Monday, November 02, 2015

ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳ ಪ್ರಶಸ್ತಿ ವಾಪಾಸಾತಿ ರಾಜಕೀಯ ಪ್ರಹಸನ


ಸಾಹಿತಿ ಸಂಶೋಧಕರಾದ ಡಾ.ಕಲ್ಬುರ್ಗಿಯವರ ಹತ್ಯೆ ಹಾಗೂ ಈ ಹಿಂದೆ ನಡೆದ ಮಹಾರಾಷ್ಟ್ರದವರಾದ ನರೇಂದ್ರ ದಾಬೋಲ್ಕರ್ ಮತ್ತು ಗೋವಿಂದ ಪಾನ್ಸೆಯವರ ಹತ್ಯೆಯಿಂದ ಸರ್ವಧರ್ಮ ಸಹಿಷ್ಣತೆಗೆ ಹೆಸರಾದ ನಮ್ಮ ದೇಶಕ್ಕೆ ದೊಡ್ಡ ಆಘಾತವೇ ಆಗಿದೆ.
ಒಂದು ಸಾವು ತಿಳಿಸಿಕೊಡುವ ಪಾಠ ಬಹಳ ದೊಡ್ಡದು.
ಆದರೇನು! ಮೇಲಿನ ಹತ್ಯೆಗಳನ್ನು ಖಂಡಿಸುವ ನೆಪದಲ್ಲಿ ಕರ್ನಾಟಕದಲ್ಲಿ ಪ್ರಸ್ತುತ ಮುಂದುವರೆದಿರುವ ರಾಜಕೀಯ ಬೆಳವಣಿಗೆಗಳು, ಅವು ದೇಶದ  ಮೇಲೆ ಬೀರಿರುವ ವ್ಯತಿರಿಕ್ತ ಪರಿಣಾಮಗಳು ಜನಸಾಮಾನ್ಯರಿಗೆ ಗಾಬರಿ ಹುಟ್ಟಿಸುವಂತಿವೆ. ಇತಿಹಾಸದ ಪುಟಗಳನ್ನು ಮಗುಚಿ ನೋಡಿದರೆ, ಹುತಾತ್ಮರ ಸಾವಿನಿಂದ ಕಲಿಯುವುದು ಬಹಳಷ್ಟಿರುತ್ತದೆ.
ಸಾ-ಹಿ-ತಿ ಎಂದರೆ, ಆತ ಜವಾಬ್ದಾರಿಯಿಂದ ಸಾಮಾಜಿಕ ಹಿತವನ್ನು ತಿಳಿಸುವಾತ. ಸಾಮಾಜಿಕ ಬದ್ಧತೆ ಅವನ ಮೂಲ ಮಂತ್ರವೆಂದು ಹೇಳುತ್ತಾರೆ. ಇದೀಗ ಸಾಹಿತಿಗಳು ವಿಚಾರವಾದಿಗಳ ಹತ್ಯೆಯನ್ನು ವೈಭವೀಕರಣ ಮಾಡಿ ರಾಜಕೀಯ ಮಾಡುವುದು ಖಂಡನೀಯವೇ ಆಗಿದೆ.

ಇಂಗ್ಲೀಷ್ ಪ್ರಾಧ್ಯಾಪಕರಾಗಿ ನಾಲ್ಕಾರು ಕನ್ನಡ ಪುಸ್ತಕ ಬರೆದು ಕೊಂಡು ಸಾಹಿತಿ ಎನಿಸಿಕೊಂಡಿದ್ದ ಪ್ರೊ.ಎಸ್.ಕೆ ಭಗವಾನ್ ರು ದಿನಬೆಳಗಾಗುವುದರಲ್ಲಿ ಸುದ್ದಿಯಾದದ್ದು ಶತಶತಮಾನಗಳಿಂದ ಹಿಂದೂಗಳ ಧರ್ಮಗ್ರಂಥವೆನಿಸಿದ್ದ ಭಗವದ್ಗೀತೆಯನ್ನು ಕುರಿತು ಅವಹೇಳನ ಮಾಡಿ,. ಹಿಂದೂಗಳ ದೇವರಾದ ಶ್ರೀರಾಮನನ್ನು ಅವಾಚ್ಯವಾಗಿ ನಿಂದಿಸಿದುದರಿಂದ. ಇಂಥ ಬುದ್ಧಿಜೀವಿಗಳ ವಲಯದಲ್ಲಿ ದೇವರು ಧರ್ಮವನ್ನು ನಿಂದಿಸಿದರೆ ಅವರು ವಿಚಾರವಾದಿಗಳು. ಅದೇ ರಾಜಕೀಯದಿಂದ ದೂರವಿದ್ದು ಧರ್ಮವನ್ನು ಕೊಂಡಾಡುವ ಬಲಪಂಥೀಯರೆನಿಸಿಕೊಂಡವರು ಕೋಮುವಾದಿಗಳು ಎಂದು ಹೇಳುತ್ತ ಇಂಥವರು ಬೊಬ್ಬೊ ಹೊಡೆಯುವುದು ಇದೀಗ ಜನಜನಿತವಾಗಿಬಿಟ್ಟಿದೆ.
ಮೊದಲು ಶಂಕರಾಚಾರ್ಯರನ್ನು ಹೀಗಳೆಯುವ ಪುಸ್ತಕ ಬರೆದು ಏನಕೇನ ಕುಪ್ರಸಿದ್ಧಿಯಾದ ಪ್ರೊ. ಭಗವಾನ್ ರು “ಸಾ-ಹಿ-ತಿ” ಗಳಾಗಿ ಸಾಮಾಜಿಕ ಹಿಂಸೆಗೆ ತಿದಿಯೊತ್ತಿದವರಾಗಿರುವುದು ಕಠೋರವಾಸ್ತವವೇ ಆಗಿದೆಯಲ್ಲವೇ..?
“ಭಗವದ್ಗೀತೆ ಯುದ್ಧವನ್ನು ಹಿಂಸೆಯನ್ನು ಪ್ರಚೋದಿಸುತ್ತದೆ. ವೇಶ್ಯರು, ಶೂದ್ರರು ಪಾಪಿಗಳು” ಎಂದು ಹೇಳುತ್ತದೆ.
ಎಂದು ಸಾರ್ವಜನಿಕ ವೇದಿಕೆಗಳಲ್ಲಿ ಹೇಳಿ, “ಅಧ್ಯಕ್ಷರು ಅಪ್ಪಣೆಕೊಟ್ಟರೆ ಇಲ್ಲೇ ಎಲ್ಲರೆದುರೇ ಭಗವದ್ಗೀತೆಯನ್ನು ಸುಡುತ್ತೇನೆ” ಎಂದಿದ್ದವರು, ಇದೀಗ ಹಾಗೆ ತಾನು ಭಗವದ್ಗೀತೆಯನ್ನು ಸುಡಲು ಹೇಳಲಿಲ್ಲ. ಆ ಶ್ಲೋಕಗಳನ್ನು ತೆಗೆಯಬೇಕೆಂದೆನಷ್ಟೆ ಎಂದು ತಿಪ್ಪೆಸಾರಿಸುತ್ತಲಿದ್ದಾರೆ. ಆ ಶ್ಲೋಕಗಳು ಹೇಳುವ ಪರಮ ಸತ್ಯವನ್ನು ಅವರ ಮೂಗಿನ ನೇರಕ್ಕೆ ಅರ್ಥ ಮಾಡಿಕೊಂಡಿದ್ದಾರಷ್ಟೇ. ಎಂಬುದೂ ತಿಳಿದ ವಿಷಯವೇ.
ಶ್ರೀಕೃಷ್ಣ ಯುದ್ಧಬೇಡವೆಂದು ಸಂಧಾನ ಮಾಡಿದಾಗ ಐದು ಹಳ್ಳಿಗಳನ್ನೂ ಪಾಂಡವರಿಗೆ ಕೊಡಲೊಪ್ಪದಿದ್ದಾಗ ಧರ್ಮ ಯುದ್ಧ ಅನಿವಾರ್ಯವೆನ್ನುವ, ಪರಮಪಾ,ಪಿಗಳಿಗೂ ಪುನೀತರಾಗಲು ಸಾಧ್ಯವಿದೆ ಎಂದು ಹೇಳುವ ಶ್ರೀಕೃಷ್ಣ ಬೋಧಿಸುವ ಸತ್ವಗುಣ, ರಜೋಗುಣ, ತಮೋಗುಣಗಳಲ್ಲಿ ಸತ್ವಗುಣದ ಹಿರಿಮೆಯನ್ನು ವಿವರಿಸುವ ಗೀತೆಯ 14 ನೇ ಅಧ್ಯಾಯವೊಂದೇ ಸಾಕು ಭಗವದ್ಗೀತೆಯ ಸಾರಸತ್ವವನ್ನು ತಿಳಿಸುವುದಕ್ಕೆ. ಯಾಕೆಂದರೆ, ಈ ವ್ಯವಹಾರೀಕ ಪ್ರಪಂಚದಲ್ಲಿ ಏನೆಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ಆತ್ಮಸ್ಥೈರ್ಯದಿಂದ ಅಂತಃಸತ್ವದಿಂದ ಎದುರಿಸುತ್ತಾ, ಸಭ್ಯನಾಗಿ ಸಭ್ಯಗೃಹಸ್ಥನಾಗಿ ಸತ್ವಶಾಲಿಯಾಗಿ ಬದುಕುವುದನ್ನು ಬಿಟ್ಟರೆ ಬೇರೇನಿದೆ ಹೇಳಿ?.

ಬೌದ್ಧ ಧರ್ಮ ಮತ್ತು ಹಿಂದೂ ಧರ್ಮವನ್ನು ಹೋಲಿಸಿ ವಿಶ್ಲೇಷಣೆ ಮಾಡಿದ, ಹಿಡಿಯಷ್ಟು ಬ್ರಾಹ್ಮಣರ (ಬ್ರಾಹ್ಮಣರೆಲ್ಲರೂ ಅಲ್ಲ) ಪುರೋಹಿತಶಾಹಿ ಪ್ರವೃತ್ತಿಯನ್ನು ಖಂಡಿಸಿದ, ನಮ್ಮ ದೇಶದ ಸಂಸ್ಕೃತಿ ಪರಂಪರೆ ಹಾಗೂ ಹಿಂದೂಧರ್ಮದ ಬಗ್ಗೆ ಅಮೆರಿಕಾದ ವಿಶ್ವಧರ್ಮ ಸಮ್ಮೇಳನದಲ್ಲಿ ಹೆಮ್ಮೆಯಿಂದ ಭಾಷಣ ಮಾಡಿ ಜಗತ್ತೇ ತಲೆದೂಗುವಂತೆ ಮಾಡಿದ ಸ್ವಾಮಿವಿವೇಕಾನಂದರನ್ನು, ಸರಿಯಾಗಿ ಓದಿಕೊಂಡಿರದ ಭಗವಾನ್ ರು ವಿದ್ಯಾರ್ಥಿಗಳಿಗೆ ಪಾಠ ಹೇಳುವ ಪ್ರಾಧ್ಯಾಪಕರಾಗಿ, ತಮ್ಮ ಸಾಮಾಜಿಕಬದ್ಧತೆ ಜವಾಬ್ದಾರಿಯನ್ನು ಮರೆತಿದ್ದಾರೆ. ತಮಗೆ ಅವಕಾಶ ಸಿಕ್ಕ ವೇದಿಕೆಗಳಲ್ಲೆಲ್ಲಾ ದೈವನಿಂದನೆ ಧರ್ಮನಿಂದನೆ ಮಾಡುತ್ತಾ,
ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಪ್ರತಿಭಾ ಪುರಸ್ಕಾರ ಎಂಬ ಮಕ್ಕಳ ಕಾರ್ಯಕ್ರಮದಲ್ಲಿಯೂ ರಾಮಾಯಣ ಓದಬೇಡಿ, ಓದಿದರೆ ಆತ್ಮಹತ್ಯೆಮಾಡಿಕೊಳ್ಳುವ ಮನಃಸ್ಥಿತಿ ಬರುತ್ತದೆ ಎಂದು ಮಕ್ಕಳಿಗೆ ಹೇಳಿದಾಗ, ಸಂಘಟಕರು ಪದೇ ಪದೇ ಎಚ್ಚರಿಸಿದರೂ ಕಿವಿಗೊಡದೇ ಮತ್ತೆ ತನ್ನದೇ ಸರಿಯೆಂದು ಮುಂದುವರೆಸುತ್ತಾ, ಶ್ರೀರಾಮ ದೇವರಲ್ಲ. ಏಕಪತ್ನೀವ್ರತಸ್ಥನಲ್ಲ, ಅವನು ಸುರಾಪಾನ ಮಾಡುತ್ತ ಕಾಲ ಕಳೆಯುತ್ತಿದ್ದ. ರಾಮ, ಕೃಷ್ಣ ಮುಂತಾದವರನ್ನು ಪೂಜಿಸಬೇಡಿ, ಅವರು ಅಪ್ಪನಿಗೆ ಹುಟ್ಟಿದ ಮಕ್ಕಳಲ್ಲ ಎನ್ನುವ ಈ ವ್ಯಕ್ತಿಗೆ ಕರ್ನಾಟಕ ಸರ್ಕಾರ ರಾಜ್ಯಸಾಹಿತ್ಯ ಅಕಾಡೆಮಿ ಘೋಷಿಸಿದೆಯಲ್ಲದೇ ಇಬ್ಬರು ಭದ್ರತಾ ಸಿಬ್ದಂದಿಯನ್ನೂ ಕೊಟ್ಟಿ ತನ್ನ ಧೋರಣೆ ಮರೆದಿದೆ.
ವಿಪರ್ಯಾಸವೆಂದರೆ, ಇದೀಗ ಕರ್ನಾಟಕ ಸರ್ಕಾರ ವಾಲ್ಮೀಕಿ ಜಯಂತಿಯನ್ನು ಆಚರಿಸಿದೆಯಲ್ಲದೇ, ಶಾಲಾಪಠ್ಯದಲ್ಲಿ ವಾಲ್ಮೀಕಿ ರಾಮಾಯಣ ಅಳವಡಿಕೆ ಖಂಡಿತವಾಗಿಯೂ ಆಗಲಿದೆ ಎಂದೇ ಮಾನ್ಯ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಪುನರುಚ್ಚರಿಸಿದ್ದಾರೆಂದರೆ, ಇವರ ರಾಜಕೀಯನೀತಿ ಕಂಡು ಮರುಕವಾಗದಿರದು.
ಹಿಂದಿನ ಸರ್ಕಾರ ಶಾಲೆಯಲ್ಲಿ ಅದೇ ರಾಮಾಯಣ ಭಗವದ್ಗೀತೆ ಯನ್ನು ಪಠ್ಯದಲ್ಲಿ ಅಳವಡಿಸಲೆತ್ನಿಸಿದಾಗ ಕೇಸರೀಕರಣ ಮಾಡುತ್ತಿದ್ದಾರೆಂದೇ ಬೊಬ್ಬೆಹೊಡೆದಿದ್ದು ಇದೇ ಪಕ್ಷವೇ ಅಲ್ಲವೇ...? ಇದೆಲ್ಲವನ್ನು ಜನಸಾಮಾನ್ಯರು ಗಮನಿಸುತ್ತಲೇ ಇದ್ದಾರೆ. “ಇದೀಗ ಬಿತ್ತೇವು ಸಹಿಷ್ಣುತೆಯ ಬೀಜ” ಎಂದಿರುವ ಸಿ.ಎಂ. ಹೇಳಿಕೆ ವಿಚಿತ್ರ ವಿರೋಧಾಭಾಸವಲ್ಲವೇ..?
ರಾಷ್ಟ್ರಕವಿ ಕುವೆಂಪುರವರು ವಿಶ್ವಮಾನವ ಪ್ರಜ್ಞೆ ಬಿತ್ತಿದವರಾಗಿ ಹೇಳಿದುದನ್ನು ಇಲ್ಲಿ ಸ್ಮರಿಸಬಹುದು, "ಇದು ವಿಚಿತ್ರ ವಿರೋಧಾಭಾಸಗಳ ದೇಶ ಇಲ್ಲಿ ಏನೂ ಆಗಬಹದು.ಅದಕ್ಕೆ ಆಶ್ಚರ್ಯ ಪಡಬೇಕಿಲ್ಲ. ಆದರೆ, ಈಗ ಆತಂಕ ಪಡಬೇಕಾಗಿದೆ.

ಇನ್ನು ಗುಂಪುಗಾರಿಕೆಯಲ್ಲಿ, ಕೆಲವು ಕಲಾವಿದರು, ವಿಜ್ಞಾನಿಗಳು ತಮ್ಮ ಗೆ ಬಂದ ಪ್ರಶಸ್ತಿಯನ್ನು ವಾಪಾಸು ಮಾಡುತ್ತಿದ್ದಾರೆಂದರೆ, ಅವರ ಯಾವ ಅತ್ಯತ್ತಮ ಕೃತಿಗೆ ಅಕಡೆಮಿ ಪ್ರಶಸ್ತಿ ಪಡೆದುಕೊಂಡಿದ್ದಾರೋ ಆ ಕೃತಿಗೇ ಅಗೌರವ ತಂದುಕೊಂಡಂತಾಗಿದೆಯಲ್ಲದೇ, ಈ ಇಳಿವಯಸ್ಸಿನವರೆಗೆ ಅವರು ನಂಬಿಕೊಂಡು ಬಂದ ಸಾಮಾಜಿಕಮೌಲ್ಯಗಳಿಗೂ ಅಪಚಾರವೆಸಗಿದಂತೆಯೇ ಆಗಿದೆಯಲ್ಲವೇ...?
ಡಾ. ಕಲ್ಬುಬರ್ಗಿಯವರೂ ಸಹ ಸ್ವತಃ ಹಿಂದೂಧರ್ಮದವರೇ ಆಗಿದ್ದು ವಿರಶೈವ ಲಿಂಗಾಯಿತ ಹಿಂದೂಧರ್ಮವೇ ಅಲ್ಲ. ಕಲ್ಲು ಮೂರ್ತಿಯಲ್ಲಿ ದೇವರಿಲ್ಲ ಎಂಬದನ್ನು ಬೆಂಬಲಿಸುವ ಹೇಳಿಕೆ ನೀಡಿ ತೀವ್ರ ವಿವಾದಾಕ್ಕೀಡಾಗಿಬಿಟ್ಟರು. ವಿಚಿತ್ರವೆಂದರೆ, ಹಿಂದೂಧರ್ಮದಲ್ಲಿ ಹೇಳಿರುವಂತೆ ತ್ರಿಮೂರ್ತಿಗಳಲ್ಲಿ ಶಿವನೂ ಒಬ್ಬನು. ಹಿಂದೂಗಳ ದೇವರಾದ ಶಿವನನ್ನು ಕಲ್ಲಿನ ರೂಪದ ಲಿಂಗದಲ್ಲಿ ಪೂಜಿಸುತ್ತಾರೆ; ಲಿಂಗಾಯಿತರು ವಿರಶೈವರು. ಕರಸ್ಥಲದಲ್ಲಿಟ್ಟುಕೊಂಡು ದಿನವೂ ಆರಾಧಿಸುತ್ತಾರೆ.
ಕಲುಬುರ್ಗಿಯವರ ಇನ್ನಿತರ ವೈಚಾರಿಕತೆ ಸಂಶೋಧನೆಗಳು ಮಾತ್ರ ಮಾನ್ಯವೆನಿಸಿದ್ದರೂ, ಪ್ರಾಯೋಗಿಕವಾಗಿ ಅನುಭವವೇದ್ಯವಲ್ಲದ ಕಲುಬುರ್ಗಿಯವರ ಧರ್ಮನಿಂದನೆ ದೈವನಿಂದನೆಯ ವಿವಾದಾಸ್ಪದ ಹೇಳಿಕೆಗಳು ಎಂದಿಗೂ ಸಂಶೋಧನೆ ಎನಿಸಿಕೊಳ್ಳಲಾರವು. ಸಾಮಾಜಿಕ ಮನ್ನಣೆ ಪಡೆಯಲಾರವಲ್ಲ....
ಸಾಹಿತಿಗಳ ಪ್ರಶಸ್ತಿ ವಾಪಾಸಾತಿ ಪ್ರಹಸನವದೆಷ್ಟು ಗೊಂದಲಕರ ಎಂಬುದಕ್ಕೆ ಇತ್ತೀಚೆಗೆ ಪ್ರಶಸ್ತಿ ವಾಪಾಸಾತಿ ಮಾಡಿದ ಮಹನೀಯರಿಗೆಲ್ಲ ಬೆಂಬಲಿಸಿ ಪ್ರಶಸ್ತಿ ವಾಪಾಸಾತಿ ಹುಚ್ದಚಲ್ಲವೆಂದ ಖ್ಯಾತ ಸರೋದ್ ವಾದಕ ಅಮ್ಜದ್ ಆಲಿ ಖಾನ್ ಅವರು ಸಂದರ್ಶನದ ಕೊನೆಯಲ್ಲಿ,
"ನಿವೂ ಪ್ರಶಸ್ತಿ ವಾಪಾಸು ಮಾಡುವಿರಾ..?" ಎಂದು ಕೇಳಿದ ಪ್ರಶ್ನೆಗೆ ಅವರು ಈ ಕೆಳಗಿನಂತೆ ಉತ್ತರಿಸುದುದುದೇ ಉದಾಹರಣೆಯಾಗಿದೆ.
"ನನ್ನ ಸರೋದ್ ತಯಾರಿಸುವವರು ಯಾರು ಗೊತ್ತಾ? ಹೇಮೇಂದ್ರ ಚಂದ್ರಸೇನ್. ಅವರು ಅದನ್ನು ಚೆನ್ನಾಗಿ ತಯಾರಿಸದೇ ಇದ್ದರೆ, ನಾನಿದನ್ನು ನುಡಿಸುವುದಾದರೂ ಹೇಗೆ? ಪರಸ್ಪರ ನಂಬಿಕೆ ಮತ್ತು ಪ್ರೀತಿಯೇ ನಮ್ಮ ಶಕ್ತಿ"


ಸಾಹಿತಿಗಳು ತಮ್ಮ ಅತ್ಯುತ್ತಮ ಕೃತಿಗೆ ಪಡೆದ ಪ್ರಶಸ್ತಿಯನ್ನು ವಾಪಾಸಾತಿ ಮಾಡುವುದೇ ಆಗಿದ್ದರೆ, ಸಮಾಜದಲ್ಲಿ ಅಸಹಿಷ್ಣುತೆ ಬಿತ್ತುವ ಹೇಳಿಕೆಗಳನ್ನು ನೀಡಿದ ವ್ಯಕ್ತಿ ಪ್ರೊ.ಎಸ್.ಕೆ. ಭಗವಾನ್ ರಿಗೆ ಅದೇ ಗೌರವಾನ್ವಿತ ರಾಜ್ಯ ಸಾಹಿತ್ಯ ಅಕಾಡೆಮೆ ಪ್ರಶಸ್ತಿ ಕೊಡುವುದನ್ನು ಖಂಡಿಸಿ ತಮಗೆ ಸಂದ ಪ್ರಶಸ್ತಿಗಳನ್ನು ವಾಪಾಸು ಮಾಡುತ್ತಿದ್ದೇವೆ ಎಂದು ಹೇಳಿದ್ದರೆ ದೇಶಾದ್ಯಂತ ಸಾರಸ್ವತಲೋಕವೇ ಹೆಮ್ಮೆಯಿಂದ ಬೀಗುತ್ತಿತ್ತು.
ಬದಲಿಗೆ ಕಲ್ಬುರ್ಗಿಯವರ ಹತ್ಯೆ ಖಂಡಿಸುವ ನೆಪದಲ್ಲಿ ಸಾಹಿತಿಗಳು ಪ್ರಶಸ್ತಿ ವಾಪಾಸಾತಿ ರಾಜಕೀಯವಾಗಿ ಪ್ರಹಸನವಾಗಿರುವುದು ತಿರಾ ವಿಷಾದನೀಯವೇ. ಕಲುಬುರ್ಗಿಯವರ ಹತ್ಯೆಯನ್ನು ಖಂಡಿಸುವ ಇವರುಗಳು ಬೇರೆ ಶಾಂತ ರೀತಿಯ  ಮಾರ್ಗವನ್ನು ಹಿಡಿಯಬೇಕಾಗಿತ್ತು.
ಸ್ನೇಹಿತರೇ,
ಇದೆಲ್ಲ ವಿದ್ಯಾಮಾನಗಳನ್ನು  
 ನೋಡಿ ಮೌನವಾಗಿರುವ ನಮ್ಮ ಕರ್ನಾಟಕದ ಸಾಹಿತಿಗಳಾದ ಚಂದ್ರಶೇಖರ ಕಂಬಾರ, ನಾ.ಡಿಸೋಜ, ನಿಸ್ಸಾರ್ ಅಹಮದ್, ಕವಿಗಳಾದ ಎಚ್ ಎಸ್ ವೆಂಕಟೇಶ ಮೂರ್ತೀ, ಎನ್ ಲಕ್ಷ್ಮಿ ನಾರಾಯಣ ಭಟ್ಟ, ಸುಮತೀಂದ್ರ ನಾಡಿಗ್, ಸಂಶೋಧಕರಾದ ಚಿದಾನಂದ ಮೂರ್ತಿ, ವಿಮರ್ಶಕ ಎಲ್.ಎಸ್.ಶೇಷಗಿರಿ ರಾಯರು ಶತಾಯುಷಿಗಳಾದ ವೆಂಕಟ ಸುಬ್ಬಯ್ಯನವರು ಮತ್ತಿರರ ಸಾಹಿತಿಗಳುಕಲಾವಿದರು, ವಿಜ್ಞಾನಿಗಳಿಗೆ ಹಾಗೂ ಇವರೊಂದಿಗೇ ಇರುವ ಇತರೆ ರಾಜ್ಯದ ಸಾಮಾಜಿಕ ಹಿತಚಿಂತಕರಾದ ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳಿಗೆಲ್ಲ ನಾವು ವಿನಮ್ರತೆಯಿಂದ ವಂದಿಸೋಣ.

No comments: