Monday, April 14, 2008

ನಮ್ಮ ಕನ್ನಡ ನಾಡು ಕಂಡ ಒಬ್ಬ ಮಹಾನ್ ನಟ ಡಾ.ರಾಜ್ ಕುಮಾರ್:- ಅವರ ಸ್ಮರಣೆ

ನಮ್ಮ ಕನ್ನಡ ನಾಡಿನ ಮಹಾನ್ ನಟ ಡಾ.ರಾಜ್ ಕುಮಾರ್ ನಮ್ಮನ್ನು ಅಗಲಿ ವರ್ಷಗಳು ಸಂದಿವೆ. ಅವರದೇ ನೆನಪು ನಮ್ಮ ನಾಡಿನ ಹಿಂದು ಮುಂದಿನ ಜನತೆಯನ್ನು ಸದಾ ಕಾಡುತ್ತಲೇ ಇರುತ್ತದೆ. ಎಷ್ಟೋ ಸಲ ಆ ಕಾಲ, ಅದೆಂಥ ಪರ್ವ ಕಾಲ-ಸುವರ್ಣಕಾಲ! ಎಂದು ಪರಿತಪಿಸುವ ಹಿರಿಯರಿದ್ದಾರೆ. ಆ ಕಾಲದ ಚಿತ್ರಗಳು ಇಂದಿಗೆ ಹಳೆಯದಾದರೂ ಅವು ನಮ್ಮ ನಾಡು ನುಡಿ ಸಂಸ್ಕೃತಿಗೆ ನೀಡಿದ ಕೊಡುಗೆ ಅಪಾರ. ಅಭಿನಯಿಸಿದ ರಾಜಣ್ಣನ ಭಾವಾವೇಶದ ನಟನೆಯೆ ಅದ್ವಿತೀಯ ಎಂದು ತಲ್ಲೀನರಾಗುತ್ತಾ, ಆ ಚಿತ್ರಗಳ ದೃಶ್ಯ ಮತ್ತು ಗೀತೆಗಳ ಅರ್ಥಪೂರ್ಣ ಸಾಹಿತ್ಯ ಇಂಪಾದ ಗಾಯನದ ಸುಮಧುರ ಸಂಗೀತದಲ್ಲಿ ತೇಲುತ್ತಾ, ಹಾಗೆಯೆ ಭಾವನೆಗಳಿಗೇ ಬೆಲೆ ತುಂಬಿ ಬಂದಿದ್ದ ಆ ಕಾಲವನ್ನೇ ಸವಿಯುತ್ತಾ ಕೂರುವ ಇಂದಿನ ಪೀಳಿಗೆಯವರ ಗುಂಪಿಗಂತೂ ಏನೂ ಕಡಿಮೆಯಿಲ್ಲ ಎಂದರೆ ಉತ್ಪ್ರೇಕ್ಷೆ ಏನಿಲ್ಲ. ಅಂಥಹ ಭಾವನಾತ್ಮಕ ಕಾಲ "ವಸುಧೈ ಕುಟುಂಬಂ'"ಎನ್ನುವುದನ್ನೇ ಪ್ರತಿಬಿಂಬಿಸುವಂತಹ ಕಾಲ ಮತ್ತೆಂದೂ ಬರಲಾರದು.
ಡಾ.ರಾಜ್ ಕುಮಾರ್ ಅವರು ನಮ್ಮ ನಾಡಿನ ಸಂಸ್ಕೃತಿ ಪರಂಪರೆಯನ್ನೆತ್ತಿ ಹಿಡಿದ ನಾಯಕರಷ್ಟೇ ಆಗಿರಲಿಲ್ಲ, ಜನಸಾಮಾನ್ಯರ ಹಾಗೂ ಪ್ರಾಜ್ಞರ ಮನೆ ಮಾತಾಗಿದ್ದರು. ಅವರು ತಮ್ಮ ಪ್ರತಿಭೆ ಹಾಗೂ ತಮ್ಮ ಹುಟ್ಟಿನ ಗುಟ್ಟನ್ನೇ ಅರಿತವರಂತೆ ಅವಿರತ ಸಾಧನೆಯಿಂದ ನಟನೆಯಲ್ಲಿ ಮಾನವೀಯತೆಯ ಪರಾಕಾಷ್ಠಯನ್ನೆ ತಲುಪಿದವರು, ಜನಮಾನಸದಲ್ಲಿ ಆದರ್ಶಗಳ ಪ್ರತಿ ಮೂರ್ತಿಯಂತಾದರು, ನಮ್ಮ ನಾಡಿನಾಚೆಗೂ ಪ್ರಭಾವಶಾಲಿಗಳೆನಿಸಿ ಎಲ್ಲರ ಮನಗೆದ್ದರು. ಎಂದಿಗೂ ವಿಶ್ವಮಾನ್ಯರೇ ಆಗಿ ಸ್ಮರಣೀಯರೆನಿಸಿದರು.
ನಮ್ಮ ಯುವ ಕನಸುಗಳಿಗೆ ಮನಸುಗಳಿಗೆ ಹಾಗೂ ಕವಿ ಹೃದಯಗಳಿಗೆ ಸ್ಫೂರ್ತಿ ನೀಡಿದ ಅವರ ಸದಭಿರುಚಿಯ ಚಿತ್ರಗಳು ಹಾಗೂ ಇಂಪಾದ ಹಾಡುಗಳು ಅನೇಕ. ಆ ರಸಮಯ ಹಾಗೂ ಜೀವನೋತ್ಸಾಹದ ಕ್ಷಣಗಳು ನಮ್ಮ ಮನಗಳನ್ನು ನವಿರಾಗಿ ಕಾಡುತ್ತಲೇ ಇರುತ್ತವೆ. ನಾನೂ ಬರಹಗಾರನಾಗಿ ಅವರ ಭಾವ ಪೂರ್ಣ ಅಭಿನಯದಿಂದ ಚಿತ್ರಗಳಿಗೆ ಹಾಡುಗಳನ್ನು ಬರೆದ ಚಿ.ಉದಯಶಂಕರ್, ಆರ್.ಎನ್.ಜಯಗೋಪಾಲ್, ವಿಜಯಾನರಸಿಂಹ ಅವರುಗಳ ಅರ್ಥಪೂರ್ಣ ಸಾಹಿತ್ಯದಿಂದ ಸಂಗೀತ ನೀಡಿದ ಜಿ.ಕೆ.ವೆಂಟೇಶ್, ಟಿ.ಜಿ.ಲಿಂಗಪ್ಪ, ರಾಜನ್ ನಾಗೇಂದ್ರರ ಸ್ವರ ಲಾಲಿತ್ಯಗಳಿಂದ ಭಾವನಾತ್ಮಕತೆಯಲ್ಲಿ ಮೈಮರೆತಿದ್ದುಂಟು, ಅವುಗಳ ಅವ್ಯಕ್ತ ಪ್ರೇರಣೆ ಯಿಂದ ಇನ್ಷಷ್ಟು ಸ್ಫೂರ್ತಿ ಪಡೆದದ್ದೂ ಇದೆ.
ಹೇಳಬೇಕೆಂದರೆ, ಆಗಿನ ಕಾಲದ ಚಿತ್ರಗಳಲ್ಲಿ ಆದರ್ಶದ ವೈಭವೀಕರಣವಿತ್ತು ಎನ್ನುವವರಿದ್ದಾರೆ. ಈಗಿನ ಕಾಲದ ಮಚ್ಚು, ಸೆಕ್ಸ್ ಮಸಾಲೆಗಳ ವೈಭವಕ್ಕಿಂತ ಅವುಗಳದೇ ನಿಜಕ್ಕೂ ಎಲ್ಲ ರೀತಿಯಲ್ಲೂ ಸಮಾಜ ಸುಧಾರಣೆಯಲ್ಲಿ ಸಿಂಹ ಪಾಲು! ಇದೀಗ ನಾವು ನೋಡುತ್ತಿರುವುದೇನು? ಬಹುತೇಕೆ ಸಮಾಜ ಸುಧಾರಣೆಯನ್ನು ಕಡೆಗಣಿಸಿರುವ, ಯುವ ಪೀಳಿಗೆಯನ್ನು ಸಲ್ಲದ ಅನೈತಿಕತೆ ಅಪಮೌಲ್ಯಗಳಿಂದಲೇ ಹುರಿದುಂಬಿಸುವ, ಹೆಚ್ಚೇನೂ ಓದು ತಿಳುವಳಿಕೆ ಸಂಸ್ಕಾರವಿಲ್ಲದಂತ ಅಮಾಯಕರನ್ನು ತಪ್ಪು ದಾರಿಗೆಳೆಯುವ ಚಿತ್ರಗಳೇ ಮೇಲಿಂದ ಮೇಲೆ ಬರುತ್ತಿವೆ. ಅಲ್ಲೊಂದು ಇಲ್ಲೊಂದು ಎಂಬಂತೆ ಈಗಲೂ ಆದರ್ಶೀಕೃತ ಭಾವನೆಗಳಿಗೆ ಅಂತಹ ಸದಭಿರುಚಿಯುಳ್ಳ ಉತ್ತಮ ಚಿತ್ರಗಳಿಗೆ ಖಂಡಿತ ಜನಮನ್ನಣೆ ಇದೆ; ಇಂದಿನ ಫಿಲಂ ಇಂಡ್ ಸ್ಟ್ರಿಯಲ್ಲಿ ಅವುಗಳೂ ಹಣ ಸಂಪಾದಿಸುತ್ತವಲ್ಲದೇ ಸಮಾಜ ಸುಧಾರಣೆಯಲ್ಲೊಂದಿಷ್ಟು ಗಣನೀಯ ಪಾತ್ರವಹಿಸುತ್ತವೆ ಎಂಬುದೂ ಸಾಬೀತಾಗಿದೆಯಲ್ಲ...!

ಆ ದಿಸೆಯಲ್ಲಿ ಪಾಲ್ಗೊಂಡು ಯಶಸ್ವಿಯಾಗಿರುವ ಕಲಾವಿದರು ಹಾಗೂ ನಿರ್ದೇಶಕರಲ್ಲಿ ಪ್ರಮುಖರೆಂದರೆ-
ಶಂಕರ್ ನಾಗ್, ಪುಟ್ಟಣ್ಣ ಕಣಗಾಲ್, ನಾಗಾಭರಣ, ಡಾ.ವಿಷ್ಣು ವರ್ದನ್ ಮತ್ತು ಅಂಬರೀಷ್ ಆದಿಯಾಗಿ ಪಟ್ಟಿ ಮುಂದುವರೆದಂತೆಲ್ಲ ಇತ್ತೀಚೆಗೆ ಸುದೀಪ್, ರಮೇಶ್ ಅರವಿಂದ್ ತಮ್ಮ ಸತತ ಪ್ರಯತ್ನದಲ್ಲಿ ಮಿಂಚಿದ್ದಾರೆ. ಹೌದು, ಎಂದಿಗೂ ನಮ್ಮ ಸಾಮಾನ್ಯ ಜನತೆ ಒಳ್ಳೆಯದನ್ನೇ ಕೊಟ್ಟರೆ ಸ್ವೀಕರಿಸುತ್ತಾರೆ.

ನಾಡಿನಾದ್ಯಂತ ಇಂದಿಗೂ ಕನ್ನಡಿಗರ ಧೃವ ತಾರೆ ಡಾ.ರಾಜ್ ಅವರ ಅಭಿಮಾಗಳ ಸಂಖ್ಯೆ ಅಗಣಿತ. ಅವರು ನಟಿಸಿದ ಚಿತ್ರಗಳ ಸಿ.ಡಿ/ಡಿವಿಡಿ, ಹಾಗೂ ಚಿತ್ರ ಗೀತೆಗಳ ಕ್ಯಾಸೆಟ್ಟುಗಳನ್ನು, ಭಾವ ಚಿತ್ರಗಳನ್ನೂ ಮನೆ ಮನೆಗಳಲ್ಲಿ ಸಂಗ್ರಹಿಸಿಟ್ಟು ಕೊಂಡವರಿದ್ದಾರೆ. ಆಗಾಗ್ಗೆ ಮನೆಮಂದಿಯಲ್ಲ ಕುಳಿತು ಅವುಗಳನ್ನೇ ವೀಕ್ಷಿಸುತ್ತಾ ಗೀತೆಗಳನ್ನು ಕೇಳುತ್ತಾ ಆ ದಿನಗಳನ್ನು ನೆನೆಯುವವರಿದ್ದಾರೆ. ಆದರೆ, ಅದೆಂದಿಗೂ ಕೇವಲ ಗತವೈಭವವೆಂದು ಉಪೇಕ್ಷಿಸುವಂತಿಲ್ಲ; ನಮ್ಮ ಮುಂದಿನ ಪೀಳಿಗೆಯ ಯುವ ಜನಾಂಗವೂ ಯೋಚಿಸುವಂತೆ ಮಾಡುವುದೂ ವಾಸ್ತವ ಸಂಗತಿಯೇ ಆಗಿದೆಯಲ್ಲ.

ಅವರ ಅಂತಿಮ ವಿದಾಯದ ಸಂದರ್ಭದಲ್ಲಿ ನಾನೂ ಸಂಗ್ರಹಿಸಿದ ಅವರ ಆ ಕೆಲ ಹಿಂದಿನ ದಿನಗಳ ಟಿ.ವಿ.ಸಂದರ್ಶನದ ದೃಶ್ಯಗಳು, ಚಿತ್ರಗೀತೆಗಳು ಮತ್ತು ಕಡೆಗೆ ಅವರ ಅಂತಿಮ ಸಂಸ್ಕಾರದ ಕೆಲವು ಸನ್ನಿವೇಶಗಳ ಚಿತ್ರಣಳೂ ಇವೆ. ಮತ್ತೆ ಆನಂತರ ತಾನಾಗಿಯೆ ಬಂದ ಒಂದು ಆಕಾಶವಾಣಿ ಕಾರ್ಯಕ್ರಮದ ಅವಕಾಶ, ಆ ವಾರದಲ್ಲಿಯೆ ಅನಿರೀಕ್ಷಿತವಾಗಿಯೆ ನಾನು ನೀಡಿದ ಭದ್ರಾವತಿಯ ಆಕಾಶವಾಣಿ "ಶುಕ್ರವಾರದ ವಿಶೇಷ ಕಾರ್ಯಕ್ರಮ" ಅದರ ಧ್ವನಿವಾಹಿನಿ ಕೂಡ ಇಲ್ಲಿ ಕೊಡುತ್ತಿದ್ದೇನೆ, ನೀವೂ ಕೇಳಿ-

2 comments:

Anonymous said...

See Please Here

Anonymous said...

See Please Here