Wednesday, August 17, 2011

ಕಪಟ ನಾಟಕವಾಡುವ ರಾಜಕಾರಣಿಗಳ ಪುಂಗಿ ಬಂದ್ ಮಾಡುವುದು ಹೀಗೆ ಸಾಧ್ಯವಿಲ್ಲವೇ..?

ಹಿಂದೊಮ್ಮೆ ಪತ್ರಿಕೆಯಲ್ಲೆಲ್ಲೋ ಒಂದು ಕಡೆ ಓದಿದ ನೆನಪು- "ಅಮೆರಿಕದಂತಹ ಶ್ರೀಮಂತ ದೇಶಗಳಲ್ಲಿ ಪ್ರಜೆಗಳೇ ಶ್ರೀಮಂತರು ಸ್ಥಿತಿವಂತರಾಗಿರುತ್ತಾರೆ. ಅವರ ರಾಜಕಾರಣಿಗಳು ಆಡಳಿತಾರೂಢರಾಗಿರುವವರು ಅಲ್ಲಿನ ಪ್ರಜೆಗಳಿಗಿಂತಲೂ ಬಡವರಾಗಿರುತ್ತಾರೆ" ಅದೇ ನಮ್ಮ ದೇಶದಲ್ಲಿ ನೋಡಿದ್ದೀರಿ.  ಇಲ್ಲಿ ಬಹುತೇಕ ರಾಜಕಾರಣಿಗಳೆಲ್ಲ ಕೋಟ್ಯಾಧಿಪತಿಗಳು! ಪ್ರಜೆಗಳಲ್ಲಿ ಬಡವರು ದಟ್ಟದರಿದ್ರರೂ ಕೋಟಿಗಟ್ಟಲೇ ಇದ್ದಾರೆ!
ಬೆರಳಿಣಿಕೆಯ ವರ್ಷಗಳಷ್ಟು ರಾಜಕಾರಣ-ರಾಜಕೀಯ ಮಾಡಿದರೂ ಸಾಕು, ಕೆಲವು ಲಕ್ಷ ಗಳಿಸಿ ತಮ್ಮ ಸ್ವಂತಕ್ಕೆ ತಾವು ಉದ್ಧಾರ ಮಾಡಿಕೊಳ್ಳುತ್ತಾರೆ ಎಂಬ ಮಾತು ನಮ್ಮ ಜನಗಳಲ್ಲಿ ಜನಜನಿತವಾಗಿಬಿಟ್ಟಿದೆಯಲ್ಲ! ಯಾಕೆ ಹೀಗೆ...?

ಇಂದಿನ ಚಲನ ಚಿತ್ರೋದ್ಯಮ ದಲ್ಲಿ (ಹಿಂದೊಂದು ಕಾಲದಲ್ಲಿ ಚಲನ ಚಿತ್ರ ರಂಗ ಸಮಾಜಿಕ ಸುಧಾರಣೆಯೆ ಪ್ರಭಾವಿ ಮಾಧ್ಯಮವಾಗಿತ್ತು ಎಂಬುದನ್ನು ನಾವು ಮರೆಯುವಂತಿಲ್ಲ; ಬಹಳಷ್ಟು ಹಳೆಯ ಚಿತ್ರಗಳೇ ಸಾಲು ಸಾಲಾಗಿ ಸಾಕ್ಷಿ ನುಡಿಯುತ್ತವೆ. ಈ ಕಾಲದಲ್ಲಿ ಅಂತಹದೊಂದು ಸಿನಿಮಾ ಬಂದು ಹಿಟ್ ಆಗುವುದೆಂದರೆ, ಸಾಮಾಜಿಕ ಕಳಕಳಿಯಿಂದ ಅದನ್ನು ತಯಾರಿಸಿದ ನಿರ್ಮಾಪಕನ ಪುಣ್ಯವೇ ಸರಿ). ನಾವು ಕಾಣುತ್ತಿರುವುದು ಕೋಟಿಗಟ್ಟಲೆ ದುಡಿದ ಸೂಪರ್ ಸ್ಟಾರ್ ಗಳು, ಪ್ರೊಡ್ಯೂಸರ್ ಗಳಿದ್ದಾರೆ. ಅವರಲ್ಲಿ ನಿಜವಾದ ಕಲಾವಿದರು ಎಲ್ಲಿದ್ದಾರೆ ? ಎನ್ನುವುದು ಬೇರೆ ವಿಷಯ...

ಪ್ರಸ್ತುತ ವಿಷಯಕ್ಕೆ ಬಂದ್ರೆ  ಎಲ್ಲಕಾಲಕ್ಕೂ (ಜನ ಸಂಖ್ಯೆ ಹೆಚ್ಚಿದಂತೆ) ಬಡವರೇ ತುಂಬಿತುಳುಕುವ ಈ ಭವ್ಯ ಭಾರತ ದೇಶದಲ್ಲಿ ನಮ್ಮ ಬಹಳಷ್ಟು ಮಹಾನ್ ರಾಜಕಾರಣಿಗಳು ಅಜ್ಞಾನ, ಅಂಧಕಾರದಲ್ಲಿ ಮೂಢರಾಗಿರುವ, ದಟ್ಟದಾರಿದ್ರದಲ್ಲಿ ತೊಳಲಾಡುತ್ತಿರುವ ಕೊಳಚೆ ಪ್ರದೇಶಗಳಲ್ಲಿ, ಮತ್ತು ಗುಡಿಸಲುಗಳಲ್ಲಿ ವಾಸಿಸುವವರ ಬಳಿ ಪಾದ ಯಾತ್ರೆ ನಡೆಸಿ ಅವರೊಂದಿಗೇ ಕುಳಿತು ಮುದ್ದೇ ಊಟವನ್ನೂ ಮಾಡಿ ಕಣ್ಣೀರೊರೆಸುವ ನಾಟಕವಾಡಿ, ಈಗಾಗಲೇ ತಾವು ಗಳಿಸಿಟ್ಟು ಕೊಂಡಿರುವ ಕೋಟಿಗಟ್ಟಲೆ ಹಣದಲ್ಲಿ ಅವರಿಗೊಂದು ಸೂರು ಉಣ್ಣಲು ಎರಡುಹೊತ್ತಿನ ಗಂಜಿ ವ್ಯವಸ್ಥೆಯನ್ನು ಮಾಡುವುದೇನು ಕಷ್ಟವೇ...?  ಹಾಗೆ ಕೃಪೆ ತೋರಿ ಅವರ ಪಾಲಿಗೆ ದೇವರಾಗಿ ಬಿಡುತ್ತಾರೆ! 

ಹೀಗಾಗಿ ಬಡತನದ ರೇಖೆಗಿಂತಲೂ ಕೆಳಗಿರುವ ಆ ಕೆಳವರ್ಗದ ಜನರ ಮೌಢ್ಯವನ್ನು, ಬಡತನವನ್ನು ತಮ್ಮ  ಓಟುಗಳಾಗಿ ಎನ್ ಕ್ಯಾಷ್ ಮಾಡಿಕೊಂಡು ಚುನಾವಣೆಯಲ್ಲೂ ಗೆದ್ದು  ಬಂದು "ವಿಕ್ಟರಿ"  ಚಿನ್ಹೆಯ ಎರಡು ಬೆರಳು ತೋರಿಸುತ್ತ ವಿಜೃಂಭಿಸುತ್ತಲೇ ಇರುತ್ತಾರೆ! ಆ ಬಿಸಿಲು, ಮಳೆಗೆ ಸೂರಾಯಿತಲ್ಲ: ಎರಡು ಹೊತ್ತು ಗಂಜಿಯೂಟವಾಯಿತಲ್ಲ ಎಂದು  ಕುಡಿದು ಉಂಡು ಆ ಪುಣ್ಯಾತ್ಮ ರಾಜಕಾರಣಿಯನ್ನು ಅವನೇ  ನಮ್ಮಣ್ಣಾ.... ದೇವ್ರೂಂತ ನೆನೆನೆನೆದು ನಿದ್ರೆ ಹೋಗುತ್ತಾರೆ; ಮತ್ತೆ ಮುಂದಿನ ಚುನಾವಣೆಯೆಂಬ ಹಬ್ಬವನ್ನೂ ಕಾಯುತ್ತಾರೆ. ಅಲ್ಲಿ ಹುಚ್ಚು ಮುಂಡೆ ಮದ್ವೆಲಿ  ಉಂಡವನೇ ಜಾಣ ಎಂಬ ಕಾರ್ಯಕರ್ತನೂ ಇರುತ್ತಾನೆ! 
ವಿದ್ಯಾವಂತರೆಸಿಕೊಂಡವರಾದ ಮಧ್ಯಮ ವರ್ಗದವರು ಮೇಲ್ಮಧ್ಯಮ ವರ್ಗದವರ ಬಳಿಗೆ ಅವರ ಮನೆಗಳಿಗೆ ಈ ರಾಜಕೀಯ ಪುಢಾರಿಗಳು ಚುನಾವಣೆ ಬಂದಾಗ ಓಟು ಕೇಳಲೂ ಬರದಿರುವುದೇ ಹೆಚ್ಚಾಗಿ ಕಂಡುಬರುತ್ತದೆ. ಯಾಕೆಂದ್ರೆ, ಈ ವಿದ್ಯಾವಂತರ ಬುದ್ದಿವಂತರ ಓಟು  ತಮಗೆ ಗ್ಯಾರೆಂಟಿ ಏನಿಲ್ಲವೆಂದು ಗೊತ್ತು. ಅವರಿಗೆ ಧನದಾತರೂ ಅಧಿಕಾರದಾತರೂ ಅನ್ನ-ಚಿನ್ನದ ಐಷಾರಾಮಿದಾತರೂ, ತೀರಾ ಕೆಳವರ್ಗದ ಜನರೇ ಆಗಿರುತ್ತಾರೆಂಬುದು ಈ  ಸ್ವಂತಂತ್ರ ಭಾರತದ ದೇಶವು ಕಂಡ 64 ವರ್ಷಗಳಲ್ಲಿ ಚೆನ್ನಾಗಿ ಮನದಟ್ಟಾಗಿ ಹೋಗಿದೆಯಲ್ಲ...!
ನೋಡಿದೆ ಹೇಗಿದೆ ನಮ್ಮ ದೇಶ...

ಈಗ ನನ್ನ ತಲೆ ಕೊರೆಯುತ್ತಿರುವ ಎರಡು ಪ್ರಶ್ನೆಗಳೆಂದರೆ-
ರಾಜಕಾರಣಿಗಳು ನಮ್ಮ ದೇಶದ ಬಹುಸಂಖ್ಯಾತರಾದ ಅಂತಹ  ಕೆಳವರ್ಗದ ಮುಗ್ಧರನ್ನೂ ಕಡು ಬಡವರನ್ನೂ (ಈ ಜಾತ್ಯಾತೀತ ರಾಷ್ಟ್ರದಲ್ಲಿ ಜಾತೀಯತೆಯ ಬೀಜವನ್ನೂ ಬಿತ್ತಿ)  ಒಂದಿಷ್ಟು ಕಾಸು ರೊಟ್ಟಿ ಚೂರು ಬಿಸಾಡಿದಂತೆ ತೋರಿ ಶೋಷಣೆ ಮಾಡುತ್ತಿರುವುದು ಘೋರ ಅನ್ಯಾಯವೆಂಬುದನ್ನು ನೋಡುತ್ತಲೇ ಇರುವ ಅಸಹಾಯಕ ಬುದ್ಧಿಜೀವಿಗಳೂ ಪ್ರಜ್ಞಾವಂತರೂ ಇಲ್ಲೇ ಇದ್ದೇವೆ...!
ಈ ನಡುವೆ ಅಲ್ಲಲ್ಲಿ ಕೆಲ ಹೃದಯ ಶ್ರೀಮಂತಿಕೆಯಳ್ಳವರೂ ಸಾಮಾಜಿಕ ಸಂಘಟನೆಗಳೂ ಅಂತಹ ಮುಗ್ಧ ಬಡಜನತೆಗೆ ಸಹಾಯ ನೀಡಿ, ಅವರನ್ನು ಅಷ್ಟಿಷ್ಟು ಎಚ್ಚರಿಸುವ ಕೆಲಸವನ್ನೂ ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ.
ಆದರೆ, ಉಳ್ಳವರು ಶಿವಾಲಯವ ಮಾಡುವರೆಂಬಂತೆ, ಬಹುತೇಕ ಇಂಥ ಬಡವರ ಮೌಢ್ಯವನ್ನೇ ಭಾವನೆ ಕನಸುಗಳನ್ನೇ ಎನ್ ಕ್ಯಾಷ್ ಮಾಡಿಕೊಂಡು ಯಾವ ರಾಜಕಾರಣಿಗೂ ಕಡಿಮೆ ಇಲ್ಲದಂತೆ ಕೋಟ್ಯಾಧಿಪತಿಗಳಾಗಿರುವ ಸಿನಿಮಾ ಸೂಪರ್ ಸ್ಟಾರ್ ಗಳು ನಮ್ಮ ದೇಶದ ಬಡವರ ಉದ್ಧಾರಕ್ಕೆ ಏನು ಮಾಡಿದ್ದಾರೆ; ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಎಲ್ಲೋ ಒಬ್ಬಿಬ್ಬರು ಅಂಥ ಮಹಾನ್ ನಟರಿದ್ದಾರಷ್ಟೇ..
ಈ ದೇಶ ಕಂಡ ಬಿಗ್ ಬಿ ನಟ ಅಮಿತಾಭ್ ತಾವು ಅದೇ ಜನರಿಂದ ಕರೋಡ್ ಪತಿಯಾಗಿದ್ದಾರೆ ಎಂದ್ರೆ ತಪ್ಪಾಗಲಿಕ್ಕಿಲ್ಲ ಅಲ್ಲವೇ..? ಈ ಮಹಾನ್ ನಟನ ನಟನೆಯ ಬಗ್ಗೆ ನಮ್ಮದೇನೂ ಎರಡು ಮಾತಿಲ್ಲ ಬಿಡಿ. ಅದೇ ಅವ್ರೇನು ಅದೇನು ಅಂಥ ದೀನ ದಲಿತ ಬಡಬಗ್ಗರಿಗೆ ಕೋಟಿಗಟ್ಟಲೆ ಮಾಡಿದ್ದಾರೆಯೋ ನಾನರಿಯೆ... ಏನೇ ಆಗಲಿ ಅವರಂತು ತಮ್ಮ "ಕೌನ್ ಬನೇಗಾ ಕರೋಡ್ ಪತಿ" ಷೋಮ್ಯಾನ್ ಆಗಿ ಬಡಜನತೆಯನ್ನ ಕರೋಡ್‌ ಪತಿ ಮಾಡಿಲು  ಹುಚ್ಚಿಗೆಬ್ಬಿಸಿರುವುದಂತೂ  ವಾಸ್ತವ ಸಂಗತಿಯೇ....
ನನಗನಿಸುವುದಿಷ್ಟೇ.... ಚುನಾವಣೆಯ ಸಂದರ್ಭಗಳಲ್ಲಿ  ಯಾವ ಪಕ್ಷಗಳಿಗೂ ಸೇರದೇನೆ ಈ ಮಹಾನ್ ಸೂಪರ್ ಸ್ಟಾರ್ ಗಳು ಈ ಬಡ ಜನತೆಯ ಬಳಿಗೆ ಹೋಗಿ ಅವ್ರ ಕಷ್ಟ ಸುಖ ವಿಚಾರಿಸಿ ಅವರಿಗೆ ತಮ್ಮ ಉದಾರ ನೆರವು ನೀಡಿ (ಕೆರೆಯ ನೀರನು ಕೆರೆಗೆ ಚೆಲ್ಲಿ ಎಂಬಂತೆ) ಅವರನ್ನು ಎಚ್ಚರಿಸುತ್ತ ಉತ್ತಮ ಪ್ರಜೆಗಳನ್ನಾಗಿಸಿ ಅವರೂ ಪ್ರಾಮಾಣಿಕ ಅಭ್ಯರ್ಥಿಯನ್ನೇ ಆರಿಸುವಂತೆ ಜನಜಾಗೃತಿ ಮಾಡಬಹುದಲ್ಲವೇ, ಅಥವಾ ಅವರ ನಡುವೆ ಅಂತಹ ಅಭ್ಯರ್ಥಿಯೆ ಕಣದಲ್ಲಿ ಇಲ್ಲದಿದ್ದರೆ ಚುನಾವಣೆಯನ್ನೇ ಬಹಿಷ್ಕರಿಸುವಂತೆ ಹುರಿದುಂಬಿಸುವ ಮಹತ್ಕಾರ್ಯಕ್ಕೆ ಸಂಘಟಿತರಾಗಿ ಕೆಲಸ ಮಾಡಬಾರದೇಕೆ..? 
ಆಗ ನೋಡಿ ಕಪಟ ನಾಟಕವಾಡುವ ರಾಜಕಾರಣಿಗಳ ಪುಂಗಿ ಬಂದ್ ಆಗಿಬಿಡುತ್ತದೆ;
ಈ ಕಲಾವಿದರಲ್ಲೂ ರಾಜಕಾರಣಿಗಳ ಮರ್ಜಿಹಿಡಿಯುವವರಿದ್ದಾರೆ; ಇಲ್ಲವೆನ್ನುವಂತಿಲ್ಲ; ನೀವೇನಂತೀರಿ...?

No comments: