Tuesday, November 30, 2010

ಕಡಲೆಕಾಯಿ ಪರಿಷೆ.ಬೆಂಗಳೂರು

ಬೆಂಗಳೂರು ಬಸವನಗುಡಿ ದೊಡ್ದ ಬಸವಣ್ಣ ದೇವಸ್ಥಾನದ ಹೆಸರು ಕೇಳದವರೇ ಇಲ್ಲ. ಸಾಮಾನ್ಯವಾಗಿ ಬಸವನಗುಡಿ ಬುಲ್ ಟೆಂಪಲ್ ಮತ್ತು ಬುಲ್ ಟೆಂಪಲ್, ಬೆಂಗಳೂರಿನ ಸುಪ್ರಸಿದ್ಧವಾದ ಸ್ಥಳ. ಇಲ್ಲಿ ವರ್ಷಕ್ಕೊಮ್ಮೆ ನಡೆಯವ ದೊಡ್ಡ ಬಸವಣ್ಣನ ದೇವಸ್ಥಾನದ ಜಾತ್ರೆಯೇ "ಪಾರಂಪರಿಕ ಕಡಲೆಕಾಯಿ ಪರಿಷೆ".


ಇದು ವರ್ಷಕ್ಕೊಮ್ಮೆ ಮೂರುದಿನಗಳೇ ಅತ್ಯಂತ ವಿಜೃಂಭಣೆಯಿಂದ ನಡೆಯುವ ಜಾತ್ರೆಯಾಗಿದೆ.  ಈ ಜಾತ್ರೆಯ ಬಗ್ಗೆ ದೂರದಿಂದ ಬರುವವರಿಗೆ ಅಷ್ಟಾಗಿ ತಿಳಿದಿಲ್ಲ.

ಕಡಲೆಕಾಯಿ ಪರಿಷೆಗೆ 600 ವರ್ಷಗಳ ಇತಿಹಾಸವಿದೆ. ಕೆಂಪೇಗೌಡರ ಕಾಲದಿಂದಲೂ ನಡೆಯುತ್ತಿದೆ. ಬೆಂಗಳೂರಿನ ಬಡವಾಣೆಗಳೆಲ್ಲವೂ ಒಂದು ಕಾಲಕ್ಕೆ ಹಳ್ಳಿಗಳೇ. ಬಸವನಗುಡಿಯ ದೊಡ್ಡ ಬಸವಣ್ಣ ದೇವಸ್ಥಾನ ಹಿಂದೆ ಸುಂಕೇನಹಳ್ಳಿಯಾಗಿತ್ತು. ಸುಂಕೇನಹಳ್ಳಿ, ಗವಿಪುರ, ಹೊಸಕೆರೆಹಳ್ಳಿ, ನಾಗಸಂದ್ರ ಮತ್ತು ಮಾವಳ್ಳಿಯ ರೈತರು ಹೊಲದಲ್ಲಿ ಬೆಳೆದ ಕಡಲೆಕಾಯಿಯನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಿದ್ದರು.

ಹಳೇ ಐತಿಹ್ಯ ಹೇಳುತ್ತದೆ-ರೈತರು ಕಡಲೆಕಾಯಿ, ಕಬ್ಬು ಬೆಳೆಯುತ್ತಿದ್ದರು. ಬಸವಣ್ಣ ರಾತ್ರಿ ಸಮಯದಲ್ಲಿ ನುಗ್ಗಿ ಬೆಳೆಗಳನ್ನು ತಿಂದು ಹಾಕುತ್ತಿದ್ದ. ಬೇಸತ್ತ ರೈತರು ಒಟ್ಟಾಗಿ ಬಸವಣ್ಣನನ್ನು ಓಡಿಸಿಕೊಂಡು ಬಂದರು.
ಹೆದರಿದ ಬಸವಣ್ಣ ಗುಹೆಯೊಳಗೆ ಸೇರಿ ಕುಳಿತುಕೊಂಡ.

ಆಗ ರೈತರು ನೀನು ಇಲ್ಲೇ ಕುಳಿತಿರು ನಿನಗೆ ಆಹಾರ ನಾವೇ ತಂದು ಹಾಕುತ್ತೇವೆ ಎಂದು ಬಸವಣ್ಣನ ಜೊತೆ ಒಪ್ಪಂದ ಮಾಡಿಕೊಂಡರು. ಆಗ ಬಸವಣ್ಣ ಇಲ್ಲೇ ಐಕ್ಯನಾದ.






ಬಸವಣ್ಣನ ದೇವಸ್ಥಾನಕ್ಕೆ ಹೋಗುವ ದಾರಿ
ರೈತರು ತಾವು ಜಮೀನಿನಲ್ಲಿ ಬೆಳೆದ ಕಡಲೆಕಾಯಿಯನ್ನು ಮೊದಲು ಈ ದೇವ ಬಸವಣ್ಣನಿಗೊಪ್ಪಿಸಿ, ಅನಂತರ ತಮ್ಮ ಮಾರಾಟ ಆರಂಭಿಸುತ್ತಿದ್ದರು. ಇಂದಿಗೂ ಇದೇ ಸಂಪ್ರದಾಯ ಪಾರಂಪರಿಕವಾಗಿ ನಡೆದುಕೊಂಡು ಬಂದಿದೆ.

ಇತ್ತೀಚೆಗೆ (30-11-2010) ನಡೆದ ಕಳ್ಳೇಕಾಯಿ ಪರಿಷೆಯ ಕೆಲವು ಚಿತ್ರಗಳಿವು.


ದೇವಸ್ಥಾನದ ಪ್ರವೇಶ ದ್ವಾರ.
ವರ್ಷದಿಂದ ವರ್ಷಕ್ಕೆ ಜನಮರುಳೋ ಜಾತ್ರೆ ಮರುಳೋ ಎಂಬಂತೆ ಇಲ್ಲಿಗೆ ಬರುವ ಜನ ಬಂದೇ ಬರುತ್ತಾರೆ. ಸಿಟಿ ಬಸ್ಸುಗಳಲ್ಲಿ ಜನವೋಜನ!

ದೇವಸ್ಥಾನದಲ್ಲೂ ಜನರ ನೂಕುನುಗ್ಗಲು. ಆಟೋಗಳಿಗೆ ಎಲ್ಲಿಲ್ಲದ ಸುಗ್ಗಿ! ವರುಷದಿಂದ ವರುಷಕ್ಕೆ ಪರಿಷೆಗೆ ಬರುವ ಕಡಲೆಕಾಯಿ ಮಾತ್ರ ಕಡಿಮೆಯಾಗುತ್ತಿದೆ.

ಕಡೆಯಕಾರ್ತೀಕ ಸೋಮವಾರ ಬಸವನಗುಡಿಯ ಈ ಐತಿಹಾಸಿಕ ಜಾತ್ರೆಯಂತೂ ವೈಭವದಿಂದ ನಡೆಯುತ್ತದೆ.

ಇಲ್ಲಿಗೆ ವ್ಯಾಪಾರಕ್ಕೆ ಬರುವ ಕಡಲೆಕಾಯಿಗಿಂತಲೂ ರಸ್ತೆ ಬದಿಯ ಅಂಗಡಿಗಳಲ್ಲಿ ಬೆಂಡು ಬತಾಸುಗಳಿಗಿಂತಲೂ ಹೊಸ ಹೊಸ ಬಗೆ ಬಗೆಯ ತಿಂಡಿ ತಿನಿಸುಗಳಿಗೇ ಜನಾಕರ್ಷಣೆ ಹೆಚ್ಚುತ್ತಿದೆ.

ಜೊತೆಗೆ ಬೊಂಬೆಗಳು, ಬಡವರಿಗೆಟಕುವಂತಹ ಕರಕುಶಲ ವಸ್ತುಗಳಿಗೆ ಇಲ್ಲಿ ಭರ್ಜರಿ ವ್ಯಾಪಾರ.

ಪ್ರತಿವರ್ಷ ಸಾವಿರಾರು ಚೀಲ ಮಾರಾಟವಾಗುತ್ತಿದ್ದ ಕಡಲೆಕಾಯಿ ವ್ಯಾಪಾರ ಇಂದು ಇಳಿಮುಖವಾಗುತ್ತಿದೆ. ಕಡಲೆ ಕಾಯಿ ಬೆಲೆಯೂ ದುಬಾರಿಯಾಗಿದೆ.

ಆದರೇನು! ಬರುವ ಜನ ಬಂದೇ ಬರುತ್ತಾರೆ. ವರ್ಷಕ್ಕೊಮ್ಮೆ ಈ ಹಬ್ಬದಲ್ಲಿ ಸಂತೋಷ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ.


No comments: