Thursday, November 18, 2010

ನಾನು ಪ್ರೌಢ ಶಾಲೆಯಲ್ಲಿದ್ದಾಗಿನ ವಾಸದ ಮನೆ

ಹಳದಮ್ಮ ದೇವಸ್ಥಾನ, ಹಳೇನಗರ, ಭದ್ರಾವತಿ
ನಾನು ಪ್ರೌಢಶಾಲೆಯಲ್ಲಿ ಎಸ್ಸೆಸ್ಸ್ ಲ್ ಸಿ ಓದುತ್ತಿದ್ದಾಗ ನಾವು ವಾಸವಾಗಿದ್ದ ಜೋಡಿ ಮನೆ ಭದ್ರಾವತಿಯ ಹಳೇನಗರದ ಹಳದಮ್ಮ ದೇವಸ್ಥಾನದ ಆವರಣದ ಮುಂಭಾಗದ ವಿಶಾಲವಾದ ರಸ್ತೆಯ ಎಡ ಮಗ್ಗುಲಿನ ಆರಂಭಕ್ಕೇ ಇದೆ.  ಇದೂ ಕೂಡ ಮುಂಭಾಗದ ಜಗುಲಿಯನ್ನು ಹೊರತುಪಡಿಸಿದರೆ ಇಂದಿಗೂ ಅದೇ ಸ್ಥಿತಿಯಲ್ಲಿರುವುದು ಅನಿರೀಕ್ಷಿತವೇ ಆಗಿತ್ತು! ಮೋಟಾರು ಬೈಕ್ ನಿಂತಿರುವ ಎಡಭಾಗದ ಮನೆ. ನನ್ನ ವಿದ್ಯಾಭ್ಯಾಸಕ್ಕೊಂದು ವಿಶಿಷ್ಟ ತಿರುವು ನೀಡಿದ ಮನೆಯಿದು. ಎಸ್ಸೆಸ್ಸೆ ಲ್ ಸಿಯಲ್ಲಿ ಪ್ರಥಮ ದರ್ಜೆಯಲ್ಲಿ (75% ಅಂಕಗಳಲ್ಲಿ) ತೇರ್ಗಡೆಯಾದೆ.  ಇಲ್ಲಿ ಮಾಯಾಲಾಂದ್ರದ ಮಾದರಿಯಲ್ಲಿ ಹೋಂ ಸಿನಿಮಾ ಪ್ರೋಜೆಕ್ಷರ್ ಸ್ವತಃ ತಯಾರಿಸಿ, ಈ ಮನೆಯ ಮಹಡಿಯ ಮೇಲೆ ಮೂಕಿ ಸಿನಿಮಾ ನನ್ನ ತಮ್ಮಂದಿರಿಗೆ ಸ್ನೇಹಿತರಿಗೆ ಪ್ರದರ್ಶಿಸುತ್ತಿದ್ದೆ.  ಹುಡುಗ ಪ್ರತಿಭಾವಂತ ಹಾಗೂ ತಾಂತ್ರಿಕ ತಲೆಗಾರನೆಂದು ಕರೆಸಿಕೊಳ್ಳುತ್ತಿದ್ದ ದಿನಗಳವು.
ಇಲ್ಲಿ ನಡೆಯುವ ಹಳದಮ್ಮ ದೇವಸ್ಥಾನದ ಜಾತ್ರೆ ತುಂಬ ಪ್ರಸಿದ್ದಿ ಪಡೆದಿದೆ.ಈ ದೇವಸ್ಥಾನದ ಮುಂಭಾಗದ ವಿಶಾಲವಾದ ಆವರಣದಲ್ಲಿ, ಹರಕೆ ಹೊತ್ತವರು  ವಿಶಿಷ್ಟರೀತಿಯಲ್ಲಿ ಸಿಡೆಯಾಡಿ ಸೇವೆ ಸಲ್ಲಿಸುವ ಕಂಭವಿದು. ಅಂದರೆ, ಅದೇನು ಸಾಮಾನ್ಯ ಹರಕೆಯಲ್ಲ; ಅದನ್ನು ಜೀವದ ಹಂಗು ತೊರೆದು ಹಳದಮ್ಮ ದೇವಿಗೆ ದೃಢ ನಂಬಿಕೆ ನಿಷ್ಠೆಯಿಂದ ನಡೆದುಕೊಂಡು ಸಲ್ಲಿಸುವಂಥ ಅತಿಕ್ಲಿಷ್ಟಕರ ಸೇವೆಯೇ ಸರಿ. ಹರಕೆ ಹೊತ್ತಾತನ ಬೆನ್ನಿನ ಚರ್ಮಕ್ಕೆ ಕಬ್ಬಿಣದ ಕೊಕ್ಕೆ ಹಾಕಿ (ರಕ್ತ ಬರುವುದಿಲ್ಲ), ಆತನನ್ನು ಸಿಡೆ ಕಂಭದ ಮೇಲಿನ ತಿರುಗುಣಿ ಕೋಲಿನ ತುತ್ತ ತುದಿಗೆ ಕಟ್ಟಿ ಮೇಲೆತ್ತಿ ಹರಕೆ ಹೊತ್ತಂತೆ ಮೂರು ಸುತ್ತು ಅಥವಾ ಐದು ಸುತ್ತು ಹೀಗೆ ತಿರುಗಿಸುತ್ತಾರೆ. ನೋಡಲು ಸಾವಿರಾರು ಜನ ಇಲ್ಲಿ ನೆರೆದಿರುತ್ತಾರೆ. ಇಂದಿಗೂ ಈ ಜಾತ್ರೆ ಅಷ್ಟೇ ವೈಭವದಿಂದ ನಡೆಯುತ್ತದೆ.
ಭದ್ರಾವತಿ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ನೋಟ

ನನ್ನ ಬಾಲ್ಯದ ಮಿತ್ರ ಈಗ ಪ್ರಧಾನ ಅರ್ಚಕರೂ ಆದ ಶ್ರೀ ರಂಗನಾಥ ಅವರೊಂದಿಗೆ
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಹೊರನೋಟ
ಭದ್ರಾವತಿ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ
ದೇವಾಲಯ ತುಂಬ ಪ್ರಸಿದ್ದಿ ಪಡೆದಿದೆ.ಹಳೇ ಬೀಡು  ಬೇಲೂರು ಮಾದರಿಯ ಶಿಲ್ಪಕಲೆಯನ್ನು ಹೊಂದಿರುವ ಈ ದೇವಸ್ಥಾನದ ಸುತ್ತ ಮುತ್ತ ಹಾಗೂ ಪ್ರಾಂಗಣದಲ್ಲಿ  ನನ್ನ ಬಾಲ್ಯದ ಮಿತ್ರರೊಂದಿಗೆ ಆಡಿ ಬೆಳೆದ ಆ ದಿನಗಳ ಸವಿ ನೆನಪು ಮರೆಯಲುಂಟೇ...





ಇಂದಿಗೆ ದೇಚವಾಲಯದ ಅರ್ಚಕರಾದ
ಶ್ರಿ ರಂಗನಾಥ  ಅವರು ನನ್ನ ಬಾಲ್ಯದ ಸ್ನೇಹಿತ,
ಅವರೊಂದಿಗೆ ನಾನು ಮತ್ತು ನನ್ನ ಶ್ರೀಮತಿ.








ನರಸಿಂಹಸ್ವಾಮಿ ದೇವಾಲಯದ ಈ ಹೊರ ಆವರಣದಲ್ಲಿ ಆರ್.ಎಸ್.ಎಸ್.ಶಾಖೆ ನಡೆಯುತ್ತಿತ್ತು. ನಾನು ಪ್ರತಿನಿತ್ಯ ಸಂಜೆ ಇಲ್ಲಿಗೆ ಹಾಜರಾಗುತ್ತಿದ್ದೆ.  ಬಾಲ್ಯಸ್ನೇಹಿತರೆಷ್ಟೋ..ಅವರೊಡನೆ ಕಬ್ಬಡಿ, ಕೋಕೋ ಆಟಗಳು ಮತ್ತು ದೇಶ ಭಕ್ತಿ ಗೀತೆಗಳು, ನಮ್ಮ ನಾಡು ನುಡಿಯ ಬಗ್ಗೆ ಮಾತು ಕತೆ,  ನಮ್ಮ ಸನಾತನ ಹಿಂದೂ ಧರ್ಮ ಸಂಸ್ಕೃತಿಯ ಬಗ್ಗೆ ಚಿಕ್ಕಂದಿನಿಂದಲೆ ನಮಗೆ ದೊರೆಯುತ್ತಿದ್ದ ತಿಳುವಳಿಕೆ ಹಾಗೂ ನಮ್ಮ ಸಂಸ್ಕೃತಿ ಪರಂಪರೆಯ ಅಡಿಪಾಯ  ಶ್ಲಾಘನೀಯವೇ.  ಅಲ್ಲಿ ಯಾವೊಂದು ರಾಜಕೀಯದ ಚರ್ಚೆಗಳಿರುತ್ತಿರಲಿಲ್ಲ. ಅದು ಅಲ್ಲಿ ಅನಪೇಕ್ಷಿತವಾಗಿತ್ತು. ನಾನು   ಎಸ್ಸೆಸ್ಸೆಲ್ ಸಿ ಮುಗಿಸಿದ ಬಳಿಕ ನಮ್ಮ ಕುಟುಂಬ ಭದ್ರಾವತಿ ತೊರೆದು ಶಿವಮೊಗ್ಗಾಕ್ಕೆ ಬರಬೇಕಾಯಿತು. ಆನಂತರ, ಆರ್ ಎಸ್ ಎಸ್ ನಿಂದ ದೂರವೇ ಉಳಿದುಬಿಟ್ಟೆನಾದರೂ, ಒಟ್ಟಿನಲ್ಲಿ ಆರ್ ಎಸ್ ಎಸ್ ನಮ್ಮ ಹರೆಯದ ದಿನಗಳಲ್ಲೇ ನಮಗೆ ನೀಡಿದ ಸಾಂಸ್ಕೃತಿಕ ವ್ಯಕ್ತಿತ್ವ ವಿಕಾಸವನ್ನು ಎಂದಿಗೂ ಮರೆಯುವಂತಿಲ್ಲ.
 ಪ್ರೌಢಶಾಲೆಯಲ್ಲಿ ನನ್ನ ಮೇಷ್ಟ್ರೂ ಮಂಜಪ್ಪನವರು. ಇದೀಗ 80 ರ ಹರೆಯದ ಜ್ಞಾನವೃದ್ಧರು. ಅಂದಿನ ಕಾಲಕ್ಕೆ ಅವರು ಒಬ್ಬ ಆರ್.ಎಸ್.ಎಸ್‌.ನ ಕಟ್ಟಾ ಸಯಂಸೇವಕರು.






ನರಸಿಂಹ ಸ್ವಾಮಿ ದೇವಾಲಯದ ಮುಂಭಾಗದ  ಪ್ರಾಂಗಣದಲ್ಲೇ ಪ್ರತಿ ದಿನ ಸಂಜೆ ಸಂಘ
ನಡೆಯುತ್ತಿತ್ತು. ನನಗಂತು ಬಾಲ್ಯದ ದಿನಗಳಿಗಷ್ಟೇ ಸಂಘದ ಒಡನಾಟ ಮುಗಿದಿತ್ತು.

1 comment:

ಸುಬ್ರಮಣ್ಯ said...

'ಸವಿ ಸವಿ ನೆನಪು, ಸಾವಿರ ನೆನಪು'