Friday, November 19, 2010

ಚೆನ್ನಗಿರಿ ತಾತ ಪಾಪಯ್ಯನವರ ಚತ್ರದಲ್ಲಿ....

ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಾಲಯ,ಭದ್ರಾವತಿ
ನಾನು ಪ್ರೈಮರಿ ಶಾಲೆಯಲ್ಲಿದ್ದಾಗ ಭದ್ರಾವತಿ ಹಳೇನಗರದ ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಾಲಯ ಮತ್ತು ಶ್ರೀ ರಾಘವೇಂದ್ರಸ್ವಾಮಿಗಳ ಮಠ ಇವುಗಳ ಪರಿಸರದಲ್ಲೇ ಗೋಲಿ ಆಡಿಕೊಂಡು ಬೆಳೆದ ಆ ದಿನಗಳನ್ನು ಮರೆಯಲಾರೆ. ಇದು ಬಹುತೇಕ ಬ್ರಾಹ್ಮಣ ವರ್ಗದವರಿದ್ದ ಸ್ಥಳ. ಈ ದೇವಾಲಯ ಮತ್ತು ಮಠದ ಎಡ ಮಗ್ಗುಲಿನ ಎದುರಿಗಿನ ಮುಖ್ಯವಾದ ರಸ್ತೆಯು ತರೀಕೆರೆ ರಸ್ತೆಯ ಕಡೆಗೆ ಹೋಗುತ್ತದೆ.
ಅಂದಿನ ಕಾಲಕ್ಕೆ ಅಂದರೆ,1960ರ ದಶಕದಲ್ಲಿ ಇಲ್ಲಿದ್ದ ಚೆನ್ನಗಿರಿ ಶ್ರೀ ಪಾಪಯ್ಯನವರ ದೊಡ್ಡ ಚತ್ರದ ವಠಾರದಲ್ಲಿದ್ದೆವು. ಅದೇ ಚತ್ರದಲ್ಲಿ ಅದೇ ತರೀಕೆರೆ ರಸ್ತೆಯ ಎದುರಿಗೇ ಇತ್ತು ನಮ್ಮ ಮನೆ; ನನ್ನ ಬಾಲ್ಯಾರಂಭ ಕಾಲದಲ್ಲಿದ್ದ ಮನೆ, ನಮ್ಮ ತಾತನ ಮನೆ.
ಶ್ರೀ ರಾಮೇಶ್ವರ ಸುಬ್ರಮಣ್ಯ ದೇವಸ್ಥಾನದ ಬಲಕ್ಕಿರುವ ಭದ್ರಾನದಿಯ ದಂಡೆಯಿಂದ..
ಯಾಕೆಂದರೆ, ಪಾಪಯ್ಯನವರು ಬೇರೆ ಯಾರೂ ಅಲ್ಲ; ನನ್ನ ತಾಯಿಯ ತಂದೆಯೆ.  ಅಂದಿನ ಕಾಲಕ್ಕೆ ಚೆನ್ನಗಿರಿಯಲ್ಲಿ ದೊಡ್ಡ ಶ್ರೀಮಂತರಾದ ಆ ತಾತನವರನ್ನು ನಾನು ನೋಡಲೇ ಇಲ್ಲವೆನ್ನಿ. ಅಷ್ಟೇ ಅಲ್ಲ, ತಾತ ಎಂದೋ ತೀರಿಕೊಂಡಿದ್ದರಲ್ಲ;  ಆ ಚತ್ರದ ಒಡೆತನವೆಲ್ಲ ನಮ್ಮ ಸೋದರ ಮಾವಂದಿರು ಮತ್ತು ನನ್ನ ತಾತ ಪಾಪಯ್ಯನವರ ರೈಸ್ ಮಿಲ್ ನಲ್ಲಿ ಲೆಕ್ಕ ಬರೆಯುತ್ತಲಿದ್ದ ಹಾಗೂ ತಾವೂ ಅವರ ವ್ಯವಹಾರದ ಪಾಲುದಾರರೆಂದು ಹೇಳಿಕೊಳ್ಳುತ್ತಿದ್ದ ಕೃಷ್ಣಾಜಿ ರಾಯರ ಮಕ್ಕಳ ಕೈಯಲ್ಲೇ ಇತ್ತು. ಬಡ ಮಾಸ್ತರಾದ ನಮ್ಮ ತಂದೆಯವರು ಅಲ್ಲೇ ನನ್ನ ಸೋದರ ಮಾವಂದಿರ ಪಾಲಿಗೆ ಬಂದ ಕೆಲವಾರು ಮನೆಗಳಲ್ಲೊಂದಾದ ಒಂದು ಅಂಕಣದ ಮನೆಯಲ್ಲಿ ವಾಸವಾಗಿದ್ದರಷ್ಟೇ. ಆನಂತರ, ನಮ್ಮ ಸೋದರ ಮಾವಂದಿರು ಅವರ ಕುಟುಂಬದ ಕಾರಣಕ್ಕಾಗಿ  ತಮ್ಮ ಭಾಗದ ಚತ್ರವನ್ನೇ ಮಾರಿಬಿಟ್ಟರು.ಬಳಿಕ ಉಳಿದ ಭಾಗವನ್ನೂ ಕೃಷ್ಣಾಜಿರಾಯರ ಮಕ್ಕಳೂ ಮಾರಿಕೊಂಡರು.
ಈಗ ಆ ಚತ್ರದ ಮನೆಗಳೆಲ್ಲಿ..? ಆ ಜಾಗದ ಹಳೆಯ ಕುರುಹೂ ಕೂಡ ಸಿಗುವುದು ಕಷ್ಟವೇ.... ಆ ಚತ್ರವೆಲ್ಲವೂ ಡಿಮಾಲಿಷ್ ಆಗಿದೆ. ಜಾಗವೂ ಸಹ ಚಿಂದಿ ಚಿತ್ರಾನ್ನವಾಗಿ ಯಾರ್ಯಾರಿಗೋ ಹಂಚಿ ಹೋಗಿ ಬಿಟ್ಟಿದೆ!. ಅಲ್ಲಲ್ಲಿ ಮನೆಗಳೂ ತಲೆ ಎತ್ತಿವೆ.
ಇದನ್ನೆಲ್ಲ ಯಾಕೆ ಹೇಳಬೇಕೆನಿಸಿತೆಂದರೆ, ನಮ್ಮದೇ ಎನ್ನಬಹುದಾದ ನಮ್ಮ ತಾತನ ಮನೆಯಲ್ಲಿದ್ದವರು ನಾವು, ಅದರ ಕುರುಹೋ ಒಂಚೂರು ಉಳಿದಿಲ್ಲ! ಆ ಬಳಿಕ ಮೇಲೆ ಹೇಳಿದಂತೆ ನಾವು ವಾಸವಾಗಿದ್ದ ಉಪ್ಪಾರ ಬೀದಿಯಲ್ಲಿದ್ದ ಮತ್ತು ಹಳದಮ್ಮನ ಕೇರಿಯಲ್ಲಿದ್ದ ಎರಡೂ ಮನೆಗಳು ಇಂದಿಗೂ ಹಾಗೇ ಇರುವುದು ಈ ನಮ್ಮ ಬದುಕಿನ ವಿಪರ್ಯಾಸವಲ್ಲವೇ ಅನ್ನಿಸಿಬಿಟ್ಟಿತ್ತು.


No comments: