Monday, November 16, 2009

ಕನ್ನಡ ಸಾಹಿತ್ಯಕ್ಕೊಬ್ಬರು ಮಾರ್ಗದರ್ಶಕರು ಬೇಕೇ....?

ವಿಜಯ ಕರ್ನಾಟಕದಲ್ಲಿ (14-11-2009) “ಕನ್ನಡ ಸಾಹಿತ್ಯಕ್ಕೆ ಮಾರ್ಗದರ್ಶಕರೊಬ್ಬರು ಬೇಕಾಗಿದ್ದಾರೆ” ಎಂಬ ಲೇಖನ ಓದಿದೆ. ಕನ್ನಡ ಸಾಹಿತ್ಯ ಎತ್ತ ಸಾಗಿದೆ? ಸಾಹಿತ್ಯ ನಿಂತ ನೀರಾಗಿಲ್ಲ. ಹೊಸ ಲೇಖಕರು, ಪುಸ್ತಕಗಳ ಬೆಳೆ ಹುಲುಸಾಗಿಯೆ ಇದೆಯಲ್ಲ ಎಂದು ಹೇಳಬಹುದು ಎಂದು ಆರಂಭವಾಗುವ ಲೇಖನ, ಏಳು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ನಮ್ಮ ಕನ್ನಡ ಸಾಹಿತ್ಯದ ಗತ ವೈಭವವನ್ನು ವಿವರಿಸುತ್ತದೆ. ಅಂಥ ಪ್ರಶಸ್ತಿ 1998ರ ನಂತರ ಏಕೆ ಬಂದಿಲ್ಲ? ಎಂಬ ಪ್ರಶ್ನೆ ಬೇರೆ... ಕನ್ನಡ ಸಾಹಿತಿಗಳ ಹಾಗೂ ಸಾಹಿತ್ಯದ ಬರ ಬಂದಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಒಂದರ ಹಿಂದೆ ಮತ್ತೊಂದು ಎನ್ನುತ್ತದೆ. ಹಿಂದಿನ ಸಾಹಿತ್ಯ ಚಳುವಳಿ ಅಥವಾ ಕಾಲ ಘಟ್ಟದಲ್ಲಿ ಅದಕ್ಕೊಬ್ಬ ಹರಿಗೋಲು ಹಾಕುವವನಿದ್ದ. ಈಗ ಮನೆಗೊಬ್ಬ ಹಿರಿಯರು ಹರಿಗೋಲು ಹಾಕುವವ ಬೇಕಾಗಿದ್ದಾರೆ.

ನವೋದಯದಿಂದ ಆರಂಭವಾಗಿ ಸಾಹಿತ್ಯಕ್ಕೆ ಬಿ.ಎಂ.ಶ್ರೀ., ತೀ.ನಂ.ಶ್ರೀ, ಟಿ.ಎಸ್ .ವೆಂಕಣಯ್ಯ, ಗೋವಿಂದ ಪೈ, ಕುವೆಂಪು, ದಾರಾ ಬೇಂದ್ರೆ,. ಆನಂತರ, ನವೋದಯ ಪ್ರವರ್ತಕರಾದ ಗೋಪಾಲ ಕೃಷ್ಣ ಅಡಿಗ, ನವ್ಯ ಸಾಹಿತ್ಯ ಹಾಗು ಗೋಕಾಕರ ನಡುವಣ ಸಂಘರ್ಷ, ಗೋಕಾಕರು ನವ್ಯತೆಗೆ ನಾಂದಿ ಹಾಡಿದ್ದರೂ ಅಡಿಗರು ನವ್ಯ ಸಾಹಿತ್ಯದ ಪ್ರವರ್ತಕರಾದರು. ಆ ನಂತರ ಕೆ.ಎಸ್.ನ, ಜಿ.ಎಸ್.ಎಸ್ ನಂಥವರೂ ನವ್ಯದ ಕಡೆವಾಲಿದರು. ಇತ್ತ ಅನಂತ ಮೂರ್ತಿ , ರಾಮಚಂದ್ರ ಶರ್ಮ , ಗಿರೀಶಕರ್ನಾರ್ಡ ಗದ್ಯ ಸಾಹಿತ್ಯ ಕಟ್ಟಿಕೊಟ್ಟರು... ಪಾಶ್ಚಾತ್ಯ ಸಾಹಿತ್ಯದ ಪ್ರಭಾವವೂ ಸೇರಿ ಕನ್ನಡ ಸಾಹಿತ್ಯ ಮೇರು ಮಟ್ಟದಲ್ಲಿ ಬೆಳೆಯಿತು....

ಹೀಗೆ ಗತ ವೈಭವವನ್ನು ನೆನೆಪಿಸಿಕೊಳ್ಳುವ ಲೇಖಕರು, ಅಂದು ಆದೆಲ್ಲವೂ ಸಾಧ್ಯವಾಗುವಂತಹ ವಾತಾವರಣವಿತ್ತು. ಜನಮಾನಸಕ್ಕೆ ಸಾಹಿತ್ಯದ ಓದು ಬಿಟ್ಟರೆ ಬೇರಾವ ಮುಖ್ಯ ಆಕರ್ಷಣೆಯೂ ಈಗಿನಂತಿರಲಿಲ್ಲ. ಹೇಳಬೇಕೆಂದರೆ, ಬಾಲ್ಯಾವಸ್ಥೆಯಲ್ಲಿ ಬೆಳೆಯುತ್ತಿದ್ದ ಚಲನ ಚಿತ್ರರಂಗವೂ ಸಾಹಿತ್ಯದಿಂದ ಪ್ರೇರಣೆ ಪಡೆಯಿತು. ಸಾಹಿತ್ಯದ ಘನತೆಯನ್ನು ಇನ್ನಷ್ಟು ಹೆಚ್ಚಿಸಿತು. ಒಳ್ಳೆಯ ಕಥೆ ಕಾದಂಬರಿಗಳು ಸಿನಿಮಾ ಅದದ್ದೂ ಅಂತಹ ಪ್ರೇರಣೆಯಿಂದಲೇ. ಸಿನಿಮಾ ದೃಶ್ಯ ಮಾಧ್ಯಮದಲ್ಲೂ ಸಮಾಜ ಸುಧಾರಣೆ ಆದರ್ಶದ ಮೌಲ್ಯಗಳು ವೈಭವಯುತವಾಗಿ ಮೆರೆಯುತ್ತಿದ್ದ ಕಾಲ ಘಟ್ಟವದು. ಈಗೆಲ್ಲವೂ ವ್ಯತಿರಿಕ್ತವಾಗಿದೆ. ಸಿನಿಮಾದಲ್ಲಿ ಕೆಟ್ಟದ್ದರ ವೈಭವೀಕರಣವೇ ಮೆರೆದಿದೆ. ವಿಲನ್ ಹೀರೋ ಆಗಿ ವಿಜೃಂಭಿಸುತ್ತಿದ್ದಾನೆ. ಹೀರೋ ಪಡಬಾರದ ಹಿಂಸೆ ಪಡುವುದನ್ನೇ ನೋಡುವ ಹಿರಿಯರಲ್ಲಿ ತಾಳ್ಮೆ ಕಟ್ಟೆಯೊಡೆಯುತ್ತದೆ. ಮೈಮರೆತು ನೋಡುವ ಮಕ್ಕಳಲ್ಲಿ ಯುವಕರಲ್ಲಿ ಥ್ರಿಲ್ -ಖುಷಿ ಬೇಕಾಗಿದೆ ಅಷ್ಟೇ. ಹಿರಿಯರು ಯಾವುದನ್ನೇ ಆದರೂ ವಿಶ್ಲೇಷಿಸಿ ಮೌಲಿಕವೆಂದು ಹೇಳುವುದೇ ತಮಾಷೆ ಎನಿಸುತ್ತಿದೆ.

ವಿಪರ್ಯಾಸವೆಂದರೆ, ಹಿರಿಯರ ಮಾತುಗಳಲ್ಲಿ ಸಾರ್ವಕಾಲಿಕ ಮೌಲ್ಯಗಳಿರುವದು ಇಂದಿಗೂ ಅನೇಕ ಉದಾಹರಣೆಗಳಿಂದ ವ್ಯಕ್ತವಾಗುತ್ತಿದ್ದರೂ. ಯುಜನಾಂಗದಲ್ಲಿ ಬಹುತೇಕ ತಾವು ನಡೆದದ್ದೇ ದಾರಿ ಎಂಬ ದೋರಣೆಯೇ. ಅವರಲ್ಲಿ ಬಹು ಮಂದಿ ಉತ್ತಮ ವಾಚಾನಾಭಿರುಚಿ ಬೆಳಿಸಿಕೊಳ್ಳದೇನೆ ಹಾದಿ ತಪ್ಪುತ್ತಿರುವುದು ಶೋಚನೀಯ. ಅಂದು ಕಿರಿಯರಲ್ಲಿ ಹಿರಿಯರನ್ನು ಗೌರವಿಸುವ ಪರಿಪಾಠವಿತ್ತು; ಅವರ ಮಾತುಗಳನ್ನು ಆಲಿಸುವ ವ್ಯವಧಾನವಿತ್ತು. ಹೇಳಿದುದನ್ನು ಅನುಸರಿಸುವ ಉತ್ಸಾಹ ಬಹಳವಿತ್ತು; ಮೇಲಾಗಿ ಅಂತಹ ಭಾವಾನಾತ್ಮಕ ಸಂಬಂಧ ಮತ್ತು ನಡೆ ನುಡಿಗಳೇ ಬದುಕಿಗೆ ಭೂಷಣವೆನಿಸಿತ್ತು. ಅಂದು ಅಂತಹ ವಾತಾವರಣ ಇದ್ದುದರಿಂದಲೇ ಸಾಹಿತ್ಯಾಸಕ್ತಿಯೂ ಅಧಿಕವಾಗಿತ್ತು ಎಂಬುದನ್ನು ನಾವು ಮರೆಯುವಂತಿದೆಯೇ. ಯಾಕೆಂದರೆ, ಅಂದಿನ ಸಾಹಿತ್ಯ ಕೇವಲ ಸಾಹಿತ್ಯಾಸಕ್ತರಿಗಾಗಿಯೆ ಮಾತ್ರವಲ್ಲದೇ ಜನ ಸಾಮಾನ್ಯರನ್ನು ತಲುಪುವುದಾಗಿತ್ತು. ಆಗ ಟಿ.ವಿ. ಯಂತಹ ದೃಶ್ಯಮಾಧ್ಯಮ ಹಾಗೂ ಇಂಟರ್ ನೆರ್ಟ ನಂತಹ ಆಕರ್ಷಣೆಗಳಿರಲಿಲ್ಲ. ಓದುಗರಲ್ಲಿ ಧಾರ್ಮಿಕ ಪರಿಜ್ಞಾನದೊಂದಿಗೇ ಉತ್ತಮ ವಾಚಾನಾಭಿರುಚಿ ಮತ್ತು ಸಾಹಿತ್ಯಾಭಿರುಚಿ ಬಹಳವಿತ್ತು. ಕಾರಣ ಅಂದಿನ ಜನಮಾನಸದ ಭಾವನೆಗಳನ್ನು ಇಂದು ಹೆಚ್ಚುತ್ತಿರುವ ಜನಸ್ತೋಮದಲ್ಲಿ ಹುಡುಕುವುದು ಸಾಧ್ಯವಿಲ್ಲವೆನ್ನುವಂತಾಗಿದೆಯಲ್ಲ!

ಇಂದು ಬದಲಾಗುತ್ತಿರುವ ಪ್ರಪಂಚದಲ್ಲಿ ಹೀಗೇಕೆ ಎಂಬ ಕಾರಣವನ್ನು ಹಿರಿಯ ಸಾಹಿತಿಗಳು ವಿಶ್ವವಿದ್ಯಾನಿಲಯಗಳೂ ಕಂಡುಕೊಳ್ಳಬೇಕಾಗದೆ. ಆಧುನಿಕತೆ ಸೋಗಿನಲ್ಲಿ ವೈಜ್ಞಾನಿಕತೆಯ ಹೆಸರಲ್ಲಿ, ಹಾಗೇ ಯಾಂತ್ರಿಕವಾಗಿ ವೇಗಗತಿಯಲ್ಲಿ ಮುಂದುವರೆಯುತ್ತಿರುವ ಯುವ ಸಮಾಜದಲ್ಲಿ ನಮಗೆ ಉತ್ತಮ ಸಾಹಿತ್ಯದ ಅಗತ್ಯವೆಷ್ಟಿದೆ? ಅದೆಂತಹ ನಿತ್ಯ ನೂತನವಾದ ಆನಂದ ಹಾಗೂ ಸಮಾಧಾನವನ್ನುಂಟು ಮಾಡುವ ಶಕ್ತಿಯನ್ನ ಹೊಂದಿದೆ? ಅಂತಹ ಅಪೂರ್ವಲೋಕವೊಂದರಿಂದ ನಮ್ಮ ಯವ ಪೀಳಿಗೆ ವಂಚಿತರಾಗುತ್ತಿರುವುದೇಕೆ ಎಂಬುದನ್ನು ಮನವರಿಕೆ ಮಾಡಿಕೊಡಬೇಕಾಗಿದೆ.

ಅಂತಹ ಘನವಾದ ಕಾರ್ಯ ಎಲ್ಲಿಂದ ಆರಂಭವಾಗಬೇಕು ಹೇಳಿ? ಮನೆ ಮನೆಗಳಿಂದಲೇ ಅಲ್ಲವೇ..? ಮನೆಯೇ ಮೊದಲ ಪಾಠಶಾಲೆ ಎನ್ನುವುದೇಕೆ? ಆದರೆ, ಆಗುತ್ತಿರುವುದೇನು? ತಂದೆ-ತಾಯಿಗಳು ಮತ್ತು ವಯಸ್ಸಾದವರೂ ಸೇರಿದಂತೆ ಮನೆ ಮಂದಿಯಲ್ಲ ಎಳೆಯ ಮಕ್ಕಳ ಜೊತೆಗೂಡಿ ಟ.ವಿ. ಎಂಬ ಮೂರ್ಖರ ಪೆಟ್ಟಿಗೆಯ ಮುಂದೆ ಕಳಿತಿರುವುದನ್ನೇ ಬಹುತೇಕ ಎಲ್ಲ ಮನೆ ಮನೆಗಳಲ್ಲಿಂದು ನಾವು ಕಾಣುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ್ಲಂತು ಮುಗ್ಧರನ್ನು ಆದು ಕಬಳಿಸಿ ತನ್ನ ತೆಕ್ಕೆಯೊಳಗೆ ಹಾಕಿಕೊಂಡು ಬಿಟ್ಟಿದೆಯಲ್ಲವೇ...? ಆವರಿಗೆ ಸರಿಯಾದ ಮಾರ್ಗದರ್ಶನ ನೀಡುವವರೂ ತಿಳಿಸಿಹೇಳುವವರೇ ಇಲ್ಲದ ವಾತವಾರಣವೂ ನಿರ್ಮಾಣವಾಗಿರುವುದೂ ಸುಳ್ಳಲ್ಲ.

ಈಗ ಹೇಳಿ ಸಾಹಿತ್ಯಕ್ಕೊಬ್ಬರು ಮಾರ್ಗದರ್ಶಕರು ಬೇಕೇ..?. ಅಥವಾ ಮನೆಗೊಬ್ಬರು ಸಾಹಿತ್ಯಾಸಕ್ತಿಯನ್ನು ಬೆಳೆಸುವಂಥ ಮಾರ್ಗದರ್ಶಕರು ಬೇಕೇ.. ಎಂಬುದು ಗಂಭೀರವಾಗಿ ಚಿಂತಿಸಬೇಕಾದ ವಿಷಯವಾಗಿದೆ.

ನಮ್ಮ ನಡುವೆ ಬರುತ್ತಿರುವ ಹೊಸ ಲೇಖಕರಿಗೇನೂ ಬರವಿಲ್ಲ. ಅವರು ವಾಸ್ತವಕ್ಕೆ ಹತ್ತಿರವಾಗುವಂತೆ ಸಾಹಿತ್ಯದಲ್ಲಿ ಮಾಡುತ್ತಿರುವ ಪ್ರಯೋಗಗಳೇನೂ ಕೊರತೆಯಿಲ್ಲ. ಕೊರತೆಯಿರುವುದು ಅವರ ಪುಸ್ತಕಗಳನ್ನು ಓದುವ ಓದುಗರ ಸಂಖ್ಯೆಯಲ್ಲಿ ತಾನೇ..? ಹಿಡಿ ಮಂದಿ ಸಾಹಿತ್ಯಾಸಕ್ತರು ಈಗಾಗಲೇ ಹೆಸರಾಗಿರುವವರ ಪುಸ್ತಕಗಳನ್ನು ನೋಡುತ್ತಾರೆ; ಹಾಗೂ ಕೊಳ್ಳುವುದೇ ಹೆಚ್ಚಲ್ಲದೇ. ಹೊಸ ಲೇಖಕರ ಬಗ್ಗೆ ಅವರಿಗೆ ಆಸಕ್ತಿ ಇರವಂತಿಲ್ಲ. ಹೊಸಬರ ಪುಸ್ತಕಗಳನ್ನು ಎತ್ತಿ ನೋಡಿ ಸಹೃದಯತೆಯಿಂದ ವಿಮರ್ಶಿಸಿ ಅವರ ಪುಸ್ತಕಗಳೆಷ್ಟು ಉಪಯುಕ್ತವೆಂಬುದನ್ನೂ ಹೇಳುವವರೂ ವಿರಳ. ಅದಕ್ಕಾಗಿ ಹೊಸ ಲೇಖಕ ತೀವ್ರವಾಗಿ ಸೆಣಸಬೇಕಾದ ಕಾಲವಿದಾಗಿದೆ. ಯಾಕೆಂದರೆ, ಸಾಹಿತ್ಯ ವಲಯದಲ್ಲೂ ರಾಜಕೀಯದ ತಾಂಡವವೇ ನಡೆದಿದೆಯಲ್ಲ..

ಆದ್ದರಿಂದ, ನಾವು ಗತವೈಭವವನ್ನು ನೆನೆಯುತ್ತ ಕೂರುವ ಕಾಲವಿದಲ್ಲ. ನಮ್ಮಲ್ಲಿ ಮನೆ ಮನೆಗೊಬ್ಬರು ಸಾಹಿತ್ಯಾಸಕ್ತಿಯುಳ್ಳ ಹಿರಿಯರು ಬೇಕಾಗಿದ್ದಾರೆ. ಅವರು ಅವರ ಮಕ್ಕಳಿಗೆ ಸಾಹಿತ್ಯಾಸಕ್ತಿ ಬೆಳೆಯುವಂತೆ ಮತ್ತು ಅವರ ಬದುಕು-ಭವಿಷ್ಯಕೆ ಉಪಯುಕ್ತವಾದ ಉತ್ತಮ ಸಾಹಿತ್ಯ ಕೃತಿಗಳನ್ನು ಅವರು ಓದುವಂತೆ ಮಾಡಬಲ್ಲ ಮಾರ್ಗದರ್ಶಕನ ಮಾಡಬೇಕಾಗಿದೆ.

• ಮೆನೆಗೊಬ್ಬ ಹಿರಿಯ ಮಾರ್ಗದರ್ಶಕರು ಬೇಕಾಗಿದ್ದಾರೆ. ಅವರು ಮಕ್ಕಳು ದಿನ ಬೆಳಗಾಗುತ್ತಿದ್ದಂತೆಯೆ ಟ.ವಿ. ಮುಂದೆ ಕುಳಿತು ಕೊಳ್ಳುವುದನ್ನು ತಪ್ಪಿಸಬೇಕಾಗಿದೆ. ಟಿ.ವಿ. ಚಾನೆಲ್ಸ್ ಗಳಿಗಿಂತಲು ಮಿಗಿಲಾಗಿ ಆಸಕ್ತಿದಾಯಕ ವಿಷಯಗಳು ವಿಜಯ ಕರ್ನಾಟಕದಂತಹ ದಿನ ಪತ್ರಿಕೆಯಲ್ಲಿದೆ ಎಂಬದುನ್ನು ಓದಿ ಮಕ್ಕಳೂ ಕೂಡ ಓದುವಂತೆ ಮಾಡಬೇಕಿದೆ.

• ಊಟ-ತಿಂಡಿ ಮಾಡುತ್ತಲೇ ಟಿ.ವಿ. ನೋಡುವ ಮಕ್ಕಳನ್ನು ಎಚ್ಚರಿಸಬೇಕಿದೆ. ಟಿ.ವಿ.ಯ ಮನರಂಜನೆಗಿಂದ ವಿಭಿನ್ನ ವಾದ ಮನರಂಜನೆ ನೀಡಿ ಬಲ್ಲ ಪುಸ್ತಕಗಳು ನಮ್ಮ ಕನ್ನಡದಲ್ಲಿವೆ. ಅಷ್ಟೇ ಅಲ್ಲ ಅವು ನಿತ್ಯ ಬದುಕಿಗೆ ಹತ್ತಿರವಾದುದನ್ನೇ ಹೇಳುತ್ತವೆ. ನೀವೆಂದೂ ಊಹಿಸಿರದ ವಿಷಯಗಳಿಂದ ನಿಮ್ಮನ್ನು ಆಲೋಚಿಸುವಂತೆ ಮಾಡುತ್ತವೆ ಎಂಬುದನ್ನು ಮಕ್ಕಳಿಗೆ ತಿಳಿಯುವಂತೆ ವಿವರಿಸಿ ಹೇಳಬೇಕಾಗಿದೆ.
• ದೃಶ್ಯದ ಮುಂದೆ ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಪುಸ್ತಕದ ಮುಂದೆ ನಮ್ಮನ್ನು ನಾವು ತೆರೆದು ಕೊಂಡು ಆಲೋಚನೆಗೆ ಹಚ್ಚಿಕೊಳ್ಳುತ್ವೇವೆಂಬ ಅಪೂರ್ವ ಅನುಭವ ಅವರಿಗೂ ಆಗುವಂತೆ ಮಾಡಬೇಕಾಗಿದೆ.
• ನಮ್ಮ ಕನ್ನಡ ಭಾಷೆ ಬಡವಲ್ಲ. ಅದಿಲ್ಲದೇ ಇದ್ದರೆ ನಮ್ಮ ಜ್ಞಾನವೆಂಬುದಕ್ಕೇ ತಳಹದಿಯೇ ಇಲ್ಲ. ಇಂಗ್ಲೀಷ್ ಕಲಿಯಬೇಕು ಆದರೆ, ವ್ಯಮೋಹ ಒಳ್ಳೆಯದಲ್ಲವೆಂಬುದನ್ನು ವಿವರಿಸಿ ಹೇಳುವವರಾಗಬೇಕು.
• ಇಂದಿನ ಮಕ್ಕಳು ಬಹಳ ಚುರುಕು. ಅವರು ಟಿ.ವಿ. ನೋಡಲೇ ಬಾರದೆಂದು ನಿಬಂರ್ಧಿಸುವುದೂ ಅಸಾಧ್ಯ. ಹಾಗೆ ಮಾಡಬೇಕೆಂದು ಯಾರೂ ಹೇಳುವುದಿಲ್ಲ. ಆ ಮಕ್ಕಳು ಹಿರಿಯರ ತಲೆತಿನ್ನುತ್ತಾರೆ. ಅವರು ಅಷ್ಟು ಸುಲಭಕ್ಕೆ ಮಾತು ಕೇಳುವವರಲ್ಲ; ಪಾಲಿಸುವವರೂ ಅಲ್ಲ. ಅವರನ್ನು ಪ್ರೀತಿಯಿಂದ ಓಲೈಸಬೇಕು, ವಿಶ್ವಾಸಕ್ಕೆ ತಂದುಕೊಳ್ಳಬೇಕು.
• ಈಗೇನಾಗಿದೆ ಎಂದರೆ, ಎಷ್ಟೋ ಮನೆಗಳಲ್ಲಿ ತಂದೆ-ತಾಯಿಗಳ ಹಿರಿಯರಾದವರ ಮಾತಿಗೆ ಬೆಲೆ ಇಲ್ಲವಾಗಿದೆ. ನಾವೇನು ಕಡಿಮೆ ಇಲ್ಲ ನಮ್ಮ ಭವಿಷ್ಯ ನಾವು ರೂಪಿಸಿಕೊಳ್ಳುತ್ತೇವೆ. ನೀವೇನು ಬುದ್ಧಿವಾದ ಹೇಳಬೇಕಿಲ್ಲ ವೆಂ ಬ ಧೋರಣೆಯೇ ಯುವಕ/ಯವತಿಯರಲ್ಲಿ ಬೇರೂರಿರುವುದರಿಂದ, ಮನೆಗೊಬ್ಬರು ಮಾರ್ಗದರ್ಶಕರು ಇದ್ದರೂ ಇಲ್ಲದಂತಾಗಿರವ ಉದಾಹರಣೆಗಳೇ ಬಹಳವಿವೆ.
• ಆದರೂ, ಉತ್ತಮ ಸಾಹಿತ್ಯ ಕೃತಿಗಳು ಬರುತ್ತಿವೆ. ಓದುವ ಜಾಣ ಮಕ್ಕಳು ಓದುತ್ತಿದ್ದಾರೆ. ಜಾಣರೂ ಆಗುತ್ತಿದ್ದಾರೆ.

No comments: