Friday, July 06, 2007

ದೊಡ್ಡವರು ಅವರಿಗಾಗಿ ನಡೆದದ್ದೇ ದಾರಿ

ದೊಡ್ಡವರು ಅವರಿಗಾಗಿ ನಡೆದದ್ದೇ ದಾರಿ. ಅವರು ಕಂಡುಂಡ ಅನುಭವದಂತೆ ವರ್ತಿಸುತ್ತಾರೆ. ಎಷ್ಟೋ ವೇಳೆ ಅವರೂ ಮನುಷ್ಯರೇ ಅವರದೇ ಹುಟ್ಟು ಗುಣಗಳು,ದೌರ್ಬಲ್ಯಗಳೂ ಇರುತ್ತವೆ. ಅವರ ಬೆನ್ನು ಅವರಿಗೆ ಕಾಣದೆಯೂ ಇರುತ್ತದೆ.

ಇತ್ತೀಚೆಗೆ ಇಂಥ ದೊಡ್ಡವರೂ ಇದ್ದಾರೆ. ತಾವು ಏನು ಹೇಳಿದರೂ ವೇದ ವಾಕ್ಯವೇ ಆಗಿಬಿಡುತ್ತದೆ. ಹಾಗೆಯೆ ತಾವು ಏನು ಮಾಡಿದರೂ ನಡೆಯುತ್ತದೆ. ಎನ್ನುವವರು. ಇಂಥವರಿಗೆ ಕಾರಂತರನ್ನೋ, ಸರ್ . ಎಮ್.ವಿ. ಅವರನ್ನೋ ಖಂಡಿತ ನಾವು ಹೋಲಿಸಲಾಗುವುದಿಲ್ಲ ಅಲ್ಲವೇ?

ಇನ್ನು ದೊಡ್ಡವರಾದವರಲ್ಲಿ ಕೆಲವರು ನಾನು ಹೇಳಿದಂತೆ ಮಾಡು, ನಾನು ಮಾಡಿದಂತೆ ಮಾಡಬೇಡ ಎನ್ನುವವರೂ ಇದ್ದಾರೆ. ಆದರೇನು! ದೊಡ್ಡವರು ಅನುಸರಿಸಿದ ಶಿಸ್ತು ಬದುಕಿದ ರೀತಿ ಇವುಗಳಿಂದ ಕಲಿಯುವುದು ಬಹಳವಿರುತ್ತದೆ. ಅದನ್ನಷ್ಟೇ ಕಿರಿಯರು ಆಯ್ದು ಅಳವಡಿಸಿಕೊಳ್ಳುವ ಜಾಣ್ಮೆ ತೋರಬೇಕು.

ಕಿರಿಯರಾದವರು ದೊಡ್ಡವರ ದೌರ್ಬಲ್ಯಗಳನ್ನೆ ಎತ್ತಿ ಆಡಿ ಹೇಳುವಂತಾಗುವ ಸಂದರ್ಭಗಳೆಂದರೆ, ದೊಡ್ಡವರು ದೊಡ್ಡವರಾಗಿ ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳದೇ ಇದ್ದಾಗಲೇ. ಕೆಲ ದೊಡ್ಡವರಂತೂ ನಾನು ಮೇಲೆ ಇದ್ದೇನೆ ನಾನು ಹೇಳಿದ್ದು ಕೆಳಗಿನವರಿಗೆ ಸಿಡಿಯುತ್ತದೆ; ಬಡಿಯುತ್ತದೆ. ಆದರೆ, ಕೆಳಗಿನಿಂದ ಅವರು ಹೇಳುವಾಗ ಉಗುಳೂ ನನಗೆ ಸಿಡಿಯುವುದಿಲ್ಲ ಎಂಬ ಧೋರಣೆಯವರು. ಬಹುಶಃ ಹೊಲಸು ರಾಜಕೀಯ ಮಾಡುವವರಲ್ಲಿ ಇದನ್ನು ಕಾಣ ಬಹುದು. ಕೆಲ ದೊಡ್ಡವರಲ್ಲಿ ಎಚ್ಚರಿಕೆಯಿಂದ ತೂಕದ ಮಾತನಾಡುವವರೂ ಇರುತ್ತಾರೆ. ಯಾಕೆಂದರೆ, ತಾವು ಏನು ಹೇಳಿದರೂ ಅದು ಗಂಭೀರವಾಗಿ ಪರಿಗಣಿಸಲ್ಪಡುತ್ತದೆಂದೇ. ಇವರ ಮಾತುಗಳು ಅಣಿ ಮುತ್ತುಗಳೇ ಆಗಿದ್ದರೆ ನಾವು ಅಚ್ಚರಿ ಪಡಬೇಕಾಗಿಲ್ಲ.

ಇನ್ನೊಂದು ಮಾತು ಹೇಳಿ ಮುಗಿಸುತ್ತೇನೆ. ಇಂಥ ದೊಡ್ಡವರೂ ಇರುತ್ತಾರೆ ನೋಡಿ, “ನನಗೀಗ 90 ವರುಷ ಜನ ನನ್ನನ್ನು ಮಹಾನ್ ಸಾಧಕನಂತೆ ಗುರುತಿಸಿದ್ದಾರೆ. ನಾನೇನೂ ಅಂತದ್ದು ಮಾಡಿಲ್ಲ. ನಾನು ಮಾಡದೇ ಇರುವ ಒಳ್ಳೆಯ ಕೆಲಸಗಳು ಮಾಡಲಿಕ್ಕೆ ಇನ್ನೂ ಎಷ್ಟೋ ಇವೆ. ಅವುಗಳೇನೆಂದು ನಾನು ಬುದುಕಿದ ರೀತಿಯಿಂದ ನಾನು ಇತರರ ಒಳಿತಿಗಾಗಿಯೆ ಹೇಳಿದ ಮಾತುಗಳಿಂದ ತಿಳಿಯುತ್ತವೆ” ಎನ್ನುತ್ತಾರೆ.
-ಎಚ್.ಶಿವರಾಂ

No comments: