Monday, July 02, 2007

ನಮ್ಮ ದರ್ಶನೇಂದ್ರಿಯದ ಅನುಭವಗಳಲ್ಲಿ...

ಸಮುಊಹ ಸನ್ನಿಗೆ ಸಿಲುಕದಿರಬೇಕಾದರೆ ಸತ್ವಶಾಲಿಯಾಗಬೇಕು. ಅಜ್ಞಾನ ಕಳೆದು ಅಂತಃ ಸತ್ವ ಹೆಚ್ಚಬೇಕಾದರೆ ತನ್ನೊಳಗೇ ಅರಿವು ಮುಊಡಬೇಕು. ಎಲ್ಲ ಕಾಲಕ್ಕೂ ಸಮಾಜವು ಅಸ್ವಸ್ಥವಾಗಿರುವಂತೆ ತೋರುವುವದೇ ಹೆಚ್ಚು. ಇಲ್ಲೇ ನಮ್ಮ ಸ್ವಾಸ್ಥ್ಯಕ್ಕಾಗಿ ಸ್ವಸ್ಥವಾಗಿರುವ ಪರಿಸರವನ್ನು ಹುಡುಕಿಕೊಳ್ಳುವುದೇ ಜಾಣತನ. ಅದು ಸುಲಭ ಸಾಧ್ಯವೇನಲ್ಲ. ಈ ಬದುಕಿಗೆ ಅರ್ಥ ಏಕೆ ಬೇಕು? ಎಂದು ಹೇಳುವ ಗುರು ಅಲ್ಲದ ಗೂರೂಜಿಗಳಿದ್ದರೆ, ಸ್ವತಃ ಬೆತ್ತಲೆಯಾಗಿದ್ದು ಸಾರ್ವಜನಿಕ ವೇದಿಕೆಯಲ್ಲಿ ಬದುಕಿಗೆ ಅರ್ಥ ಇರಬೇಕೆಂದೇ ಬೋಧಿಸುವ ದಿಗಂಬರ ಸ್ವಾಮೀಜಿಗಳೂ ಇಲ್ಲಿದ್ದಾರೆ.

ಹೌದು, ಅರ್ಥ ಏಕೆ ಬೇಕು? ಹೇಗಾದರೂ ಬದುಕುವುದಷ್ಟೇ ಎಂದರೆ, ಬದುಕು ಅಸ್ತವ್ಯಸ್ತವಾದೀತು. ಬಟ್ಟೆಯುಟ್ಟುಕೊಂಡಿದ್ದರೂ ಬದುಕು ಮುಊರಾಬಟ್ಟೆಯಾದಿತಷ್ಟೇ. ಹಾಗೆಯೆ ಬಟ್ಟೆಯುಟ್ಟುಕೊಂಡವರೆಲ್ಲ ಅರ್ಥ ಕಂಡವರಲ್ಲ. ಯಾವ ಯಾವುದೋ ಕಾರಣಕ್ಕೆ ಬೆತ್ತಲೆಯಾದವರೆಲ್ಲ ದಿಗಂಬರ ಸನ್ಯಾಸಿಗಳಲ್ಲ. ದಿಗಂಬರರಾದವರಲ್ಲೂ ದಿವ್ಯ ಸಾನ್ನಿಧ್ಯವೊಂದರ ಹುಡುಕಾಟವಿದೆ. ಬಟ್ಟೆಯುಟ್ಟವರಲ್ಲೂ ಬದುಕಿನ ಸಾಂಗತ್ಯದ ತಡಕಾಟವಿದ್ದೇ ಇರುತ್ತದೆ. ಇಲ್ಲವಾದರೆ ಅದು ಮನುಷ್ಯನ ಬದುಕಾಗುವುದಿಲ್ಲ.

ನಿಜವಾಗಿ ನೋಡಿದರೆ ಅನುಭವ ಮಾತ್ರವೇ ಜೀವನ ದೃಷ್ಟಿಯಾಗುವುದಿಲ್ಲ. ಅದು ನೀಡುವ ಹೊಸ ಚೈತನ್ಯದಲ್ಲಷ್ಟೇ ಅದು ಅಡಗಿದೆ. ಅದರ ವಿನಿಮಯದಲ್ಲಡಗಿದೆ. ಆದರೇನು! ಸಮಕಾಲೀನ ಸಮಾಜದಲ್ಲಿ ಅನುಭವವೆಂಬದು ನಮಗೇ ಗುರುತು ಸಿಗಲಾರದಷ್ಟು ವಿಚ್ಛಿದ್ರಕಾರಿಯಾಗುತ್ತಿದೆ. ಪದವಿ ಗಿಟ್ಟಿಸಿಕೊಂಡೇ ಹಿರಿಯರೆನಿಸಿಕೊಂಡವರಲ್ಲಿ ಅದರ ಮತ್ತಿನಿಂದಲೆ ಉದ್ಭವಿಸಿದ ಅವರ ಅನುಭವವೇ ಅವಹೇಳನಕಾರಿಯಾಗಿದೆ. ಯುವಜನಾಂಗದ ದ್ವಂದ್ವ ವ್ಯಕ್ತಿತ್ವಗಳೋ,ಗೊಂದಲದ ಸನ್ನಿವೇಶಗಳಲ್ಲಿ ವಿದ್ರೂಪಗೊಳ್ಳುತ್ತಿದೆ. ಮನಸ್ಸುಗಳು ಒಗ್ಗಟ್ಟಿನಲ್ಲಿ ಒಂದಾಗುವುದರ ಬದಲು ನುಚ್ಟುನೂರಾಗುತ್ತಿದೆ. ಬದುಕೆಂಬುದು ಯಾಂತ್ರಿಕವಾಗುತ್ತ ಕ್ರಿಯಾಶಕ್ತಿ ಎಂಬುದು ಕೇವಲ ಹಣ ಗಳಿಕೆಗಷ್ಟೇ ಸೀಮಿತವಾಗುತ್ತಿದೆ.

ಆದರೂ ಇಂಥ ಸಮಾಜದಲ್ಲಿ ನಾವು ನಿರಾಶರಾಗಬೇಕಿಲ್ಲ;ಹತಾಶೆಗೆಡೆಕೊಡಬೇಕಿಲ್ಲ. ಇನ್ನೂ ಮನುಷ್ಯ-ಮನುಷ್ಯರನ್ನು ಇಡಿಯಾಗಿ ಗ್ರಹಿಸುವ, ನಮ್ಮ ದರ್ಶನೇಂದ್ರಿಯದ ಅನುಭವಗಳಲ್ಲಿ ಅವನನ್ನು ಹುಡಿಯಾಗಿಸಿ ಹುರಿಯಾಳಾಗಿಸಿ ಎಂದಿಗೂ ಹಿಡಿದಿಡುವ ಬಲ ಕೇವಲ ನಮ್ಮ ಭಾಷೆಯ ಬಳಕೆಯಲ್ಲಷ್ಟೇ ಇದೆ; ಅದರ ವ್ಯಾಪ್ತಿಯಲ್ಲಡಗಿದೆ. ನಮ್ಮ ಪ್ರಾಪ್ತಿಯಲ್ಲಿದೆ. ಅದು ಸಾಹಿತ್ಯದಲ್ಲಿ ಕಾಣಸಿಗುತ್ತಲೇ ಇರುತ್ತದೆ. ಆ ಸಾಹಿತ್ಯ ಶ್ತಕ್ತಿಯಷ್ಟೇ ಬದುಕನ್ನೆದುರಿಸುವ ಆತ್ಮ ಸ್ಥೈರ್ಯ ನೀಡುತ್ತದೆ.

"ನಹಿ ಜ್ಞಾನೇನ ಸದೃಶಂ"
-ಎಚ್.ಶಿವರಾಂ

1 comment:

ShivaRam H said...

ನೀವು ಭೇಟಿ ಕೊಟ್ಟಿದ್ದಕ್ಕೆ ಧನ್ಯವಾದಗಳು.
ನಿಮ್ಮ ತಾಣಕ್ಕೆ ನಾನೂ ಭೇಟಿ ಕೊಡುವೆ