Thursday, November 18, 2010

ನನ್ನ ಜೀವನ ಚಿತ್ರಗಳು-ಮಿಡ್ಲ್ ಸ್ಕೂಲ್ ನಲ್ಲಿದ್ದಾಗ...

ನಾನು ಹುಟ್ಟಿದ್ದು ದಾವಣಗೆರೆಯಾದರೂ, ನನ್ನ ಬಾಲ್ಯವೆಲ್ಲ ಕಳೆದದ್ದು ಶಿವಮೊಗ್ಗಾ ಜಿಲ್ಲೆಯ ತಾಲ್ಲೂಕು ಕೇಂದ್ರ ಭದ್ರಾವತಿಯಲ್ಲಿ. ಇತ್ತೀಚೆಗೆ ಭದ್ರಾವತಿ ಹಳೇನಗರಕ್ಕೆ ಭೇಟಿಕೊಟ್ಟಾಗ, ನಾನು 60 ರ ದಶಕದಲ್ಲಿ ಆಟವಾಡಿ ಬೆಳೆದ ಜಾಗಗಳನ್ನೆಲ್ಲ ನೋಡಿಕೊಂಡು ಬರಬೇಕೆನಿಸಿತ್ತು.  ಕೈಯಲ್ಲಿ ಕ್ಯಾಮೆರಾ ಇತ್ತು. ಬಾಲ್ಯದ ಆ ಸವಿನೆನಪಿನ ಕೆಲವು ಚಿತ್ರಗಳು ಇಲ್ಲಿವೆ ನೋಡಿ...

1. ಇದು ನಾನು ಮಿಡ್ಲ್ ಸ್ಕೂಲ್ ಐದನೇ ತರಗತಿಯಲ್ಲಿ ಓದುತ್ತಿದ್ದಾಗ ನಾವು ವಾಸಿಸುತ್ತಿದ್ದ ಭದ್ರಾವತಿ, ಹಳೇನಗರ, ಉಪ್ಪಾರ ಬೀದಿಯ ಮನೆ. ನಮ್ಮ ತಂದೆ ಮತ್ತು ತಾಯಿ ಇಬ್ಬರೂ ಪ್ರೈಮರಿ ಶಾಲಾ ಉಪಾಧ್ಯಾಯರಾಗಿದ್ದರು. ಆಗ ನಾವಲ್ಲಿದ್ದ ಬಾಡಿಗೆಯ ಪುಟ್ಟ ನಾಡ ಹೆಂಚಿನ ಮನೆ ಇದು.ಐದು ದಶಕಗಳನಂತರವೂ ಅಂದು ಹೇಗಿತ್ತೋ ಹಾಗೇ ಇರುವುದು ತೀರಾ ಅನಿರೀಕ್ಷಿತವೇ ಆಗಿತ್ತು!
ಇನ್ನೊಂದು ದೊಡ್ಡ ಅಚ್ಚರಿಯೆಂದರೆ ನಾನು ಈ ಫೋಟೋ ತೆಗೆಯುತ್ತಿದ್ದ ಸಂದರ್ಭದಲ್ಲಿ ಸುಮಾರು 10-12 ವರ್ಷದ ಸ್ಕೂಲ್ ಯೂನಿಫಾರಂನಲ್ಲಿದ್ದ ಹುಡುಗನೊಬ್ಬ ಇದೇ ಮನೆಯಿಂದ ಹೋರಗೋಡಿ ಬಂದ. ಪಾಪ! ಮಗುವಿಗೆ ಇವರ್ಯಾರಪ್ಪಾ ನಮ್ಮ ಮನೆ ಫೋಟೋ ತೆಗೆಯುವವರು ? ಎಂದು ಆಶ್ಚರ್ಯ ಗಾಬರಿ ಎರಡೂ ಆಗಿದ್ದಿರಲಿಕ್ಕೂ ಸಾಕು.
ನಾನು ಆ ಹುಡುಗನನ್ನು ಹತ್ತಿರ ಕರೆದು ಹೇಳಿದೆ, "ನಾನು ನಿಮ್ಮ ಮನೆ ಫೋಟೋ ಏಕೆ ತೆಗೆದೆ ಗೊತ್ತೇನು? ನಾನೂ ನಿನ್ನ ಹಾಗೇ ಹುಡುಗನಿದ್ದಾಗ ಇದೇ ಮನೆಯಲ್ಲೇ ಇದ್ದೆ".
"ಹೌದಾ ಅಂಕಲ್" ಎಂದ.
"ಅದರ ಸವಿ ನೆನಪಿಗಾಗಿ ಈ ಫೋಟೋ ಎಂದೆ.  ಅಲ್ಲದೇ, ನಿಮ್ಮ ತಂದೆ ಏನು ಕೆಲಸ ಮಾಡುತ್ತಾರೆ ?" ಕೇಳಿದೆ,
"ಅವರು ಸ್ಕೂಲ್ ಮೇಷ್ಟ್ರು " ಎನ್ನಬೇಕೇ...
ನಮ್ಮ ತಂದೆ ತಾಯಿ ಇಬ್ಬರೂ ಇಲ್ಲೇ ಸ್ಕೂಲ್ ಮೇಷ್ಟ್ರಾಗಿ ವಾಸವಾಗಿದ್ದರು ಎಂದೆ .
ಹುಡುಗ ನಕ್ಕ ಛಂಗನೆ ಜಿಗಿಯುತ್ತ ಮುಂದೆ ಓಡಿದ.

2 comments:

ಸುಬ್ರಮಣ್ಯ said...

ಚಂದದ ಲೇಖನ. ಮನೆ ಇಂದೂ ಹಾಗೇ ಇರುವುದು ಆಶ್ಚರ್ಯ!!

ShivaRam H said...

ಖಂಡಿತ ಆಶ್ಚರ್ಯಕರ, ನನ್ನ ಅಕ್ಕ ತಮ್ಮಂದಿರೂ ಹಾಗೂ ನನ್ನ ಮಕ್ಕಳೂ ಇದೇ ಮಾತನ್ನು ಹೇಳಿದರು. ಅದು ಸ್ವಂತ ಮನೆಯೂ ಅಲ್ಲ, ಬಾಡಿಗೆಯ ಮನೆ ಬೇರೆ....ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು