Monday, June 25, 2007

ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ

ಲೈಂಗಿಕ ಶಿಕ್ಷಣ ನೀಡಬೇಕೆ ಬೇಡವೇ ಎಂಬುದರ ಬಗ್ಗೆ ರಾಜ್ಯದಲ್ಲಿ ಚರ್ಚೆ ನಡೆಯುತ್ತಿದೆ. ಇದು ಕೇವಲ ಚರ್ಚೆಯಲ್ಲೆ ಮುಕ್ತಾಯವಾಗಬಾರದು. ಎಫ್ ಪಿಎಐ ಲೈಂಗಿಕ ಶಿಕ್ಷಣ ನೀಡಲು ಮುಂದೆ ಬಂದಿರುವಾಗ ತತ್ ಕ್ಷಣ ಜಾರಿಗೊಳಿಸಲು ಪೂರಕ ವಾತಾವರಣವಿರುವಾಗ ಎಲ್ಲ ತಜ್ಞರು ಮತ್ತು ಸಮಾಜಸೇವಾಸಕ್ತರೊಂದಿಗೆ ಸರ್ಕಾರ ಕೂಡಲೇ ಕಾರ್ಯ ಪ್ರವೃತ್ತವಾಗುವುದು ಸೂಕ್ತವೆನಿಸುತ್ತದೆ. ಅಲ್ಲದೇ,ಇಂದಿನ ಪರಿಸರದಲ್ಲಿ ವಿದ್ಯಮಾನಗಳನ್ನು ನೋಡುತ್ತಿದ್ದರೆ ಲೈಂಗಿಕೆ ಶಿಕ್ಷಣವೇ ಬೇಡ ಎಂಬ ವಾದ ಖಂಡಿತ ಸರಿಯಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾದ ಮೊದಲ ಹೆಜ್ಜೆ ಇಡಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ.

ದೇಶದಲ್ಲಿ ಶೇ.50 ರಷ್ಟು ಮಂದಿ ಅಪ್ರಾಪ್ತ ವಯಸ್ಸಿನಲ್ಲೆ ವಿವಾಹಿತರಾಗುತ್ತಿದ್ದಾರೆ. ಎಚ್.ಐ.ವಿ.ಸೊಂಕು ಹರಡಲು ಇದೂ ಒಂದು ಕಾರಣ ಎಂದು ತಜ್ಜರೊಬ್ಬರು ಹೇಳಿದ್ದಾರೆ. ಹಾಗೆ ವಿವಾಹಿತರಾದ ಮಾತ್ರಕ್ಕೆ ಎಚ್.ಐ.ವಿ ಸೊಂಕು ಬರುತ್ತದೆನ್ನುವುದು ಒಂದು ಚಿಕ್ಕ ಕಾರಣವಾದರೆ, ಎಳೆ ಪ್ರಾಯದಲ್ಲೇ ಗಂಡು-ಹೆಣ್ಣು ಪರಸ್ಪರ ಆಕರ್ಷಣೆಯಲ್ಲಿ ಕದ್ದು ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿರುವ ಸಂದರ್ಭಗಳು ಹಚ್ಚುತ್ತಿವೆ. 'ಲವ್' ಎಂಬುದು ಪರಿಶುದ್ಧ ಪ್ರೀತಿ ಎಂಬ ಕಾಲವೊಂದಿತ್ತು. ಅದೀಗ ಸ್ವಚ್ಛಂಧ ಪ್ರವೃತ್ತಿಗೆ ಎಡೆ ಮಾಡುತ್ತಿರುವುದೂ ಅಪ್ರಾಪ್ತವಯಸ್ಸಿನಲ್ಲಿ ಸುರಕ್ಷತೆ ಬಗ್ಗೆ ತಿಳುವಳಿಕೆ ಇದ್ದೋ ಇಲ್ಲದೇಯೋ ಲೈಂಗಿಕ ಸಂಬಂಧ ಹೊಂದುವುದು, ಮದುವೆಯೇ ಬೇಡ ಹೀಗೇ ಇದ್ದು ಬಿಡೋಣ ಎನ್ನುವಷ್ಟರ ಮಟ್ಟಿಗೆ ಬೆಳೆಯುತ್ತಿರುವುದೂ ಆರೋಗ್ಯಕರ ಸಮಾಜದ ಲಕ್ಷಣವಲ್ಲ.

ಪಾಶ್ಚಿಮಾತ್ಯ ದೇಶಗಳಲ್ಲಿ ಈಗಾಗಲೇ ಲೈಂಗಿಕ ಶಿಕ್ಷಣ ಏಕೆ ಜಾರಿಗೊಳಿಸಲಾಗಿದೆ ಎಂಬ ಬಗ್ಗೆ ಒಂದು ಇಣುಕು ನೋಟ ಹರಿಸಿದರೆ-ಅಮೆರಿಕದಲ್ಲಿ ಪ್ರತಿ ವರ್ಷ ಹತ್ತು ಲಕ್ಷಕ್ಕೂ ಮೀರಿ ಅಪ್ರಾಪ್ತ ವಯಸ್ಸಿನ ಹುಡುಗಿಯರು ಗರ್ಭಿಣಿಯರಾಗುತ್ತಿದ್ದಾರೆ. ಇವರ ಪೈಕಿ ಶೇ.80 ರಷ್ಟು ಅವಿವಾಹಿತರು. ಅಪ್ರಾಪ್ತ ವಯಸ್ಸಿನಲ್ಲೇ ಬಸಿರಾದರೆ ಗರ್ಭಪಾತವೇ ದಾರಿ. ಇಂಥವರ ವಯಸ್ಸು 15 ರಿಂದ 19 ವರ್ಷವೆಂದರೆ ಗಂಭೀರವಾಗಿ ಯೋಚಿಸ ಬೇಕಾದ ಸಂಗತಿಗಳೇ. ಹೀಗೆ ಅಪ್ರಾಪ್ತ ವಯಸ್ಸಿನ ಶಾಲಾ ಮಕ್ಕಳು ಬಸಿರಾಗುವ ಸಮಸ್ಯೆಯ ಪರಿಹಾರಕ್ಕೆ ಸ್ಯಾನ್ ಮಾರ್ಕೋಸ್ ಪ್ರಾಢಶಾಲೆಯೊಂದಿಗೆ ಇತರ ಶಾಲೆಗಳೂ ಸೇರಿ, ಚಿಕಾಗೋ, ಡಲ್ಲಾಸ್, ನ್ಯೂಯಾರ್ಕ್ ನಗರ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗಳಲ್ಲಿನ ಶಾಲೆಗಳು ಕುಟುಂಬ ಯೋಜನಾ ಕ್ಲಿನಿಕ್ ಗಳನ್ನೂ ತೆರೆದಿವೆ. ಕಾರಣ ಶಾಲೆಗಳಲ್ಲಿ ಪ್ರತಿ ಮೂವರು ವಿದ್ಯಾರ್ಥಿನಿಯರಲ್ಲಿ ಒಬ್ಬಳು ಬಸಿರಾಗುತ್ತಿದ್ದುದೇ. ಅದಕ್ಕಾಗಿಯೆ ಈ ಹಿಂದಿನ ಉದ್ದೇಶವೆಂದರೆ ಶಾಲಾಮಕ್ಕಳು ಬಸಿರಾಗುವುದನ್ನು ತಡೆಗಟ್ಟುವುದೇ. ಆದರೆ, ಯಾವೊಂದು ಸದುದ್ದೇಶದಿಂದ ಗರ್ಭನಿರೋಧಕ ಸಾಧನಗಳು ಬಳಕೆಗೆ ಬಂದವೋ ಅವು ಹೀಗೆ ಸ್ವೇಚ್ಛಾಚಾರ ಸಂಬಂಧಗಳಿಗೆ ಪೂರಕವಾಗಿ ಉಪಯುಕ್ತವೆನಿಸಿರುವುದೂ ಶೋಚನೀಯವೇ. ಮೊಬೈಲ್ ಬಳಕೆ ಸಹ ಇಂಥ ಲೈಂಗಿಕ ಸಂಬಂಧಗಳ ಬೆಳವಣಿಗೆಗೆ ಕೊಂಡಿಯಾಗಿ ಅಪ್ರಾಪ್ತ ಹುಡುಗಿ ಹುಡುಗರಲ್ಲಿ ಬಳಕೆಯಾಗುತ್ತಿರುವುದೂ ವಿಪರ್ಯಾಸವೇ. ಹೀಗಾಗಿ ಇಂತಹ ಅಪ್ರಾಪ್ತ ವಯಸ್ಸಿನ ಹುಡುಗ ಹುಡುಗಿಯರ ಲೈಂಗಿಕ ಸಂಬಂಧಗಳ ವರಿದಿಯಾಧರಿಸಿ ಅಮೆರಿಕದಲ್ಲಿನ ಶಾಲೆಗಳ ಆಡಳಿತ ಮಂಡಳಿಗಳು ಲೈಂಗಿಕ ಶಿಕ್ಷಣದಲ್ಲಿ ಭಾವಾನಾತ್ಮಕ ಮತ್ತು ದೈಹಿಕ ಅಂಶಗಳ ಪ್ರಾಮುಖ್ಯತೆಯ ಬಗ್ಗೆ ಒಂಭತ್ತನೆಯ ತರಗತಿಯಲ್ಲೆ ಪಠ್ಯ ವಿಷಯದಲ್ಲಿ ಸೇರ್ಪಡೆಗೊಳಿಸಿತು. ಲೈಂಗಿಕ ಚಟುವಟಿಕೆ-ಕ್ರಿಯೆಗಳಲ್ಲಿ ಯಾವುದು ಬೇಕು ಯಾವುದು ಬೇಡ ಎಂಬ ಬಗ್ಗೆ ವಿದ್ಯಾರ್ಥಿಗಳೇ ನಿರ್ಧಾರ ಕೈಗೊಳ್ಳುವಂತೆ ಮಾಡುವುದೇ ಈ ಪಠ್ಯಕ್ರಮದ ಉದ್ದೇಶವಾಗಿದೆಯಂತೆ. ಯಾಕೆಂದರೆ, ಇಂದಿನ ಮಕ್ಕಳಿಗೆ ಉಪದೇಶ ಮಾಡಿದರೆ ಹಿಡಿಸಲಾರದಲ್ಲ!

ಇನ್ನೊಂದು ವಿಷಯದ ಪ್ರಸ್ತಾವನೆಯಾಗಿರುವುದೆಂದರೆ, ಲೈಂಗಿಕ ಶಿಕ್ಷಣವನ್ನು ಸಾಮೂಹಿಕವಾಗಿ ನೀಡುವುದರಿಂದ ಏನೂ ಪ್ರಯೋಜನವಿಲ್ಲ ಎಂಬುದು. ಇದು ಅಷ್ಟಾಗಿ ಒಪ್ಪುವ ಮಾತಲ್ಲ. ಯಾಕೆಂದರೆ, ಇಂದಿನ ದಿನಗಳಲ್ಲಿ ಪ್ರತಿ ಮನೆಯಲ್ಲೂ ಟಿ.ವಿ., ಸಿನಿಮಾ ದೃಶ್ಯಗಳಲ್ಲಿ ಲೈಂಗಿಕ ಪ್ರಚೋದನೆಯ ಚಟುವಟಿಕೆಗಳನ್ನು ಚಿಕ್ಕ ಪುಟ್ಟ ಮಕ್ಕಳಾದಿಯಾಗಿ ಮನೆಮಂದಿಯಲ್ಲಾ ಕುಳಿತು ನೋಡುತ್ತಾರೆ. ಹೀಗಿರುವಾಗ ಸಾಮೂಹಿಕವಾಗಿ ಲೈಂಗಿಕ ಶಿಕ್ಷಣ ಬೇಡವೆಂದರೆ ಹೇಗೆ...? ಸಮಾಜಸ್ವಾಸ್ಥ್ಯಕ್ಕಾಗಿ ಮತ್ತು ಆರೋಗ್ಯಕರ ಕುಟುಂಬ ಸೌಖ್ಯಕ್ಕಾಗಿಯೆ ಹುಡುಗ ಹುಡುಗಿಯರೊಟ್ಟಿಗೆ ಕುಳಿತು ಶಿಕ್ಷಕರು ಮುಕ್ತವಾಗಿಯೆ ಚರ್ಚಿಸುವಂತ ಸಾಮಾನ್ಯವಿಷಯಗಳಿರುತ್ತವೆಯಲ್ಲ! ಆನಂತರ, ವೈಯಕ್ತಿಕ ವೆನಿಸುವ ಗಂಭೀರ ಸಮಸ್ಯೆಗಳ ಬಗ್ಗೆ ಪ್ರತ್ಯೇಕವಾಗಿ ತಜ್ಞರಲ್ಲಿ ಸಮಾಲೋಚನೆ ನಡೆಸುವುದೂ ಇರುತ್ತದೆಯಷ್ಟೇ.

ಏನೇ ಆಗಲಿ, ಲೈಂಗಿಕ ಶಿಕ್ಷಣ ಇಂದು ಶಾಲಾ ಮಕ್ಕಳ ನೈತಿಕ ಶಿಕ್ಷಣದ ಅವಿಭಾಜ್ಯ ಅಂಶವಾಗಿದೆ ಎಂಬುದನ್ನು ಮನಗಂಡಿರುವ ಮನಶಾಸ್ತ್ರಜ್ಞರು,ಸಮಾಜಸೇವಕರು,ಶಿಕ್ಷಣ ತಜ್ಞರು ಮತ್ತು ಸರ್ಕಾರಗಳೂ ಒಂದಾಗಿ ಕಾರ್ಯಗತಗೊಳಿಸಲೆಂದೇ ಕೈಜೋಡಿಸಿರುವುದೂ, ಈ ಬಗ್ಗೆ ಕ್ಷಿಪ್ರಗತಿಯಲ್ಲಿ ಬೋಧನಾಕ್ರಮಗಳನ್ನೂ ಅನುಷ್ಠಾನಕ್ಕೆ ತರಬೇಕಾಗಿರುವುದು ಅತ್ಯಗತ್ಯವೆನಿಸಿರುವುದೂ ಸ್ವಾಗತಾರ್ಹವೇ ಸರಿ.
-ಎಚ್.ಶಿವರಾಂ

No comments: