Monday, November 16, 2009

ಕನ್ನಡ ಸಾಹಿತ್ಯಕ್ಕೊಬ್ಬರು ಮಾರ್ಗದರ್ಶಕರು ಬೇಕೇ....?

ವಿಜಯ ಕರ್ನಾಟಕದಲ್ಲಿ (14-11-2009) “ಕನ್ನಡ ಸಾಹಿತ್ಯಕ್ಕೆ ಮಾರ್ಗದರ್ಶಕರೊಬ್ಬರು ಬೇಕಾಗಿದ್ದಾರೆ” ಎಂಬ ಲೇಖನ ಓದಿದೆ. ಕನ್ನಡ ಸಾಹಿತ್ಯ ಎತ್ತ ಸಾಗಿದೆ? ಸಾಹಿತ್ಯ ನಿಂತ ನೀರಾಗಿಲ್ಲ. ಹೊಸ ಲೇಖಕರು, ಪುಸ್ತಕಗಳ ಬೆಳೆ ಹುಲುಸಾಗಿಯೆ ಇದೆಯಲ್ಲ ಎಂದು ಹೇಳಬಹುದು ಎಂದು ಆರಂಭವಾಗುವ ಲೇಖನ, ಏಳು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ನಮ್ಮ ಕನ್ನಡ ಸಾಹಿತ್ಯದ ಗತ ವೈಭವವನ್ನು ವಿವರಿಸುತ್ತದೆ. ಅಂಥ ಪ್ರಶಸ್ತಿ 1998ರ ನಂತರ ಏಕೆ ಬಂದಿಲ್ಲ? ಎಂಬ ಪ್ರಶ್ನೆ ಬೇರೆ... ಕನ್ನಡ ಸಾಹಿತಿಗಳ ಹಾಗೂ ಸಾಹಿತ್ಯದ ಬರ ಬಂದಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಒಂದರ ಹಿಂದೆ ಮತ್ತೊಂದು ಎನ್ನುತ್ತದೆ. ಹಿಂದಿನ ಸಾಹಿತ್ಯ ಚಳುವಳಿ ಅಥವಾ ಕಾಲ ಘಟ್ಟದಲ್ಲಿ ಅದಕ್ಕೊಬ್ಬ ಹರಿಗೋಲು ಹಾಕುವವನಿದ್ದ. ಈಗ ಮನೆಗೊಬ್ಬ ಹಿರಿಯರು ಹರಿಗೋಲು ಹಾಕುವವ ಬೇಕಾಗಿದ್ದಾರೆ.

ನವೋದಯದಿಂದ ಆರಂಭವಾಗಿ ಸಾಹಿತ್ಯಕ್ಕೆ ಬಿ.ಎಂ.ಶ್ರೀ., ತೀ.ನಂ.ಶ್ರೀ, ಟಿ.ಎಸ್ .ವೆಂಕಣಯ್ಯ, ಗೋವಿಂದ ಪೈ, ಕುವೆಂಪು, ದಾರಾ ಬೇಂದ್ರೆ,. ಆನಂತರ, ನವೋದಯ ಪ್ರವರ್ತಕರಾದ ಗೋಪಾಲ ಕೃಷ್ಣ ಅಡಿಗ, ನವ್ಯ ಸಾಹಿತ್ಯ ಹಾಗು ಗೋಕಾಕರ ನಡುವಣ ಸಂಘರ್ಷ, ಗೋಕಾಕರು ನವ್ಯತೆಗೆ ನಾಂದಿ ಹಾಡಿದ್ದರೂ ಅಡಿಗರು ನವ್ಯ ಸಾಹಿತ್ಯದ ಪ್ರವರ್ತಕರಾದರು. ಆ ನಂತರ ಕೆ.ಎಸ್.ನ, ಜಿ.ಎಸ್.ಎಸ್ ನಂಥವರೂ ನವ್ಯದ ಕಡೆವಾಲಿದರು. ಇತ್ತ ಅನಂತ ಮೂರ್ತಿ , ರಾಮಚಂದ್ರ ಶರ್ಮ , ಗಿರೀಶಕರ್ನಾರ್ಡ ಗದ್ಯ ಸಾಹಿತ್ಯ ಕಟ್ಟಿಕೊಟ್ಟರು... ಪಾಶ್ಚಾತ್ಯ ಸಾಹಿತ್ಯದ ಪ್ರಭಾವವೂ ಸೇರಿ ಕನ್ನಡ ಸಾಹಿತ್ಯ ಮೇರು ಮಟ್ಟದಲ್ಲಿ ಬೆಳೆಯಿತು....

ಹೀಗೆ ಗತ ವೈಭವವನ್ನು ನೆನೆಪಿಸಿಕೊಳ್ಳುವ ಲೇಖಕರು, ಅಂದು ಆದೆಲ್ಲವೂ ಸಾಧ್ಯವಾಗುವಂತಹ ವಾತಾವರಣವಿತ್ತು. ಜನಮಾನಸಕ್ಕೆ ಸಾಹಿತ್ಯದ ಓದು ಬಿಟ್ಟರೆ ಬೇರಾವ ಮುಖ್ಯ ಆಕರ್ಷಣೆಯೂ ಈಗಿನಂತಿರಲಿಲ್ಲ. ಹೇಳಬೇಕೆಂದರೆ, ಬಾಲ್ಯಾವಸ್ಥೆಯಲ್ಲಿ ಬೆಳೆಯುತ್ತಿದ್ದ ಚಲನ ಚಿತ್ರರಂಗವೂ ಸಾಹಿತ್ಯದಿಂದ ಪ್ರೇರಣೆ ಪಡೆಯಿತು. ಸಾಹಿತ್ಯದ ಘನತೆಯನ್ನು ಇನ್ನಷ್ಟು ಹೆಚ್ಚಿಸಿತು. ಒಳ್ಳೆಯ ಕಥೆ ಕಾದಂಬರಿಗಳು ಸಿನಿಮಾ ಅದದ್ದೂ ಅಂತಹ ಪ್ರೇರಣೆಯಿಂದಲೇ. ಸಿನಿಮಾ ದೃಶ್ಯ ಮಾಧ್ಯಮದಲ್ಲೂ ಸಮಾಜ ಸುಧಾರಣೆ ಆದರ್ಶದ ಮೌಲ್ಯಗಳು ವೈಭವಯುತವಾಗಿ ಮೆರೆಯುತ್ತಿದ್ದ ಕಾಲ ಘಟ್ಟವದು. ಈಗೆಲ್ಲವೂ ವ್ಯತಿರಿಕ್ತವಾಗಿದೆ. ಸಿನಿಮಾದಲ್ಲಿ ಕೆಟ್ಟದ್ದರ ವೈಭವೀಕರಣವೇ ಮೆರೆದಿದೆ. ವಿಲನ್ ಹೀರೋ ಆಗಿ ವಿಜೃಂಭಿಸುತ್ತಿದ್ದಾನೆ. ಹೀರೋ ಪಡಬಾರದ ಹಿಂಸೆ ಪಡುವುದನ್ನೇ ನೋಡುವ ಹಿರಿಯರಲ್ಲಿ ತಾಳ್ಮೆ ಕಟ್ಟೆಯೊಡೆಯುತ್ತದೆ. ಮೈಮರೆತು ನೋಡುವ ಮಕ್ಕಳಲ್ಲಿ ಯುವಕರಲ್ಲಿ ಥ್ರಿಲ್ -ಖುಷಿ ಬೇಕಾಗಿದೆ ಅಷ್ಟೇ. ಹಿರಿಯರು ಯಾವುದನ್ನೇ ಆದರೂ ವಿಶ್ಲೇಷಿಸಿ ಮೌಲಿಕವೆಂದು ಹೇಳುವುದೇ ತಮಾಷೆ ಎನಿಸುತ್ತಿದೆ.

ವಿಪರ್ಯಾಸವೆಂದರೆ, ಹಿರಿಯರ ಮಾತುಗಳಲ್ಲಿ ಸಾರ್ವಕಾಲಿಕ ಮೌಲ್ಯಗಳಿರುವದು ಇಂದಿಗೂ ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತಿದ್ದರೂ. ಯುಜನಾಂಗದಲ್ಲಿ ಬಹುತೇಕ ತಾವು ನಡೆದದ್ದೇ ದಾರಿ ಎಂಬ ದೋರಣೆಯೇ. ಅವರಲ್ಲಿ ಬಹು ಮಂದಿ ಉತ್ತಮ ವಾಚಾನಾಭಿರುಚಿ ಬೆಳಿಸಿಕೊಳ್ಳದೇನೆ ಹಾದಿ ತಪ್ಪುತ್ತಿರುವುದು ಶೋಚನೀಯ. ಅಂದು ಕಿರಿಯರಲ್ಲಿ ಹಿರಿಯರನ್ನು ಗೌರವಿಸುವ ಪರಿಪಾಠವಿತ್ತು; ಅವರ ಮಾತುಗಳನ್ನು ಆಲಿಸುವ ವ್ಯವಧಾನವಿತ್ತು. ಹೇಳಿದುದನ್ನು ಅನುಸರಿಸುವ ಉತ್ಸಾಹ ಬಹಳವಿತ್ತು; ಮೇಲಾಗಿ ಅಂತಹ ಭಾವಾನಾತ್ಮಕ ಸಂಬಂಧ ಮತ್ತು ನಡೆ ನುಡಿಗಳೇ ಬದುಕಿಗೆ ಭೂಷಣವೆನಿಸಿತ್ತು. ಅಂದು ಅಂತಹ ವಾತಾವರಣ ಇದ್ದುದರಿಂದಲೇ ಸಾಹಿತ್ಯಾಸಕ್ತಿಯೂ ಅಧಿಕವಾಗಿತ್ತು ಎಂಬುದನ್ನು ನಾವು ಮರೆಯುವಂತಿದೆಯೇ. ಯಾಕೆಂದರೆ, ಅಂದಿನ ಸಾಹಿತ್ಯ ಕೇವಲ ಸಾಹಿತ್ಯಾಸಕ್ತರಿಗಾಗಿಯೆ ಮಾತ್ರವಲ್ಲದೇ ಜನ ಸಾಮಾನ್ಯರನ್ನು ತಲುಪುವುದಾಗಿತ್ತು. ಆಗ ಟಿ.ವಿ. ಯಂತಹ ದೃಶ್ಯಮಾಧ್ಯಮ ಹಾಗೂ ಇಂಟರ್ ನೆರ್ಟ ನಂತಹ ಆಕರ್ಷಣೆಗಳಿರಲಿಲ್ಲ. ಓದುಗರಲ್ಲಿ ಧಾರ್ಮಿಕ ಪರಿಜ್ಞಾನದೊಂದಿಗೇ ಉತ್ತಮ ವಾಚಾನಾಭಿರುಚಿ ಮತ್ತು ಸಾಹಿತ್ಯಾಭಿರುಚಿ ಬಹಳವಿತ್ತು. ಕಾರಣ ಅಂದಿನ ಜನಮಾನಸದ ಭಾವನೆಗಳನ್ನು ಇಂದು ಹೆಚ್ಚುತ್ತಿರುವ ಜನಸ್ತೋಮದಲ್ಲಿ ಹುಡುಕುವುದು ಸಾಧ್ಯವಿಲ್ಲವೆನ್ನುವಂತಾಗಿದೆಯಲ್ಲ!

ಇಂದು ಬದಲಾಗುತ್ತಿರುವ ಪ್ರಪಂಚದಲ್ಲಿ ಹೀಗೇಕೆ ಎಂಬ ಕಾರಣವನ್ನು ಹಿರಿಯ ಸಾಹಿತಿಗಳು ವಿಶ್ವವಿದ್ಯಾನಿಲಯಗಳೂ ಕಂಡುಕೊಳ್ಳಬೇಕಾಗದೆ. ಆಧುನಿಕತೆ ಸೋಗಿನಲ್ಲಿ ವೈಜ್ಞಾನಿಕತೆಯ ಹೆಸರಲ್ಲಿ, ಹಾಗೇ ಯಾಂತ್ರಿಕವಾಗಿ ವೇಗಗತಿಯಲ್ಲಿ ಮುಂದುವರೆಯುತ್ತಿರುವ ಯುವ ಸಮಾಜದಲ್ಲಿ ನಮಗೆ ಉತ್ತಮ ಸಾಹಿತ್ಯದ ಅಗತ್ಯವೆಷ್ಟಿದೆ? ಅದೆಂತಹ ನಿತ್ಯ ನೂತನವಾದ ಆನಂದ ಹಾಗೂ ಸಮಾಧಾನವನ್ನುಂಟು ಮಾಡುವ ಶಕ್ತಿಯನ್ನ ಹೊಂದಿದೆ? ಅಂತಹ ಅಪೂರ್ವಲೋಕವೊಂದರಿಂದ ನಮ್ಮ ಯವ ಪೀಳಿಗೆ ವಂಚಿತರಾಗುತ್ತಿರುವುದೇಕೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ.

ಅಂತಹ ಘನವಾದ ಕಾರ್ಯ ಎಲ್ಲಿಂದ ಆರಂಭವಾಗಬೇಕು ಹೇಳಿ? ಮನೆ ಮನೆಗಳಿಂದಲೇ ಅಲ್ಲವೇ..? ಮನೆಯೇ ಮೊದಲ ಪಾಠಶಾಲೆ ಎನ್ನುವುದೇಕೆ? ಆದರೆ, ಆಗುತ್ತಿರುವುದೇನು? ತಂದೆ-ತಾಯಿಗಳು ಮತ್ತು ವಯಸ್ಸಾದವರೂ ಸೇರಿದಂತೆ ಮನೆ ಮಂದಿಯಲ್ಲ ಎಳೆಯ ಮಕ್ಕಳ ಜೊತೆಗೂಡಿ ಟ.ವಿ. ಎಂಬ ಮೂರ್ಖರ ಪೆಟ್ಟಿಗೆಯ ಮುಂದೆ ಕಳಿತಿರುವುದನ್ನೇ ಬಹುತೇಕ ಎಲ್ಲ ಮನೆ ಮನೆಗಳಲ್ಲಿಂದು ನಾವು ಕಾಣುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಂತು ಮುಗ್ಧರನ್ನು ಆದು ಕಬಳಿಸಿ ತನ್ನ ತೆಕ್ಕೆಯೊಳಗೆ ಹಾಕಿಕೊಂಡು ಬಿಟ್ಟಿದೆಯಲ್ಲವೇ...? ಆವರಿಗೆ ಸರಿಯಾದ ಮಾರ್ಗದರ್ಶನ ನೀಡುವವರೂ ತಿಳಿಸಿಹೇಳುವವರೇ ಇಲ್ಲದ ವಾತವಾರಣವೂ ನಿರ್ಮಾಣವಾಗಿರುವುದೂ ಸುಳ್ಳಲ್ಲ.

ಈಗ ಹೇಳಿ ಸಾಹಿತ್ಯಕ್ಕೊಬ್ಬರು ಮಾರ್ಗದರ್ಶಕರು ಬೇಕೇ..?. ಅಥವಾ ಮನೆಗೊಬ್ಬರು ಸಾಹಿತ್ಯಾಸಕ್ತಿಯನ್ನು ಬೆಳೆಸುವಂಥ ಮಾರ್ಗದರ್ಶಕರು ಬೇಕೇ.. ಎಂಬುದು ಗಂಭೀರವಾಗಿ ಚಿಂತಿಸಬೇಕಾದ ವಿಷಯವಾಗಿದೆ.

ನಮ್ಮ ನಡುವೆ ಬರುತ್ತಿರುವ ಹೊಸ ಲೇಖಕರಿಗೇನೂ ಬರವಿಲ್ಲ. ಅವರು ವಾಸ್ತವಕ್ಕೆ ಹತ್ತಿರವಾಗುವಂತೆ ಸಾಹಿತ್ಯದಲ್ಲಿ ಮಾಡುತ್ತಿರುವ ಪ್ರಯೋಗಗಳೇನೂ ಕೊರತೆಯಿಲ್ಲ. ಕೊರತೆಯಿರುವುದು ಅವರ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆಯಲ್ಲಿ ತಾನೇ..? ಹಿಡಿ ಮಂದಿ ಸಾಹಿತ್ಯಾಸಕ್ತರು ಈಗಾಗಲೇ ಹೆಸರಾಗಿರುವವರ ಪುಸ್ತಕಗಳನ್ನು ನೋಡುತ್ತಾರೆ; ಹಾಗೂ ಕೊಳ್ಳುವುದೇ ಹೆಚ್ಚಲ್ಲದೇ. ಹೊಸ ಲೇಖಕರ ಬಗ್ಗೆ ಅವರಿಗೆ ಆಸಕ್ತಿ ಇರವಂತಿಲ್ಲ. ಹೊಸಬರ ಪುಸ್ತಕಗಳನ್ನು ಎತ್ತಿ ನೋಡಿ ಸಹೃದಯತೆಯಿಂದ ವಿಮರ್ಶಿಸಿ ಅವರ ಪುಸ್ತಕಗಳೆಷ್ಟು ಉಪಯುಕ್ತವೆಂಬುದನ್ನೂ ಹೇಳುವವರೂ ವಿರಳ. ಅದಕ್ಕಾಗಿ ಹೊಸ ಲೇಖಕ ತೀವ್ರವಾಗಿ ಸೆಣಸಬೇಕಾದ ಕಾಲವಿದಾಗಿದೆ. ಯಾಕೆಂದರೆ, ಸಾಹಿತ್ಯ ವಲಯದಲ್ಲೂ ರಾಜಕೀಯದ ತಾಂಡವವೇ ನಡೆದಿದೆಯಲ್ಲ..

ಆದ್ದರಿಂದ, ನಾವು ಗತವೈಭವವನ್ನು ನೆನೆಯುತ್ತ ಕೂರುವ ಕಾಲವಿದಲ್ಲ. ನಮ್ಮಲ್ಲಿ ಮನೆ ಮನೆಗೊಬ್ಬರು ಸಾಹಿತ್ಯಾಸಕ್ತಿಯುಳ್ಳ ಹಿರಿಯರು ಬೇಕಾಗಿದ್ದಾರೆ. ಅವರು ಅವರ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಯುವಂತೆ ಮತ್ತು ಅವರ ಬದುಕು-ಭವಿಷ್ಯಕೆ ಉಪಯುಕ್ತವಾದ ಉತ್ತಮ ಸಾಹಿತ್ಯ ಕೃತಿಗಳನ್ನು ಅವರು ಓದುವಂತೆ ಮಾಡಬಲ್ಲ ಮಾರ್ಗದರ್ಶಕನ ಮಾಡಬೇಕಾಗಿದೆ.

• ಮೆನೆಗೊಬ್ಬ ಹಿರಿಯ ಮಾರ್ಗದರ್ಶಕರು ಬೇಕಾಗಿದ್ದಾರೆ. ಅವರು ಮಕ್ಕಳು ದಿನ ಬೆಳಗಾಗುತ್ತಿದ್ದಂತೆಯೆ ಟ.ವಿ. ಮುಂದೆ ಕುಳಿತು ಕೊಳ್ಳುವುದನ್ನು ತಪ್ಪಿಸಬೇಕಾಗಿದೆ. ಟಿ.ವಿ. ಚಾನೆಲ್ಸ್ ಗಳಿಗಿಂತಲು ಮಿಗಿಲಾಗಿ ಆಸಕ್ತಿದಾಯಕ ವಿಷಯಗಳು ವಿಜಯ ಕರ್ನಾಟಕದಂತಹ ದಿನ ಪತ್ರಿಕೆಯಲ್ಲಿದೆ ಎಂಬದುನ್ನು ಓದಿ ಮಕ್ಕಳೂ ಕೂಡ ಓದುವಂತೆ ಮಾಡಬೇಕಿದೆ.

• ಊಟ-ತಿಂಡಿ ಮಾಡುತ್ತಲೇ ಟಿ.ವಿ. ನೋಡುವ ಮಕ್ಕಳನ್ನು ಎಚ್ಚರಿಸಬೇಕಿದೆ. ಟಿ.ವಿ.ಯ ಮನರಂಜನೆಗಿಂದ ವಿಭಿನ್ನ ವಾದ ಮನರಂಜನೆ ನೀಡಿ ಬಲ್ಲ ಪುಸ್ತಕಗಳು ನಮ್ಮ ಕನ್ನಡದಲ್ಲಿವೆ. ಅಷ್ಟೇ ಅಲ್ಲ ಅವು ನಿತ್ಯ ಬದುಕಿಗೆ ಹತ್ತಿರವಾದುದನ್ನೇ ಹೇಳುತ್ತವೆ. ನೀವೆಂದೂ ಊಹಿಸಿರದ ವಿಷಯಗಳಿಂದ ನಿಮ್ಮನ್ನು ಆಲೋಚಿಸುವಂತೆ ಮಾಡುತ್ತವೆ ಎಂಬುದನ್ನು ಮಕ್ಕಳಿಗೆ ತಿಳಿಯುವಂತೆ ವಿವರಿಸಿ ಹೇಳಬೇಕಾಗಿದೆ.
• ದೃಶ್ಯದ ಮುಂದೆ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಪುಸ್ತಕದ ಮುಂದೆ ನಮ್ಮನ್ನು ನಾವು ತೆರೆದು ಕೊಂಡು ಆಲೋಚನೆಗೆ ಹಚ್ಚಿಕೊಳ್ಳುತ್ವೇವೆಂಬ ಅಪೂರ್ವ ಅನುಭವ ಅವರಿಗೂ ಆಗುವಂತೆ ಮಾಡಬೇಕಾಗಿದೆ.
• ನಮ್ಮ ಕನ್ನಡ ಭಾಷೆ ಬಡವಲ್ಲ. ಅದಿಲ್ಲದೇ ಇದ್ದರೆ ನಮ್ಮ ಜ್ಞಾನವೆಂಬುದಕ್ಕೇ ತಳಹದಿಯೇ ಇಲ್ಲ. ಇಂಗ್ಲೀಷ್ ಕಲಿಯಬೇಕು ಆದರೆ, ವ್ಯಮೋಹ ಒಳ್ಳೆಯದಲ್ಲವೆಂಬುದನ್ನು ವಿವರಿಸಿ ಹೇಳುವವರಾಗಬೇಕು.
• ಇಂದಿನ ಮಕ್ಕಳು ಬಹಳ ಚುರುಕು. ಅವರು ಟಿ.ವಿ. ನೋಡಲೇ ಬಾರದೆಂದು ನಿಬಂರ್ಧಿಸುವುದೂ ಅಸಾಧ್ಯ. ಹಾಗೆ ಮಾಡಬೇಕೆಂದು ಯಾರೂ ಹೇಳುವುದಿಲ್ಲ. ಆ ಮಕ್ಕಳು ಹಿರಿಯರ ತಲೆತಿನ್ನುತ್ತಾರೆ. ಅವರು ಅಷ್ಟು ಸುಲಭಕ್ಕೆ ಮಾತು ಕೇಳುವವರಲ್ಲ; ಪಾಲಿಸುವವರೂ ಅಲ್ಲ. ಅವರನ್ನು ಪ್ರೀತಿಯಿಂದ ಓಲೈಸಬೇಕು, ವಿಶ್ವಾಸಕ್ಕೆ ತಂದುಕೊಳ್ಳಬೇಕು.
• ಈಗೇನಾಗಿದೆ ಎಂದರೆ, ಎಷ್ಟೋ ಮನೆಗಳಲ್ಲಿ ತಂದೆ-ತಾಯಿಗಳ ಹಿರಿಯರಾದವರ ಮಾತಿಗೆ ಬೆಲೆ ಇಲ್ಲವಾಗಿದೆ. ನಾವೇನು ಕಡಿಮೆ ಇಲ್ಲ ನಮ್ಮ ಭವಿಷ್ಯ ನಾವು ರೂಪಿಸಿಕೊಳ್ಳುತ್ತೇವೆ. ನೀವೇನು ಬುದ್ಧಿವಾದ ಹೇಳಬೇಕಿಲ್ಲ ವೆಂ ಬ ಧೋರಣೆಯೇ ಯುವಕ/ಯವತಿಯರಲ್ಲಿ ಬೇರೂರಿರುವುದರಿಂದ, ಮನೆಗೊಬ್ಬರು ಮಾರ್ಗದರ್ಶಕರು ಇದ್ದರೂ ಇಲ್ಲದಂತಾಗಿರವ ಉದಾಹರಣೆಗಳೇ ಬಹಳವಿವೆ.
• ಆದರೂ, ಉತ್ತಮ ಸಾಹಿತ್ಯ ಕೃತಿಗಳು ಬರುತ್ತಿವೆ. ಓದುವ ಜಾಣ ಮಕ್ಕಳು ಓದುತ್ತಿದ್ದಾರೆ. ಜಾಣರೂ ಆಗುತ್ತಿದ್ದಾರೆ.

Monday, April 14, 2008

ನಮ್ಮ ಕನ್ನಡ ನಾಡಿನ ಮಹಾನ್ ನಟ ಡಾ.ರಾಜ್ ಕುಮಾರ್ ನಮ್ಮನ್ನು ಅಗಲಿ ಇಂದಿಗೆ ಎರಡು ವರ್ಷಗಳು ಸಂದಿವೆ. ಅವರದೇ ನೆನಪು ನಮ್ಮ ನಾಡಿನ ಹಿಂದು ಮುಂದಿನ ಜನತೆಯನ್ನು ಸದಾ ಕಾಡುತ್ತಲೇ ಇರುತ್ತದೆ. ಎಷ್ಟೋ ಸಲ ಆ ಕಾಲ, ಅದೆಂಥ ಪರ್ವ ಕಾಲ-ಸುವರ್ಣಕಾಲ! ಎಂದು ಪರಿತಪಿಸುವ ಹಿರಿಯರಿದ್ದಾರೆ. ಆ ಕಾಲದ ಚಿತ್ರಗಳು ಇಂದಿಗೆ ಹಳೆಯದಾದರೂ ಅವು ನಮ್ಮ ನಾಡು ನುಡಿ ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಅಭಿನಯಿಸಿದ ರಾಜಣ್ಣನ ಭಾವಾವೇಶದ ನಟನೆಯೆ ಅದ್ವಿತೀಯ ಎಂದು ತಲ್ಲೀನರಾಗುತ್ತಾ, ಆ ಚಿತ್ರಗಳ ದೃಶ್ಯ ಮತ್ತು ಗೀತೆಗಳ ಅರ್ಥಪೂರ್ಣ ಸಾಹಿತ್ಯ ಇಂಪಾದ ಗಾಯನದ ಸುಮಧುರ ಸಂಗೀತದಲ್ಲಿ ತೇಲುತ್ತಾ, ಹಾಗೆಯೆ ಭಾವನೆಗಳಿಗೇ ಬೆಲೆ ತುಂಬಿ ಬಂದಿದ್ದ ಆ ಕಾಲವನ್ನೇ ಸವಿಯುತ್ತಾ ಕೂರುವ ಇಂದಿನ ಪೀಳಿಗೆಯವರ ಗುಂಪಿಗಂತೂ ಏನೂ ಕಡಿಮೆಯಿಲ್ಲ ಎಂದರೆ ಉತ್ಪ್ರೇಕ್ಷೆ ಏನಿಲ್ಲ. ಅಂಥಹ ಭಾವನಾತ್ಮಕ ಕಾಲ "ವಸುಧೈ ಕುಟುಂಬಂ'"ಎನ್ನುವುದನ್ನೇ ಪ್ರತಿಬಿಂಬಿಸುವಂತಹ ಕಾಲ ಮತ್ತೆಂದೂ ಬರಲಾರದು. ಡಾ.ರಾಜ್ ಕುಮಾರ್ ಅವರು ನಮ್ಮ ನಾಡಿನ ಸಂಸ್ಕೃತಿ ಪರಂಪರೆಯನ್ನೆತ್ತಿ ಹಿಡಿದ ನಾಯಕರಷ್ಟೇ ಆಗಿರಲಿಲ್ಲ, ಜನಸಾಮಾನ್ಯರ ಹಾಗೂ ಪ್ರಾಜ್ಞರ ಮನೆ ಮಾತಾಗಿದ್ದರು. ಅವರು ತಮ್ಮ ಪ್ರತಿಭೆ ಮತ್ತು ಅವಿರತ ಸಾಧನೆಯಿಂದ ನಟನೆಯಲ್ಲಿ ಮಾನವೀಯತೆಯ ಪರಾಕಾಷ್ಠಯನ್ನೆ ತಲುಪಿದವರು, ಜನಮಾನಸದಲ್ಲಿ ಆದರ್ಶಗಳ ಪ್ರತಿ ಮೂರ್ತಿಯಂತಾದರು, ನಮ್ಮ ನಾಡಿನಾಚೆಗೂ ಪ್ರಭಾವಶಾಲಿಗಳೆನಿಸಿ ಎಲ್ಲರ ಮನಗೆದ್ದರು. ಎಂದಿಗೂ ವಿಶ್ವಮಾನ್ಯರೇ ಆಗಿ ಸ್ಮರಣೀಯರೆನಿಸಿದರು.
ನಮ್ಮ ಯುವ ಕನಸುಗಳಿಗೆ ಮನಸುಗಳಿಗೆ ಹಾಗೂ ಕವಿ ಹೃದಯಗಳಿಗೆ ಸ್ಫೂರ್ತಿ ನೀಡಿದ ಅವರ ಸದಭಿರುಚಿಯ ಚಿತ್ರಗಳು ಹಾಗೂ ಇಂಪಾದ ಹಾಡುಗಳು ಅನೇಕ. ಆ ರಸಮಯ ಹಾಗೂ ಜೀವನೋತ್ಸಾಹದ ಕ್ಷಣಗಳು ನಮ್ಮ ಮನಗಳನ್ನು ನವಿರಾಗಿ ಕಾಡುತ್ತಲೇ ಇರುತ್ತವೆ. ನಾನೂ ಬರಹಗಾರನಾಗಿ ಅವರ ಭಾವ ಪೂರ್ಣ ಅಭಿನಯದಿಂದ ಚಿತ್ರಗಳಿಗೆ ಹಾಡುಗಳನ್ನು ಬರೆದ ಚಿ.ಉದಯಶಂಕರ್, ಆರ್.ಎನ್.ಜಯಗೋಪಾಲ್, ವಿಜಯಾನರಸಿಂಹ ಅವರುಗಳ ಅರ್ಥಪೂರ್ಣ ಸಾಹಿತ್ಯದಿಂದ ಸಂಗೀತ ನೀಡಿದ ಜಿ.ಕೆ.ವೆಂಟೇಶ್, ಟಿ.ಜಿ.ಲಿಂಗಪ್ಪ, ರಾಜನ್ ನಾಗೇಂದ್ರರ ಸ್ವರ ಲಾಲಿತ್ಯಗಳಿಂದ ಭಾವನಾತ್ಮಕತೆಯಲ್ಲಿ ಮೈಮರೆತಿದ್ದುಂಟು, ಅವುಗಳ ಅವ್ಯಕ್ತ ಪ್ರೇರಣೆ ಯಿಂದ ಇನ್ಷಷ್ಟು ಸ್ಫೂರ್ತಿ ಪಡೆದದ್ದೂ ಇದೆ.

ಹೇಳಬೇಕೆಂದರೆ, ಆಗಿನ ಕಾಲದ ಚಿತ್ರಗಳಲ್ಲಿ ಆದರ್ಶದ ವೈಭವೀಕರಣವಿತ್ತು ಎನ್ನುವವರಿದ್ದಾರೆ. ಈಗಿನ ಕಾಲದ ಮಚ್ಚು, ಸೆಕ್ಸ್ ಮಸಾಲೆಗಳ ವೈಭವಕ್ಕಿಂತ ಅವುಗಳದೇ ನಿಜಕ್ಕೂ ಎಲ್ಲ ರೀತಿಯಲ್ಲೂ ಸಮಾಜ ಸುಧಾರಣೆಯಲ್ಲಿ ಸಿಂಹ ಪಾಲು! ಇದೀಗ ನಾವು ನೋಡುತ್ತಿರುವುದೇನು? ಬಹುತೇಕೆ ಸಮಾಜ ಸುಧಾರಣೆಯನ್ನು ಕಡೆಗಣಿಸಿರುವ, ಯುವ ಪೀಳಿಗೆಯನ್ನು ಸಲ್ಲದ ಅನೈತಿಕತೆ ಅಪಮೌಲ್ಯಗಳಿಂದಲೇ ಹುರಿದುಂಬಿಸುವ, ಹೆಚ್ಚೇನೂ ಓದು ತಿಳುವಳಿಕೆ ಸಂಸ್ಕಾರವಿಲ್ಲದಂತ ಅಮಾಯಕರನ್ನು ತಪ್ಪು ದಾರಿಗೆಳೆಯುವ ಚಿತ್ರಗಳೇ ಮೇಲಿಂದ ಮೇಲೆ ಬರುತ್ತಿವೆ. ಅಲ್ಲೊಂದು ಇಲ್ಲೊಂದು ಎಂಬಂತೆ ಈಗಲೂ ಆದರ್ಶೀಕೃತ ಭಾವನೆಗಳಿಗೆ ಅಂತಹ ಸದಭಿರುಚಿಯುಳ್ಳ ಉತ್ತಮ ಚಿತ್ರಗಳಿಗೆ ಖಂಡಿತ ಜನಮನ್ನಣೆ ಇದೆ; ಇಂದಿನ ಫಿಲಂ ಇಂಡ್ ಸ್ಟ್ರಿಯಲ್ಲಿ ಅವುಗಳೂ ಹಣ ಸಂಪಾದಿಸುತ್ತವಲ್ಲದೇ ಸಮಾಜ ಸುಧಾರಣೆಯಲ್ಲೊಂದಿಷ್ಟು ಗಣನೀಯ ಪಾತ್ರವಹಿಸುತ್ತವೆ ಎಂಬುದೂ ಸಾಬೀತಾಗಿದೆಯಲ್ಲ...!
ಆ ದಿಸೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿರುವ ಕಲಾವಿದರು ಹಾಗೂ ನಿರ್ದೇಶಕರಲ್ಲಿ ಪ್ರಮುಖರೆಂದರೆ-
ಶಂಕರ್ ನಾಗ್, ಪುಟ್ಟಣ್ಣ ಕಣಗಾಲ್, ನಾಗಾಭರಣ, ಡಾ.ವಿಷ್ಣು ವರ್ದನ್ ಮತ್ತು ಅಂಬರೀಷ್ ಆದಿಯಾಗಿ ಪಟ್ಟಿ ಮುಂದುವರೆದಂತೆಲ್ಲ ಇತ್ತೀಚೆಗೆ ಸುದೀಪ್, ರಮೇಶ್ ಅರವಿಂದ್ ತಮ್ಮ ಸತತ ಪ್ರಯತ್ನದಲ್ಲಿ ಮಿಂಚಿದ್ದಾರೆ. ಹೌದು, ಎಂದಿಗೂ ನಮ್ಮ ಸಾಮಾನ್ಯ ಜನತೆ ಒಳ್ಳೆಯದನ್ನೇ ಕೊಟ್ಟರೆ ಸ್ವೀಕರಿಸುತ್ತಾರೆ.

ನಾಡಿನಾದ್ಯಂತ ಇಂದಿಗೂ ಕನ್ನಡಿಗರ ಧೃವ ತಾರೆ ಡಾ.ರಾಜ್ ಅವರ ಅಭಿಮಾಗಳ ಸಂಖ್ಯೆ ಅಗಣಿತ. ಅವರು ನಟಿಸಿದ ಚಿತ್ರಗಳ ಸಿ.ಡಿ/ಡಿವಿಡಿ, ಹಾಗೂ ಚಿತ್ರ ಗೀತೆಗಳ ಕ್ಯಾಸೆಟ್ಟುಗಳನ್ನು, ಭಾವ ಚಿತ್ರಗಳನ್ನೂ ಮನೆ ಮನೆಗಳಲ್ಲಿ ಸಂಗ್ರಹಿಸಿಟ್ಟು ಕೊಂಡವರಿದ್ದಾರೆ. ಆಗಾಗ್ಗೆ ಮನೆಮಂದಿಯಲ್ಲ ಕುಳಿತು ಅವುಗಳನ್ನೇ ವೀಕ್ಷಿಸುತ್ತಾ ಗೀತೆಗಳನ್ನು ಕೇಳುತ್ತಾ ಆ ದಿನಗಳನ್ನು ನೆನೆಯುವವರಿದ್ದಾರೆ. ಆದರೆ, ಅದೆಂದಿಗೂ ಕೇವಲ ಗತವೈಭವವೆಂದು ಉಪೇಕ್ಷಿಸುವಂತಿಲ್ಲ; ನಮ್ಮ ಮುಂದಿನ ಪೀಳಿಗೆಯ ಯುವ ಜನಾಂಗವೂ ಯೋಚಿಸುವಂತೆ ಮಾಡುವುದೂ ವಾಸ್ತವ ಸಂಗತಿಯೇ ಆಗಿದೆಯಲ್ಲ.
ಅವರ ಅಂತಿಮ ವಿದಾಯದ ಸಂದರ್ಭದಲ್ಲಿ ನಾನೂ ಸಂಗ್ರಹಿಸಿದ ಅವರ ಆ ಕೆಲ ಹಿಂದಿನ ದಿನಗಳ ಟಿ.ವಿ.ಸಂದರ್ಶನದ ದೃಶ್ಯಗಳು, ಚಿತ್ರಗೀತೆಗಳು ಮತ್ತು ಕಡೆಗೆ ಅವರ ಅಂತಿಮ ಸಂಸ್ಕಾರದ ಕೆಲವು ಸನ್ನಿವೇಶಗಳ ಚಿತ್ರಣಳೂ ಇವೆ. ಮತ್ತೆ ಆನಂತವೆ ಬಂದ ವಾರದಲ್ಲಿ ಅನಿರೀಕ್ಷಿತವಾಗಿಯೆ ನಾನು ನೀಡಿದ ಆಕಾಶವಾಣಿ ಶುಕ್ರವಾರದ ವಿಶೇಷ ಕಾರ್ಯಕ್ರಮದ ಧ್ವನಿವಾಹಿನಿ ಕೂಡ ಇದೆ.

Thursday, April 10, 2008

ಬಂತಿದೋ ಚುನಾವಣೆಯ ಕಾಲ ತಂತಿದೊ ಸುಭಿಕ್ಷ(ದುರ್ಭಿಕ್ಷ) ಕಾಲ!

ಬಂತಿದೋ ಚುನಾವಣೆಯ ಕಾಲ. ಯಾರಿಗೆ ಎಂಥವರಿಗೆ ಸುಭಿಕ್ಷ ಕಾಲ...? ಇನ್ಯಾರಿಗೆ ಇನ್ನೆಂಥ ಪಾಪದ ಜನರಿಗೆ ದುರ್ಭಿಕ್ಷ ಕಾಲವೋ ಏನೋ... ನೋಡಿರಿ ನೋಡುತ್ತಿರಿ ಪಕ್ಷಗಳ ಪ್ರಣಾಳಿಕೆ!!  ಇಂದು ಮೊದಲನೆಯದಾಗಿ ಪತ್ರಿಕೆಯ ಮುಖಪುಟದ ಹೆಡ್ ಲೈನ್ಸ್ ನಲ್ಲಿ ಕಾಂಗ್ರೇಸ್ ತಾನೇ ಅಧಿಕಾರಕ್ಕೆ ಬರಲೇ ಬೇಕೆಂದು ಹಠತೊಟ್ಟಂತೆ ಹಠಾತ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ! ಅದರ ಸಪ್ತ ಭರವಸೆಗಳಲ್ಲಿ ಎಂಥೆಂಥ ಅತ್ಯಮೊಲ್ಯವಾದವುಗಳು!! ೨ ಕೆ.ಜಿ. ಅಕ್ಕಿ-ತಿಂಗಳಿಗೆ ೨೫ ಕೆ.ಜಿ! ಶೇ ೩% ಬಡ್ಡಿದರದಲ್ಲಿ ಸಾಲ ಸಾಲ! ಕೊನೆಗೆ ಯಾವ ಮಗಾನೂ ತೀರಿಸ್ಬೇಕಿಲ್ಲ.  ಯಾಕೆಂತಿರಾ.. ಅವರು ಉದ್ಯೋಗದ ಬಗ್ಗೆ ಅಷ್ಟೇನೂ ಚಿಂತೆ ಮಾಡ್ಬೇಕಾಗಿಲ್ಲ! ಯಾಕಂದ್ರೇ ಅವ್ರ ಭರವಸೆಗಳಲ್ಲಿ ಅತ್ಯಂತ ಗಮನಿಸಬೇಕಾದದ್ದೆಂದರೆ- ಎಸ್ಸೆಸ್ಸೆಲ್ಸಿ ಪಾಸಾದ (ಸಧ್ಯ ಅಷ್ಟಾದರೂ ವಿದ್ಯಾವಂತನಾಗಲೇ ಬೇಕು) ನಿರುದ್ಯೋಗಿ ಯುವಕರಿಗೆ ಮಾಸಿಕ ೧,೨೦೦ ರೂ. ಶಿಷ್ಯವೇತನ! ಇನ್ನು ಮುಂದೆ ನಮ್ಮ ನಾಡಿನ ಮಕ್ಕಳು ಅದರಲ್ಲೂ ಯುವಕರು ಹೆಚ್ಚು ಓದುವುದೇ ಬೇಡಾ... ಜಸ್ಟ್ ಎಸ್ಸೆಸ್ಸೆಲ್ಸಿ ಪಾಸೇ ಸಾಕು. ಬರೀ ಓಟು ಹಾಕಲಿಕ್ಕಷ್ಟೇ ಅಲ್ಲ;ರಾಜಕೀಯ ಮಾಡಲು, ವಾಹ್ !ಯುವ ಕಾರ್ಯ ಕರ್ತನಾಗಲು. (ಯವತಿಯರಿಗಿಲ್ಲ! ಪಾಪ;ಅವರೇನು ಅನ್ಯಾಯ ಮಾಡಿದ್ದಾರೋ....  ಅಥವಾ ಅವರೇ ಪುಣ್ಯವಂತರು ಬಿಡಿ,ಚೆನ್ನಾಗಿ ಓದಿಯೆ ಇಂಥ ದುರ್ಭಿಕ್ಷ ಅಲ್ಲಲ್ಲ ಸುಭಿಕ್ಷ ಕಾಲದಲ್ಲೂ ಹಠತೊಟ್ಟು ಮುಂದೆ ಬರಲೀ).

ಏನಂತೀರಿ? ನೀವೂ ನಮ್ಮ ನಾಣ್ಣುಡಿಯೊಂದನ್ನು ಕೇಳಿರಲೇ ಬೇಕಲ್ಲ...! "ನಿನಗೇನೂ ಉದ್ಯೋಗ ಮಾಡಾಕೆ ಬರದಿದ್ದರೆ, ರಾಜಕೀಯ ಮಾಡು." ಅಂತ. ಹೌದ್ಹೌದು, ಓದಾಕೆ ಆಗದಿರೇ ಹೋಗಲಿ ಬಿಡಲಾ, ಹೆಂಗೂ ನಮ್ಮ ಮನೆಗೆ ಪುಕ್ಕಟ್ಟೆ ಕಲರ್‍ ಟಿ.ವಿ. ಬರ್‍ತದೇ.. ನೀನು ಉಂಡುಂಡು ಅದರ ಮುಂದೆ ಕೂತ್ಕೋಭೋದು. ನಿಂಗೆ ನಮ್ಮ ಸರ್ಕಾರ ಕುತ್ಮಂಡೇ ತಿನ್ನೋಕೆ ಅಟೀಟೂ ತಿರುಗಾಡ್ತಾ ನಮ್ಮ ರಾಜಕಾರಣಿ ನಾಯಕರ್‍ಗಳಿಗೆ ಭೋ ಪರಾಕು, ಜೈ ಜೈ ಕಾರ ಮಾಡಾಕೆ ಶಿಷ್ಯವೇತನ ಕೊಡ್ತೈತೆ..! ಇನ್ನೇನು ಬೇಕಲಾ ಮಗಾ.. ಹೆಂಗಾರೆ ಮಾಡಿ ಎಸ್ಸೆಸ್ಸೆಲ್ಸಿ ಪ್ಯಾಸ್ ಮಾಡ್ಕಳ್ಲಾ...ಎಂದು ಇನ್ಮುಂದೆ ಹಳ್ಳಿಗಳಲ್ಲಿ ಹಾಗೂ ನಮ್ಮ ನಗರಗಳ ಸ್ಲಮ್ ಗಳಲ್ಲಿ ಡೈಲಾಗ್ ಕೇಳಿ ಬಂದ್ರೆ... ನಾವೂ ನೀವೂ ಯಾರೂ ಅಚ್ಚರಿ ಪಡೋದೇನಿಲ್ಲ; ಅಲ್ವರಾ...

Friday, September 28, 2007

ಕನ್ನಡ ಭಾಷೆಯ ಬಳಕೆ ಮತ್ತು ಅನುವಾದದ ಬಗ್ಗೆ ...

ಸೂರ್ಯ ಎಂಬ ಪದವನ್ನೇ ತಗೆದುಕೊಳ್ಳಿ. ರ್ಯ ಕ್ಕೆ ಬದಲಾಗಿ ರ ಕ್ಕೆ ಯ ಒತ್ತು ಕೊಡುವುದು ಸರಿಯಲ್ಲ. ಏಕೆನ್ನುತ್ತೀರಾ- ಸೂರ್ಯ – ಈ ಪದದಲ್ಲಿ ಗಮನಿಸಿದರೆ ನಾವು ಯ ಅಕ್ಷರವನ್ನು ಸಂಪೂರ್ಣವಾಗಿ ಉಚ್ಛರಿಸುತ್ತೇವೆ. ಜೊತೆಗೆ ರ ಅಕ್ಷರವನ್ನು ಅರೆ ಉಚ್ಛರಿಸುತ್ತೇವೆ ಅದಕ್ಕಾಗಿಯೆ ಅರ್ಕಾವೊತ್ತಲ್ಲವೇ...
ಶುಭಾಷಯಗಳು ತಪ್ಪು. “ಶುಭಾಶಯಗಳು” ಸರಿ. ನಾವು ಆಶಯ ಎಂದು ಉಚ್ಛರಿಸುವಾಗ ಸ್ವರಲಾಲಿತ್ಯ ಅದೆಷ್ಟು ಮಧುರ! ಆಷಯ ಎನ್ನಲಾರೆವಲ್ಲ ಕರ್ಕಷವಾಗಿ. ಆದ್ದರಿಂದಲೇ ‘ಶುಭಾಶಯ’ ಸರಿ.
ಹಾರ್ಧಿಕ ಶುಭಾಷಯಗಳು ಇದೂ ಕೂಡ ತಪ್ಪು. “ಹಾರ್ದಿಕ ಶುಭಾಶಯಗಳು”ಸರಿ.
ಪ್ರಶಸ್ತಿ ಪ್ರಧಾನ – ಇಲ್ಲಿ ಪ್ರಧಾನ ತಪ್ಪಾಗಿದೆ. ಯಾಕೆಂದರೆ, ನೋಡಿ ದಾನದಲ್ಲಿ ಪ್ರದಾನ ವಾದ್ದು “ಪ್ರಶಸ್ತಿ ಪ್ರದಾನ” ಸರಿ.
ಪ್ರಧಾನ ಮಂತ್ರಿ ಅಥವಾ ಪ್ರಧಾನ ಕಛೇರಿ ಇತ್ಯಾದಿ ಬಳಸಿದಾಗ ಧಾ ಸೂಕ್ತ.
ಹೀಗೆ ಇತ್ತೀಚೆಗೆ ಕನ್ನಡ ನಾಮ ಫಲಕಗಳನ್ನು ನೋಡುತ್ತಿದ್ದರೆ ಇನ್ನೂ ಬಹಳ ಶಬ್ದಗಳು ಸಿಗುತ್ತದೆ.

ಇನ್ನು ಅನುವಾದದ ಬಗ್ಗೆ -

ನನ್ನ ಅಭಿಪ್ರಾಯದಲ್ಲಿ ಇಂಗ್ಷೀಷ್‌ನ ಪದ ಪದ ಜಗ್ಗುತ್ತಾ ಅನುವಾದಮಾಡುವುದಕ್ಕಿಂತ, ಕನ್ನಡ ಭಾಷೆಯಲ್ಲಿ ಸಾಮಾನ್ಯವಾಗಿ ನಾವು ನಮಗಿಂತ ಹಿರಿಯರಿಗೆ ಪತ್ರ ಬರೆಯುವಾಗ, ಪತ್ರದದ ಆರಂಭದಲ್ಲಿ, ಕೊನೆಯಲ್ಲಿ ಮುಗಿಸುವುದು ಹೇಗೆ ರೂಢಿಯಲ್ಲಿದೆ ಎಂಬುದೇ ಮುಖ್ಯ.
ಇಂತಿ ವಂದನೆಗಳೊಂದಿಗೆ,
ಇಂತಿ ನಮಸ್ಕಾರಗಳು,
ಇಂತಿ ನಿಮ್ಮ ಶ್ರೇಯೋಭಿಲಾಷಿ,
Regards ಗೆ ಪರ್ಯಾಯವಾಗಿ, ಗೌರವ ಪೂರ್ವಕವಾಗಿ ಎನ್ನಬಹುದೇ ಹೊರತು ಒಂದೇ ಪದ ಹುಡುಕುವುದಲ್ಲ.
ಹಾಗೆಯೆ E-Mail ಕೂಡ. ಇಲೆಕ್ಟ್ರಾನಿಕ್ ಅಂಚೆ ಎನ್ನಬಹುದು. ವಿದ್ಯುನ್ಮಾನ ಅಂಚೆ ಎನ್ನಬಹುದುದಾದರೂ ‘ಇಲೆಕ್ಟ್ರಾನಿಕ್’ ಎಂಬ ಪದ ಒಬ್ಬ ಅನಕ್ಷರಸ್ಥ ಹಳ್ಳಿಯವನ ಆಡುಭಾಷೆಯಲ್ಲಿಯೊ ಸರಾಗ ಬೆರೆತಿರುವಾಗ ಅವನಿಗೆ ಇಲೆಕ್ಷ್ರಾನಿಕ್ ಉಪಕರಣ ಕಂಪ್ಯೂಟರ್ ಮೊಲಕ ಕಳುಹಿಸುವ ಅಂಚೆ ಎಂದು ತಿಳಿದಿರುವಾಗ “ವಿದ್ಯುನ್ಮಾನ” ಎಂದರೆ ಅವನು ತಲೆಕೆರೆದುಕೊಂಡಾನು. ಅಂಚೆ ಆತನಿಗೆ ಬಹಳ ಹಳೆಯ ಸರಳ ಶಬ್ದವಾಗಿರುತ್ತದೆ. ಭಾಷೆಯು ಮನುಷ್ಯ ಮನುಷ್ಯರ ನಡುವಣ ಸಂವಹನ ಮಾಧ್ಯಮವಷ್ಟೇ. ಅಲ್ಲದೇ, ಪ್ರತಿಯೊಂದು ಭಾಷೆಗೂ ಅದರದೇ ಆದ ಸ್ವರ ಲಾಲಿತ್ಯವಿದೆ. ಹಾಗೂ ಬಳಕೆಯಲ್ಲಿ ಹಿಂದಿನಿಂದಲೂ ತನ್ನದೇ ರೀತಿಯಲ್ಲಿ, ಬರವಣಿಗೆಯಲ್ಲಿಯೊ ತನ್ನದೇ ರೂಢಿಗತ ಶೈಲಿಯಲ್ಲಿ ಅದು ಕಂಡು ಬರುತ್ತದೆ. ಓದುವ ಆಡುಮಾತಿನ ಉಚ್ಛಾರಣೆಯಲ್ಲಿಯೊ ಇವೆಲ್ಲ ಗಮನಕ್ಕೆ ಬರುತ್ತದೆ. ಇಂಗ್ಷೀಷ್ ಅಂತೂ ಭಾರತೀಯರ ಉಚ್ಛಾರಕ್ಕೂ ಅಮೆರಿಕನ್ನರ ಉಚ್ಛಾರಕ್ಕೂ ಬಹಳ ಅಂತರವಿದೆಯಾದರೂ ಭಾರತೀಯರ ಇಂಗ್ಷೀಷ್ ಸಾಹಿತ್ಯವೂ ಕೂಡ ತನ್ನದೇ ಸ್ಥಾನ ಪಡೆದುಕೊಂಡು ಹೆಸರಾಗಿದೆಯಲ್ಲ! ಆದ್ದರಿಂದ, ಅನುವಾದಕ್ಕಾಗಿ ಅನುವಾದವಲ್ಲ. ಅನುವಾದವೆಂಬುದೂ ಆ ಭಾಷೆಯಲ್ಲಿ ಅಂತರ್ಗತವಾದ ಸಹಜ ಧ್ವನಿಯಾಗಿ ಬರಬೇಕು.
-ರೈಟರ್ ಶಿವರಾಂ

Thursday, August 30, 2007

ಹೊಗೆನಕಲ್ ಜಲಪಾತ

ಹೊಗೆನಕಲ್ ದಕ್ಷಿಣ ಭಾರತದ ನಯಾಗರ ಜಲಪಾತವೆಂದೇ ಪ್ರಸಿದ್ಧಿ. ಕಾವೇರಿ ನದಿಯ ಅಗಲ-ವಿಸ್ತಾರಗಳ ವೈವಿಧ್ಯತೆ ನೋಡಿ ಕಣ್ ತಣಿಸಿಕೊಳ್ಳಬೇಕೆಂದರೆ, ಮೈಸೂರಿಗೆ ಸಮೀಪವಿರುವ ಶಿವನ ಸಮುದ್ರ ಮತ್ತು ಹೊಗೆನಕಲ್ ಜಲಪಾತದ ರುದ್ರ ರಮಣೀಯ ದೃಶ್ಯಗಳು. ದುರ್ಗಮ ಅರಣ್ಯದ ಮಧ್ಯೆ ಸಮತಟ್ಟಾದ ಪ್ರದೇಶದಿಂದ ಮಂದಗಮನೆಯಾಗಿ ಹರಿದು ಬರುವ ಕಾವೇರಿ ಹೊಗೆನಕಲ್ ನ ಬಂಡೆ ಬಂಡೆಗಳ ಸಮುಚ್ಛಯದಲ್ಲಿ ಪ್ರವೇಶಿಸತ್ತಾ, ಬಂಡೆಗಳ ಮೇಲಿಂದ ಪ್ರಪಾತಕ್ಕೆ ಬೋರ್ಗರೆಯುತ್ತ ಧುಮ್ಮಿಕ್ಕುತ್ತದೆ.

ಫೋಟೋಗಳು: ಎಸ್.ರಂಗನಾಥ್


ಎತ್ತನೋಡಿದರತ್ತ ಹರಡಿಕೊಂಡಿರುವ ಬಂಡೆಗಳ ಗಿರಿ ಕಂದರಗಳ ನಡುವೆ ಅನೇಕ ಕವಲು ಕವಲುಗಳಾಗಿ ಕಾವೇರಿ ಧುಮ್ಮಿಕ್ಕುವ ಸೋಬಗಿನ ನೋಟಕ್ಕೆ ಎರಡು ಕಣ್ಣುಗಳು ಸಾಲದಾಗುತ್ತದೆ.





ಒಂದು ಅಂದಾಜಿನ ಪ್ರಕಾರ ಚಿಕ್ಕ ಜಲಧಾರೆಗಳು 100, ದೊಡ್ಡವು 30 ಕ್ಕೂ ಹೆಚ್ಚು. ತಮಿಳು ನಾಡಿನ ತೂಗು ಸೇತುವೆಯೊ ಇಲ್ಲಿ ನೋಡಲು ಆಕರ್ಷಣೀಯವೇ.


ಧುಮ್ಮಿಕ್ಕುವಾಗ ಏಳುವ ಪನ್ನೀರಿನಂಥ ಹೊಗೆ ಹೊಗೆ! ಜಲಧಾರೆಯ ಗುಂಪು ಗುಂಪುಗಳನ್ನು ಆಯ್ದುಕೊಳ್ಳಲು ವಿಹಾರಾರ್ಥಿಗಳು ಹೊರಡುತ್ತಾರೆ.
ಹಾಗೆ ಆಯ್ದುಕೊಂಡು ಇಲ್ಲಿ ಜಲಕ್ರೀಡೆಯಾಡುವುದೇ ಒಂದು ಮೋಜು...


ಇಲ್ಲಿ ಲೆಕ್ಕವಿಡಲಾಗದಷ್ಟು ಪ್ರಪಾತಗಳ ಜಲಲ ಜಲಲ ಜಲಧಾರೆಗಳು!

ಈ ತೆಪ್ಪದೊಳಗೂ ಕೂತು ಬಂಡೆಗಳ ಗಿರಿ ಕಂದರಗಳ ನಡುವೆ ಹರಿವ ಹೊಳೆಯಲಿ ದೋಣಿ ವಿಹಾರವೂ ಮನಕೆ ಇನ್ನಷ್ಟು ಮುದವನ್ನೇ ನೀಡುತ್ತದೆ.

ಹರಿವ ತೊರೆಯ ಹಾಲ್ನೊರೆಗಳ ಬುಗ್ಗೆ ಬುಗ್ಗೆಯಲ್ಲಿ.. ಹೀಗೆ ಕಳೆದು ಹೋಗುವ ರಸನಿಮಿಷಗಳ ಒಮ್ಮೆಯಾದರೂ ಅನುಭವಿಸಿಯೆ ತೀರಬೇಕು.
ಹರೆಯದ ಮೈಮನಗಳು ಪುಳಕಗೊಂಡಾಗ ಜೀವನೋತ್ಸಾಹವೇ ಚಿಮ್ಮುವುದು.
ವೃದ್ಧರಿಗೊ ಹೊಸ ಹರೆಯವೇ ತುಂಬಿ ಬಂದಂತಾಗುವುದು.

ಮೈಸೂರಿನಿಂದ ಹೊಗೆನಕಲ್ ಗೆ ಮಲೆ ಮಹದೇಶ್ವರ ಬೆಟ್ಟ-ಗೋಪಿನಾಥಮ್ ಹೀಗೆ 200 ಕಿ.ಮೀ. ದೂರವಾದರೆ ಬೆಂಗಳೂರಿನಿಂದ 180 ಕಿ.ಮೀ. ಇದೆ.

Sunday, August 12, 2007

ಶಿವಮೊಗ್ಗ ಪರಿಸರದ ನೋಟಗಳು(ಫೋಟೋಗಳು)

ಶಿವಮೊಗ್ಗ ಸಮೀಪದ ಹರಕೆರೆ ದೇವಸ್ಥಾನದಲ್ಲಿ ನೂತನವಾಗಿ ಸ್ಥಾಪಿಸಲ್ಪಟ್ಟಿರುವ ಶಿವನ ಬೃಹತ್ ಶಿಲ್ಪ.
ಹರಕೆರೆ ದೇವಸ್ಥಾನದ ಪ್ರವೇಶ ದ್ವಾರ

ಸುಬ್ರಹ್ಮಣ್ಯ ಸ್ವಾಮಿಯ ಮೊರ್ತಿ ಪಕ್ಕದಲ್ಲೇ ಪಿರಮಿಡ್ ಇದೆ.

ವಿಶ್ವವಿಖ್ಯಾತ ಶಿಲ್ಪಿ ಶ್ರೀ ಕಾಶಿನಾಥ್ ಅವರ ಕಲಾ ಮಂದಿರ,ಹರಕೆರೆ.
ಗಾಜನೂರು ತುಂಗಾ ನೂತನ ಅಣೆಕಟ್ಟು.
ಗಾಜನೂರು ಪ್ರವಾಸಿ ಮಂದಿರ.

Friday, July 20, 2007

ಫ್ಯಾಷನ್ ಪ್ರಪಂಚ!

ಫ್ಯಾಷನ್ ಪೆರೇಡ್, ಸೌಂದರ್ಯ ಸ್ಪರ್ಧೆ, ಪಾಪ್ ಮ್ಯುಸಿಕ್ ಇವೆಲ್ಲವೂ ನಮ್ಮ ದೇಶಕ್ಕೆ ಪಾಶ್ಚಾತ್ಯ ಸಂಸ್ಕೃತಿಯ ಬಳುವಳಿ. ಆಧುನಿಕ ಬದುಕಿನ ರೀತಿ ರಿವಾಜುಗಳನ್ನು ಒಲೈಸುವ ಯುವ ಪೀಳಿಗೆಯವರಿಗೆ ನಮ್ಮ ಸಂಸ್ಕೃತಿಯಲ್ಲಿಲ್ಲದ ಸ್ವಾತಂತ್ರ್ಯ ಸ್ವಚ್ಛಂಧ ಪಾಶ್ಚಾತ್ಯ ಸಂಸ್ಕೃತಿಗೇ ಮಾರುಹೋಗುವಂತಾಗಿದೆಯಲ್ಲ. ಆದರೆ, ಯುವ ಪೀಳಿಗೆಯವರಲ್ಲಿ ಇದರ ಪ್ರತಿಕೂಲ ಪರಿಣಾಮದ ಪರಿಕಲ್ಪನೆ ಇದ್ದವರು, ತಮ್ಮ ತನದ ಶೈಲಿ ಸ್ಪಷ್ಟಪಡಿಸಿಕೊಂಡವರು ಎಚ್ಚೆತ್ತು ಮುನ್ನೆಡೆದವರು ಒಳ್ಳೆಯ ರೀತಿಯಲ್ಲಿ ಬದುಕಿ ಯಶಸ್ವಿಯಾದವರು ತೀರಾ ವಿರಳವೇ.

ಕೆಲವೊಮ್ಮೆ ಬುದ್ಧಿಗಿಂತಲೂ ಸೌಂದರ್ಯಕ್ಕೆ ಹೆಚ್ಚಿನ ಅರ್ಹತೆ ದೊರೆಯುತ್ತಿರುವಾಗ ಅಂಗಾಂಗ ಪ್ರದರ್ಶನಕ್ಕೆ ಆದ್ಯತೆ ಇರುವಾಗ ತಮ್ಮತನ ಮರೆತು ಹೋಗುವ ಅಪಾಯವೇ ಇದೆಯಲ್ಲ! ಈಗೀಗ ಹೆಚ್ಚು-ಹಣ ಹೆಸರು ಮಾಡುತ್ತಿರುವವರಲ್ಲಿ ತಮ್ಮ ಮೈಮಾಟದಿಂದ ಅಂಗಾಂಗ ಪ್ರದರ್ಶನದಿಂದ ಮುಂದೆ ಬಂದವರೇ ಆಗಿದ್ದಾರೆಂಬುದು ಗಮನಾರ್ಹ. ಇತ್ತೀಚೆಗೆ ಸಿನಿಮಾ ನಟಿ ಶಿಲ್ಪ ಶೆಟ್ಟಿಯಂತಹವರ ಉದಾಹರಣೆಯೆ ಸಾಕು. ವಿಪರ್ಯಾಸವೆಂದರೆ ನಮ್ಮ ಹಿರಿಯರೂ ಕೂಡ ಫ್ಯಾಷನ್ ಲೋಕದ ಮೋಡಿಗೊಳಗಾಗಿದ್ದಾರೆ. ತಾವು ಮನೆ ತುಂಬಿಸಿಕೊಳ್ಳ ಬಯಸುವ ಸೊಸೆಯೊ ಮಾಡ್ ಆಗಿರಬೇಕೆಂದು ಆಗ್ರಹಪಡಿಸಿವವರಿದ್ದಾರೆ. ಅಂಥವರು ಯುವಕ/ಯುವತಿಯರನ್ನು ಪ್ರೋತ್ಸಾಹಿಸುತ್ತಾರೆ. ಹೀಗಾಗಿ ಫ್ಯಾಷನ್ ಲೋಕ ದಿನೇ ದಿನೇ ಝಗಮಘಿಸುತ್ತಿದೆ. ದಿನ ಪತ್ರಿಕೆಯ ಮುಖಪುಟದತ್ತ ಓದುಗ ಮೊಟ್ಟ ಮೊದಲಿಗೆ ಕಣ್ಣು ಹಾಹಿಸುವ ಎಡ ಮೊಲೆಯನ್ನು ಪ್ರತಿ ನಿತ್ಯ ನಟೀಮಣಿಯೊ ಅಥವಾ ಹೊಸ ಮಾಡ್ ಹುಡುಗಿಯೊ ಅಲಂಕರಿಸಿ ಆ ಪತ್ರಿಕೆಯ ಆಕರ್ಷಣೆಯಾಗುತ್ತಾಳೆ. ಇನ್ನು ನಿಯತಕಾಲಿಕಗಳಲ್ಲಿ ವಾರದ ಪುರವಣೆ ಸಿನಿಮಾ ರಂಜನೆಯ ಪುಟಗಳಲ್ಲಿ ಅಂಥ ನಟೀ ಮಣಿಯರು ವೃದ್ಧರಾದವರಲ್ಲೂ ಮೈನವಿರೇಳಿಸುತ್ತಾಳೆಂದರೆ ಅತಿಶಯೋಕ್ತಿಯೇನಲ್ಲವಲ್ಲ.

ಫ್ಯಾಷನ್, ಮಾಡ್ಲಿಂಗ್ ನಲ್ಲಿ ಬರುಬರುತ್ತಾ ಬಿಚ್ಚುವಿಕೆಯೇ ಪ್ರಾಧಾನ್ಯವಾದಂತೆಲ್ಲ ಬಿಚ್ಚಮ್ಮಗಳಿಗೆ ಬೇಡಿಕೆಯೊ ಹೆಚ್ಚುವುದು ಸಹಜವೇ ಆಗಿದೆ. ಆದರೆ, ಎಲ್ ಬಿಚ್ಚಮ್ಮಗಳೂ ಯಶಸ್ವಿಯಾಗಲಾರರೆಂಬುದೂ ಬೇರೆ ಮಾತು. ಹಾಗೆಯೆ ಜೊಲ್ಲು ಸುರಿಸುವ ಎಲ್ಲ ಯುವಕರೂ ತಮ್ಮತನ ಉಳಿಸಿಕೊಂಡು ಒಳ್ಳೆಯ ರೀತಿಯಲ್ಲೆ ಇಂಥ ಚಟ ಹವ್ಯಾಸಗಳಿಂದ ಬದುಕ ಲಾರರಲ್ಲ. ಕಡೆಗೊಮ್ಮೆ ಹಣ ಸ್ಥಾನ ಮಾನಗಳು ದಕ್ಕದೇ ಹೋದಾಗ ಅದೇ ಬಿಚ್ಚಮ್ಮಗಳೆಷ್ಟೋ ತಮ್ಮ ಮನೆಗಳಿಂದಲೇ ದೂರವಾಗುವದರಲ್ಲಿ ಯಶಸ್ವಿಯಾಗಿ ಹೋಗುವ ಉದಾಹರಣೆಗಳಂತೂ ಖಂಡಿತ ಉಂಟಲ್ಲ.

ಮುಂಬೈ, ಚೆನ್ನೈ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಮಾಡಲಿಂಗ್ ಉದ್ಯೋಗ ಹೆಚ್ಚು ಹೆಚ್ಚು ವ್ಯಾಪಕವಾಗಿ ಬೆಳೆಯುತ್ತಿದೆ. ಈ ವೇದಿಕೆಯೆ ಸಿನಿಮಾ, ಟಿ.ವಿ.ತಾರೆಯರಾಗಲೂ ಸ್ಪ್ರಿಂಗ್ ಬೋರ್ಡ ಕೂಡ ಆಗುವುದುಂಟು. ಹೀಗೆ ಭಾರತದ ಮೊಲೆ ಮೊಲೆಯಿಂದ ಯುವತಿಯರು ಮಹಾನಗರಗಳಿಗೆ ಲಗ್ಗೆ ಇಡುತ್ತಿದ್ದಾರೆ. ಪ್ರೋಫೆಷನಲ್ ರೂಪದರ್ಶಿಗಳಾಗಿಯೊ ಇಲ್ಲವೇ ಹವ್ಯಾಸೀ (ಪಾರ್ಟ್ ಟೈಂ) ರೂಪದರ್ಶಿಗಳಾಗಿಯೊ ದುಡಿದವವರು ಕೆಲವರಾದರೆ, ಇನ್ನು ಕೆಲವರು ಇಲ್ಲೇ ಉಳಿಯಲಾರದೇ ಕೆಟ್ಟೇ ಹೊರಟು ಹೋದವರು. ಇನ್ನೂ ಕೆಲವರಿರುತ್ತಾರೆ ಸಮಾಜದ ಭಯದಿಂದ ತಮ್ಮ ಈ ಬಯಕೆ ಮನಸ್ಸಿನಲ್ಲೇ ಅಡಗಿಸಿಕೊಂಡವರು. ಅವಕಾಶಗಳಿಗಾಗಿ ಕಾಯುತ್ತಲೆ ಇರುವವರು. ಹೀಗಾಗಿ ಯುವಕ ಯುವತಿಯರಲ್ಲಿ ಫ್ಯಾಷನ್ ಒಂದು ಕೆಟ್ಟ ಚಟವಾಗಿ ಬೆಳೆಯುತ್ತಿರುವುದು ಆಧುನಿಕ ನಾಗರೀಕತೆಯ ಒಂದು ದುರಂತವೇ. ಹೇಳಬೇಕೆಂದರೆ, ಫ್ಯಾಷನ್ ಮಾಡ್ಲಿಂಗ್ ಖ್ಯಾತಿ ಮತ್ತು ಹಣವನ್ನು ತರುತ್ತದೆಯೆ ಹೊರತು ಹೆಚ್ಚಿನ ಪ್ರಮಾಣದ ಶೋಷಣೆಯಲ್ಲೇ ಕೊನೆಗೊಳ್ಳುತ್ತದೆ; ಅವರ ಯೌವನ ಕಾಂತಿ! ಬದುಕಿನ ಪ್ರೀತಿ ಎಂಬುದೇ ಮಾಯವಾಗಿ ಯಂತ್ರಕತೆಯಲ್ಲಿ ಭ್ರಮನಿರಸನಗೊಳ್ಳವವರೇ ಬಹಳ ಮಂದಿ. ಜೀವಿತದ ಕಡೆಗಾಲದಲ್ಲಿ ಒಂಟಿತನವೂ ಕಾಡ ತೊಡಗುತ್ತದೆ.