Thursday, December 04, 2014

ಕನ್ನಡ ಕಡ್ಡಾಯವಾಗಲೆಂದು, ನೆನೆಗುದಿಗೆ ಬಿದ್ದಿರುವ
೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನ


Devnur Mahadeva
[My pencil Sketch]
ಕಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ, ಕುಡಿಯುವ ನೀರು, ಗಡಿವಿವಾದ, ಕಸವಿಲೇವಾರಿ ಮತ್ತು ಕನ್ನಡಿಗರಿಗೆ ಕನ್ನಡ ನೆಲದಲ್ಲಿ ಉದ್ಯೋಗಕ್ಕೆ ಆದ್ಯತೆ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗೊಂಡ ನಿರ್ಣಯಗಳು ಕೇವಲ ವೇದಿಕೆಯ ಮೇಲೆ ಮೊಳಗುವ ಕೊಂಬು ಕಹಳೆಗಳಾಗಿದ್ದು, ಅವ್ಯಾವುವೂ ಸರ್ಕಾರದ ಮಟ್ಟದಲ್ಲಿ ಜಾರಿಯಾಗದೇನೇ ಎಂದಿಗೂ ಬಗೆಹರಿಯದ ಜ್ವಲಂತ ಸಮಸ್ಯೆಗಳಾಗಿಯೇ ಉಳಿದಿವೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳೆಂದರೇನೆ ಅವು ಗಾಳಿಗೋಪುರಗಳಾಗಿ ಸಮ್ಮೇಳನಗಳು ಜಾತ್ರೆಗಳಾಗಿಬಿಡುವುದರಿಂದ, ಸಮ್ಮೇಳ ನಡೆಸುವುದೇ ನಿಷ್ಪ್ರಯೋಜಕವೆನಿಸಿದೆ.
ಇದೀಗ ವರ್ಷಂಪ್ರತಿಯಂತೆ ನಡೆಯಲಿರುವ ೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆನೆಗುದಿಗೆ ಬಿದ್ದಿದೆ. ಈ ಸಮ್ಮೇಳನಕ್ಕೆ ದಲಿತ ಸಾಹಿತಿಯೊಬ್ಬರು ಅಧ್ಯಕ್ಷರಾಗಬೇಕೆಂದು ಸಾಹಿತಿ ದೇವನೂರು ಮಹಾದೇವ ಅವರನ್ನು ಆಹ್ವಾನಿಸಿದ್ದಾರೆ. ದೇವನೂರರು ತಾವೊಬ್ಬ ದಲಿತ ಸಾಹಿತಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ಮೊದಲು ಒಬ್ಬ ಸಾಮಾನ್ಯ ದಲಿತ ವ್ಯಕ್ತಿಯಾಗಿ ಪ್ರತಿಕ್ರಿಯಿಸಿದ್ದಾರೆ. ದಲಿತರ ಮುಗ್ಧತೆ, ಅನಕ್ಷರತೆಯನ್ನು ಹತ್ತಿರದಿಂದ ಕಂಡವರಾಗಿದ್ದು,  ಅವರ ಮುಖ್ಯ ಬೇಡಿಕೆಯೇ ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಬೇಕೆಂಬುದು. ಅವರ ಈ ಹೇಳಿಕೆ ನಿಜಕ್ಕೂ ಕನ್ನಡಿಗರನ್ನು ಜಾಗೃತಗೊಳಿಸುವಂತಿದೆ.

ದಲಿತರಿಗೆ ಮಾತ್ರವಲ್ಲ ಕರ್ನಾಟಕದ ೬ ಕೋಟಿ ಕನ್ನಡಿಗರೂ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕನ್ನಡವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಲೇ ಬೆಕೆಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈಗಾಗಲೇ, ನರ್ಸರಿಯಿಂದ ಇಂಗ್ಲೀಷ್ ಕಲಿತರೇನೆ ಮಕ್ಕಳು ಬುದ್ಧಿವಂತರಾಗಿ ಉತ್ತಮ ಸಂಬಳದ ಉದ್ಯೋಗ ಪಡೆಯುತ್ತಾರೆಂಬ ತಪ್ಪು ಕಲ್ಪನೆಯೇ ನಿಜಕ್ಕೂ ಹೆತ್ತವರಿಗೆ ಅವರ ಮುಪ್ಪಿನ ಕಾಲದಲ್ಲಿ  ತಲೆನೋವಾಗಿ ಪರಿಣಮಿಸಿತ್ತಿರುವುದನ್ನು ಕಾಣುತ್ತಿದ್ದೇವೆ. ಯಾಕೆಂದರೆ, ಕನ್ನಡದಲ್ಲಿ ಓದಲು ಬಾರದ ಸಾವಿರಗಳಿಂದ ಲಕ್ಷಗಟ್ಟಲೆ ಸಂಪಾದಿಸುವ ಸಾಫ್ಟ್ ವೇರ್ ಮತ್ತು ಇತರೆ ಉನ್ನತ ಉದ್ಯೋಗಿಗಳ ಯುವಪೀಳಿಗೆ ಬಹಳಷ್ಟು ಬೆಳೆಯುತ್ತಿದೆ. ಅವರು ಮಾತೃಭಾಷೆ ಕನ್ನಡದಿಂದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯಿಂದ ದೂರವಾಗುದಲ್ಲದೇ ತಮ್ಮ ಹೆತ್ತವರ ಮನೆ ಮನಸ್ಸುಗಳಿಂದಲೇ ದೂರವಾಗುತ್ತಿದ್ದಾರೆ. ವಿದೇಶಕ್ಕೆ ಹೋಗಿ ನೆಲೆಸುತ್ತಿದ್ದಾರೆ. ಅಂತಹ ಹೆತ್ತವರು ತಮ್ಮ ಮಕ್ಕಳ ಚಿತ್ರ ವಿಚಿತ್ರ ಲೈಫ್ ಸ್ಟೈಲ್ ಗಳನ್ನು ಬದಲಿಸಲಾಗದೇನೆ ದೂರದಿಂದಲೇ ನೋಡುತ್ತ ನೋವೂ ನುಂಗಿಕೊಂಡು ಬದುಕಲಾರದೇನೆ ಬದುಕುತ್ತ ಒಂಟಿತನ ಅನುಭವಿಸುತ್ತಾರೆ. ತಾವು ಮಕ್ಕಳನ್ನು ಚಿಕ್ಕದಿಂನಿಂದ ನಮ್ಮ ಕಣ್ಣೆದುರಿನಲ್ಲೆ ಇಟ್ಟುಕೊಂಡು ಕನ್ನಡ ಕಲಿಸದೇನೆ ದೊಡ್ಡ ತಪ್ಪು ಮಾಡಿದೆವು ಎಂದೇ ಪರಿತಪಿಸುವವರನ್ನು ನೋಡಿದ್ದೇನೆ. ನೆಲೆಸುತ್ತಿದ್ದಾರೆ [ ಇದಕ್ಕೆ ಹೊರತಾಗಿ ಕೆಲ ಯುವ ಮಕ್ಕಳ ಉದಾಹರಣೆಗಳಿರಬಹುದು].

ಕರ್ನಾಟಕ ಸರ್ಕಾರ ನಮ್ಮ ನೆರೆಯ ರಾಜ್ಯಗಳಾದ ತಮಿಳು ನಾಡು ಮತ್ತು ಮಹಾರಾಷ್ಟ್ರ ಇವುಗಳನ್ನು ನೋಡಿಯೂ ಅವರ ಮಾತೃಭಾಷೆಯ ಅಭಿಮಾನ ಕಂಡೂ ನಮ್ಮ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಕನ್ನಡಿಗರು ಅಭಿಮಾನಶೂನ್ಯರಲ್ಲವೆಂಬುದನ್ನು ತೋರಿಸಬೇಕಾಗಿದೆ. ಅಂತಹ ಕನ್ನಡಪರ ಕಾಳಜಿ ನಮ್ಮ ಗಣ್ಯಸಾಹಿತಿಗಳಲ್ಲೂ ಇದ್ದಂತಿಲ್ಲ. ಕನ್ನಡಪರ ಸಂಘಟನೆಗಳಲ್ಲೂ ಬಲವಾದ ಹೋರಾಟವಿಲ್ಲ. ಸಾಹಿತಿಗಳಲ್ಲೇ ಗುಂಪುಗಾರಿಕೆ ತಮ್ಮ ಸ್ವಾರ್ಥಕ್ಕಾಗಿ ಲಾಬಿಗಳು, ಅದು ಸಾಹಿತ್ಯಸಮ್ಮೇಳನ ಗೋಷ್ಟಿಗಳಿಗೆ ಹಾಗೂ ಸನ್ಮಾನಗಳಿಗೆ ನಡೆಯುತ್ತವೆ. ಕನ್ನಡಪರ ನಿರ್ಣಯಗಳು ನಾಟಕೀಯವಾಗಿ ಕೊನೆಗೊಳ್ಳುತ್ತವೆಯಷ್ಟೇ. ಕೆಲ ಪ್ರಾಮಾಣಿಕ ಸಾಹಿತಿಗಳೂ ಈ ಸಮ್ಮೇಳನದ ಸಂತೆ -ಜಾತ್ರೆಯಿಂದ ದೂರವೇ ಉಳಿಯುತ್ತಾರೆ. ಇದೀಗ ಕನ್ನಡಿಗರೂ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ದೇವನೂರು ಮಹಾದೇವ ಅವರ ಮುಖ್ಯ ಬೇಡಿಕೆಯಾದ ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಬೇಕೆಂಬುದು ಸ್ವಾಗತಾರ್ಹವೇ. ತಮ್ಮ ಬೇಡಿಕೆ ಈಡೇರುವಂತಿದ್ದರೆ ತಾವು ಸಮ್ಮೇಳನಾಧ್ಯಕ್ಷ ಪೀಠ ಅಲಂಕರಿಸುವೆನೆಂಬ ಅವರ ಅಭಿಪ್ರಾಯ ನಿಜಕ್ಕೂ ಶ್ಲಾಘನೀಯವೇ ಆಗಿದೆ.
ದೇವನೂರು ಸಮ್ಮೇಳನಾಧ್ಯಕ್ಷರ ರಾಜಬೀದಿ ಮೆರವಣಿಗೆಯ ಉತ್ಸವ ಹಾಗೂ ಅವರಿಗೆ ದೊರಕುವ ರಾಜೋಪಚಾರದ ಆತಿಥ್ಯ ಜೊತೆಗೆ ಗೌರವ ಸಂಭಾವನೆಯಾಗಿ ಸಿಗುವ ೧೨ ಲಕ್ಷಕ್ಕೂ ಹೆಚ್ಚಿನ ಸಂಭಾವನೆಯನ್ನು ನಿರಾಕರಿಸುವಂತಹ ಹೇಳಿಕೆಯನ್ನು ನೀಡಿ ತಾವು ನಿಜಕ್ಕೂ ಮಹಾದೇವರೇ  ಆಗಿದ್ದಾರೆ. ಅವರು ತಮ್ಮ ಗೌರವಕ್ಕೆ ಚ್ಯುತಿ ಬರುವಂತೆ ತಮ್ಮ ನಿಲುವನ್ನು ಖಂಡಿತ ಬದಲಿಸಬಾರದು.
ಕೊನೆಯ ಮಾತು: ಹೀಗೆ ಹೇಳುವ ನಾನು ಇಳಿವಯಸ್ಸಿನಲ್ಲದ್ದೇನೆ. ನಮ್ಮ ಮಕ್ಕಳಿಗೆ ಕನ್ನಡ ಬರುವುದಿಲ್ಲವೆಂದು ಕೊರಗುವ ಸ್ನೇಹಿತರನ್ನೂ ನೋಡಿ ಮರುಗಿದ್ದೇನೆ 
ನನ್ನ ಗಂಡು ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡವನ್ನು ಸ್ವ ಇಚ್ಛೆಯಿಂದಲೆ ಕಡ್ಡಾಯವಾಗಿ ಕಲಿಸಿದ್ದೇನೆ. ಇದೀಗ ಸಾಫ್ಟ್ ವೇರಿಗಳೇ ಆಗಿದ್ದಾರೆ. ಪರದೇಶದ ಇಂಗ್ಲೀಷನ್ನು ಅಸ್ಖಲಿತವಾಗಿ ಮಾತನಾಡಲು ಬರೆಯಲು ಕಲಿತವಾರಾಗಿ ಅದನ್ನು ಅವರ ಕಂಪೆನಿ ಕಂಪೆನಿ ಉದ್ಯೋಗಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡ ವನ್ನು ಚೆನ್ನಾಗಿಯೇ ಓದಲು ಬರೆಯಲೂ ಬಲ್ಲವರಾಗಿದ್ದಾರೆ ]

No comments: