲ. ಸಾಮಾನ್ಯವಾಗಿ ಬಸವನಗುಡಿ ಬುಲ್ ಟೆಂಪಲ್ ಮತ್ತು ಬುಲ್ ಟೆಂಪಲ್, ಬೆಂಗಳೂರಿನ ಸುಪ್ರಸಿದ್ಧವಾದ ಸ್ಥಳ. ಇಲ್ಲಿ ವರ್ಷಕ್ಕೊಮ್ಮೆ ನಡೆಯವ ದೊಡ್ಡ ಬಸವಣ್ಣನ ದೇವಸ್ಥಾನದ ಜಾತ್ರೆಯೇ "ಪಾರಂಪರಿಕ ಕಡಲೆಕಾಯಿ ಪರಿಷೆ".


ಇದು ವರ್ಷಕ್ಕೊಮ್ಮೆ ಮೂರುದಿನಗಳೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಜಾತ್ರೆಯಾಗಿದೆ.  ಈ ಜಾತ್ರೆಯ ಬಗ್ಗೆ ದೂರದಿಂದ ಬರುವವರಿಗೆ ಅಷ್ಟಾಗಿ ತಿಳಿದಿಲ್ಲ.

ಕಡಲೆಕಾಯಿ ಪರಿಷೆಗೆ 600 ವರ್ಷಗಳ ಇತಿಹಾಸವಿದೆ. ಕೆಂಪೇಗೌಡರ ಕಾಲದಿಂದಲೂ ನಡೆಯುತ್ತಿದೆ. ಬೆಂಗಳೂರಿನ ಬಡವಾಣೆಗಳೆಲ್ಲವೂ ಒಂದು ಕಾಲಕ್ಕೆ ಹಳ್ಳಿಗಳೇ. ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ ಹಿಂದೆ ಸುಂಕೇನಹಳ್ಳಿಯಾಗಿತ್ತು. ಸುಂಕೇನಹಳ್ಳಿ, ಗವಿಪುರ, ಹೊಸಕೆರೆಹಳ್ಳಿ, ನಾಗಸಂದ್ರ ಮತ್ತು ಮಾವಳ್ಳಿಯ ರೈತರು ಹೊಲದಲ್ಲಿ ಬೆಳೆದ ಕಡಲೆಕಾಯಿಯನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದರು.

ಹಳೇ ಐತಿಹ್ಯ ಹೇಳುತ್ತದೆ-ರೈತರು ಕಡಲೆಕಾಯಿ, ಕಬ್ಬು ಬೆಳೆಯುತ್ತಿದ್ದರು. ಬಸವಣ್ಣ ರಾತ್ರಿ ಸಮಯದಲ್ಲಿ ನುಗ್ಗಿ ಬೆಳೆಗಳನ್ನು ತಿಂದು ಹಾಕುತ್ತಿದ್ದ. ಬೇಸತ್ತ ರೈತರು ಒಟ್ಟಾಗಿ ಬಸವಣ್ಣನನ್ನು ಓಡಿಸಿಕೊಂಡು ಬಂದರು.
ಹೆದರಿದ ಬಸವಣ್ಣ ಗುಹೆಯೊಳಗೆ ಸೇರಿ ಕುಳಿತುಕೊಂಡ.

ಆಗ ರೈತರು ನೀನು ಇಲ್ಲೇ ಕುಳಿತಿರು ನಿನಗೆ ಆಹಾರ ನಾವೇ ತಂದು ಹಾಕುತ್ತೇವೆ ಎಂದು ಬಸವಣ್ಣನ ಜೊತೆ ಒಪ್ಪಂದ ಮಾಡಿಕೊಂಡರು. ಆಗ ಬಸವಣ್ಣ ಇಲ್ಲೇ ಐಕ್ಯನಾದ.






ಬಸವಣ್ಣನ ದೇವಸ್ಥಾನಕ್ಕೆ ಹೋಗುವ ದಾರಿ
ರೈತರು ತಾವು ಜಮೀನಿನಲ್ಲಿ ಬೆಳೆದ ಕಡಲೆಕಾಯಿಯನ್ನು ಮೊದಲು ಈ ದೇವ ಬಸವಣ್ಣನಿಗೊಪ್ಪಿಸಿ, ಅನಂತರ ತಮ್ಮ ಮಾರಾಟ ಆರಂಭಿಸುತ್ತಿದ್ದರು. ಇಂದಿಗೂ ಇದೇ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ.

ಇತ್ತೀಚೆಗೆ (30-11-2010) ನಡೆದ ಕಳ್ಳೇಕಾಯಿ ಪರಿಷೆಯ ಕೆಲವು ಚಿತ್ರಗಳಿವು.


ದೇವಸ್ಥಾನದ ಪ್ರವೇಶ ದ್ವಾರ.
ವರ್ಷದಿಂದ ವರ್ಷಕ್ಕೆ ಜನಮರುಳೋ ಜಾತ್ರೆ ಮರುಳೋ ಎಂಬಂತೆ ಇಲ್ಲಿಗೆ ಬರುವ ಜನ ಬಂದೇ ಬರುತ್ತಾರೆ. ಸಿಟಿ ಬಸ್ಸುಗಳಲ್ಲಿ ಜನವೋಜನ!

ದೇವಸ್ಥಾನದಲ್ಲೂ ಜನರ ನೂಕುನುಗ್ಗಲು. ಆಟೋಗಳಿಗೆ ಎಲ್ಲಿಲ್ಲದ ಸುಗ್ಗಿ! ವರುಷದಿಂದ ವರುಷಕ್ಕೆ ಪರಿಷೆಗೆ ಬರುವ ಕಡಲೆಕಾಯಿ ಮಾತ್ರ ಕಡಿಮೆಯಾಗುತ್ತಿದೆ.

ಕಡೆಯಕಾರ್ತೀಕ ಸೋಮವಾರ ಬಸವನಗುಡಿಯ ಈ ಐತಿಹಾಸಿಕ ಜಾತ್ರೆಯಂತೂ ವೈಭವದಿಂದ ನಡೆಯುತ್ತದೆ.

ಇಲ್ಲಿಗೆ ವ್ಯಾಪಾರಕ್ಕೆ ಬರುವ ಕಡಲೆಕಾಯಿಗಿಂತಲೂ ರಸ್ತೆ ಬದಿಯ ಅಂಗಡಿಗಳಲ್ಲಿ ಬೆಂಡು ಬತಾಸುಗಳಿಗಿಂತಲೂ ಹೊಸ ಹೊಸ ಬಗೆ ಬಗೆಯ ತಿಂಡಿ ತಿನಿಸುಗಳಿಗೇ ಜನಾಕರ್ಷಣೆ ಹೆಚ್ಚುತ್ತಿದೆ.

ಜೊತೆಗೆ ಬೊಂಬೆಗಳು, ಬಡವರಿಗೆಟಕುವಂತಹ ಕರಕುಶಲ ವಸ್ತುಗಳಿಗೆ ಇಲ್ಲಿ ಭರ್ಜರಿ ವ್ಯಾಪಾರ.

ಪ್ರತಿವರ್ಷ ಸಾವಿರಾರು ಚೀಲ ಮಾರಾಟವಾಗುತ್ತಿದ್ದ ಕಡಲೆಕಾಯಿ ವ್ಯಾಪಾರ ಇಂದು ಇಳಿಮುಖವಾಗುತ್ತಿದೆ. ಕಡಲೆ ಕಾಯಿ ಬೆಲೆಯೂ ದುಬಾರಿಯಾಗಿದೆ.

ಆದರೇನು! ಬರುವ ಜನ ಬಂದೇ ಬರುತ್ತಾರೆ. ವರ್ಷಕ್ಕೊಮ್ಮೆ ಈ ಹಬ್ಬದಲ್ಲಿ ಸಂತೋಷ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.


Friday, November 19, 2010

ಚೆನ್ನಗಿರಿ ತಾತ ಪಾಪಯ್ಯನವರ ಚತ್ರದಲ್ಲಿ....

ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಾಲಯ,ಭದ್ರಾವತಿ
ನಾನು ಪ್ರೈಮರಿ ಶಾಲೆಯಲ್ಲಿದ್ದಾಗ ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಾಲಯ ಮತ್ತು ಶ್ರೀ ರಾಘವೇಂದ್ರಸ್ವಾಮಿಗಳ ಮಠ ಇವುಗಳ ಪರಿಸರದಲ್ಲೇ ಗೋಲಿ ಆಡಿಕೊಂಡು ಬೆಳೆದ ಆ ದಿನಗಳನ್ನು ಮರೆಯಲಾರೆ. ಇದು ಬಹುತೇಕ ಬ್ರಾಹ್ಮಣ ವರ್ಗದವರಿದ್ದ ಸ್ಥಳ. ಈ ದೇವಾಲಯ ಮತ್ತು ಮಠದ ಎಡ ಮಗ್ಗುಲಿನ ಎದುರಿಗಿನ ಮುಖ್ಯವಾದ ರಸ್ತೆಯು ತರೀಕೆರೆ ರಸ್ತೆಯ ಕಡೆಗೆ ಹೋಗುತ್ತದೆ.
ಅಂದಿನ ಕಾಲಕ್ಕೆ ಅಂದರೆ,1960ರ ದಶಕದಲ್ಲಿ ಇಲ್ಲಿದ್ದ ಚೆನ್ನಗಿರಿ ಶ್ರೀ ಪಾಪಯ್ಯನವರ ದೊಡ್ಡ ಚತ್ರದ ವಠಾರದಲ್ಲಿದ್ದೆವು. ಅದೇ ಚತ್ರದಲ್ಲಿ ಅದೇ ತರೀಕೆರೆ ರಸ್ತೆಯ ಎದುರಿಗೇ ಇತ್ತು ನಮ್ಮ ಮನೆ; ನನ್ನ ಬಾಲ್ಯಾರಂಭ ಕಾಲದಲ್ಲಿದ್ದ ಮನೆ, ನಮ್ಮ ತಾತನ ಮನೆ.
ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಸ್ಥಾನದ ಬಲಕ್ಕಿರುವ ಭದ್ರಾನದಿಯ ದಂಡೆಯಿಂದ..
ಯಾಕೆಂದರೆ, ಪಾಪಯ್ಯನವರು ಬೇರೆ ಯಾರೂ ಅಲ್ಲ; ನನ್ನ ತಾಯಿಯ ತಂದೆಯೆ.  ಅಂದಿನ ಕಾಲಕ್ಕೆ ಚೆನ್ನಗಿರಿಯಲ್ಲಿ ದೊಡ್ಡ ಶ್ರೀಮಂತರಾದ ಆ ತಾತನವರನ್ನು ನಾನು ನೋಡಲೇ ಇಲ್ಲವೆನ್ನಿ. ಅಷ್ಟೇ ಅಲ್ಲ, ತಾತ ಎಂದೋ ತೀರಿಕೊಂಡಿದ್ದರಲ್ಲ;  ಆ ಚತ್ರದ ಒಡೆತನವೆಲ್ಲ ನಮ್ಮ ಸೋದರ ಮಾವಂದಿರು ಮತ್ತು ನನ್ನ ತಾತ ಪಾಪಯ್ಯನವರ ರೈಸ್ ಮಿಲ್ ನಲ್ಲಿ ಲೆಕ್ಕ ಬರೆಯುತ್ತಲಿದ್ದ ಹಾಗೂ ತಾವೂ ಅವರ ವ್ಯವಹಾರದ ಪಾಲುದಾರರೆಂದು ಹೇಳಿಕೊಳ್ಳುತ್ತಿದ್ದ ಕೃಷ್ಣಾಜಿ ರಾಯರ ಮಕ್ಕಳ ಕೈಯಲ್ಲೇ ಇತ್ತು. ಬಡ ಮಾಸ್ತರಾದ ನಮ್ಮ ತಂದೆಯವರು ಅಲ್ಲೇ ನನ್ನ ಸೋದರ ಮಾವಂದಿರ ಪಾಲಿಗೆ ಬಂದ ಕೆಲವಾರು ಮನೆಗಳಲ್ಲೊಂದಾದ ಒಂದು ಅಂಕಣದ ಮನೆಯಲ್ಲಿ ವಾಸವಾಗಿದ್ದರಷ್ಟೇ. ಆನಂತರ, ನಮ್ಮ ಸೋದರ ಮಾವಂದಿರು ಅವರ ಕುಟುಂಬದ ಕಾರಣಕ್ಕಾಗಿ  ತಮ್ಮ ಭಾಗದ ಚತ್ರವನ್ನೇ ಮಾರಿಬಿಟ್ಟರು.ಬಳಿಕ ಉಳಿದ ಭಾಗವನ್ನೂ ಕೃಷ್ಣಾಜಿರಾಯರ ಮಕ್ಕಳೂ ಮಾರಿಕೊಂಡರು.
ಈಗ ಆ ಚತ್ರದ ಮನೆಗಳೆಲ್ಲಿ..? ಆ ಜಾಗದ ಹಳೆಯ ಕುರುಹೂ ಕೂಡ ಸಿಗುವುದು ಕಷ್ಟವೇ.... ಆ ಚತ್ರವೆಲ್ಲವೂ ಡಿಮಾಲಿಷ್ ಆಗಿದೆ. ಜಾಗವೂ ಸಹ ಚಿಂದಿ ಚಿತ್ರಾನ್ನವಾಗಿ ಯಾರ್ಯಾರಿಗೋ ಹಂಚಿ ಹೋಗಿ ಬಿಟ್ಟಿದೆ!. ಅಲ್ಲಲ್ಲಿ ಮನೆಗಳೂ ತಲೆ ಎತ್ತಿವೆ.
ಇದನ್ನೆಲ್ಲ ಯಾಕೆ ಹೇಳಬೇಕೆನಿಸಿತೆಂದರೆ, ನಮ್ಮದೇ ಎನ್ನಬಹುದಾದ ನಮ್ಮ ತಾತನ ಮನೆಯಲ್ಲಿದ್ದವರು ನಾವು, ಅದರ ಕುರುಹೋ ಒಂಚೂರು ಉಳಿದಿಲ್ಲ! ಆ ಬಳಿಕ ಮೇಲೆ ಹೇಳಿದಂತೆ ನಾವು ವಾಸವಾಗಿದ್ದ ಉಪ್ಪಾರ ಬೀದಿಯಲ್ಲಿದ್ದ ಮತ್ತು ಹಳದಮ್ಮನ ಕೇರಿಯಲ್ಲಿದ್ದ ಎರಡೂ ಮನೆಗಳು ಇಂದಿಗೂ ಹಾಗೇ ಇರುವುದು ಈ ನಮ್ಮ ಬದುಕಿನ ವಿಪರ್ಯಾಸವಲ್ಲವೇ ಅನ್ನಿಸಿಬಿಟ್ಟಿತ್ತು.