Wednesday, July 06, 2011

ಓಟು ನಮ್ಮ ಜೋಳಿಗೆಗೆ ಹಾಕ್ರಿ ಚಲೋದ ಮಾಡ್ತೀವಿ ಅನ್ನೋರೆಲ್ಲಾ... ಭಲೇ ಆಶಾಢಭೂತಿಗಳು!

No great work can be done without Sacrifice
-Swami Vivekananda

ನಮ್ಮ ಭಾರತ ಬಡಬಗ್ಗರ ದೇಶ. ಇಲ್ಲಿ ಗರೀಬಿ ಹಟಾವೋ... ಎಂಬುದು ಕೇವಲ ಘೋಷಣೆಯಷ್ಟೇ.. ಇಲ್ಲ ಬಡವರ ಕಷ್ಟ ಭಗವಂತನಿಗೇ ಗೊತ್ತು. ಭಗವಂತನಿಲ್ಲದ ಕೋಟ್ಯಂತರ ಬಡವರನ್ನು ಊಹಿಸಿಕೊಳ್ಳುವುದೇ ಕಷ್ಟ... ಅದರಲ್ಲೂ ಮಧ್ಯಮ ವರ್ಗದವರಿಗೆ ದೇವರೇ ಪ್ರತಿನಿತ್ಯ ರಕ್ಷಿಸುವ ಸರ್ವೋತ್ತಮನು. ಅವನೇ ವಿವಿಧ ರೂಪಗಳಲ್ಲಿ ಕಾಣುವ ಆರಾಧ್ಯ ಶಕ್ತಿಸ್ವರೂಪಿ; ಜೀವಿತದ ಪರಾತ್ಪರ ತತ್ವ.

ಬಡವರ ಕಷ್ಟ ಅರ್ಥವಾದ ಹಾಗೇ ಬರೀ ನಾಟಕ ಆಡೋ ರಾಜಕೀಯ ಫುಡಾರಿಗಳಿಗೇನೂ ಕಡಿಮೆ ಇಲ್ಲ; ಈ ದೇಶದಲ್ಲಿ. ಅಂಥ ಪುಢಾರಿಗಳಿಂದ ಅಲ್ಪಸ್ವಲ್ಪ ಉಪಕೃತರಾದ ಕಡುಬಡವರು ಮತ್ತು ಅಜ್ಞಾನ ಅನಕ್ಷರತೆಯಿಂದ ಕಂಗಾಲಾಗಿ ಸ್ವಂತ ತಿಳುವಳಿಕೆ ಇಲ್ಲದವರ ಜನಸಂಖ್ಯೆಯೇ ಬಹಳವಿದೆ ಈ ದೇಶದಲ್ಲಿ. ಆ ಕಟ್ಟ ಕಡೆವರ್ಗದ ಗುಂಪಿನ ಜನರೇ ಈ ದೇಶದ ಭವಿಷ್ಯವನ್ನ ಪ್ರತಿಯೊಂದೂ ಚುನಾವಣೆಯಲ್ಲೂ ನಿರ್ಧಾರ ಮಾಡುತ್ತಾರೆ. ಅವರ ಬೌದ್ಧಿಕಮಟ್ಟ ಹಾಗೆಯೇ ಇರಬೇಕು; ಹಾಗೇ ಇರುವವರೆಗೆ ನಮ್ಮ ಮಹಾನ್ ಜನಸೇವಕ ಪ್ರತಿನಿಧಿಗಳಾಗಬಯಸುವ ರಾಜಕಾರಣಿಗಳಿಗೆ ಭಯವೇನಿಲ್ಲ. ಕೋಟಿಗಟ್ಟಲೆ ಹಣದ ಬಲವೇ ಅವರಿಗೆ ಜನಬಲವನ್ನು ತಂದುಕೊಡುತ್ತದೆಂಬ ದೃಢ ವಿಶ್ವಾಸ.

ಇಂಥ ಹಣವೇ ಮಾತನಾಡುವ ನಮ್ಮಮಹಾನ್ ಭಾರತವಿದು. ಆದರೇನು! ಇಲ್ಲಿ ಭಗವಂತನೊಡನೆ ಅವರವರ ಅಂತರಂಗದಲ್ಲೇ ಮಾತನಾಡುವವರ ಕೋಟ್ಯಾಂತರ ಜನಸಾಮಾನ್ಯರಿಗೇನೂ ಕೊರತೆಯಿಲ್ಲ ಬಿಡಿ! ಈ ಭವದ ಕಷ್ಟ ನಮ್ಮಜನಸಾಮಾನ್ಯರಿಗೆ ಒಗ್ಗಿ ಹೋಗಿರುವಂತೆ ಜಗತ್ತಿನ ಬೇರಾವ ಜನರಿಗೆ ಒಗ್ಗಿದೆ ಹೇಳಿ..? ಯಾಕೆಂದರೆ, ಜನಸಂಖ್ಯೆ ಗರಿಷ್ಠ ಮಟ್ಟದ ಅಭಿವೃದ್ದಿಯಲ್ಲಿ ನಾವೇ ಯಾವಾಗಲೂ ಬಹಳ ಮುಂದು ಅಲ್ಲವೇ..?

ಏನೇ ಆಗಲಿ, ಅಂದಿಗೂ ಇಂದಿಗೂ ವಿದೇಶೀಯರೂ ನಮ್ಮ ಜನಸಾಮಾನ್ಯ ಕಷ್ಟಸಹಿಷ್ಣುತೆ, ಧಾರ್ಮಿಕ ನಂಬಿಕೆ ಮತ್ತು ಅವರು ಭಗವಂತನಲ್ಲಿ ಇಟ್ಟಿರುವ ವಿಶ್ವಾಸ ಕಂಡು ಮೂಕವಿಸ್ಮಿತರಾಗುತ್ತಾರಲ್ಲ...! ಮನುಷ್ಯ ಕಷ್ಟಪಟ್ಟೇ ಜೀವನದಲ್ಲಿ ಮುಂದೆ ಬರಬೇಕೆಂಬುದು ನಮ್ಮ ಅನುಭವೀಕರ ಹಾಗೂ ಅನುಭಾವಿಗಳ ನುಡಿ. ಬಡವರ ಕಷ್ಟ ಕಣ್ಣೀರೊರೆಸುವ ನಾಟಕ ಆಡೋ ಮಂದಿಗೇನು ಅವರ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹುನ್ನಾರವಷ್ಟೇ. ದೇವರು  ಇದ್ದಾನೆಯೇ ? ಎನ್ನುವುದಕ್ಕಿಂತ ದೇವರಲ್ಲಿ ನಾವಿದ್ದರೆ, ನಮ್ಮ ಕಷ್ಟ ಕಳೆಯೋಕೆ ಯಾರಾದರೂ ಪುಣ್ಯತ್ಮರು ಬರುತ್ತಾರೆ; ಸಹಾಯ ಮಾಡುತ್ತಾರೆ; ದಾರಿಯನ್ನಾದರೂ ತೋರುತ್ತಾರೆ.

ನಂಬಿಕೆಯಿಂದಲೇ ಈ ಭವದ ಬದುಕು. ನಂಬಿಕೆ ಇದ್ದರೆ ಇಲ್ಲಿ ಎಲ್ಲವೂ ಇದೆ. ಇಲ್ಲವಾದರೆ ಏನೂ ಇಲ್ಲ. ದೇವರೇನು? ನನಗೆ ನಾನೂ ಇಲ್ಲ!ಚಲೋದು ಕೆಟ್ಟದ್ದು ಎರಡೂ ಇರೋದ...  
ಚಲೋದು ಕೆಟ್ಟದ್ದು ಎರಡೂ ಇರೋದ... ಚಲೋದ ಇಟಗೊಂಡ ಕೆಟ್ಟದ್ದನ್ನ ಮಹಾತ್ಮರ ಜೋಳಿಗೆಗೆ ಹಾಕ್ರಿ ಅವರು ಹೊರತಾರ ಅಂತಾರೆ ಶ್ರೀ ಶ್ರೀ ಚನ್ನವೀರ ಶರಣರು.
ಶರಣರ ನುಡಿ ಸತ್ಯ ಕೆಟ್ಟದ್ದನ್ನು ಹೊರೊ ನಿಜಕ್ಕೂ ಮಹಾತ್ಮರು ಕಾವಿಧಾರಿಗಳು ಈ ದೇಶದಲ್ಲಿ ಕಡಿಮೆಯಾದರೂ ಇದ್ದೇ ಇರುತ್ತಾರೆ. ಅಂಥ ಸಂತರ ಸತ್ಸಂಗ ನಿಮಗೆ ದೊರಕಲಿಲ್ಲವೇ...ನೀವು ಕುಳಿತಲ್ಲೇ ನಿಮಗೆ ಪರಮಾತ್ಮನಾದ ಪರಮಾತ್ಮನನ್ನು ಧ್ಯಾನಿಸಿ, ಅವನ ಕಾಣದ ಜೋಳಿಗೆಗೆ ನಿಮ್ಮ ಕಷ್ಟವನ್ನೆಲ್ಲ ಹಾಕಿಬಿಡಿ.  ನಿಮ್ಮ ಓಟು ನಮ್ಮ ಜೋಳಿಗೆಗೆ ಹಾಕಿ ನಿಮಗೆ ಒಳ್ಳೇದು ಮಾಡ್ತೀವಿ ಅನ್ನೋ ಪುಢಾರಿಗಳ ಎಂಜಲು ಕಾಸಿಗೆ ಅಷ್ಟಿಷ್ಟು ನೆರವಿಗೆ ಖಂಡಿತ ಬಲಿಪಶುಗಳಾಗದಿರಿ.  ನೆನಪಿಡಿ. ಬಹಳ ಎತ್ತರಕ್ಕೇರಿರುವ ಪ್ರತಿಭಾವಂತರೂ ವಿಜ್ಞಾನಿಗಳು, ತಂತ್ರಜ್ಞರು ತಮ್ಮ ಪ್ರಾಮಾಣಿಕ ಹಾದಿಯಲ್ಲೇ ಮಹೋದ್ಯಮಿಗಳಾದವರು ನಮ್ಮ ದೇಶದಲ್ಲೇ ಈಗ ಹೆಚ್ಚುತ್ತಿದ್ದಾರೆ; ನೋಡಿ ಅವರು ನಿಮಗೆ ಮಾದರಿಯಾಗಬೇಕು. ಕೊನೆಯದಾಗಿ ಹೇಳಬೇಕೆಂದರೆ ಒಳ್ಳೆಯ ರೀತಿಯಲ್ಲಿ ಎತ್ತರಕ್ಕೇರಿದ ಪ್ರತಿಯೊಬ್ಬರೂ ಸಾಧಿಸಿದ ಜಯದ ಹಿಂದೆಯೂ ಬೆವರು ಸುರಿಸಿದ ಕಷ್ಟದ ಹಾದಿಯೇ ಇರುತ್ತದೆ.  ಸಾಫ್ಟ್ ವೇರ್  ದಿಗ್ಗಜರಾದ ನಾರಾಯಣ ಮೂರ್ತಿ, ಸಾಮಾನ್ಯ ಕೃಷಿಕನಾಗಿ ಕೃಷಿ ಆರಂಭಿಸಿ,ಆನಂತರ ವಿಮಾನಯಾನದ ಕಂಪೆನಿಯನ್ನೇ ಕಟ್ಟಿ ಯಶಸ್ವಿಯಾದ ಕ್ಯಾಪ್ಟನ್ ಗೋಪಿನಾಥ್ ಇಂಥವರ ಮಾದರಿ ನಮ್ಮ ಯುವ ಜನಾಂಗಕ್ಕೆ ಇರಬೇಕೇ ಹೊರತು, ಭ್ರಷ್ಟತನದಿಂದ ಮೇಲೇರಿ ಮೆರೆಯುವವರು ಉಲ್ಕೆಗಳಂತೆ ಉರಿದು ಧರೆಗುದುರಿ ಮರೆಯಾಗುವವರಲ್ಲ. ಯಾವ ಮಹತ್ವಾಕಾಂಕ್ಷೆಯೂ, ಮಹತ್ಕಾರ್ಯವೂ ಹೃದಯವನ್ನೇ ಕಿತ್ತಿಡುವಂತಹ ತ್ಯಾಗವಿಲ್ಲದೇ ಆಗಲಾರದು

No comments: