Thursday, February 11, 2010

ಲೋಕಾಯುಕ್ತರಿಗೆ ಪರಮಾಧಿಕಾರ: ಮುಖ್ಯ ಮಂತ್ರಿಯ ಕಟುನಿರ್ಧಾರ..?

ಇತ್ತೀಚಿನ ವರ್ಷಗಳಲ್ಲಿ ವಿಜಯ ಕರ್ನಾಟಕ ನನ್ನ ಮೆಚ್ಚಿನ ದಿನ ಪತ್ರಿಕೆಯಾಗಿದೆ. ಪತ್ರಿಕೆಯ ಅಂತರ್ಮುಖಿ ಮತ್ತು ಮುಖಾಮುಖಿ ಪುಟದ ಲೇಖನಗಳು ಬಹಳ ಮೆಚ್ಚುಗೆಯಾಗುತ್ತವೆ. ವಿ.ಕ.೨೮ ಜನವರಿ ೨೦೧೦ರ ಸಂಚಿಕೆಯಲ್ಲಿ ಸಂಪಾದಕರ ಅಂಕಣದಲ್ಲಿ(ನೂರೆಂಟು ಮಾತು) "ಮರ್ಜಿಗೆ ಬೀಳದವ ನಾಯಕ, ಉಳಿದವ ಹಿಂಬಾಲಕ" ಎಂಬ ಲೇಖನದಲ್ಲಿ ನಮ್ಮ "ಜನನಾಯಕ"ರುಗಳ ಬಗ್ಗೆ ಹೇಳುತ್ತಾ.... ಕೆಲವರಿರತ್ತಾರೆ ಅವರಿಗೆ ಕಟು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಪರಿಣಾಮದ ಭಯ. ಹೀಗಾಗಿ ಅವರು ಯಾವುದೇ ಕಟು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ...ಇನ್ನು ಮೊರುವರ್ಷ ಸರಕಾರಿ ನೌಕರರಿಗೆ ತುಟ್ಟಿಭತ್ತೆ ನೀಡಲಾಗವುದಿಲ್ಲ, ನಾನು ಅಧಿಕಾರದಲ್ಲಿರುವಷ್ಟು ದಿನ ರೈತರಿಗೆ ಪುಕ್ಕಟ್ಟೆ ವಿದ್ಯುತ್ ನೀಡಲಾಗುವುದಿಲ್ಲ. ಸಾಲ ಮನ್ನಾ ಮಾಡುವುದಿಲ್ಲ ಎಂದು ಯಾವನಾದರೂ ಘೋಷಿಸಿದರೆ ಆ ಮುಖ್ಯ ಮಂತ್ರಿಯ ಎದೆಗಾರಿಕೆಯನ್ನು ಮುಟ್ಟಿನೋಡಬೇಕಾಗುತ್ತದೆ ಎಂದಿದ್ದಾರೆ.

ಹಾಸಿಗೆ ಇದ್ದಷ್ಟು ಕಾಲುಚಾಚುವಷ್ಟು ಸಂಬಳ ಪಡೆಯುವ ಬಡಪಾಯಿ ಸರಿಕಾರಿ ನೌಕರರ ಮೇಲೇಕೆ ಕಣ್ಣು! ಇನ್ನು ಬಿಸಿಲು,ಮಳೆ ಗಾಳಿ ಎನ್ನದೇ ಹಗಳಿರಳೂ ಕಷ್ಟಪಟ್ಟು ದುಡಿದರೂ ತಕ್ಕ ಫಸಲು ಕಾಣದೇ ಕಂಗೆಟ್ಟು ಹೋಗುವ ರೈತರ ಮೇಲೇಕೆ ಗಾದಾ ಪ್ರಹಾರ! ಮತ್ತೆ ನೋಡಿದರೆ- ವಿ.ಕ. 4 ಫೆಬ್ರವರಿ 2010 ರ ಮುಖಪುಟದ ಟಾಪ್ ರೈಟ್ ಕಾರ್ನರ್ ಹೆಡ್ ಲೈನ್ ಹೇಳುತ್ತದೆ- “ನನಗೆ ಪರಮಾಧಿಕಾರ ನೀಡಿದ ಮರುದಿನವೇ ವಿಧಾನ ಸೌಧ, ವಿಕಾಸ ಸೌಧದಲ್ಲಿರುವವರನ್ನು ಖಾಲಿಮಾಡಿಸುವೆ” ಎಂಬ ಲೋಕಾಯುಕ್ತ ನ್ಯಾ.ಸಂತೋಷ್ ಹಗ್ಡೆಯವರ ಹೇಳಿಕೆ ಇದೆಯಲ್ಲ..! ಹೌದು, ಕೋಟಿ ಕೋಟಿಗಟ್ಟಲೆ ಆಸ್ತಿಪಾಸ್ತಿ ಮಾಡಿರುವ ಶಾಸಕರು ಸಚಿವರುಗಳ ಬಂಗಲೆಯಲ್ಲಿ 24 ಗಂಟೆ ವಿದ್ಯುತ್ ವ್ಯಯವಾಗುವುದಿಲ್ಲವೇ...? ಅವರೆಲ್ಲ ಕೋಟ್ಯಾಧೀಶ್ವರರಾಗಿವುರು ಅವರ ಮಾಸಿಕ ಸಂಬಳದಿಂದಲೇನು? ಅಂಥವರನ್ನು ಬಯಲಿಗೆಳೆಯುವುದಕ್ಕಾಗಿ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವಂತ ಕಟು ನಿರ್ಧಾರವನ್ನು ಈಗ ಯಾವ ಮುಖ್ಯ ಮಂತ್ರಿಯೊ ತೆಗೆದುಕೊಳ್ಳುವುದಿಲ್ಲ. ಪರಿಣಾಮ ಹುತಾತ್ಮರನಾಗುವ ಭಯವೇ...?

ಅದೇ ಲೇಖನದಲ್ಲಿ ಮುಂದುವರೆದು ತಮ್ಮ ದೇಶೋದ್ಧಾರಕ್ಕಾಗಿ ಕಟು ನಿರ್ಧಾರ ತೆಗೆದುಕೊಂಡು ಹುತಾತ್ಮರಾಗಿ ಹೋದ ಮಹಾನ್ ನಾಯಕರುಗಳ ಉದಾಹರಣೆಗಳಿವೆ. ಅಮೆರಿಕಾದ ಅಧ್ಯಕ್ಷ ಅಬ್ರಹಾಂ ಲಿಂಕನ್ ಗುಲಾಮಗಿರಿಗೆ ಸಂಬಂಧಿಸಿದಂತೆ ಪ್ರತ್ಯೇಕ ರಾಜ್ಯದ ಬೇಡಿಕೆ ವಿರುದ್ಧ ಯುದ್ಧ ಘೋಷಿಸಿ ಹುತಾತ್ಮನಾದರೆ, ಸಿಖ್ ಉಗ್ರಗಾಮಿಗಳು ಅಮೃತಸರದ ಸ್ವರ್ಣಮಂದಿರವನ್ನು ಸುತ್ತುವರೆದಾಗ ಅವರನ್ನು ಮುಗಿಸಲೆಂದು ಪ್ರಧಾನಿ ಇಂದಿರಾ ಗಾಂಧಿ ತೆಗೆದುಕೊಂಡ ನಿರ್ಧಾರ ಅನಂತರ ಅವರನ್ನೇ ಬಲಿತೆಗೆದುಕೊಂಡಿತು. ಇನ್ನು ಹಿರಿಯ ರಾಜಕಾರಣಿ ಬಾಬು ಜಗಜೀವನ್ ರಾಮ್ ಅವರ ಸುಪುತ್ರನ ಲೈಂಗಿಕ ಹಗರಣವನ್ನು ಮುಚ್ಚಿ ಹಾಕಿ ಅವರ ಮಾನ ಉಳಿಸಿ ತಾವೂ ಅಧಿಕಾರಕ್ಕೆ ಕಚ್ಚಿಕೊಳ್ಳುವುದನ್ನು ಇಚ್ಛಿಸದೇ ತಮ್ಮ ಸರ್ಕಾರ ಬಿದ್ದು ಹೋದರೂ ಸರಿಯೇ ಆ ಹಗರಣದ ಸತ್ಯವು ಪ್ರಕಟವಾಗುವಂತೆ ಮಾಡಿದ್ದರು ಪ್ರಧಾನಿ ಮೊರಾರ್ಜಿ ದೇಸಾಯಿ ಎಂದು ಗತಇತಿಹಾಸದ ಪುಟಗಳನ್ನು ತರೆದಿದ್ದಾರೆ. ಅಂತಹ ಕಟು ನಿರ್ಧಾರಗಳನ್ನು ನಿರ್ಭಯವಾಗಿ ತೆಗೆದುಕೊಂಡ ಅವರೆಲ್ಲರೂ ಮಹಾನ್ ನಾಯಕರೇ ಸರಿ.

ಈಗ ಮಾನಹೋದರೂ ಸರಿಯೆ ಅಧಿಕಾರ ಬಿಟ್ಟುಕೊಡೊಲ್ಲ; ಸರ್ಕಾರವನ್ನು ಬೀಳಗೊಡುವುದಿಲ್ಲವೆಂಬ ಭಂಡತನ! ಅಷ್ಟೇ ಅಲ್ಲ; ಯಾವುದೇ ಮರ್ಜಿಗೆ ಬೀಳದೆ ರಾಜಕಾರಣ ನಡೆಯೊಲ್ಲ; “ನಮ್ಮ’ ಸರ್ಕಾರ ಉಳಿಯೊಲ್ಲ. ಹೌದು, ಈಗ ಮಹಾನ್ ನಾಯಕರಾಗುವುದು ಬೇಕಿಲ್ಲ. ಹುತಾತ್ಮರಾಗುವುದಂತೂ ಬೇಡವೇ ಬೇಡ....ಅಲ್ಲವೇ... ಏನೆ ಆಗಲಿ, ನಮ್ಮ ಜನಪ್ರತಿನಿಧಿ ಜನನಾಯಕ(?)ರೆನಿಸಿಕೊಂಡವರು ಹಾಗೂ ಜನಸಾಮಾನ್ಯರು ಗಂಭೀರವಾಗಿ ಚಿಂತಿಸುವಂತಹ ಲೇಖನ. ಕೊಟ್ಟಿರುವ ವಿ.ಕ. ಸಂಪಾದಕರಿಗೆ ಧನ್ಯವಾದಗಳು.

No comments: