Monday, September 04, 2006

ಹಿಂದೂ ಅಮೆರಿಕ

ಇಂದಿನ ದಿನಗಳಲ್ಲಿ ಅಮೆರಿಕದಂತಹ ಮುಂದುವರಿದ ದೇಶಗಳಲ್ಲಿ ಆಗುತ್ತಿರುವ ಬದಲಾವಣೆಯಾದರೂ ಏನು ಗೊತ್ತೇ? ಅಲ್ಲಿ ನೂರಕ್ಕೆ 70 ಜನರಿಗೆ ಐಷಾರಾಮೀ-ಸುಖ ಜೀವನಶೈಲಿ ಅಸಹ್ಯ ಹುಟ್ಟಿಸಿದೆ. ಅವರೀಗ ಸರಳ-ಸಂಯಮ ಜೀವನಕ್ಕೇ ಮಾರುಹೋಗಿದ್ದಾರೆ! ಹಣ ಹಣದಾಹದಿಂದ ದೂರವಾಗುತ್ತಿದ್ದಾರೆ. ಪ್ರತಿಯೊಬ್ಬರಿಗೂ ಒಂದು ಕಾರು ಎನ್ನುತ್ತಿದ್ದವರು, ಕಾರು ಬೇಡ, ಕಾಲಿಗೆ ಬೂಟಿಗಿಂತ ಚಪ್ಪಲಿ ಸಾಕು, ಸೂಟಿಗಿಂತ ಸರಳ ಉಡುಪೇ ಬೇಕು. ಬಂಗಲೆಗಿಂತ ಸೊಗಸಾದ ಪುಟ್ಟ ಮನೆಯಲ್ಲೆ ಎಲ್ಲ ಮೂಲಭೂತ ಸೌಕರ್ಯಗಳಿದ್ದರೆ ಸಾಕು. ಕೆಟ್ಟ ಪರಿಣಾಮ ಬೀರುವ ಟಿವಿ ಚಾನೆಲ್ಸ್, ಸಿನಿಮಾಗಳಿಗಿಂತ ಉತ್ತಮ ಸಾಹಿತ್ಯ ಸಂಗೀತವಿರಲೆ ಬೇಕು. ಯಾವಾಗಲೂ ಕುಟುಂಬದ ಒಡನಾಟ, ಹೆಂಡತಿ ಮಕ್ಕಳೊಡನೆ ಬೆರೆಯುವುದು, ಒಳ್ಳೆಯ ಪುಸ್ತಕಗಳನ್ನು ಓದುವಂತೆ, ಒಳ್ಳೆಯ ನಡೆ ನುಡಿಗಳನ್ನು ಬೆಳೆಸಿಕೊಳ್ಳುವಂತೆ ಮಕ್ಕಳಿಗೂ ಚಿಕ್ಕಂದಿನಿಂದಲೇ ರೂಢಿಸುವ ಪ್ರಯತ್ನದಲ್ಲಿದ್ದಾರೆ ಅವರು. ಹೀಗೆ ಸರಳ-ಸಂಯಮ ಜೀವನ ಶೈಲಿ ಅಲ್ಲಿ ಹೆಚ್ಚುತ್ತಿರುವುದನ್ನು ನೋಡಿ ಸಮಾಜಿಕ ತಜ್ಞರು ಬೆರಗಾಗಿದ್ದಾರೆ.

ಎಲ್ಲಕಾಲಕ್ಕೂ ಅಷ್ಟೇ.. ಯಾವುದೂ ಅತಿಯಾದರೆ ವರ್ಜ್ಯವೇ ಆಗಿಬಿಡುತ್ತದೆ. ಅತಿಯಾಗಿ ಸೇವಿಸಿದಮೇಲೆ ಬುದ್ಧಿ ಬಂದರೆ ಪ್ರಯೋಜನವೇನು ಹೇಳಿ? ಹೇಗಾದರೂ ಸರಿ, ಹಣದ ಹೊಳೆಯನ್ನೇ ಹರಿಸುವ ಹುನ್ನಾರವೇಕೆ? ಹೆಣ್ಣಾದವಳಿಗೆ ತನ್ನ ಅಂಗಾಂಗ ಪ್ರದರ್ಶನ, ಉದ್ರೇಕಕಾರಿ ಮಾತು ಕತೆಗಳು, ನಗೆಚಾಟಿಕೆಗಳು ಮೊದಲಿಗೆ ಖಷಿಕೊಡುತ್ತವೆಯಾದರೂ ಕ್ರಮೇಣ ಅಂಥ ಚೆಲ್ಲಾಟ ಹುಚ್ಚಾಟಗಳೆಲ್ಲವೂ ಸಿನಿಮೀಯವಾಗಿ ದುಷ್ಪರಿಣಾಮಬೀರಿ ಅಪಾಯ ತಂದೊಡ್ಡುವಾಗ ಯಾರೂ ಸಹಾಯಕ್ಕೆ ಬರಲಾರರಲ್ಲ.. ಬದುಕು ಕೊಚ್ಚೆ ನೀರಾಗಿ ರಾಡಿಯಾಗಿ ಹೋಯಿತೆಂದರೆ ಯಾರಿಗೂ ಹತ್ತಿರ ಬರದಷ್ಟು ಅಸಹ್ಯ ಹುಟ್ಟಿಸುವುದೇ ಅಲ್ಲವೇ..

ಹಿಂದೂಅಮೆರಿಕ
ಹೀಗೆ ನಮ್ಮಯುವಪೀಳಿಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಅಪಾಯಕರ ಸಂದರ್ಭ ಹಾಗೂ ಸನ್ನಿವೇಶಗಳಲ್ಲಿ ನಾವಿಂದು ಬದುಕುತ್ತಿದ್ದೇವೆ. ದಿನೇ ದಿನೇ ಈ ಪರಿಯ ಸಲ್ಲದ ವ್ಯಾಮೋಹಕ್ಕೆ ನಮ್ಮ ಯುವಕ/ಯವತಿಯರು ಮುಗಿಬೀಳುತ್ತಿದ್ದಾರೆ. ನಮ್ಮ ಸ್ವಾಮೀಜಿಯೊಬ್ಬರು ಕಂಡ ಅಮೆರಿಕ ಉಡುಪಿಯ ಅಷ್ಟಮಠದ ಸ್ವಾಮೀಜಿಯೊಬ್ಬರು ಅಮೆರಿಕದ ಮಧ್ವಸಂಘದವರ ಆಹ್ವಾನದ ಮೇರೆಗೆ ಅಲ್ಲಿಗೆ ಹೋದಾಗ ಅವರು ಕಂಡ ಹಿಂದೂಅಮೆರಿಕ ಹೇಗಿತ್ತೆಂಬುದನ್ನು “ತರಂಗ” ವಾರಪತ್ರಿಕೆಯ ಸಂದರ್ಶನವೊಂದರಲ್ಲಿ ಸಾದ್ಯಾಂತ ವಿವರಿಸಿದ್ದಾರೆ. 14 ಜೂನ್,1998 ರ ಈ ಹಳೆಯ ಸಂಚಿಕೆ ಅದ್ಹೇಗೋ ನನ್ನ ಮನೆಯಲ್ಲಿ ಇತ್ತೀಚೆಗೆ ನನ್ನ ಗಮನ ಸೆಳೆಯಿತು.. ಆ ವಿಶೇಷ ಲೇಖನದ ತುಣುಕುಗಳನ್ನಿಲ್ಲಿ ಕೊಡತ್ತಿದ್ದೇನೆ-

ಪೂರ್ವ-ಪಶ್ಚಿಮ
“ದೆಹಲಿಯಿಂದ ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಹೊರಟವರು ಸಂಜೆ ಗೋಧೂಳಿ ಲಗ್ನದಲ್ಲಿ ಅಮೆರಿಕಾ ಸೇರಿದ್ದೆವು. ಅದು ನಮಗೆ ಸೋಜಿಗ. ನಮಗೆ ಇಲ್ಲಿ ಬೆಳಗಾಗುವುದೆಂದರೆ ಅಲ್ಲಿಯವರಿಗೆ ಅದು ಹಿಂದಿನ ದಿನದ ಸಾಯಂಕಾಲ. ಹೋಗಿ ಸೇರಿದಾಗ ಇಲ್ಲಿ ಮರುದಿನ ಬೆಳಗಾದರೆ ಅಲ್ಲಿ ಹಿಂದಿನ ದಿನ ಸಂಜೆ.
“ಗೀತೆಯಲ್ಲಿ ಕೃಷ್ಣ ಹೇಳಿದ ‘ಯಾ ನಿಶಾ ಸರ್ವ ಭೂತಾನಾಂ’ ಎಂಬ ಮಾತಿನ ಅರ್ಥವಾಯಿತು. ಒಬ್ಬರ ಕತ್ತಲು ಮತ್ತೊಬ್ಬರ ಬೆಳಕು. ಪೂರ್ವ-ಪಶ್ಚಿಮದ ಜನರ ಮನೋಗತಿಯೂ ಅದಕ್ಕನುಸಾರ ವಾಗಿದೆಯೆಂದು ಗೋಚರವಾಯಿತು. ಪೌರ್ವಾತ್ಯರದ್ದು ಧರ್ಮಪ್ರಧಾನವಾದ ಬದುಕು. ಪಾಶ್ಚಾತ್ಯರದ್ದು ಅರ್ಥಪ್ರಧಾನ ಬದುಕು. ಆದರೆ ಇತ್ತೀಚೆಗಿನ ದಿನಗಳಲ್ಲಿ ಅನೇಕ ಪಾಶ್ಚತ್ಯರಿಗೆ ಧರ್ಮಪ್ರಧಾನ ಬದುಕಿನ ಬೆಲೆ ಗೊತ್ತಾಗುತ್ತಿದೆ. ಪೌರ್ವಾತ್ಯರು ಅರ್ಥಪ್ರಧಾನ ಬದುಕಿನತ್ತ ಆಕರ್ಷಿತರಾಗುತ್ತಿದ್ದಾರೆ.
‘ಪೂರ್ವಜರಲ್ಲಿ ಪೂರ್ವಾಗ್ರಹ ಸ್ವಲ್ಪ ಜಾಸ್ತಿ. ಅದು ಎಷ್ಟೇ ಕೆಟ್ಟದಾಗಿರಲಿ ಒಮ್ಮೆ ಹಿಡಿದರೆಂದರೆ ಪೌರ್ವಾತ್ಯರು ಅದನ್ನು ಬಿಡಲೊಲ್ಲರು. ಪಾಶ್ಚಾತ್ಯರಲ್ಲಿ ಪಶ್ಚಿಮಾಗ್ರಹ(ಅಪರಾಗ್ರಹ) ಜಾಸ್ತಿ. ಒಂದು ವಸ್ತು ಎಷ್ಟೇ ಒಳ್ಳೆಯದಿರಬಹುದು, ಹೆಚ್ಚು ಕಾಲ ಅದನ್ನು ಹಿಡಿದಿಡಲಾರರು. ಆದ್ದರಿಂದಲೇ ಅಲ್ಲಿ ‘ಡೈವೋರ್ಸ್’ ಜಾಸ್ತಿ ಅಂತ ಕಾಣುತ್ತದೆ.
“ಪೂರ್ವಕ್ಕೆ ಪೂರ್ವ ಎಂಬ ಹೆಸರು ಸಾರ್ಥಕ. ಪಶ್ಚಿಮಕ್ಕೆ ಪಶ್ಚಿಮ ಎಂಬ ಹೆಸರು ಸಮರ್ಪಕ.”

ಪ್ರತಿಯೊಬ್ಬ ಅಮೆರಿಕನ್ನರು ಕೇಳುವ ಪ್ರಶ್ನೆ-‘ಭಾರತದಲ್ಲಿ ಇಷ್ಟು ಬಡತನವಿದ್ದರೂ ಭಾರತೀಯರ ಮುಖದಲ್ಲಿ ಮುಗುಳ್ನಗೆಯೇ ಕಾಣುತ್ತದಲ್ಲಾ?’
”ದುಃಖ, ಬಡತನ ಎಷ್ಟೇ ಇರಲಿ, ದೇವರು ಇಂದಲ್ಲ ನಾಳೆ ನನ್ನ ಕೈಹಿಡಿದು ಮೇಲೆತ್ತುತ್ತಾನೆ ಎನ್ನುವ ನಂಬಿಕೆ, ವಿಶ್ವಾಸ ಇವುಗಳೇ ಆತನ ಪ್ರಸನ್ನತೆಗೆ ಕಾರಣ ಎಂದು ಪಾಶ್ಚಾತ್ಯರಿಗೆ ಹೇಗೆ ಗೊತ್ತಾಗಬೇಕು?”

ಅಮೆರಿಕದಲ್ಲಿ ನೆಲೆಸಿದ ಭಾರತೀಯರಲ್ಲಿ ‘ಹಿಂದುತ್ವ’ ಎಷ್ಟು ಉಳಿದಿದೆ? ಬೆಳೆದಿದೆ?
ಅಮೆರಿಕದಲ್ಲಿ ನೆಲೆಸಿದ ಹಿಂದೂಗಳನ್ನು ಕೇಳಿದರೆ-ನಿಜವಾದ ಹಿಂದೂಗಳು ನಾವೇ ಎನ್ನುತ್ತಾರೆ. ಭಾರತದಲ್ಲಿದ್ದಾಗ ಹಿಂದುತ್ವ, ಧರ್ಮ, ಆಧ್ಯಾತ್ಮಿಕ ವಿಚಾರಗಳ ಬಗ್ಗೆ ತಿರಸ್ಕಾರ ಬುದ್ಧಿ ಇದ್ದವರೂ ಅಮೆರಿಕಕ್ಕೆ ಬಂದ ಮೇಲೆ ಬಹಳ ಶ್ರದ್ಧೆ, ಭಕ್ತಿಯಿಂದ ಮಾಗಿದ್ದಾರೆ. ಅಮೆರಿಕದ ಹಿಂದೂಗಳಲ್ಲಿ ನಾಸ್ತಿಕರೆಂಬುವರೇ ಇಲ್ಲ. ಕುಡಿತವಿಲ್ಲ. ಮಾಂಸ ಭಕ್ಷ್ಯವೂ ತ್ಯಾಜ್ಯ. ಅಮೆರಿಕದ ಹಿಂದೂಗಳು ಹಿಂದೂ ಹಬ್ಬ ಹರಿದಿನಗಳನ್ನು ಎರಡೆರಡು ಬಾರಿ ಆಚರಿಸುತ್ತಾರೆ. ಅಮೆರಿಕದ ಭಾರತೀಯರು, ಹಿಂದೂಗಳು ಒಗ್ಗಟ್ಟಿನಿಂದ ಇದ್ದಾರೆ.

ಅಲ್ಲಿ ಅವರು ಏಕಾದಶಿಯನ್ನು ಹೇಗೆ ಲೆಕ್ಕಹಾಕಿಕೊಳ್ಳುತ್ತಿದ್ದರು?
ಅಲ್ಲಿನ ಸೂರ್ಯಹುಟ್ಟುವ, ಮುಳುಗುವ ಲೆಕ್ಕಾಚಾರದಲ್ಲಿ ಮಾಡಿಕೊಳ್ಳುತ್ತಿದ್ದರು. ನಾನೂ ಅವರೊಂದಿಗೆ ಒಂದು ದಿನ ಏಕಾದಶಿ ಉಪವಾಸ ಮಾಡಿದ್ದೆ. ಒಟ್ಟಿನಲ್ಲಿ ಅವರು ಅಲ್ಲಿ ಇಲ್ಲಿನಂತೆಯೆ ಇದ್ದರೆಂಬುದು ನಿಮ್ಮ ಅನುಭವದ ಮಾತೇ? ಖಂಡಿತ. ಒಂದಿನಿತೂ ಅವರು ತಪ್ಪಿಲ್ಲ.

ಮೇಧಾವಿ ಮಕ್ಕಳು:
ಅಮೆರಿಕದ ಮೂವತ್ತು ನಗರಗಳಲ್ಲಿ ನೂರಾರು ಭಾರತೀಯರ ಮನೆಗಳಿಗೆ ಭೇಟಿ ನೀಡಿದ ಸ್ವಾಮೀಜಿಯವರಿಗೆ ಅಲ್ಲಿನ ಮಕ್ಕಳನ್ನು ಹತ್ತಿರದಿಂದ ಕಾಣುವ ಅವಕಾಶ ಲಭಿಸಿದ ಸಂದರ್ಭದಲ್ಲಿ- ಹೆಚ್ಚಿನ ಮಕ್ಕಳಲ್ಲಿ ಜಿಜ್ಞಾಸೆ, ಕುಶಾಗ್ರಮತಿ ಇವುಗಳನ್ನು ಕಂಡು ಆಶ್ಚರ್ಯ ಪಟ್ಟಿದ್ದಾರೆ ಉದಾಹರಣೆಗಳನ್ನು ನೋಡಿ-

”ಬಫೆಲೋದಲ್ಲಿ ನಾವು ತಂಗಿದ್ದ ಮನೆಯಲ್ಲಿ ಒಂದನೆಯ ತರಗತಿಯ ಕಿಶೋರನಿಗೆ ಆ ದಿನ ಶಾಲೆಯಲ್ಲಿ ಸ್ವಾನುಭವ ಲೇಖನದ ಸ್ಪರ್ಧೆಯಿತ್ತು. ಆತ ಬರೆದ-“ ಇಂದು ನಮ್ಮ ಮನೆಗೆ ಭಾರತದಿಂದ ಸ್ವಾಮೀಜಿಯೊಬ್ಬರು ಬಂದಿದ್ದಾರೆ. ನಮ್ಮ ದೇಶದ ಜನರು ಅವರನ್ನು ನೋಡಲು ಬಂದಿದ್ದಾರೆ. ತಂದೆಗೆ ಸ್ವಾಮಿಗಳೆಂದರೆ ಭಯಭಕ್ತಿ. ನಮಗೆ ಬೇರೆ ಮಕ್ಕಳು ನಮ್ಮ ಮನೆಗೆ ಬಂದ ಖಶಿ. ತಾಯಿಯ ಸಂತೋಷಕ್ಕೆ ಕಾರಣ ಸ್ವಾಮಿಗಳ ಜತೆ ಅಡುಗೆಯವರೂ ಬಂದಿದ್ದಾರೆ. ಅವರೇ ಭರ್ಜರಿ ಅಡುಗೆ ಮಾಡುತ್ತಾರೆ. ಅಮ್ಮನಿಗೆ ಅಡುಗೆ ಕೆಲಸವಿಲ್ಲ.’ ಹೀಗೆ ಬರೆದು ನಮ್ಮ ಚಿತ್ರ ಹಾಗೂ ತಂದೆ-ತಾಯಿಗಳ ಚಿತ್ರ ಬರೆದಿದ್ದ. ಅದಕ್ಕೆ ಪ್ರಥಮ ಬಹುಮಾನ ಬಂತಂತೆ.

”ಮತ್ತೊಂದೆಡೆ ಏಳು ವರ್ಷದ ಕಿಶೋರನೊಬ್ಬ ತಾಯಿಯ ಜತೆ ವಾಸವಾಗಿದ್ದ. ತಂದೆ ಡೈವೋರ್ಸ್ ಮಾಡಿಕೊಂಡು ಬೇರೆ ಕಡೆ ಹೋಗಿದ್ದರು. ಆತನಿಗೆ ಹನುಮಂತನೆಂದರೆ ಇಷ್ಟವಂತೆ. ಯಾಕೆ ಎಂದು ನಾವು ಕೇಳಿದ್ದಕ್ಕೆ- ‘ನನ್ನ ತಂದೆ ನಮ್ಮ ತಾಯಿಯನ್ನು ಬಿಟ್ಟುಹೋಗಿದ್ದಾರೆ. ನನಗೆ ಈ ಹನುಮಂತ ಇಷ್ಟ. ಅವನು ಯಾರಿಗೂ ಡೈವೋರ್ಸ್ ಹೊಡುವ ಹಾಗಿಲ್ಲವಲ್ಲ’ ಎಂದುಬಿಟ್ಟ.

”ಮತ್ತೊಂದೆಡೆ- ನಾವು ಮನೆಗೆ ಪ್ರವೇಶ ಮಾಡಿದ ಕೂಡಲೇ ನಮಗೆ ನಮಸ್ಕಾರ ಮಾಡಿದ ಪುಟ್ಟ ಮಗು ನಂದಿನಿ ನಮ್ಮ ರೆಟ್ಟೆ ಹಿಡಿದು ಕೇಳಿದಳು, “ನಮ್ಮ ಅಮ್ಮ ಹೇಳುತ್ತಾಳೆ, ನೀವು ತುಂಬ ಉಪವಾಸ ಮಾಡುತ್ತೀರಂತೆ, ಹಾಗಿದ್ದರೂ ನಿಮ್ಮ ರೆಟ್ಟೆ ಇಷ್ಟು ಗಟ್ಟಿಯಾಗಿದೆಯಲ್ಲ..” ಎಂದು ಮುಟ್ಟಿ ಮುಟ್ಟಿ ಪರೀಕ್ಷಿಸಿದಳು.



ಅಮೆರಿಕನ್ನರ ಆಸಕ್ತಿ ಅದ್ಭುತ
ಅಮೆರಿಕನ್ನರಲ್ಲಿರುವ ತಿಳಿದುಕೊಳ್ಳಬೇಕೆಂಬ ದಾಹ, ಆಸಕ್ತಿ ಅದ್ಭುತವಾದದ್ದು. ಯಾವ ವಿಷಯವನ್ನೇ ಆದರೂ ಅಮೂಲಾಗ್ರವಾಗಿ ತಿಳಿದುಕೊಳ್ಳುವ ಹಟ, ಶಿಸ್ತು ಬಹಳವಿದೆ. ಒಬ್ಬ ಅಮೆರಿಕನ್ ಕೇಳಿದರು- ’ಅಮೆರಿಕಕ್ಕೆ ಬಂದ ಅನಂತರ ಭಾರತದ ಬಗ್ಗೆ ಏನನ್ನಿಸುತ್ತದೆ?’
ನಾವು ಹೇಳಿದೆವು- ‘ಭಾರತದಲ್ಲೇ ಇದ್ದವರಿಗಿಂತ ಹೆಚ್ಚು ಭಾರತದ ಸೌಂದರ್ಯ ಶಿಖರಗಳನ್ನು ಗಮನಿಸದ್ದೇವೆ, ಆಸ್ವಾದಿಸಿದ್ದೇವೆ’ ಎಲ್ಲರಿಗೂ ಪುಳಕ ತಂದಿತು. ಅವರ ವಿನಯ, ಕಲಿಯಬೇಕೆಂಬ ಚಾಪಲ್ಯ ಅನುಕರಣೀಯ.”

“ಅಮೆರಿಕದಲ್ಲಿ ನಿಂತು ಭಾರತವನ್ನು ಕಂಡಾಗ ಉನ್ನತ, ಆದರ್ಶಮಯವಾಗಿ ಕಾಣುತ್ತದೆ. ಭಾರತದಲ್ಲೇ ನಿಂತು ಅಮೆರಿಕವನ್ನು ಕಂಡಾಗ ಮೋಹಕ, ಆಕರ್ಷಕವಾಗಿ ಕಾಣುತ್ತದೆ. ಅಲ್ಲಿದ್ದವರಿಗೆ ಇಲ್ಲಿ ಬರುವ ಆಸೆ. ಇಲ್ಲಿದ್ದವರಿಗೆ ಅಲ್ಲಿಗೆ ಹೋಗುವ ಚಪಲ. ಎರಡೂ ದೇಶಗಳ ಉತ್ತಮ ಗುಣ, ಸಂಸ್ಕೃತಿ ಅಲ್ಲಿರುವ ಭಾರತೀಯರಲ್ಲಿದೆ. ಅದು ವಿಶೇಷ.

ಆದ್ದರಿಂದ, ಇಂದಿನ ನಮ್ಮ ಯುವ ಪೀಳಿಗೆ ಎಚ್ಚೆತ್ತುಕೊಳ್ಳಬೇಕು. ಅವರ ಅಮೆರಿಕಾ ವ್ಯಾಮೋಹ ಕ್ಷುಲ್ಲಕ; ಬದುಕೆಂಬದು ಅರ್ಥವಿಹೀನವಾಗಬಾರದಲ್ಲ... ಸ್ವಚ್ಛಂಧ ಪ್ರವೃತ್ತಿಯ “ಸೋಷಿಯಲ್ ಲೈಫ್”, “ಹೈಲೆವೆಲ್ ಸ್ಟೈಲ್ಸ್” ಇವೆಲ್ಲವೂ ಅವರಿಗೆ ಮಾರಕವಾಗಿ ನಮ್ಮತನವನ್ನೇ ತಾವು ಈ ಸಮುದಾಯದಲ್ಲಿ ಕಳೆದುಕೊಳ್ಳುವಂತಾಗಬಾರದಲ್ಲ... ತುಂಬು ಹರೆಯದ ಹೆಣ್ಣು ಮಕ್ಕಳು ತಮ್ಮ ಫ್ಯಾಷನ್ ಗೀಳಿನಲ್ಲಿ ಹೊಸತನ್ನು ಅನುಕರಿಸುವಾಗ ತಮ್ಮನ್ನು ತಾವು ಗೌರವವರ್ಣದಿಂದ ಕಾಯ್ದುಕೊಳ್ಳವುದಕ್ಕೇ ಆದ್ಯತೆ ನೀಡಬೇಕಲ್ಲ... ಯುವಕರೂ ಅಷ್ಟೇ “ಹುಚ್ಚು ಲೌವ್ ಅಫೈರ್”ಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದೂ ಅತ್ಯಗತ್ಯವಲ್ಲವೇ? ಯಾಕೆಂದರೆ, ಇದೆಂದಿಗೂ ಅಮೆರಿಕನ್ ನಿಜಕ್ಕೂ ಪರಿಸರವಾಗಲಾರದೆಂಬುದೂ ಕಠೋರ ಸತ್ಯವೇ. ಆದರೂ, ಅಮೆರಿಕದಲ್ಲಿ ಆಗುತ್ತಿರುವುದೇನು? ಅಲ್ಲಿ ಸ್ವಚ್ಛಂದ ಪರಿಸರವಿರುವೆಡೆಯಲ್ಲಿ ತಮ್ಮ ಮಕ್ಕಳನ್ನು ನಿಯಂತ್ರಿಸುವುದೂ ತಮ್ಮತನ ಉಳಿಸಿಕೊಳ್ಳುವುದೇ ಅತಿಮುಖ್ಯವೆನಿಸಿರುವಾಗ, ಅಂತಹ ಸ್ವಚ್ಛಂದ ಪರಿಸರಕ್ಕೆ ಹೇಸುವಷ್ಟು ನಮ್ಮ ಸಂಸ್ಕೃತಿಯಲ್ಲಿ ಪರಂಪರಾಗತವಾಗಿಯೆ ತೀವ್ರ ವಿರೋಧವಿರುವೆಡೆಯಲ್ಲಿ ನಾವೆಷ್ಟೇ ಜಾಗೃತರಾಗಿದ್ದರೂ ಕಡಿಮೆಯೇ; ಇಲ್ಲದಿದ್ದರೆ, ಸೋತು ಅಪರಾಧೀ ಪ್ರಜ್ಞೆಯಿಂದ ಜೀವಮಾನವಿಡಿ ಪಶ್ವಾತ್ತಾಪ ಪಡುವಂತಾಗುತ್ತದೆ...
-ಎಚ್.ಶಿವರಾಂ 4 ಸೆಪ್ಟೆಂಬರ್. 2006

ನಮ್ಮ ಸಂಸ್ಕೃತಿ ಪರಂಪರೆಗೊಂದು ವೈಜ್ಞಾನಿಕ ನಿದರ್ಶನ ಇಲ್ಲಿದೆ ನೋಡಿ-

ಯೋಗ ಸಾಧನೆ-ವೈಜ್ಞಾನಿಕ

No comments: