Wednesday, August 30, 2006

ಸ್ತ್ರೀವಾದ ಮತ್ತು ಸಮಾಜ

ಸ್ತ್ರೀವಾದದ ಬಗ್ಗೆ ಸಂಪದ.ನೆಟ್ ನಲ್ಲಿ ಕಮಲಾಕರ್ ಅವರ ಲೇಖನ ಓದಿ ಈ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದೆ-
ಇದೀಗ ನಮ್ಮ ಸಮಾಜ ಪುರುಷ ಪ್ರಧಾನ ಸಮಾಜವಾಗಿ ಇನ್ನೂ ಉಳಿದಿದೆಯೇ? ಖಂಡಿತ ಇಲ್ಲ. ಹಿಂದೊಂದು ಕಾಲವಿತ್ತು ಹೆಣ್ಣು ಮುಸುಕೆಳೆದುಕೊಂಡೇ ತಿರುಗುವ ಕಾಲ. ಈಗ ಹೆಣ್ಣು ಸಂಪೂರ್ಣ ಸ್ವಾತಂತ್ರ ಪಡೆದಿದ್ದಾಳೆ. ನಿರ್ಭಿಡೆಯಿಂದ, ಅಷ್ಟೇಕೆ ಹಿಂದೆಂದಿಗಿಂತಲೂ ಬಲು ಸ್ವಚ್ಛಂಧವಾಗಿ ತೆರೆದುಕೊಂಡಿದ್ದಾಳೆ ಅಂಥ “ರಮ್ಯ” ಕಾಲವಿದಾಗಿದೆ. ಹೌದು, ಜೀವನಾನಂದದ ಸ್ವರೂಪವೇ ಹೆಣ್ಣು. ಅವಳು ಎಲ್ಲಿ ಗೌರವಿಸಲ್ಪಡುತ್ತಾಳೋ ಅಲ್ಲಿ ದೇವತೆಗಳು ಸಂಪ್ರೀತರಾಗಿರುತ್ತಾರೆ” ಎಂಬುದೀಗ ಕ್ಲೀಷೆಯಾಗಿದೆ. ಇದೀಗ ಹೆಣ್ಣು ಎಲ್ಲಿ ದೇವತೆಯಂತೆ ಕಂಗೊಳಿಸತ್ತಾಳೋ ಅಲ್ಲಿ ಅವಳೇ ಪೂಜಿಸಲ್ಪಡುತ್ತಾಳೆ. ಯುವ ಜನಾಂಗದ ಕನಸಿನ ಕನ್ಯೆಯೆ ಅವಳಾಗಿರುತ್ತಾಳೆ ಎಂಬುದ ಉತ್ಪ್ರೇಕ್ಷೆಯಾಗಲಾರದು.
ಇಂದಿನ ಜಾಹೀರಾತು ಪ್ರಪಂಚದಿಂದ ಹಿಡಿದು, ಸಿನಿಮಾ, ಟೆಲಿ ಸಿನಿಮಾಗಳವರೆಗೆ ಆಕೆ ರೋಮ್ಯಾಂಟಿಕ್- ಗ್ಲಾಮರಸ್ ಪ್ರಪಂಚದಲ್ಲಿ ಮೆರೆದಿದ್ದಾಳೆ; ಮೆರೆಯುತ್ತಿದ್ದಾಳೆ. ಈಗ ಗಂಡು ಹೆತ್ತವರಿಗೇ ಕಷ್ಟ. ಅವರಿಗೆ ತಮ್ಮ ಮಕ್ಕಳನ್ನು ಜೋಪಾನ ಮಾಡಿಕೊಳ್ಳಬೇಕಾದ ದುರ್ದರ ಪ್ರಸಂಗ. ಯಾಕೆಂದರೆ, ಯಾವ ಹೊತ್ತಿನಲ್ಲಿ ಯಾವ ಹುಡುಗಿಯನ್ನು ತಂದು ತಂದೆ ತಾಯಿಗಳ ಎದುರಿನಲ್ಲಿ ನಿಲ್ಲಿಸುತ್ತಾನೋ ಮಗ ಎಂಬ ಆತಂಕ. ವಯಸ್ಸಿಗೆ ಬಂದ ಹುಡುಗಿಯೂ ಅಷ್ಟೇ.... ಯಾವ ಹುಡುಗನನ್ನು ಯಾವ ಘಳಿಗೆಯಲ್ಲಿ ತಂದು ತಂದೆ-ತಾಯಿಯರೆದುರಿಗೆ ನಿಲ್ಲಿಸಿ ಇವನನ್ನೇ ಲವ್ ಮಾಡುತ್ತಿದ್ದೇನೆ; ಮದುವೆಯಾಗುತ್ತಿದ್ದೇನೆ ಎಂದು ಹೇಳುತ್ತಾಳೋ ಎಂಬ ಆಂದೋಲನವೇ ಪೀಡಿಸುವಂತಹ ಕಾಲ ಘಟ್ಟದಲ್ಲಿ ನಾವಿಂದು ಬದುಕುತ್ತಿರುವಾಗ ಹಳೆಯ ವಾದಗಳು ನೆರವಿಗೆ ಬರಲಾರವು. ಇಂದಿನ ಪುರುಷನಿಗೆ ಸರಿಸಮಾನವಾಗಿ ಬದುಕುತ್ತಿದ್ದಾಳೆ; ಸಂತೋಷವೇ. ಹಾಗಿರುವಾಗ ಅವಳದೇ ವಾದವೆಂದರೇನು?ಹೆಣ್ಣಾಗಿ ಹುಟ್ಟಿದ್ದಕ್ಕೆ ಅವಳ ಸಮಸ್ಯಗಳು ಲಿಂಗ ರೀತ್ಯ ಪ್ರತ್ಯೇಕವೆನಿಸುತ್ತದೆಯಾದರೂ. ಪುರುಷರೇ ಇಲ್ಲದ ಸಮಾಜವನ್ನು ನಾವು ಹೇಗೆ ಊಹಿಸಿಕೊಳ್ಳಲು ಅಸಾಧ್ಯವೋ ಹಾಗೆಯೆ ಸ್ತ್ರೀಯರೇ ಇಲ್ಲದ ಬದುದು ಭವಿಷ್ಯವನ್ನು ಕಾಣಲಾರೆವು. ಅಂದರೆ, ಹೆಣ್ಣಿಗೆ ಗಂಡು, ಗಂಡಿಗೆ ಹೆಣ್ಣು ಇಬ್ಬರೂ ಇಂದಿ ದಿನ ದಿನಗಳಲ್ಲಿ ಸಾಮಾಜಿಕವಾಗಿ ಸರಿಸಮಾನರೆಂಬುದನ್ನು ನಾವು ಒಪ್ಪಿಕೊಂಡಂತಿದೆ. ಇಬ್ಬರಲ್ಲೂ ಸಾಮಾಜಿಕ ಹೊಣೆಗಾರಿಕೆ ಎಂಬದಿರುವಾಗ ಪ್ರತ್ಯೇಕ ವಾದಗಳೇಕೆ? ಹಿಂದಿತ್ತು ಪುರುಷ ಪ್ರಧಾನ ಕಾಲ. ಆಗ ಬೇಕಿತ್ತು ಸ್ತ್ರೀವಾದ...
ಪ್ರೇಮಕ್ಕೂ ಮತ್ತು ಪ್ರೀತಿಗೂ ಇರುವ ಹೋಲಿಕೆ ವ್ಯತ್ಯಾಸಗಳು ಇಂದಿನ ಯುವ ಜನಾಂಗ ಅರಿತಂತಿಲ್ಲ. ಹೊಸ ಮೌಲ್ಯಗಳನ್ನು ಹುಟ್ಟು ಹಾಕುವ ಕಾತರತೆಯ ಸಡಗರದಲ್ಲಿದ್ದಾರೆ. ಇಂದಿನ ಯುವತಿ ಯುವಕರ ವಾದಕ್ಕೆ ಹಿರಿಯರಾದ ನಾವು ಉತ್ತರ ಹೇಳುವುದೇ ಕಷ್ಟವಾಗಿದೆ.. ಸಿನಿಮಾ ಮತ್ತು ಟಿ.ವಿ. ಚಾನೆಲ್ ಹಾಗೂ ಪಾಶ್ಚಿಮಾತ್ಯ ಸಂಸ್ಕೃತಿಗಳ ಕಲಸು ಮೇಲೋಗರದಲ್ಲಿ ಅವರು ಹಪ ಹಪಿಸುತ್ತಿದ್ದಾರೆ. ಅವರಿಗೆ ಸೂಕ್ತ ಮಾರ್ಗ ದರ್ಶನ ನೀಡುವಂಥ ಹೊಸ ಮೌಲಿಕವಾದ ಆಯಾಮವೊಂದನ್ನು ಹಿರಿಯರಾದ ನಾವು ಅಂದರೆ ಹಿರಿಯ ಸ್ತ್ರೀ ಮತ್ತು ಪುರುಷರಾದ ನಾವೆಲ್ಲರೂ ಒಂದು ಗೂಡಿ ಹಳೆಯದು ಮತ್ತು ಹೊಸತೆಂಬ ಜೀವನ ಶೈಲಿಯ ಸಮನ್ವಯಕಾರರಾಗಿ ಆರೋಗ್ಯಕರ ಸಮಾಜವನ್ನು ಕಟ್ಟುವಂತಹ ಅವರಿಗೆ ಭವಿಷ್ಯದಲ್ಲಿ ತುಂಬು ಭರವಸೆ ನೀಡುವಂತಹ “ಹೊಸ ಸಮಾಜವಾದ”ವನ್ನು ಹುಟ್ಟು ಹಾಕಬೇಕಾಗಿರುವ ಹೊಣೆ ನಮ್ಮೆಲ್ಲರದು ಆಗಿದೆ.

ಈ ಲೇಖನಕ್ಕೆ ಚರ್ಚೆವಿಭಾಗದಲ್ಲಿ ಬಂದ ಪ್ರತಿಕ್ರಿಯೆ ಇಲ್ಲಿದೆ ನೋಡಿ-

ಚರ್ಚೆ:ಸ್ತ್ರೀವಾದ ಮತ್ತು ಸಮಾಜ

ನನ್ನ ಉತ್ತರ ಹೀಗಿದೆ ನೋಡಿ-

ಇದೇ ದೇಶ; ಇದೇ ಕಾಲ, ಈಗ ಹೇಗಿದೆ ಅನ್ನೋದನ್ನ ನಾವು ನೋಡುತ್ತಿದ್ದೇವಲ್ಲ; ನೀವು ಅದ್ಯಾವಕಾಲವನ್ನೇ ಕುರಿತು ಇಂದಿಗೂ ಚಿಂತಿಸುತ್ತಲಿದ್ದೀರಿ? ! ನಿಮ್ಮದೇ ಮಾತಿನಂತೆ ಹಿಂದೆ ಸ್ತ್ರೀ ಅನ್ನೋ ಕಾರಣಕ್ಕೆ ವಿದ್ಯಾಭ್ಯಾಸ ಇರಬಹುದು, ಕೆಲಸ ಇರಬಹುದು ಬದುಕಿನ ಯಾವುದೇ ಆಯ್ಕೆಗೆ ಸಾಧ್ಯವಿರಲಿಲ್ಲ; ನಿಜ. ಆ ಕಾಲದಿಂದ ನಾವೀಗ ಹೊರ ಬಂದಿದ್ದೇವೆ ಅನ್ನೋದನ್ನ ನೀವು ಗಮನಿಸಿದಂತೆಯೆ ಇಲ್ಲವಲ್ಲ..? ಈಗ ಸ್ತ್ರಿ ತಾನು ಬದುಕುವ ದಾರಿಯಲ್ಲಿ ಹಿಂದೆಂದಿಗಿಂತಲೂ ಆಯ್ಕೆಮಾಡಿಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದಾಳೆ ಎನ್ನುವುದಕ್ಕೆ ಎಷ್ಟೋ ಉದಾಹರಣಗಳಿವೆಯಲ್ಲ ವಿದ್ಯಾಭ್ಯಾಸ, ಕೆಲಸವನ್ನೇ ತೆಗೆದುಕೊಳ್ಳಿ, ಇಂದು ಮಹಿಳಾ ಪೊಲೀಸ್. ಬಸ್ ಡ್ರೈವರ್ಸ, ಕಂಡಕ್ಟರ್, ಹೆವಿಟ್ರಕ್ಸ್ ಡ್ರೈವರ್ಸ, ಅಷ್ಟೇಕೆ ಭಾರತ್ ಅರ್ತ್‌ ಮೂವರ್ಸ ಅಂತಹ ದೊಡ್ಡ ಕಂಪೆನಿ ಇಂದು ಮಹಿಳೆಯರಿಗೆ ಹೆವಿ ಅರ್ಥ್ ಮೂವರ್ಸ ಚಾಲನೆಗೆ ತರಬೇತಿ ನೀಡುತ್ತಿದೆ. ಅಂತಹ ಕೆಲಸಗಳಿಗೆ ಸ್ತ್ರೀ ಇಂದು ತನ್ನನ್ನು ತಾನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಪಡೆದಿದ್ದಾಳೆ. ಅಂತಹ ಕಠಿಣವಾದ ಕೆಲಸಗಳಿಗೆ ಸ್ತ್ರೀ ಬರುತ್ತಿರುವುದು ಇಂದು ತೀರ ಕೆಳ-ಮಧ್ಯಮ ವರ್ಗದ ಕುಟುಂಬದಿಂದಲೇ ಅನ್ನೋದು ಸ್ಫಟಿಕದಷ್ಟು ಸ್ವಚ್ಛ ನಿಚ್ಛಳವಾಗಿದೆಯಲ್ಲದೇ ಅವರಿಗೆ ಈಗ ಅವರ ಬದುಕಿನ ಆಯ್ಕೆ ಎಂಬುದು ಎಲ್ಲಿ ಹಿಡಿತಕ್ಕೊಳಗಾಗಿದೆಯೋ ದೇವರೇ ಬಲ್ಲ.. ಎಲ್ಲೋ ಬಿಹಾರದಂತ ಕೆಲ ಕುಗ್ರಾಮಗಳಲ್ಲಿ ಅನಕ್ಷರತೆ,ಅಜ್ಞಾನ,ಅಂಧವಿಶ್ವಾಸದಿಂದ ಹೆಣ್ಣು ಇನ್ನೂ ಹಿಡಿತಕ್ಕೊಳಗಾಗಿಯೆ ಇದ್ದಿರಬಹುದು. ಅಂಥಲ್ಲಿ ಬೇಕು;ನೀವೇ ಹೇಳಿದಂತೆ Specific ಆಗಿ ಒಂದು ಸ್ತ್ರೀವಾದ. ತಂದೆ ತಾಯಿಗಳೇ ಇಂದು ತಮ್ಮ ಹೆಣ್ಣು ಮಕ್ಕಳು ಟಿ.ವಿ, ಸಿನಿಮಾಗಳಲ್ಲಿ ನಿರ್ಭಿಡೆಯಿಂದ ತೆರೆದುಕೊಂಡು ಪಾತ್ರಮಾಡಲು ಸ್ವಾತಂತ್ರ್ಯ ನೀಡುತ್ತಿರುವುದು ಇದೇ ಕಾಲದ ಕಠೋರ ಸತ್ಯವಲ್ಲದೇ ಇನ್ನೇನು? ಸುಮ್ಮನೆ ಟಿವಿ ಪರದೆ ಮೇಲೆ ಮುದ್ದಾಗಿ ನಕ್ತಾರೆ ಎಂದಿದ್ದೀರಲ್ಲ. ಹೌದು, ಇದ್ದಿದ್ದರಲ್ಲಿ ಟಿ.ವಿ.ಪರದೇನೆ ಸ್ವಲ್ಪ ಉತ್ತಮ ಅನ್ನಿ. ಆದರೆ, ಅದೇ ಟಿ.ವಿಲಿ ಬರೋ ಸಿನಿಮಾಗಳಲ್ಲಿ ಹೆಣ್ಣನ್ನು ಕೆಟ್ಟದಾಗಿಎಕ್ಸಪೋಸ್ ಮಾಡಿರುವಂಥ ದೃಶ್ಯಗಳೆಷ್ಟಿರೊಲ್ಲ. ಈಗ ಗಂಡು ಮಕ್ಕಳನ್ನು ರಕ್ಷಿಸಿಕೊಳ್ಳಲು Specific ಆಗಿ ಇನ್ನೊಂದು ರೀತಿಯಲ್ಲಿ ಪುರುಷವಾದವನ್ನೇ ಮಂಡಿಸಬೇಕಾಗಿದೆ. ಯಾಕೆಂದರೆ, ಎಷ್ಟೋ ಕೆಲಸಗಳಿಗೆ ಅರ್ಜಿ ಹಾಕಿದಾಗ ಸ್ತ್ರೀಗೇ ಹಿಂದೆಂದಿಗಿಂತಲೂ ಆದ್ಯತೆ. ಆ ದಿಸೆಯಲ್ಲೆ ಕೆಲಸ ಮಾಡುವ ಸ್ಥಳಗಳಲ್ಲಿ ಹೆಣ್ಣಿನ ವೇಷಭೂಷಣಗಳಿಗೆ ನೀತಿಸಂಹಿತೆ ಬೇಕು, ಜಾಹೀರಾತುಗಳಲ್ಲಿ, ಸಿನಿಮಾಗಳಲ್ಲಿ ಅವಳನ್ನು “ತೆರೆದು” ತೋರುವ ಸ್ವಚ್ಛಂದ ಪ್ರವೃತ್ತಿಗೆ, ಎಲ್ಲಿದೆ ಕಡಿವಾಣ? ಎಲ್ಲಿದೆ ಆ ಹಿಂದಿನ ಸೆನ್ಸಾರ್ ನೀತಿ; ಹಣವೇ ಪ್ರಧಾನವಾಗುತ್ತಿರುವಾಗ ಈ ಸಮಾಜದಲ್ಲಿ ಇಂತಹ ವೈಪರಿತ್ಯಗಳಿಗೆ ಸ್ತ್ರೀ ಸಮುದಾಯವೇಕೆ ಸುಮ್ಮನಿದೆ? ಅಮೆರಿಕದಂತ ದೇಶವೇ ಸರಳ-ಸಂಯಮ ಜೀವನಶೈಲಿಗೆ ಮಾರುಹೋಗುತ್ತಿರುವ ಇಂದಿನ ಸಂದರ್ಭದಲ್ಲಿ ಇಲ್ಲೇಕೆ ಹೀಗೆ..?
ಒಬ್ಬ ಸೇರ್ಲ್ಸ ಗರ್ಲ್ ಆದಿಯಾಗಿ ಆಕೆಯ ಗ್ಲಾಮರಸ್ ಪ್ರಪಂಚಕ್ಕೆ ಇದೀಗ ಬಹಳ ಪ್ರಾಮುಖ್ಯವಿದೆ;ಅನ್ನೋ ಕಾರಣಕ್ಕೇ ಗಂಡಿಗೆ ಕೆಲಸವಿಲ್ಲದೇನೆ ನರಳುವ ಗಂಡುಮಕ್ಕಳನ್ನಷ್ಟೇ ಹೆತ್ತವರು ಪಡುವಂಥ ಪಾಡು ಹೇಳುವಂತಿಲ್ಲ.. ಸಧ್ಯ ನನ್ನ ಮಕ್ಕಳು ಓದಿ ದೊಡ್ಡ ಕೆಲಸದಲ್ಲಿದ್ದಾರೆ ಅಂತ ನಾನೊಬ್ಬ ನಿಟ್ಟುಸಿರಿಟ್ಟರಾಯಿತೇನು! ಕೆಳ-ಮಧ್ಯಮ ಕುಟುಂಬದ ಗಂಡು ಮಕ್ಕಳ ಪಾಡೇನು? ಅಲ್ಲಿ ಬಿ.ಎ.ಡಿಗ್ರಿ ಮಾಡಿದ ಹುಡುಗನ ತಾಯಿಗೆ ಕೆಲಸ ಸಿಕ್ಕೀತು; ಆ ಹುಡುಗನಿಗಲ್ಲ... ಇದು ಇದೇ ಇಂದಿನ ಕಾಲದ ಕಠೋರ ವಾಸ್ತವವಾಗಿರುವಾಗ ಎಲ್ಲಿದೆ ಯಾವ ದಂತಗೋಪುರದಲ್ಲಿ ಇನ್ನೂ ಅಡಗಿಕುಳಿತಿದೆ ಸ್ತ್ರೀವಾದ.?. ಸಾರಸಗಟಾಗಿ ಸ್ತ್ರೀವಾದವನ್ನೇ ತಿರಸ್ಕರಿಸಿ ಎಂದಿಲ್ಲ; ಅದು ಹಿಂದಿನ ಪರಿಕಲ್ಪನೆ ಪ್ರಾಮುಖ್ಯತೆಯನ್ನು ಖಂಡಿತವಾಗಿ ಕಳೆದುಕೊಂಡಿದೆ. ಹಾಗೇನಾದರೂ ಇನ್ನೂ ಸ್ತ್ರೀವಾದ ಬೇಕೆಂದಿದ್ದರೆ, ಅದರ ಪರಿಭಾಷೆಯನ್ನೇ ಆಯಾ ಪರಿಸರಕ್ಕೆ ಸಂದರ್ಭಕ್ಕೆ ತಕ್ಕಂತೆ ನ್ಯಾಯ ಒದಗಿಸಲೆಂದೇ ಬದಲಿಸಿ ಬಳಸಬೇಕಾಗುತ್ತದೆಯಷ್ಟೇ.

No comments: